ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bagalkot Bypoll 2026: ಎಲ್ಲರ ಅಭಿಪ್ರಾಯ ಪಡೆದು ಉಮೇಶ್ ಮೇಟಿಗೆ ಕಾಂಗ್ರೆಸ್‌ ಟಿಕೆಟ್: ಡಿ.ಕೆ. ಶಿವಕುಮಾರ್

DK Shivakumar: ಎಲ್ಲರ ಅಭಿಪ್ರಾಯ ಪಡೆದು ದಿವಂಗತ ಎಚ್.ವೈ. ಮೇಟಿ ಅವರ ಪುತ್ರನಿಗೆ ಒಮ್ಮತದಿಂದ ಉಪಚುನಾವಣೆ ಟಿಕೆಟ್ ನೀಡಲಾಗಿದೆ. ಬೂತ್ ಮಟ್ಟದಲ್ಲಿಯೂ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ಟಿಕೆಟ್ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಜತೆ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ.

ಬಾಗಲಕೋಟೆ, ಮಾ.23: ಎರಡು ವಿಚಾರಕ್ಕೆ ಈ ಉಪಚುನಾವಣೆ ನಡೆಯಲಿದೆ. ಇದು ಧರ್ಮ ಹಾಗೂ ಅಧರ್ಮ, ಸತ್ಯ ಹಾಗೂ ಸುಳ್ಳಿನ ನಡುವಣ ಚುನಾವಣೆಯಾಗಿದೆ. ಬಿಜೆಪಿಯವರು ಏನಿದ್ದರೂ ಸುಳ್ಳು ಆಶ್ವಾಸನೆ ನೀಡುವುದು. ಆದರೆ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಬಸವಣ್ಣನವರ ನಾಡಿನಲ್ಲಿ ನುಡಿದಂತೆ ನಡೆಯುತ್ತೇವೆ. ಎಲ್ಲಾ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಬಾಗಲಕೋಟೆ ಉಪಚುನಾವಣೆ (Bagalkot Bypoll 2026) ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ನಾಮಪತ್ರ ಸಲ್ಲಿಕೆ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಇತ್ತೀಚೆಗಷ್ಟೇ ನಾವು ಮೆಡಿಕಲ್ ಕಾಲೇಜು ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಲು ನಾವಿಲ್ಲಿಗೆ ಬಂದಿದ್ದೆವು. ಖಾಸಗಿ ಮೆಡಿಕಲ್ ಕಾಲೇಜಿನಿಂದ ಬಡವರಿಗೆ ಅನುಕೂಲವಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಮೇಟಿ ಅವರು ಈ ಭಾಗಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಕೇಳುತ್ತಿದ್ದರು. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸುಲಿಗೆ ನಡೆಯುತ್ತದೆ ಹೊರತು, ಬಡವರಿಗೆ ನೆರವಾಗುವುದಿಲ್ಲ ಎಂಬ ಕಾರಣಕ್ಕೆ ಮೇಟಿ ಅವರು ಸಚಿವರು ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿ ಈ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು. ನಂತರ ಬಂದ ಬಿಜೆಪಿ ಸರ್ಕಾರ ಈ ಮೆಡಿಕಲ್ ಕಾಲೇಜಿಗೆ ಜೀವ ನೀಡಿರಲಿಲ್ಲ. ಅವರು ತಮಗೆ ಬೇಕಾದ ಕಡೆ ಮಾಡಿದ್ದರು. ಇಲ್ಲಿ ಬಿಜೆಪಿ ಶಾಸಕರಿದ್ದರೂ ಮೆಡಿಕಲ್ ಕಾಲೇಜು ನೀಡಿರಲಿಲ್ಲ ಎಂದು ಆರೋಪಿಸಿದರು.

ನಾಮಪತ್ರ ಸಲ್ಲಿಕೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ʼಎಲ್ಲರ ಅಭಿಪ್ರಾಯ ಪಡೆದು ದಿವಂಗತ ಎಚ್.ವೈ. ಮೇಟಿ ಅವರ ಪುತ್ರನಿಗೆ ಒಮ್ಮತದಿಂದ ಉಪಚುನಾವಣೆ ಟಿಕೆಟ್ ನೀಡಲಾಗಿದೆ. ಬೂತ್ ಮಟ್ಟದಲ್ಲಿಯೂ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡು ಟಿಕೆಟ್ ನೀಡಲಾಗಿದೆ. ಉಚಿತ ಆಸ್ಪತ್ರೆ ಮಾಡಬೇಕು ಎನ್ನುವ ಕನಸನ್ನು ಎಚ್.ವೈ. ಮೇಟಿ ಅವರು ಹೊತ್ತಿದ್ದರು. ಆ ಕನಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಸು ಮಾಡಿದ್ದಾರೆ. ಆಲಮಟ್ಟಿ ಆಣೆಕಟ್ಟು ಎತ್ತರ ಹೆಚ್ಚಳ ಸಂಬಂಧ ಸಂತ್ರಸ್ತರಿಗೆ ಅತ್ಯುತ್ತಮ ಪರಿಹಾರ ನೀಡಲಾಗುತ್ತಿದೆʼ ಎಂದರು.

ಹಿಂದಿನ ಉಪಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಗೆದ್ದಿದೆ ಈಗಲೂ ಗೆಲ್ಲಲಿದೆ

ಹಿಂದಿನ ಎಲ್ಲಾ ಉಪಚುನಾವಣೆಗಳನ್ನೂ ಕಾಂಗ್ರೆಸ್ ಪಕ್ಷ ಗೆದ್ದಿದೆ. ಪ್ರಸ್ತುತ ಎರಡೂ ಕ್ಷೇತ್ರಗಳಲ್ಲೂ ನಮ್ಮ ಪಕ್ಷ ಗೆಲುವು ಸಾಧಿಸಲಿದೆ. ನಮ್ಮ ಕ್ಷೇತ್ರಗಳನ್ನು ನಾವು ಉಳಿಸಿಕೊಳ್ಳುತ್ತೇವೆ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆʼ ಎಂದು ಅವರು ಹೇಳಿದರು.

Davanagere South by-election: ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ; ಒಮ್ಮತದಿಂದ ಸಮರ್ಥ್‌ಗೆ ಟಿಕೆಟ್‌ ನೀಡಿದ್ದೇವೆ ಎಂದ ಡಿ.ಕೆ. ಶಿವಕುಮಾರ್

ಸೋಲಿನ ಭಯದಿಂದ ಬಿಜೆಪಿ ಆರೋಪ

ಅಧಿಕಾರ ಹಾಗೂ ಹಣ ದುರುಪಯೋಗವಾಗುತ್ತಿದೆ ಎನ್ನುವ ಬಿಜೆಪಿ ಆರೋಪದ ಬಗ್ಗೆ ಕೇಳಿದಾಗ, ʼಸೋಲಿನ ಭಯದಿಂದ ಬಿಜೆಪಿ ಆರೋಪ ಮಾಡುತ್ತಿದೆ. ಚುನಾವಣಾ ಆಯೋಗ ಚುನಾವಣೆ ನಡೆಸಲಿದೆ. ಚುನಾವಣೆಗೂ ಮುಂಚಿತವಾಗಿ ಬಿಜೆಪಿಯವರು 10 ಸಾವಿರ ನೀಡಿದಂತೆ ನಾವು ಮಾಡುತ್ತಿಲ್ಲವಲ್ಲ. ಪ್ರತಿ ಖಾತೆಗೂ 2 ಸಾವಿರ ನೀಡುತ್ತೇವೆ, 200 ಯುನಿಟ್ ವಿದ್ಯುತ್, 10 ಕೆಜಿ ಅಕ್ಕಿ, ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ನುಡಿದಂತೆ ನಡೆಯುವ ಬಸವಣ್ಣನ ನಾಡಿನಲ್ಲಿ ಅವರ ಹಾದಿಯಂತೆ ನಾವು ನಡೆದಿದ್ದೇವೆ. ಇದು ನಮ್ಮ ಶಕ್ತಿ. ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರವಿತ್ತು. ಆಗ ಮಹಿಳೆಯರಿಗೆ, ಯುವಕರಿಗೆ ಸಹಾಯ ಮಾಡಿದ್ದರೆ? ಮನೆಗೆ ಅಕ್ಕಿ ಕೊಟ್ಟಿದ್ದರೇ? ಸಹಾಯ ಮಾಡಿದ ನಮಗೆ ಆಶೀರ್ವಾದ ಮಾಡಲು ಜನ ಬದ್ಧವಾಗಿದ್ದಾರೆ. ಅದಕ್ಕೆ ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಸುಪುತ್ರರನ್ನು ಸೋಲಿಸಿದರು. ಸಂಡೂರಿನಲ್ಲಿ ನಮ್ಮ ಸ್ಥಾನವನ್ನು ನಮಗೆ ಮರಳಿ ನೀಡಿದರುʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.