ಬೆಂಗಳೂರು, ಜ.27: ಉದ್ಯೋಗ ಖಾತರಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕಾಯ್ದೆಯನ್ನು ಹಿಂಪಡೆದು, ಮನರೇಗಾ ಕಾನೂನು ಮರುಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಮನವಿ ಮಾಡಿದರು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷದ ನಿಯೋಗವು ಬಸ್ ಮೂಲಕ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಮ್ಮ ಮನವಿ ಬಗ್ಗೆ ಡಿ.ಕೆ. ಶಿವಕುಮಾರ್, ರಾಜ್ಯಪಾಲರಿಗೆ ವಿವರಿಸಿದರು.
ಮನರೇಗಾ ಕಾಯ್ದೆ ನಮ್ಮ ಹೃದಯಕ್ಕೆ ಹತ್ತಿರವಾಗಿರುವ ಕಾನೂನು. ರಾಜ್ಯದ ಸುಮಾರು 5700 ಪಂಚಾಯಿತಿಗಳಲ್ಲಿ ಪ್ರತಿ ವರ್ಷ ಈ ಯೋಜನೆಯಿಂದ 6 ಸಾವಿರ ಕೋಟಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದವು. ಇದರಲ್ಲಿ 90% ಅನುದಾನವನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು. ಪ್ರತಿ ಪಂಚಾಯಿತಿಗಳಿಗೆ 1-2 ಕೋಟಿ ಅನುದಾನ ಪ್ರತಿ ವರ್ಷ ಸಿಗುತ್ತಿತ್ತು. ನಿರುದ್ಯೋಗಿಗಳು ಪಂಚಾಯಿತಿಗಳಿಗೆ ಹೋಗಿ ಅರ್ಜಿ ಸಲ್ಲಿಸಿದರೆ, ಈ ಯೋಜನೆಯಡಿ ಕೆಲಸ ಪಡೆಯಬಹುದಾಗಿತ್ತು. ಅದೇ ಪಂಚಾಯಿತಿಯಲ್ಲಿ ಕೆಲಸವಿಲ್ಲದಿದ್ದರೆ, ಬೇರೆ ಪಂಚಾಯಿತಿಗಳಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಅವರಿಗೆ ಉದ್ಯೋಗ ನೀಡಲು ಸಾಧ್ಯವಾಗದಿದ್ದರೆ, ಆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡುವುದು ಸರ್ಕಾರಗಳ ಜವಾಬ್ದಾರಿಯಾಗಿತ್ತು. ವಿಶ್ವಬ್ಯಾಂಕ್ ಕೂಡ ಈ ಯೋಜನೆಯನ್ನು ಶ್ಲಾಘಿಸಿತ್ತು. ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಈ ವಿಚಾರವಾಗಿ ತೀರ್ಮಾನ ಮಾಡುವ ಮುನ್ನ ರಾಜ್ಯಗಳ ಜತೆ ಚರ್ಚೆ ನಡೆಸಬೇಕಿತ್ತು ಎಂದರು.
ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ 25 ಇಲಾಖೆಗಳನ್ನು ಪಂಚಾಯಿತಿಗಳ ವ್ಯಾಪ್ತಿಗೆ ನೀಡಿ ಸಂವಿಧಾನದ 73 ಹಾಗೂ 74ನೇ ಪರಿಚ್ಚೇಧಕ್ಕೆ ತಿದ್ದುಪಡಿ ತಂದು ಬಲಪಡಿಸಲಾಗಿತ್ತು. ಮನರೇಗಾ ಯೋಜನೆಯಲ್ಲಿ ಕೃಷಿ ಕಾರ್ಮಿಕರು ತಮ್ಮದೇ ಜಮೀನಿನಲ್ಲಿ ಕೆಲಸ ಮಾಡಿದರೂ ವೇತನ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಈಗ ನೂತನ ಕಾಯ್ದೆ ಪ್ರಕಾರ ಪಂಚಾಯಿತಿಗಳಲ್ಲಿ ಯಾವ ಕೆಲಸ ಆಗಬೇಕು ಎಂದು ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಅಲ್ಲದೆ ಗುತ್ತಿಗೆದಾರರ ಅಡಿಯಲ್ಲಿ ಈ ಕಾರ್ಮಿಕರು ಕೆಲಸ ಮಾಡಬೇಕಾಗಿದೆ. ಅಲ್ಲದೆ, ಯೋಜನೆಯ ಅನುದಾನವನ್ನು 60:40 ಅನುಪಾತಕ್ಕೆ ಬದಲಿಸಲಾಗಿದೆ. ಬಿಜೆಪಿ ಆಡಳಿತ ರಾಜ್ಯಗಳು ಈ ನೂತನ ಕಾಯ್ದೆ ಜಾರಿ ಅಸಾಧ್ಯವಾಗಿದೆ ಎಂದು ತಿಳಿಸಿದರು.
ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಹಿರಿಯ ನಾಯಕರು. ಅವರಿಗೆ ಗ್ರಾಮೀಣ ಪ್ರದೇಶಗಳ ಬಗ್ಗೆ ಅರಿವಿದೆ. ಅಂತಹವರು ಈ ಕಾಯ್ದೆ ಜಾರಿಗೆ ತರುತ್ತಾರೆ ಎಂದು ನಾವು ನಿರೀಕ್ಷೆ ಮಾಡಿರಲಿಲ್ಲ. ಕೇಂದ್ರ ಸರ್ಕಾರ ಏಕಾಏಕಿ ಈ ಕಾಯ್ದೆ ಜಾರಿಗೆ ತಂದಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ನೂತನ ಕಾಯ್ದೆ ಹಿಂಪಡೆದು ಮನರೇಗಾ ಮರುಜಾರಿಗೆ ತರಬೇಕು. ಈ ವಿಚಾರವಾಗಿ ಇಡೀ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ರಾಜ್ಯಗಳಿಗೆ ಹಾಗೂ ಪಂಚಾಯಿತಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ನಿಮ್ಮ ಮೂಲಕ ಮನವಿ ಮಾಡಲಾಗುತ್ತಿದೆ. ನಾವು ಪಂಚಾಯಿತಿಗಳ ಅಧಿಕಾರ, ಸಂವಿಧಾನಿಕವಾಗಿ ನೀಡಲಾಗಿರುವ ಉದ್ಯೋಗ ಖಾತರಿ ಹಕ್ಕು ರಕ್ಷಣೆಗೆ, ಮಹಾತ್ಮಾ ಗಾಂಧಿ ಅವರ ಹೆಸರನ್ನು ಈ ಯೋಜನೆಯಲ್ಲಿ ಮುಂದುವರಿಸಬೇಕು ಎಂದು ನಾವು ಈ ಹೋರಾಟ ಮಾಡುತ್ತಿದ್ದೇವೆ ಎಂದು ಅವರು ವಿವರಿಸಿದರು.
ಇಡೀ ದೇಶ ಮಹಾತ್ಮಾ ಗಾಂಧಿ ಅವರನ್ನು ಗೌರವಿಸುತ್ತದೆ. ಅವರ ನೇತೃತ್ವದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಹೀಗಾಗಿ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮಾ ಗಾಂಧಿ ಅವರ ಹೆಸರಿಡಲು ಚಿಂತನೆ ನಡೆಸಿದ್ದು, ಈ ವಿಚಾರವಾಗಿ ಸರ್ಕಾರ ತೀರ್ಮಾನ ಮಾಡಲಿದೆ. ಮನರೇಗಾ ವಿಚಾರವಾಗಿ ವಿಶೇಷ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಚರ್ಚೆ ಮಾಡಲಾಗುವುದು. ನಂತರ ನಿರ್ಣಯವನ್ನು ಕೈಗೊಂಡು ನಿಮಗೆ ಕಳುಹಿಸಿಕೊಡಲಾಗುವುದು. ನೀವು ಹಿರಿಯರಾಗಿದ್ದು, ಜನಸಾಮಾನ್ಯರ ಹಕ್ಕಿನ ಬಗ್ಗೆ ತಿಳಿದಿದ್ದೀರಿ. ನೀವುಗಳು ಕೇಂದ್ರ ಸರ್ಕಾರಕ್ಕೆ ನಮ್ಮ ಮನವಿಯನ್ನು ತಲುಪಿಸಿ ನಮ್ಮ ಬೇಡಿಕೆ ಈಡೇರುವಂತೆ ಒತ್ತಡ ಹಾಕಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.
MGNREGA Bachao Sangram: ರಾಜ್ಯದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರು: ಡಿ.ಕೆ. ಶಿವಕುಮಾರ್
ನಮ್ಮ ಪಾಲಿಗೆ ನೀವು ರಾಜ್ಯಪಾಲರು, ಇದು ರಾಜಭವನವೇ
ಆರಂಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಮಾತನಾಡುವಾಗ ರಾಜಭವನ ಎಂದು ಹೇಳಿದಾಗ, ರಾಜ್ಯಪಾಲ ಗೆಹಲೋಟ್ ಅವರು ಈಗ ಇದು ಲೋಕಭವನ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, “ನೀವು ರಾಜ್ಯಪಾಲರು, ನಮ್ಮ ಪಾಲಿಗೆ ಇದು ರಾಜಭವನವೇ. ನಿಮ್ಮ ಹುದ್ದೆ ರಾಜ್ಯಪಾಲರೆಂದೇ ಇದೆ, ಅದನ್ನು ಬದಲಿಸಿಲ್ಲ. ನೀವು ರಾಜ್ಯಪಾಲ ಎಂಬ ಹೆಸರಿನಲ್ಲೇ ಸಹಿ ಹಾಕುತ್ತೀರಿ. ನಾವು ರಾಜಭವನಕ್ಕೆ ಗೌರವ ನೀಡುತ್ತೇವೆ. ರಾಜಭವನ ರಸ್ತೆಯ ಹೆಸರನ್ನು ನಾವು ಬದಲಿಸಿಲ್ಲ” ಎಂದು ನಗುತ್ತಲೇ ಪ್ರತಿಕ್ರಿಯಿಸಿದರು.