ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಾಂಗ್ರೆಸ್‌ನವರಿಗೆ ಸ್ಕೀಂ ಬದಲು ಸ್ಕ್ಯಾಮ್ ಬಗ್ಗೆಯೇ ಯೋಚನೆ: ಬಿ.ವೈ. ವಿಜಯೇಂದ್ರ

BY Vijayendra: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕಿದೆ. ಜತೆಗೇ ಮೂಲಭೂತ ಸೌಕರ್ಯಗಳನ್ನೂ ಕೊಡಬೇಕಾಗಿದೆ. ಇದೇ ಉತ್ತಮ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಯೋಜನೆಯಲ್ಲಿ ಗಮನಾರ್ಹ, ಮೌಲ್ಯಯುತ ಬದಲಾವಣೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ.

ಬೆಂಗಳೂರು, ಜ.10: ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ತಪ್ಪು ಮಾಹಿತಿ ನೀಡಿ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದರು. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ವಿಬಿ ಜಿ ರಾಮ್ ಜಿ ಯೋಜನೆ ಜಾರಿಯ ಮೂಲಕ ಲಕ್ಷಾಂತರ ಕೋಟಿ ಹೂಡಿಕೆ ಮಾಡಿ ಗ್ರಾಮೀಣ ಅಭಿವೃದ್ಧಿ ಕನಸು ನನಸಾಗಿಸಲು ಮುಂದಾದುದು ತಪ್ಪೇ ಎಂದು ಕೇಳಿದರು.

ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಏಳೆಂಟು ಲಕ್ಷ ಕೋಟಿ ಖರ್ಚು ಮಾಡುವ ಈ ಯೋಜನೆ ಸುಲಲಿತವಾಗಿ ಸಾಗಬೇಕು; ಬಡವರಿಗೆ ತಲುಪಬೇಕೆಂದು ಪ್ರಧಾನಿಯವರು ಆಲೋಚಿಸಿದ್ದೇ ತಪ್ಪೇ ಹಾಗಿದ್ದರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷ ಹತ್ತಾರು ವರ್ಷ ಆಡಳಿತ ಮಾಡಿದಾಗ ಸ್ಕೀಂ ಬಗ್ಗೆ ಯೋಚಿಸಿಲ್ಲ, ಸ್ಕ್ಯಾಮ್ ಬಗ್ಗೆಯೇ ಅವರು ಯೋಚಿಸಿದರು ಎಂದು ದೂರಿದರು.

ವಿಬಿ ಜಿ ರಾಮ್ ಜಿ ಮೂಲಕ ಮೋದಿ ಅವರು ಒಂದು ಚಾರಿತ್ರಿಕ ನಿರ್ಧಾರ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಯೋಜನೆಯನ್ನು ಮರು ಜಾರಿ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷವು ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸುಳ್ಳುಗಳನ್ನು ಹರಡುತ್ತಿದೆ. ಕಾಂಗ್ರೆಸ್ ಪಕ್ಷವು ಯಾವತ್ತು ಮಹಾತ್ಮ ಗಾಂಧೀಜಿ ಅವರನ್ನು ಗೌರವಿಸಿರಲಿಲ್ಲ ಎಂಬುದು ದೇಶಕ್ಕೇ ಗೊತ್ತಿರುವ ಸಂಗತಿ. ಅಲ್ಲದೇ ಕಾಂಗ್ರೆಸ್ ಪಕ್ಷವು ಡಾ. ಬಾಬಾಸಾಹೇಬ್‌ ಅಂಬೇಡ್ಕರ್ ಅವರನ್ನೂ ಗೌರವಿಸುತ್ತಿರಲಿಲ್ಲ ಎಂದು ಆರೋಪಿಸಿದರು.‌

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣದ ನ್ಯಾಯಾಂಗ ತನಿಖೆಗೆ ಆರ್‌. ಅಶೋಕ್‌ ಒತ್ತಾಯ

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕಿದೆ. ಜತೆಗೇ ಮೂಲಭೂತ ಸೌಕರ್ಯಗಳನ್ನೂ ಕೊಡಬೇಕಾಗಿದೆ. ಇದೇ ಉತ್ತಮ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಇಡೀ ಯೋಜನೆಯಲ್ಲಿ ಗಮನಾರ್ಹ, ಮೌಲ್ಯಯುತ ಬದಲಾವಣೆಗಳನ್ನು ಜಾರಿಗೊಳಿಸಿದ್ದಾರೆ ಎಂದು ವಿವರಿಸಿದರು.

ಕೆಲಸ ಮಾಡುವ ದಿನಗಳನ್ನು 100 ರಿಂದ 125ಕ್ಕೆ ಏರಿಸಿದ್ದಾರೆ. ಕೃಷಿ ಚಟುವಟಿಕೆ ನಡೆಯುವಾಗ ರೈತರಿಗೆ ಅನಾನುಕೂಲ ಆಗಬಾರದೆಂಬ ದೃಷ್ಟಿಯಿಂದ ಆ ಸಂದರ್ಭದಲ್ಲಿ ವಿಬಿ ಜಿ ರಾಮ್ ಜಿ ನಿಲ್ಲಿಸಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂದಿನಂತೆ ತೀರ್ಮಾನಗಳು ಆಗಲಿವೆ. ಗ್ರಾಮ ಪಂಚಾಯಿತಿ ಅಧಿಕಾರವನ್ನು ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ, ನರೇಂದ್ರ ಮೋದಿ ಅವರು ಮಾಡುತ್ತಿಲ್ಲ ಎಂದು ತಿಳಿಸಿದರು.

ಬಿಜೆಪಿ ಮತ್ತು ಜೆಡಿಎಸ್, ಸುಳ್ಳು- ಅಪಪ್ರಚಾರಕ್ಕೆ ಅವಕಾಶ ಕೊಡುವುದಿಲ್ಲ

ಬಿಜೆಪಿ ಮತ್ತು ಜೆಡಿಎಸ್, ಸುಳ್ಳು- ಅಪಪ್ರಚಾರಕ್ಕೆ ಅವಕಾಶ ಕೊಡುವುದಿಲ್ಲ. ಗ್ರಾಮ ಮಟ್ಟಕ್ಕೂ ನಾವು ತೆರಳಿ ಜನರಿಗೆ, ಕಾರ್ಮಿಕರಿಗೆ ಮನವರಿಕೆ ಮಾಡಲಿದ್ದೇವೆ. ಕಾಂಗ್ರೆಸ್ ಪಕ್ಷದ ಷಡ್ಯಂತ್ರವನ್ನು ನಾವು ಬಯಲಿಗೆ ಎಳೆಯುತ್ತೇವೆ ಎಂದು ಹೇಳಿದರು. ವಿಬಿ ಜಿ ರಾಮ್ ಜಿ ಸಮರ್ಪಕವಾಗಿ ಅನುಷ್ಠಾನದ ಮೂಲಕ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯ ಪ್ರಮುಖ ಚಿಂತನೆ ಇದರಡಿ ಇದೆ. ಆದರೆ, ಈ ದೇಶದಲ್ಲಿ 55ರಿಂದ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಸ್ಕೀಂಗಳಲ್ಲಿ ನಂಬಿಕೆ ಇಟ್ಟಿರಲಿಲ್ಲ; ಅವರು ಸ್ಕ್ಯಾಮ್‍ಗಳಲ್ಲಿ (ಹಗರಣ) ನಂಬಿಕೆ ಇಟ್ಟಿದ್ದರು ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹಾಗೂ ಯುಪಿಎ ಅವಧಿಯಲ್ಲಿ ನಡೆದ ಹಗರಣಗಳಿಂದ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿಲ್ಲ. ಇವತ್ತು ಪ್ರಧಾನಿಯವರು ಗ್ರಾಮೀಣ ಜನತೆಗೆ ಪ್ರಯೋಜನ ನೀಡುವ ದೃಷ್ಟಿಯಿಂದ ಯೋಜನೆ ತರಲು ಮುಂದಾಗಿದ್ದಾರೆ. ಭ್ರಷ್ಟಾಚಾರ ಇಲ್ಲದ, ಸಮರ್ಪಕ ಲೆಕ್ಕಪತ್ರ ಇರುವ ಯೋಜನೆ ತರುತ್ತಿರುವಾಗ ಕಾಂಗ್ರೆಸ್ ಪಕ್ಷವು ಸುಳ್ಳುಗಳ ಅಪಪ್ರಚಾರ ಮಾಡುತ್ತಿದೆ ಎಂದು ಟೀಕಿಸಿದರು.

ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರ ಸ್ವಾಗತಾರ್ಹ. ಸದನದಲ್ಲಿ ಇದನ್ನು ಚರ್ಚಿಸೋಣ. ಮನರೇಗಾ ಮೂಲಕ ಕಾಂಗ್ರೆಸ್ ಇಷ್ಟು ವರ್ಷಗಳಲ್ಲಿ ಏನು ಮಾಡಿದೆ? ಕಳೆದ 10 ವರ್ಷಗಳಲ್ಲಿ ನಾವು ಮೋದಿ ಅವರ ನಾಯಕತ್ವದಡಿ ಮಾಡಿದ ಸಾಧನೆ ಏನು ಎಂಬುದನ್ನು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಸವಾಲು ಹಾಕಿದರು.

ಕಾಂಗ್ರೆಸ್ ಪಕ್ಷಕ್ಕೆ ಮೋದಿ ಅವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ

ಆದರೆ, ಕಾಂಗ್ರೆಸ್ ಪಕ್ಷಕ್ಕೆ ಮೋದಿ ಅವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಹತಾಶೆಯ ಸ್ಥಿತಿಯಲ್ಲಿದೆ. ಎನ್‍ಡಿಎ ಸರ್ಕಾರದ ಪ್ರತಿಯೊಂದು ಯೋಜನೆ ಬಗ್ಗೆ ಅದು ಸುಳ್ಳು ಹೇಳುತ್ತಿದೆ. ಕರ್ನಾಟಕದಲ್ಲೂ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನದಿಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಜಾರಿಗೊಳಿಸದೇ ಇರಲು ನಿರ್ಧರಿಸಿದರು. ರಾಜ್ಯ ಶಿಕ್ಷಣ ನೀತಿ ಜಾರಿ (ಎಸ್‍ಇಪಿ) ಮಾಡುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದರು. ಇಲ್ಲಿನವರೆಗೆ ಹೊಸ ನೀತಿ ಜಾರಿ ಆಗಿಲ್ಲ ಎಂದು ಟೀಕಿಸಿದರು. ಯುಪಿಎ ಸರ್ಕಾರದ 2 ಜಿ ಸ್ಕ್ಯಾಮ್, ಕಲ್ಲಿದ್ದಲು ಹಗರಣ ಸೇರಿ ವಿವಿಧ ಹಗರಣಗಳ ಕುರಿತು ನಾನು ಪುನರುಚ್ಚಾರ ಮಾಡಲು ಹೋಗುವುದಿಲ್ಲ. ದೇಶದ ಜನರು ಕಾಂಗ್ರೆಸ್ ಪಕ್ಷದ ಆಡಳಿತವನ್ನು ಇನ್ನೂ ಮರೆತಿಲ್ಲ ಎಂದು ತಿಳಿಸಿದರು.

ಮನರೇಗಾದಲ್ಲಿ ಕಾಂಗ್ರೆಸ್‌ ಅವಧಿಯಲ್ಲಿ 11 ಲಕ್ಷ ಕೋಟಿ ಭ್ರಷ್ಟಾಚಾರ: ಜೋಶಿ ಆರೋಪ

ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥ ನಾರಾಯಣ್ ಉಪಸ್ಥಿತರಿದ್ದರು.