ಬೆಂಗಳೂರು, ಮೇ 20: “ಬಿಡದಿ ಟೌನ್‌ಶಿಪ್ (Bidadi Township Project) ವಿಚಾರವಾಗಿ ಕುಮಾರಸ್ವಾಮಿ ಅವರು ಪಂಥಾಹ್ವಾನ ಕರೆದಿದ್ದಾರಂತೆ. ಅವರ ಪಂಥಾಹ್ವಾನವನ್ನು ನಾನು ಸ್ವೀಕರಿಸುವೆ. ನನಗೆ ಮೂರು ದಿನ ಸಮಯ ಸಾಕು. ಯಾವತ್ತು ಸಮಯ ನಿಗದಿ ಮಾಡುವಿರೋ ನಾನು ಅಂದು ತಯಾರಿದ್ದೇನೆ. ಜಾಗ ಹಾಗೂ ಸಮಯ ಅವರೇ ನಿಗದಿ ಮಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK shivakumar) ಅವರು ತಿಳಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಸರ್ಕಾರಿ ಗೃಹ ಕಚೇರಿ ಕುಮಾರಪಾರ್ಕ್‌ನಲ್ಲಿ ಶಿವಕುಮಾರ್ ಅವರು ರೈತರೊಂದಿಗೆ ಬುಧವಾರ ಸಭೆ ನಡೆಸಿದರು. ಈ ವೇಳೆ ರೈತರು ನಮಗೆ ಪರಿಹಾರದ ಜತೆಗೆ ನಿವೇಶನವನ್ನು ನೀಡಿ ಎಂದು ಬೇಡಿಕೆ ಇಟ್ಟರು. ರೈತರ ಎಲ್ಲಾ ಅಹವಾಲುಗಳನ್ನು ಆಲಿಸಿದ ಶಿವಕುಮಾರ್ ಅವರು, ಕಾನೂನು ರೀತಿಯಲ್ಲಿ ಯಾವ ರೀತಿ ಸಹಾಯ ಮಾಡಲು ಸಾಧ್ಯವೋ, ಅದನ್ನು ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.
ಜೂನ್ ಮೊದಲ ವಾರದಿಂದ ಪರಿಹಾರ ಹಣ ಬಿಡುಗಡೆಗೆ ಕ್ರಮ
ಸಭೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಅವರು, “ಇಂದು ಬಿಡದಿ ಭಾಗದ ರೈತರೊಂದಿಗೆ ಚರ್ಚೆ ಮಾಡಿದ್ದೇನೆ. ಬಿಡದಿ ಟೌನ್‌ಶಿಪ್‌ಗೆ ಜಮೀನು ನೀಡಿರುವ ರೈತರಿಗೆ ಜೂನ್ ಮೊದಲನೇ ವಾರದಿಂದ ಪರಿಹಾರದ ಹಣ ಬಿಡುಗಡೆಗೆ ಕ್ರಮವಹಿಸುತ್ತೇನೆ. ಮೂರು, ಮೂರು ಹಳ್ಳಿಗಳನ್ನು ಸೇರಿಸಿ ಪ್ರತ್ಯೇಕವಾದ ಅಂತಿಮ ಹಂತದ ನೋಟಿಫಿಕೇಶನ್ ಮಾಡಬೇಕು ಎಂದು ನಾವು ತೀರ್ಮಾನ ಮಾಡಿದ್ದೇವೆ. ಬಿಡದಿ ಟೌನ್‌ಶಿಪ್ ವಿಚಾರವಾಗಿ ಅಲ್ಲಿನ ಶೇ.80 ರಷ್ಟು ರೈತರು ಒಪ್ಪಿಗೆ ನೀಡಿದ್ದು. ಆದಷ್ಟು ಬೇಗ ಪರಿಹಾರ ವಿತರಿಸಿ ಎಂದು ಒತ್ತಾಯ ಮಾಡಿದ್ದಾರೆ. ಭೂ ರಹಿತರ ಬಗ್ಗೆ ಕಾಳಜಿ ವಹಿಸಿದ್ದು, ಈ ವಿಚಾರ ಬಗೆಹರಿಸಲಾಗುವುದು” ಎಂದರು.
ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ; MLC ವಿಶ್ವನಾಥ್ ವಿರುದ್ಧ FIR
“ಈ ಯೋಜನೆ ನಾನು ಮಾಡಿದ್ದಲ್ಲ. ಕುಮಾರಸ್ವಾಮಿ ಅವರ ಕಾಲದಲ್ಲೇ ನೋಟಿಫಿಕೇಷನ್ ಮಾಡಲಾಗಿತ್ತು. ಅವರ ಕಾಲದಲ್ಲೇ ಎಂಟು ಸಾವಿರ ಎಕರೆ ಕೊಡಬೇಕೆಂದು ತೀರ್ಮಾನ ಮಾಡಲಾಗಿತ್ತು. ಈ ಯೋಜನೆಯನ್ನು ಡಿಎಲ್‌ಎಫ್ ಕಂಪನಿಗೆ ನೀಡಿದ್ದರು. ಆ ಕಂಪನಿ ಈ ಯೋಜನೆ ನಮಗೆ ಕಾರ್ಯಸಾಧು ಇಲ್ಲವೆಂದು ಹಣವನ್ನು ವಾಪಸ್ ತೆಗೆದುಕೊಂಡು ಹೋದರು” ಎಂದರು.
“ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಇದ್ದಂತಹ ಕಾಲದಲ್ಲಿ ಕೆಐಡಿಬಿಯವರು 1 ಸಾವಿರ ಎಕರೆ ತೆಗೆದುಕೊಂಡಿದ್ದರು. ಆಗ ಯಾರೂ ಮಾತನಾಡಲಿಲ್ಲ. ಆಗ ರೈತರು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದಾಗ. ನಾನೇ ಮಾಡಿಸಿದ್ದು ಈಗ ಏನು ಮಾಡೋಕೆ ಆಗಲ್ಲ ಎಂದರಂತೆ” ಎಂದರು.
ರೈತರ ವಿಶ್ವಾಸ ಪಡೆದು ಯೋಜನೆ ಮುಂದುವರಿಕೆ
“ಈ ಪ್ರದೇಶವನ್ನು ರೆಡ್ ಜೋನ್ ಎಂದು ತೀರ್ಮಾನ ಮಾಡಲಾಗಿತ್ತು. ಅಂದರೆ ಯಾರೂ ಭೂಮಿ ಮಾರುವಂತಿಲ್ಲ. ಬೇರೆ ಯಾರಿಗೂ ಕೂಡ ವಹಿವಾಟು ಮಾಡುವಂತಿಲ್ಲ ಎಂದು ಕಾನೂನು ಮಾಡಲಾಗಿತ್ತು. ಈ ಯೋಜನೆ ಕೈ ಇಡಬೇಕು ಎಂದು ಕೆಲವರು ನ್ಯಾಯಲಯಕ್ಕೂ ಅರ್ಜಿ ಹಾಕಿಕೊಂಡಿದ್ದರು. ಆದರೆ ನ್ಯಾಯಲಯ ಕೂಡ ಯೋಜನೆ ಕೈ ಬಿಡಲು ನಿರಾಕರಿಸಿತ್ತು. ಈ ಕಾರಣಕ್ಕೆ ನಾನು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆ ಮುಂದುವರಿಸುತ್ತಿದ್ದೇನೆ. ಸ್ವಲ್ಪ ಹೆಚ್ಚಿನ ಪರಿಹಾರ ಕೊಟ್ಟಿದ್ದೇನೆ. ಜತೆಗೆ ಅವರೆಲ್ಲರೂ ನಮ್ಮನ್ನು ಬೆಂಗಳೂರಿನವರು ಎಂದು ಗುರುತಿಸಿ ಆ ಜಿಲ್ಲೆಗೆ ಸೇರಿಸಿದ್ದೀರಿ ಎಂದು ಸಂತೋಷಗೊಂಡಿದ್ದಾರೆ. ಮೊದಲಿಗೆ ಇದ್ದಂತಹ ಬೆಂಗಳೂರು ಜಿಲ್ಲೆಯನ್ನು ಉಳಿಸಿದ್ದೀರಿ ಎಂದು ಸಂತಸಗೊಂಡಿದ್ದಾರೆ. ಯಾವ ರೈತರೂ ಭೂಮಿ ಮಾರಿಕೊಳ್ಳಬೇಡಿ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ. ಏಕೆಂದರೆ ನಿಮಗೆಲ್ಲರಿಗೂ ಇದರ ಬೆಲೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದೇನೆ. ಎಲ್ಲರೂ ಸಹ ಇದಕ್ಕೆ ಒಪ್ಪಿಕೊಂಡಿದ್ದಾರೆ” ಎಂದರು.
“ಕನಕಪುರ ರಸ್ತೆ, ಮೈಸೂರು- ಬೆಂಗಳೂರು ರಸ್ತೆ, ನೈಸ್ ರಸ್ತೆಯನ್ನು ಇದಕ್ಕೆ ಸಂಪರ್ಕಿಸಲಾಗುವುದು. ಭವಿಷ್ಯದಲ್ಲಿ ಪ್ರೀಮಿಯಂ ಎಫ್ ಎಆರ್ ಕೂಡ ನೀಡಲಾಗುವುದು. ಎಐ ನಗರ ಹೇಗಿರಲಿದೆ ಎಂದು ವಿದೇಶಿಗರು ನಮ್ಮನ್ನು ಕೇಳುತ್ತಿದ್ದಾರೆ. ಈ ಯೋಜನೆ ಜಾರಿಗೆ ಅಗತ್ಯವಿರುವ ಭೂಮಿ ನಮ್ಮ ಕೈಸೇರಿದ ಬಳಿಕ ನಾವು ಈ ಯೋಜನೆಯ ನೀಲನಕ್ಷೆ ಪ್ರಕಟಿಸುತ್ತೇವೆ” ಎಂದರು.
“ಪಂಥಾಹ್ವಾನದ ಬಗ್ಗೆ ರೈತರಿಗೆ ಹೇಳಿದಾಗ. ಅಣ್ಣ ನೀವು ಬೇಡ ನಾವೇ ಪಂಥಾಹ್ವಾನ ಸ್ವೀಕರಿಸುತ್ತೇವೆ, ನಾವೇ ಅವರಿಗೆ ಉತ್ತರ ಕೊಡುತ್ತೇವೆ ಎಂದು ರೈತರೇ ಹೇಳಿದ್ದಾರೆ. ಕಬ್ಬಿಣ, ಸ್ಟೀಲ್ ಬೆಲೆ ಟನ್‌ಗೆ ಐದು ಸಾವಿರ ಹೆಚ್ಚಳವಾಗಿದೆ. ಕುಮಾರಣ್ಣನವರೇ ಇದರ ಸಚಿವರು. ಇದನ್ನು ಮೊದಲು ಕಡಿಮೆ ಮಾಡಿಸಲು ಹೇಳಿ, ಆನಂತರ ಪಂಥಾಹ್ವಾನಕ್ಕೆ ಕುಮಾರಸ್ವಾಮಿ ಅವರು ಬರಲಿ ಎಂದು ರೈತರು ನನಗೆ ಸಲಹೆ ನೀಡಿದರು. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾದ ಮೇಲೆ ಇದರ ಬೆಲೆಯೂ ಜಾಸ್ತಿಯಾಗಲಿದೆ. ಮೊದಲು ನೀವು ಕುಮಾರಸ್ವಾಮಿ ಅವರನ್ನು ಇದರ ಬಗ್ಗೆ ಪ್ರಶ್ನಸಿ ಎಂದು ರೈತರು ನನಗೆ ಹೇಳಿದರು” ಎಂದರು.
ಕಬ್ಬಿಣದ ಬೆಲೆ ಏರಿಕೆ ತಡೆಯಿರಿ ಕುಮಾರಣ್ಣ
“ಇದಕ್ಕೂ ಮೊದಲು ಕುಮಾರಣ್ಣ ಅವರು ಬೆಲೆ ಏರಿಕೆ ತಡೆಯಲಿ. ಬಡವರು ಮನೆ ಕಟ್ಟಲು ಆಗುತ್ತಿಲ್ಲ. ಕಬ್ಭಿಣ, ಸಿಮೆಂಟ್ ಬೆಲೆ ಹೆಚ್ಚಳವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆಯೂ ಹೆಚ್ಚಳವಾಗಿದೆ. ಮೋದಿ ಅವರು ನಿಮಗೆ ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. ಇದರ ಮೂಲಕ ಬಡವರಿಗೆ ಸಹಾಯ ಮಾಡಿದರೆ ಒಂದಷ್ಟು ಒಳ್ಳೆ ಹೆಸರು ಬರುತ್ತದೆ. ರಾಜ್ಯದ ಬಡ ಜನತೆಯ ಪರವಾಗಿ ಅವರಿಗೆ ವೈಯಕ್ತಿಕವಾಗಿ ಮನವಿ ಮಾಡುತ್ತೇನೆ. ನಮ್ಮ ರಾಜ್ಯದ ಜನರಿಗೆ ಕಡಿಮೆ ಬೆಲೆಯಲ್ಲಿ ಕಬ್ಭಿಣ ದೊರೆಯುವಂತೆ ಯೋಜನೆ ಮಾಡಿದರೆ ಒಳ್ಳೆಯದು” ಎಂದು ವ್ಯಂಗ್ಯವಾಡಿದರು.
ಬಂಡೆಗಿಂತ ಕಬ್ಬಿಣವೇ ಗಟ್ಟಿಯಲ್ಲವೇ?
ನೀವು ಶಕ್ತಿವಂತರು ಎಂದು ಮಾಧ್ಯಮದವರು ಹೇಳಿದಾಗ, “ನಾನೇ ವೀಕ್ ಆಗಲಿ. ಅವರೇ ಶಕ್ತಿವಂತರಾಗಲಿ. ಬಂಡೆಗಿಂತ ಕಬ್ಬಿಣವೇ ಗಟ್ಟಿಯಲ್ಲವೇ? ಅದರಿಂದಲೇ ಅಲ್ಲವೇ ಬಂಡೆಯನ್ನು ಒಡೆಯುವುದು. ಈ ಮೊದಲೂ ಅವರ ಆಹ್ವಾನವನ್ನು ಸಾತನೂರಿನಲ್ಲಿ ಸ್ವೀಕಾರ ಮಾಡಿದ್ದೇನೆ. ಈಗಲೂ ಸಹ ಗೌರವ, ನಮ್ರತೆಯಿಂದ ತಯಾರಿದ್ದೇನೆ. ಯಾವುದೇ ಅಸಂಬದ್ಧವಾದ ಪದಗಳನ್ನು ಉಪಯೋಗಿಸದೇ ನಾನು ಮಾತನಾಡುತ್ತೇನೆ. ಮಾಧ್ಯಮದವರೂ ಇದಕ್ಕೆ ತಯಾರಾಗಿ. ಮಾಗಡಿ ಶಾಸಕರಾದ ಬಾಲಕೃಷ್ಣ ಅವರೂ ಬರುತ್ತೇನೆ ಎಂದಿದ್ದಾರೆ” ಎಂದರು.
ಆ ಹುಡುಗನಿಗೆ ಉತ್ತರ ಕೊಡುವುದಿಲ್ಲ
136 ಜನ ಶಾಸಕರಿದ್ದರೂ ಏನು ಹರಿದಿದ್ದೀರಿ ಎನ್ನುವ ನಿಖಿಲ್ ಕುಮಾರಸ್ವಾಮಿ ಅವರ ಟೀಕೆಯ ಬಗ್ಗೆ ಕೇಳಿದಾಗ, “ಆ ಹುಡುಗನಿಗೆ ನಾನು ಉತ್ತರ ಕೊಡುವುದಕ್ಕೆ ಇಷ್ಟವಿಲ್ಲ. ಆತನಿಗೆ ಉತ್ತರ ಕೊಡಲು ಸ್ಥಳೀಯ ನಾಯಕರಿದ್ದಾರೆ. ಅವರ ಸ್ಟೇಟಸ್ ಏನು? ಅಂತ ನನಗೆ ಗೊತ್ತಿಲ್ಲ. ಪಕ್ಷದ ಅಧ್ಯಕ್ಷರಾದ ಮೇಲೆ ಉತ್ತರ ನೀಡಬಹುದು” ಎಂದರು.
“ಈ ಹಿಂದೆ ದೇವೇಗೌಡರು ನರೇಂದ್ರ ಮೋದಿ ಗೆದ್ದರೆ ದೇಶ ಬಿಡುತ್ತೇನೆ ಎಂದಿದ್ದರು. ಆಗ ನರೇಂದ್ರ ಮೋದಿಯವರು ಬೇಡ, ನಮ್ಮ ಮನೆಯಲ್ಲೇ ಜಾಗ ಕೊಡುತ್ತೇನೆ ಎಂದು ಕರೆದಿದ್ದರು. ಹೀಗಾಗಿ ಅವರ ಮಾತನ್ನೆಲ್ಲಾ ನಾವು ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೆ. ಈಗ ರಾಜ್ಯಸಭಾ ಸದಸ್ಯರು ಆಗಬೇಕಲ್ಲವೇ?” ಎಂದು ತಿರುಗೇಟು ನೀಡಿದರು.
ಕುಮಾರಸ್ವಾಮಿ ಅವರ ಜತೆ ದೇವೇಗೌಡರೂ ಚರ್ಚೆಗೆ ಬರಲಿ
ದೇವೇಗೌಡರು ಬಿಡದಿ ಯೋಜನೆ ವಿರುದ್ಧ ಹೋರಾಟ ಪ್ರಾರಂಭ ಮಾಡುತ್ತೇನೆ ಹಾಗೂ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿರುವ ವಿಚಾರದ ಬಗ್ಗೆ ಕೇಳಿದಾಗ, “ದೇವೇಗೌಡರು ಮೋದಿಯವರಿಗೆ, ಅವರ ಬೇರೆ ನಾಯಕರಿಗೆ ಪತ್ರ ಬರೆಯಬೇಕು. ನಮ್ಮ ನಾಯಕರಿಗೆ ಪತ್ರ ಬರೆದರೆ ಏನು ಪ್ರಯೋಜನ. ರಾಹುಲ್ ಗಾಂಧಿ ಅವರು ಅಧಿಕಾರದಲಿಲ್ಲ. ಅವರು ಯಾಕೆ ಇದಕ್ಕೆಲ್ಲಾ ಬಾಯಿ ಹಾಕಬೇಕು. ದೇವೇಗೌಡರು ಏಕೆ ಏನೂ ಮಾಡಲು ಆಗಲಿಲ್ಲ” ಎಂದರು.
ಕೆಪಿಸಿಸಿ ಅಧ್ಯಕ್ಷರ ಒತ್ತಡಕ್ಕೆ ಮುಖ್ಯಮಂತ್ರಿಯವರು ಮಣಿಯಬಾರದು. ರಿಯಲ್ ಎಸ್ಟೇಟ್ ಮಾಫಿಯಾ ಎನ್ನುವ ದೇವೇಗೌಡರ ಹೇಳಿಕೆ ಬಗ್ಗೆ ಕೇಳಿದಾಗ, “ರಿಯಲ್ ಎಸ್ಟೇಟ್ ಮಾಫಿಯಾ ಮಾಡಿದವರು ಯಾರು? ಡಿಎಲ್‌ಎಫ್‌ಗೆ ಮಾರಿದವರು ಯಾರು? ಅವರ ಮಗ ಪಂಥಾಹ್ವಾನ ನೀಡಿದ್ದಾರಲ್ಲವೇ ಅವರ ಜೊತೆ ಇವರೂ ಚರ್ಚೆಗೆ ಬರಲಿ” ಎಂದರು.
ನಿಮ್ಮ ಬಗ್ಗೆ ದೇವೇಗೌಡರು ಆರೋಪ ಮಾಡಿದ್ದಾರೆ ಎಂದು ಮರುಪ್ರಶ್ನಿಸಿದಾಗ, “ಆರೋಪ ಮಾಡಲಿ. ನಮ್ಮ ಸಿದ್ದರಾಮಯ್ಯ ಅವರ ಬಗ್ಗೆಯೂ ಬಹಳ ಪ್ರೀತಿ ತೋರಿಸುತ್ತಿದ್ದಾರೆ” ಎಂದರು.
ಈ ಭಾಗದಲ್ಲಿ ಭೂಸ್ವಾಧೀನ ಆರಂಭಿಸಿದ್ದೇ ಕುಮಾರಸ್ವಾಮಿ, ದೇವೇಗೌಡರು
ಇದಕ್ಕೂ ಮುನ್ನ ರೈತರೊಂದಿಗೆ ಚರ್ಚೆ ನಡೆಸಿದ ಶಿವಕುಮಾರ್ ಅವರು, “ನಾನು ರೈತನೇ. ಮೇಕೆದಾಟು ಯೋಜನೆಯಲ್ಲಿ ನಮ್ಮ ನೂರಾರು ಎಕರೆ ಜಮೀನು ಕೂಡ ಮುಳುಗುತ್ತದೆ. ಯಾವ ರೈತರೂ ಆಸ್ತಿ ಕಳೆದುಕೊಳ್ಳಲು ಬಯಸುವುದಿಲ್ಲ. ಆದರೆ ಈ ಬಿಡದಿ ಟೌನ್ ಶಿಪ್ ಯೋಜನೆ ಯಾರಿಂದ ಶುರುವಾಯಿತು? ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಬಂದಿದ್ದು ಯಾರಿಂದ? ಸಿಎಂ ಲಿಂಗಪ್ಪ ಇದ್ದಾಗ ನಾನು ಭೂಸ್ವಾಧೀನಕ್ಕೆ ಅವಕಾಶ ನೀಡಿರಲಿಲ್ಲ. ಕುಮಾರಸ್ವಾಮಿ ಹಾಗೂ ದೇವೇಗೌಡರು ಬಂದ ನಂತರ ಈ ಭೂಸ್ವಾಧೀನ ಆರಂಭವಾಯಿತು” ಎಂದು ವಿವರಿಸಿದರು.
ಎಲ್ಲರಿಗೂ ಒಂದೇ ನ್ಯಾಯ ಇರಬೇಕು:
“ಅವರ ಕುಟುಂಬದವರು ಹಾಸನದಲ್ಲೇ ಜಮೀನು ಖರೀದಿ ಮಾಡಬಹುದಾಗಿತ್ತಲ್ಲವೇ? ಇಲ್ಲಿಗೆ ಬಂದು ಜಮೀನು ತೆಗೆದುಕೊಂಡಿದ್ದಾರೆ. ಅವರು, ತಮ್ಮಣ್ಣ ಅವರು, ಅವರ ಪತ್ನಿ, ಅವರ ಬೀಗರುಗಳು ಎಲ್ಲರೂ ಇಲ್ಲಿ ಜಮೀನು ಖರೀದಿ ಮಾಡಿದ್ದಾರೆ. ದೇವಗೆರೆಯಲ್ಲಿ ರೇವಣ್ಣ ಅವರು ಸೇರಿದಂತೆ 200 ಎಕರೆ ಜಮೀನು ತೆಗೆದುಕೊಂಡಿದ್ದಾರೆ. ಬಿಎಂಐಸಿಪಿ ವ್ಯಾಪ್ತಿಯಲ್ಲಿ ದೇವಗೆರೆ ಹಾಗೂ ಕೇತಗಾನಹಳ್ಳಿಯನ್ನು ಸೇರಿಸಿಕೊಂಡಿದ್ದಾರೆ. ರೈತರ ಹಿತದ ಕಾಪಾಡುವವರಾಗಿದ್ದರೆ, ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ದೇವಗೆರೆಯಲ್ಲಿ ಹಾಗೂ ಕೇತಗಾನಹಳ್ಳಿಯಲ್ಲಿರುವ ಅವರ ಜಮೀನು ಬಿಎಂಐಸಿಪಿ ಯೋಜನೆ ವ್ಯಾಪ್ತಿಯಲ್ಲಿ ಬರಬೇಕು, ಆದರೆ ಭೂಸ್ವಾಧೀನ ಮಾತ್ರ ಆಗಬಾರದು ಎಂದರೆ ಹೇಗೆ? ಅಲ್ಲಿ 38 ಎಕರೆ ಜಾಗವನ್ನು ಬೇರೆಯವರ ಹೆಸರಿನಲ್ಲಿ ಪಡೆದು, ಈಗ ಪರಿಹಾರವನ್ನು ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ” ಎಂದು ತಿಳಿಸಿದರು.
ಕುಮಾರಸ್ವಾಮಿ ಡಿನೋಟಿಫಿಕೇಶನ್ ಯಾಕೆ ಮಾಡಲಿಲ್ಲ?
“ಈ ಯೋಜನೆಗೆ ಅಧಿಸೂಚನೆ ಹೊರಡಿಸಿದವರು ಕುಮಾರಸ್ವಾಮಿ. ನಾನು ಈ ಯೋಜನೆ ಕೈಬಿಡಬಹುದೇ ಎಂದು ಆಲೋಚನೆ ಮಾಡಿದೆ. ನಾನು, ಕಾಗೋಡು ತಿಮ್ಮಪ್ಪ ಅವರು ಭೈರಮಂಗಲಕ್ಕೆ ಬಂದು ಪರಿಶೀಲನೆ ಮಾಡಿದೆವು. ಇಲ್ಲಿ ನ್ಯಾಯಾಲಯದ ಪ್ರಕರಣದಲ್ಲಿ ತೀರ್ಪುಗಳು ಬಂದಿವೆ. ಹೀಗಾಗಿ ಇದನ್ನು ಡಿನೋಟಿಫಿಕೇಷನ್ ಮಾಡಲು ಯಾರೂ ಧೈರ್ಯ ಮಾಡಲಿಲ್ಲ. ನಾನು ಕೂಡ ಇದನ್ನು ಮಾಡಲಿಲ್ಲ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಡಿನೋಟಿಫಿಕೇಷನ್ ಪ್ರಕರಣ ಅನುಭವಿಸಿದ್ದಾರೆ. ಈ ಯೋಜನೆ ಕೈಬಿಡುವುದಾದರೇ ಅವರೇ ಡಿನೋಟಿಫಿಕೇಶನ್ ಮಾಡಬಹುದಿತ್ತಲ್ಲವೇ? ಬಿಜೆಪಿ ಸರ್ಕಾರದಲ್ಲಿ 900 ಎಕರೆಯನ್ನು ಕೆಐಎಡಿಬಿಗೆ ಜಮೀನು ನೀಡಿದಾಗ ಕುಮಾರಸ್ವಾಮಿ ಅವರು ಯಾಕೆ ಮಾತನಾಡಲಿಲ್ಲ” ಎಂದು ಪ್ರಶ್ನಿಸಿದರು.
“ಈ ಪ್ರದೇಶವನ್ನು ರೇಡ್ ಜೋನ್ ಎಂದು ಘೋಷಣೆ ಮಾಡಲಾಗಿದ್ದು, ಈ ಜಮೀನನ್ನು ಯಾರೂ ಮಾರಾಟ ಮಾಡುವಂತಿಲ್ಲ. ನಿಜವಾದ ರೈತರು ಈ ವಿಚಾರ ಅರ್ಥ ಮಾಡಿಕೊಂಡಿದ್ದಾರೆ. ರಾಜಕೀಯ ಬೆಳೆಸಿಕೊಂಡಿರುವವರು ವಿರೋಧ ಮಾಡುತ್ತಿದ್ದಾರೆ. ವಿರೋಧ ಮಾಡಲಿ. ಈ ಹಿಂದೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ವಿಚಾರ ಬಂದಾಗ ಇದಕ್ಕೆ ಸುರೇಶ್ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಹೇಳಿದ್ದರು. ಆಗ ಮಂಜುನಾಥ್ ಅವರು ನಮ್ಮ ಪಕ್ಷದಲ್ಲಿದ್ದರು. ನಾನು ಬೇಡ ಎಂದು ಹೇಳಿದೆ. ಬೇಕಾದರೆ ಮಂಜುನಾಥ್ ಅವರೇ ಅಧ್ಯಕ್ಷರಾಗಲಿ ಎಂದು ಹೇಳಿದ್ದೆ. ಆಗ ಜಾರ್ಜ್ ಅವರು ಮಂಜುನಾಥ್ ಸ್ಥಳೀಯವಾಗಿ ರಿಯಲ್ ಎಸ್ಟೇಟ್ ವ್ಯಾಪಾರ ಮಾಡುತ್ತಾರೆ ಆತ ಆಗುವುದು ಬೇಡ ಎಂದು ಹೇಳಿದರು” ಎಂದರು.
“ಈ ಜಿಲ್ಲೆಯನ್ನು ರಾಮನಗರದಿಂದ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿದ ಬಳಿಕ ನಿಮ್ಮ ಆಸ್ತಿ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂದು ಒಮ್ಮೆ ನೋಡಿ. ಇದನ್ನು ತಡೆಯಲು ಕುಮಾರಸ್ವಾಮಿ ಅವರು ಸಾಕಷ್ಟು ಪ್ರಯತ್ನ ಮಾಡಿದರು. ಆದರೂ ನಾನು ಇದನ್ನು ಮಾಡಿದ್ದೇನೆ. ಈಗ ಪರಮೇಶ್ವರ್ ಅವರು ತುಮಕೂರನ್ನು ಬೆಂಗಳೂರು ಉತ್ತರ ಎಂದು ಮಾಡಲು ಕೇಳಿದ್ದಾರೆ. ಅವರು ಕೇಳುವುದರಲ್ಲಿ ತಪ್ಪೇನಿಲ್ಲ. ಅವರಿಗೆ ನಮ್ಮ ತೀರ್ಮಾನದ ಮೌಲ್ಯ ಅರ್ಥವಾಗಿದೆ” ಎಂದು ತಿಳಿಸಿದರು.
“ನಾವು ಈ ಜಿಲ್ಲೆಯಲ್ಲಿ ನಾಲ್ಕು ತಾಲೂಕಿಗೆ ನಾಲ್ಕು ಮೆಡಿಕಲ್ ಕಾಲೇಜು ಬರುವಂತೆ ಮಾಡಿದ್ದೇವೆ. ಇಂತಹ ಆಲೋಚನೆಯನ್ನು ಬೇರೆಯವರು ಮಾಡಿದ್ದರಾ? ನಾನು ಈ ಯೋಜನೆಗಾಗಿ ಭೂಮಿ ಕಳೆದುಕೊಳ್ಳುವವರಿಗೆ ಉತ್ತಮ ಪರಿಹಾರ ನಿಗದಿ ಮಾಡಿದ್ದೇವೆ. ನಾವು ಪ್ರತಿ ಮೂರು ಊರಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಈಗಾಗಲೇ ಕೆಂಪಯ್ಯನಪಾಳ್ಯ, ಮಂಡಹಳ್ಳಿಗೆ ಸಹಿ ಹಾಕಲಾಗಿದೆ. ಈಗಾಗಲೇ ಕೆಲವರು ನ್ಯಾಯಾಲಯಕ್ಕೆ ಹೋಗಿ ಇದನ್ನು ತಡೆಯಲು ತಯಾರಿ ಮಾಡಿಕೊಂಡಿದ್ದಾರೆ. ಹೀಗಾಗಿ ಆಯಾ ಹಳ್ಳಿ ಅಧಿಸೂಚನೆ ಹೊರಡಿಸುತ್ತಿದ್ದಂತೆ ಪರಿಹಾರ ನೀಡಲಾಗುವುದು. ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗುತ್ತದೆ. ಬಿಡಿಎ 3 ಸಾವಿರ ಕೋಟಿ ಬಂಡವಾಳ ಹಾಕಿದ್ದು, ಇದಕ್ಕೆ ಗ್ರೇಟರ್ ಬೆಂಗಳೂರು ಸಮಗ್ರ ಟೌನ್ ಶಿಪ್ ಎಂದು ಹೆಸರು ಇಡಲಾಗಿದೆ. ಏನೇ ಮಾಡಿದರೂ ನೈಸ್ ರಸ್ತೆ ನಿಲ್ಲಿಸಲು ಆಗುವುದಿಲ್ಲ, ಈ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹುಡ್ಕೋ ಅವರು 12 ಸಾವಿರ ಕೋಟಿ ನೀಡಲಿದ್ದಾರೆ” ಎಂದು ತಿಳಿಸಿದರು.
Bidadi township: ಬಿಡದಿ ಟೌನ್‌ಶಿಪ್ ವಿರೋಧಿಸಿ ರೈತರ ಪರ ನನ್ನ ಹೋರಾಟ ಆರಂಭ: ಎಚ್.ಡಿ. ದೇವೇಗೌಡ ಘೋಷಣೆ
ಸಾಧ್ಯವಾದಷ್ಟು ನಿಮ್ಮ ಜಮೀನನ್ನು ಉಳಿಸಿಕೊಳ್ಳಿ:
“ನೀವು ಸಾಧ್ಯವಾದಷ್ಟು ನಿಮಗೆ ಸಿಗುವ ಜಮೀನು ಉಳಿಸಿಕೊಳ್ಳಿ. ನಿಮಗೆ ಒಂದೇ ಕಡೆ ಜಮೀನು ನೀಡಲು ಮುಂದಾಗಿದ್ದೇವೆ. ನೀವು ಮುಂದೆ ಪ್ರೀಮಿಯಂ ಎಫ್ಎಆರ್ ಬಂದರೆ ನಿಮಗೆ ಹೆಚ್ಚಿನ ಲಾಭವಾಗುತ್ತದೆ. ಈ ಯೋಜನೆಯಲ್ಲಿ ನಿಮಗೆ ನೀಡುವ ಪರಿಹಾರ ಹಾಗೂ ಇತರೆ ವೆಚ್ಚಗಳಿಂದ ಪ್ರತಿ ಎಕರೆಗೆ ಸರ್ಕಾರ 5 ಕೋಟಿ ಬಂಡವಾಳ ಹಾಕುತ್ತಿದೆ. ನಾಳೆ ಇಲ್ಲಿಗೆ ಬಂದು ಬಂಡವಾಳ ಹಾಕುವವರಿಗೂ ಅನುಕೂಲವಾಗಬೇಕು. ಇಲ್ಲಿಗೆ ಮೆಟ್ರೋ ಸಂಪರ್ಕ ನೀಡಬೇಕು ಎಂದು ಬಾಲಕೃಷ್ಣ ಅವರು ಕೇಳಿದ್ದು, ಇದಕ್ಕೆ ಸರ್ವೇ ಮಾಡಲಾಗುತ್ತಿದೆ. ಇನ್ನು ಈ ಪ್ರದೇಶವನ್ನು ಬಿಡ್ಬ್ಲ್ಯೂಎಸ್ಎಸ್‌ಬಿ ವ್ಯಾಪ್ತಿಗೆ ಸೇರಿಸಲಾಗಿದ್ದು, ಬೆಂಗಳೂರು ಜಲಮಂಡಳಿ ಇಲ್ಲಿಗೆ ನೀರು ಒದಗಿಸಲಿದೆ. 40 ಕಿ.ಮೀ ಉದ್ದದ ರಸ್ತೆ ಸಂಪರ್ಕ ಕಲ್ಪಿಸಲಾಗುವುದು. ಜೂನ್ 30ರ ಒಳಗೆ ಎಲ್ಲಾ ಅಧಿಸೂಚನೆ ಹೊರಡಿಸಲಾಗುವುದು. ಜೂನ್ 30ರ ಒಳಗೆ ಒಪ್ಪಿಗೆ ಕೊಡುವವರಿಗೆ ಪೂರ್ಣಪ್ರಮಾಣದ ಪರಿಹಾರ ನೀಡುತ್ತೇವೆ, ಒಪ್ಪಿಗೆ ನೀಡದವರಿಗೆ ಕೋರ್ಟ್ ನಲ್ಲಿ ಠೇವಣಿ ಇಟ್ಟು ಕೆಲಸ ಮುಂದುವರಿಸುತ್ತೇವೆ. ಈ ಯೋಜನೆಗೆ ಸಹಕಾರ ನೀಡುತ್ತಿರುವ ಎಲ್ಲಾ ರೈತರಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದು ತಿಳಿಸಿದರು.