ಬೆಂಗಳೂರು, ಅ.12: ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಿಯಾಂಕ್ ಖರ್ಗೆಯವರು ಆರ್‌ಎಸ್‌ಎಸ್ ಚಟುವಟಿಕೆ ನಿಷೇಧದ ಕುರಿತು ಇಷ್ಟೊಂದು ಬೇಜವಾಬ್ದಾರಿಯಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದರೆ, ಇದು ಅವರ ಮೂರ್ಖತನದ ಪ್ರದರ್ಶನ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಟೀಕಿಸಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗೆ (Ban On RSS Activities) ನಿಷೇಧ ಹೇರಲು ಸಿಎಂಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆ, ಕಾರ್ಯ ಚಟುವಟಿಕೆ ಕುರಿತು ಮಾಹಿತಿ ಕೊರತೆ ಇರುವವರು ಕೇವಲ ತಮ್ಮ ಪ್ರಚಾರಕ್ಕಾಗಿ ಚಟದಿಂದ ಮಾತನಾಡುವವರು ಇಂಥ ಹೇಳಿಕೆ ಕೊಡಲು ಸಾಧ್ಯ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಿಂದೆ ಎರಡು ಮೂರು ಬಾರಿ ಇದೇ ರೀತಿ ಆರ್‌ಎಸ್‌ಎಸ್ ಅನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಿತ್ತು. ಅದೇ ಕಾಂಗ್ರೆಸ್, ನಿಷೇಧವನ್ನು ಹಿಂದಕ್ಕೆ ಪಡೆದ ಉದಾಹರಣೆ ದೇಶದ ಮುಂದೆ ಇದೆ. ಮತ್ತೊಮ್ಮೆ ಆರ್‌ಎಸ್‌ಎಸ್ ನಿಷೇಧಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ವಿಜಯೇಂದ್ರ ಗುಡುಗಿದ್ದಾರೆ.
'ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಯನ್ನು ಗಮನಿಸಿ, ಶ್ಲಾಘಿಸಿ ಅಂದಿನ ರಿಪಬ್ಲಿಕ್ ಡೇ ಪರೇಡ್‌ನಲ್ಲಿ ಆರ್‌ಎಸ್‌ಎಸ್‌ಗೆ ಇದೇ ಕಾಂಗ್ರೆಸ್ ಪಕ್ಷ ಅವಕಾಶ ಮಾಡಿಕೊಟ್ಟಿತ್ತು ಎಂದು ಪ್ರಿಯಾಂಕ್ ಖರ್ಗೆಯವರಿಗೆ ನೆನಪಿಸಲು ಬಯಸುತ್ತೇನೆ' ಎಂದು ಟೀಕಿಸಿದ್ದಾರೆ.
'ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ. ಗಾಂಧಿ ಕುಟುಂಬವನ್ನು ಓಲೈಸುವ ನಿಟ್ಟಿನಲ್ಲಿ ಈ ರೀತಿ ಪತ್ರ ಬರೆದಂತೆ ಕಾಣುತ್ತಿದೆ. ಆರ್‌ಎಸ್‌ಎಸ್ 100 ವರ್ಷ ಪೂರೈಸಿದ ಈ ಶುಭ ಘಳಿಗೆಯಲ್ಲಿ ದೇಶದಾದ್ಯಂತ ಚಟುವಟಿಕೆ, ಪಥ ಸಂಚಲನ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಪ್ರಿಯಾಂಕ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೆಲ್ಲದಕ್ಕೂ ಕಾಲ ಉತ್ತರ ಕೊಡಲಿದೆ' ಎಂದು ವಿಜಯೇಂದ್ರ ಕುಟುಕಿದ್ದಾರೆ.
ಆರ್‌ಎಸ್‌ಎಸ್ ಹೆಸರು ನಿತ್ಯ ಪಠಿಸದಿದ್ದರೆ ತಿಂದ ಅನ್ನ ಅರುಗುವುದಿಲ್ಲ
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಜರಿಯುವ ಕಾರ್ಯಕ್ಕಾಗಿಯೇ ಕಾಂಗ್ರೆಸ್ ಬಿಕೆ ಹರಿಪ್ರಸಾದ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಿಯೋಜಿಸಲ್ಪಟ್ಟಂತೆ ಕಾಣುತ್ತಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಪೂರೈಸಿ ತನ್ನ ಚಟುವಟಿಕೆಗಳನ್ನು ವಿಶ್ವಮಟ್ಟದಲ್ಲಿ ವಿಸ್ತರಿಸುವ ಮೂಲಕ ಯುಗದ ಇತಿಹಾಸ ಬರೆಯುತ್ತಿರುವುದನ್ನು ಸಹಿಸಲಾರದ ಕಾಂಗ್ರೆಸ್ಸಿಗರು ಸಂಘದ ಕುರಿತು ಕುಚೋದ್ಯ ಹಾಗೂ ಕುಚೇಷ್ಟೆ ಮಾತುಗಳನ್ನಾಡುವುದನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿಸ್ತು, ಸಂಯಮ, ಶಾಂತಿಯ ಎಲ್ಲೆಯನ್ನು ಎಂದೂ ಮೀರಿದ ಉದಾಹರಣೆಗಳಿಲ್ಲ, ಸರ್ಕಾರಿ ಸ್ಥಳವಿರಲಿ, ಖಾಸಗಿ ಸ್ಥಳವಿರಲಿ, ರಾಷ್ಟ್ರೀಯತೆಯನ್ನು ಪ್ರತಿನಿಧಿಸಿ ನಡೆಸುತ್ತಿರುವ ಕಾರ್ಯಕ್ರಮಗಳನ್ನು ಹಳದಿ ಕಣ್ಣಿನಿಂದ ನೋಡುತ್ತಿರುವ ಪರಿ ರಾಷ್ಟ್ರ ವಿಧ್ವಂಸಕ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ರಾಜ್ಯದ ಅಭಿವೃದ್ಧಿಯಲ್ಲಿ ಸಂಪೂರ್ಣ ಎಡವಿ ಬಿದ್ದಿರುವ ಕಾಂಗ್ರೆಸ್ ಸರ್ಕಾರ ಮುಖ್ಯಮಂತ್ರಿಗಾದಿಯ ವಿಷಯದಲ್ಲಿ ಭುಗಿಲೆದ್ದಿರುವ ಆಂತರಿಕ ಕಲಹದ ವಿಷಯವನ್ನು ದಿಕ್ಕು ತಪ್ಪಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಸರನ್ನು ಬಳಸಿ ವಿಷಯಾಂತರ ಮಾಡಲು ಹೊರಟಿದೆ. ಬಿಕೆ ಹರಿಪ್ರಸಾದ್ ಹಾಗೂ ಪ್ರಿಯಾಂಕ ಖರ್ಗೆ ಅವರಿಗೆ ಆರ್ ಎಸ್ ಎಸ್ ಹೆಸರು ನಿತ್ಯ ಪಠಿಸದಿದ್ದರೆ ತಿಂದ ಅನ್ನ ಅರುಗುವುದಿಲ್ಲ ಎಂಬಂತೆ ವರ್ತಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ | Priyank Kharge: ಆರ್‌ಎಸ್ಎಸ್ ಸಿದ್ಧಾಂತ ಪರಿಣಾಮದಿಂದ ಸಿಜೆಐ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿ: ಪ್ರಿಯಾಂಕ್ ಖರ್ಗೆ
ರಾಷ್ಟ್ರೀಯ ಸ್ವಯಂಸೇವಕ ಸಂಘ ನೀಲಾಕಾಶದಲ್ಲಿ ಭಾರತದ ಭರವಸೆಯ ಬೆಳಕಿನ ನಕ್ಷತ್ರವಾಗಿ ಮಿನುಗುತ್ತಿದೆ, ಹಿಮಾಲಯದೆತ್ತರ ಬೆಳೆದು ನಿಂತಿದೆ. “ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ" ಸಭ್ಯತೆ, ಘನತೆ, ವ್ಯಕ್ತಿತ್ವವಿಲ್ಲದ ಮಾತುಗಳು ರಾಜಕೀಯ ಟೀಕೆ ಆಗಲಾರದು, ಅದೇನಿದ್ದರೂ ಹೊಲಸು ರಾಜಕಾರಣದ ಪ್ರತಿಬಿಂಬವಾಗುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.