ಬೆಳಗಾವಿ: ರಾಜ್ಯಾದ್ಯಂತ ಮುಂಗಾರು ವಾಡಿಕೆಗಿಂತ ಕಡೆಮೆಯಾಗಿದ್ದು, ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ಆಗದಂತೆ ನಿಗಾವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ (Karnataka water crisis) ಉದ್ಭವಿಸಿದಲ್ಲಿ ಟ್ಯಾಂಕರ್ ಹಾಗೂ ಖಾಸಗಿ ಬೋರ್‌ವೆಲ್‌ಗಳ ಮೂಲಕ ನೀರು ಪೂರೈಕೆಗೆ ಕೂಡಲೆ ಕ್ರಮ ವಹಿಸುವಂತೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಬುಧವಾರ (ಜುಲೈ 01) ಜರುಗಿದ ಕಂದಾಯ ದಿನಾಚರಣೆ-2026 ಹಾಗೂ ಬೆಳಗಾವಿ ವಿಭಾಗದ ಹವಾಮಾನ ಪರಿಸ್ಥಿತಿ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಬರದ ಛಾಯೆಯಿದೆ. ದೇಶವು 1901ರ ನಂತರ ಅತ್ಯಂತ ಕಡಿಮೆ ಮಳೆ ಕಂಡಿದ್ದು, ಕರ್ನಾಟಕವು 2023 ಕ್ಕಿಂತ ತುಸು ಉತ್ತಮ ಮಳೆ ಕಂಡಿದೆ. ಆದರೆ ಜುಲೈ ತಿಂಗಳಲ್ಲೂ ಅತ್ಯಂತ ಕಡಿಮೆ ಬೀಳಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ನಮ್ಮ ಜಲಾಶಯಗಳಲ್ಲಿ ನೀರು ಡೆಡ್ ಸ್ಟೋರೇಜ್ ಮಟ್ಟಕ್ಕೆ ತಲುಪಿದ್ದು, ಇರುವ ನೀರನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಬೇಕು ಎಂದು ನಿರ್ದೇಶನ ನೀಡಿದರು.
ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಬಾರದು
ಬೆಳಗಾವಿ ವಿಭಾಗದ ಯಾವುದೇ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಬಾರದು. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ಸರ್ಕಾರಕ್ಕೆ ಮುಜುಗರ ತರುವ ಕೆಲಸ ಆಗಕೂಡದು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಒಟ್ಟಾಗಿ ಕೆಲಸ ಮಾಡಬೇಕು.
ಕುಡಿಯುವ ನೀರಿನ ನಿರ್ವಹಣೆಗಾಗಿ ಎಲ್ಲ ಜಿಲ್ಲೆಗಳಿಗೆ ಅನುದಾನ ಬಿಡುಗಡೆಯಾಗಿದ್ದು ಸದರಿ ಅನುದಾನವನ್ನು ಬಳಸಿಕೊಂಡು ಆಗಸ್ಟ ಮಾಸಾಂತ್ಯದ ವರೆಗೆ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಕ್ರಿಯಾ ಯೋಜನೆ ರೂಪಿಸಿ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಬೇಕು ಎಂದು ಡಿಸಿಎಂ ಸೂಚಿಸಿದರು.
ಜಿಲ್ಲೆಗಳಲ್ಲಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಜಲಾಶಯಗಳಲ್ಲಿನ ನೀರನ್ನು ಎಚ್ಚರಿಕೆಯಿಂದ ಬಳಸುವುದರ ಜೊತೆಗೆ ಜಲಾಶಯಗಳಲ್ಲಿರುವ ಅಲ್ಪ ನೀರನ್ನು ಬೆಳೆಗೆ ನೀಡಬಾರದು ಎಂದು ಹೇಳಿದರು.
ಮೇವು ದಾಸ್ತಾನು ಮಾಡಿಕೊಳ್ಳಿ
ಕೆನಾಲ್‌ಗಳಲ್ಲಿನ ಪಂಪ್‌ಸೆಟ್‌ಗಳನ್ನು ತೆರೆವುಗೊಳಿಸಲು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ, ನಗರ ಪ್ರದೇಶಗಳಲ್ಲಿ ನೀರಿನ ಕೊರತೆಯಾದ ಕುರಿತು ದೂರುಗಳು ಬರದಂತೆ ನಿಗಾವಹಿಸಬೇಕು. ಮಳೆ ಕೊರತೆಯಿಂದಾಗಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಅಗತ್ಯದ ಮೇವು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಈಗಿನಿಂದಲೇ ಜಿಲ್ಲಾವಾರು ಮೇವು ದಾಸ್ತಾನು ಮಾಡಿಕೊಳ್ಳಬೇಕು.
ಕೊಳವೆಬಾವಿ, ಕೆರೆ ನೀರು ಸೇರಿದಂತೆ ನೀರಿನ ಮೂಲ ಇರುವ ಜಾಗದಲ್ಲಿ ರೈತರು ಜಾನುವಾರುಗಳಿಗೆ ಮೇವು ಬೆಳೆಯಲು ಪ್ರೋತ್ಸಾಹ ನೀಡಿ, ಮೇವಿನ ಬೀಜಗಳನ್ನು ವಿತರಿಸಬೇಕು. ತಾಪಮಾನ ಹೆಚ್ಚಳದಿಂದ ಜಾನುವಾರುಗಳಿಗೆ ಸಾಂಕ್ರಾಮಿಕ ರೋಗಗಳು ಬರಬಹುದಾದ ಸಾಧ್ಯತೆಗಳಿದ್ದು, ಅಗತ್ಯ ಲಸಿಕೆಗಳು ಲಭ್ಯವಿರುವ ಕುರಿತು ಮತ್ತು ಕಾಲಕಾಲಕ್ಕೆ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಲು ಉಪ ಮುಖ್ಯಮಂತ್ರಿ ನಿರ್ದೇಶಿಸಿದರು.
ಡೆಂಗ್ಯೂ ಆತಂಕ; ಮುಂಜಾಗೃತ ಕ್ರಮ ವಹಿಸಲು ಸೂಚನೆ
ಈಗಾಗಲೇ ಬೆಳಗಾವಿ 34, ವಿಜಯಪುರ 24, ಬಾಗಲಕೋಟೆ 5, ಧಾರವಾಡ 27, ಗದಗ 25, ಹಾವೇರಿ 11 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಆರಂಭಿಕ ಹಂತದಲ್ಲೇ ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಕ್ತ ತಿಳುವಳಿಕೆ ಮೂಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಡೆಂಗ್ಯೂ ಸೇರಿದಂತೆ ಇತರೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತ ಕ್ರಮ ವಹಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಬೆಳಗಾವಿ ವಿಭಾಗದ ಜಿಲ್ಲೆಗಳ ಜಿಲ್ಲಾ ಆರೊಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ ಅವರು ಕಲುಷಿತ ನೀರಿನಿಂದ ಡೆಂಗ್ಯೂ ಸೇರಿದಂತೆ ಇತರೆ ರೋಗಗಳು ಉಲ್ಬಣಗೊಂಡರೆ ಸಂಬಂಧಿತ ಅಧಿಕಾರಿಗಳು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪರಮೇಶ್ವರ ಎಚ್ಚರಿಕೆ ನೀಡಿದರು.
ಮಳೆ ಪ್ರಮಾಣ ಗುರುತಿಸಲು ಮಳೆ ಮಾಪನ ಕೇಂದ್ರಗಳು ಅತ್ಯಗತ್ಯ. ಮಳೆ ಮಾಪನಗಳನ್ನು ಕೂಡಲೇ ದುರಸ್ಥಿಗೊಳಿಸಬೇಕು. ಹೊಸದಾಗಿ ಖರೀದಿಸುವುದಾದರೆ ಕೂಡಲೇ ಖರೀದಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು. ಎಲ್‌ನಿನೋ ಪರಿಣಾಮದಿಂದ ಕೆಲವು ಪ್ರದೇಶಗಳಲ್ಲಿ ಏಕಾಏಕಿ ಮಳೆ ಬರುವುದು, ಭೂಕುಸಿತ, ಹಠಾತ್ ಪ್ರವಾಹಗಳು, ಸಿಡಿಲು ಬರುವ ಸಂಭವ ಹೆಚ್ಚಿರುತ್ತದೆ. ಇದರಿಂದ ಜನ ಸಂಕಷ್ಟಕ್ಕೆ ಸಿಲುಕಬಹುದು. ಹಾಗಾಗಿ ಹವಾಮಾನ ಸೂಚನೆಗಳನ್ನು ಆಧರಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಬೆಳೆ ವಿಮೆ ವಿಷಯವನ್ನು ಕೃಷಿ ಇಲಾಖೆಯವರು ಗಂಭೀರವಾಗಿ ಪರಿಗಣಿಸಬೇಕು. ವಿಮಾ ಕಂಪನಿಯವರು ಮಾನದಂಡಗಳನ್ನು ಇದ್ದಕ್ಕಿದ್ದಂತೆ ಬದಲಾಯಿಸಿ, ಜನರಿಗೆ ಮೋಸ ಮಾಡಬಹುದು. ಈ ಬಗ್ಗೆ ಎಚ್ಚರ ವಹಿಸಬೇಕು. ಟಾಸ್ಕ್ ಫೋರ್ಸ್ ಸಭೆಯನ್ನು ನಿರಂತರವಾಗಿ ಕೈಗೊಳ್ಳಬೇಕು. ಡಿಸಿ ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳು ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ರೀತಿಯ ಸವಾಲುಗಳು ಎದುರಾದರೂ ಪರಿಹಾರ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು, ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ತಿಳಿಸಿದರು.
ಶಾಶ್ವತ ನಿವಾಸ ಪ್ರಮಾಣಪತ್ರ ತುರ್ತಾಗಿ ನೀಡಿ
ರಾಜ್ಯದಲ್ಲಿ SIR ಪ್ರಕ್ರಿಯೆ ನಡೆಯುತ್ತಿದೆ, ಅನೇಕರಿಗೆ ಶಾಶ್ವತ ನಿವಾಸ ಪ್ರಮಾಣಪತ್ರದ (ಪಿಆರ್‌ಸಿ) ಅಗತ್ಯ ಇದೆ. ಪಿಆರ್‌ಸಿಯನ್ನು ತಹಸೀಲ್ದಾರ್ ಮತ್ತು ಮೇಲ್ಪಟ್ಟ ಅಧಿಕಾರಿಗಳು ನೀಡಬೇಕು. ಯಾವ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಬಾರದು. ಅಗತ್ಯ ಇರುವವರಿಗೆ ತುರ್ತಾಗಿ ಪಿಆರ್‌ಸಿ ನೀಡಬೇಕು. ಅದಕ್ಕೆ ಅಗತ್ಯ ಇರುವ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು.
ಪಿಂಚಣಿ ನಿಲ್ಲಿಸಲಾಗಿದೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಇದನ್ನು ಬೇಗ ಇತ್ಯರ್ಥಪಡಿಸಬೇಕು. ಅರ್ಹ ಪಿಂಚಣಿದಾರರು ಒಬ್ಬರಿಗೂ ಪಿಂಚಣಿ ನಿಲ್ಲಬಾರದು ಎಂದು ನಿರ್ದೇಶನ ನೀಡಿದರು.
ದೇವಸ್ಥಾನಗಳ ಆಸ್ತಿ ಒತ್ತುವರಿ ತೆರವು ಮಾಡಿ
ರಾಜ್ಯ ಮುಜರಾಯಿ ಇಲಾಖೆಗೆ ಒಳಪಡುವ ʼಎʼ, ʼಬಿʼ ಮತ್ತು ʼಸಿʼ ವರ್ಗದ ದೇವಸ್ಥಾನಗಳ ಈಗಿರುವ ಮೂಲಸೌಕರ್ಯವನ್ನು ಮತ್ತಷ್ಟು ಸುಧಾರಿಸಬೇಕಿದೆ. ಭಕ್ತಾದಿಗಳಿಗೆ ವಸತಿ, ಶೌಚಗೃಹ, ಪ್ರಸಾದ ವಿತರಣೆಯ ವ್ಯವಸ್ಥೆಯಲ್ಲಿ ಗುಣಮಟ್ಟ ಹೆಚ್ಚಿಸುವಂತೆ ಸಲಹೆ ನೀಡಿದರು.
ತಹಸೀಲ್ದಾರ್, ಎಸಿ ಹಂತದ ಅಧಿಕಾರಿಗಳು ದೇವಸ್ಥಾನಗಳಿಗೆ ನಿರಂತರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ದೇವಸ್ಥಾನದ ಆಸ್ತಿಗಳು ಒತ್ತುವರಿಯಾಗುತ್ತಿವೆ. ದೇವರ ಆಸ್ತಿ ಕಾಪಾಡಲು ಗಂಭೀರವಾಗಿ ಪರಿಗಣಿಸಬೇಕು. ಪೊಲೀಸರ ನೆರವು ಪಡೆದು ಒತ್ತುವರಿಯಾಗಿರುವ ದೇವಸ್ಥಾನಗಳ ಆಸ್ತಿಯನ್ನು ಕೂಡಲೇ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.
ಒಂದು ತಿಂಗಳೊಳಗೆ ʼಎʼ, ʼಬಿʼ, ʼಸಿʼ ವರ್ಗದ ದೇವಸ್ಥಾನಗಳ ಮಾಸ್ಟರ್ ಪ್ಲಾನ್ ರೂಪಿಸಬೇಕು. ಆಯಾ ದೇವಸ್ಥಾನದ ಹಣವನ್ನು ದೇವಸ್ಥಾನಕ್ಕೆ ಖರ್ಚು ಮಾಡಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ. ದೇವಸ್ಥಾನದ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಸರ್ಕಾರದ ಅನುಮತಿ ಪಡೆದು ಜಮೀನು, ನಿವೇಶನ ಖರೀದಿಸಲು ಹಣ ಖರ್ಚು ಮಾಡುವಂತೆ ಆದೇಶಿಸಿದರು.
ದೇಶದ ದೊಡ್ಡದೊಡ್ಡ ದೇವಸ್ಥಾನಗಳಲ್ಲಿ ಕಾಣಿಕೆ ಹಣ ದುರುಪಯೋಗ ಆಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಈ ಬಗ್ಗೆ ರಾಜ್ಯದಲ್ಲಿಯೂ ಎಚ್ಚರಿಕೆ ವಹಿಸಬೇಕಿದೆ. 6,686 ದೇವಸ್ಥಾನಗಳ ಸರ್ವೆ ಬಾಕಿ ಇದೆ. ಬೆಳಗಾವಿ ವಿಭಾಗದಲ್ಲಿ 5,571 ದೇವಸ್ಥಾನಗಳಿಗೆ ಖಾತೆ ಆಗಿಲ್ಲ. ಈ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಎರಡು ತಿಂಗಳೊಳಗೆ ಬಗೆಹರಿಸುವಂತೆ ತಿಳಿಸಿದರು.
ದೇವಸ್ಥಾನದ ಆಸ್ತಿ ಅನುಭವಿಸುತ್ತಾರೆ. ಅದನ್ನು ಮಾರಾಟ ಮಾಡಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ವಾರಕ್ಕೊಮ್ಮೆ ಪರಿಶೀಲಿಸಿ ತಡೆಯಬೇಕು. ಬೆಂಗಳೂರಲ್ಲಿ ನೂರಾರು ಆಸ್ತಿಗಳನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಲಾಗಿದೆ. ಇಂತಹ ದಂಧೆಯನ್ನು ಲಿಟಿಗೇಷನ್ ಮುಂದೆ ನೋಡಿಕೊಳ್ಳೋಣ ಎಂಬ ಮನಸ್ಥಿತಿಯಲ್ಲಿ ಮಾಡುತ್ತಾರೆ.
ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ನಾನೇ ಭೇಟಿ ನೀಡುತ್ತೇನೆ. ನಾನು ಭೇಟಿ ನೀಡಿದಾಗ ವ್ಯವಸ್ಥೆ ಸರಿ ಇಲ್ಲದಿರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕ್ರೀಡಾ ಮೂಲಸೌಕರ್ಯ ಹೆಚ್ಚಿಸಬೇಕು
ಜಿಲ್ಲಾಧಿಕಾರಿಗಳು ಜಿಲ್ಲೆಯ ಚಿತ್ರಣವನ್ನು ಬದಲಾಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಆ ಶಕ್ತಿ ನಿಮ್ಮಲ್ಲಿದೆ. ಜಿಲ್ಲೆಗಳಲ್ಲಿ ಕ್ರೀಡಾ ಸೌಕರ್ಯಗಳನ್ನು ಹೆಚ್ಚಿಸಬೇಕು. ಹಬ್ಬ, ಆಚರಣೆಗಳ ಸಂದರ್ಭದಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು ಎಂದು ಸೂಚಿಸಿದರು.
ಸಿಕ್ಕ ಅವಕಾಶದ ಸದುಪಯೋಗಪಡಿಸಿಕೊಂಡು ನಿಮ್ಮ ಅಧಿಕಾರದ ಸಂದರ್ಭದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಚಟುವಟಿಕೆಗಳ ಆದ ಗುರುತು ಉಳಿಸಿ ಹೋಗಬೇಕು. ಬರೀ ಕಂದಾಯ ಇಲಾಖೆಗೆ ಮಾತ್ರ ಸೀಮಿತವಾಗಿರಬಾರದು. ಶಾಲಾ-ಕಾಲೇಜುಗಳಿಗೆ ಹೋಗಿ ವಿವಿಧ ವಿಚಾರಗಳ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಬೇಕು. ತಾವುಗಳು ಉನ್ನತ ಹುದ್ದೆಯಲ್ಲಿರುವುದರಿಂದ ವಿದ್ಯಾರ್ಥಿಗಳು ನಿಮ್ಮನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುತ್ತಾರೆ. ಯುವಕರ ದೈನಂದಿನ ಚಟುವಟಿಕೆಯಲ್ಲಿ ದೊಡ್ಡ ಬದಲಾವಣೆ ಕಾಣತ್ತಾರೆ ಎಂದು ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ನಾನು ತಪ್ಪು ಮಾಡಿದರೆ ಬಹಿರಂಗಪಡಿಸಿ, ಆದರೆ ಸುಳ್ಳು ಸುದ್ದಿ ಪ್ರಕಟಿಸಬೇಡಿ: ಸಿಎಂ
ಸಭೆಯಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ರಾಜ್ ಸಿಂಗ್, ವಿಪತ್ತು ನಿರ್ವಹಣಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಮನೋಜ್ ಕುಮಾರ್ ಮೀನಾ, ಪಶುಸಂಗೋಪನ ಇಲಾಖೆಯ ಕಾರ್ಯದರ್ಶಿಗಳಾದ ವಿನೋದ್ ಪ್ರಿಯ, ಕಂದಾಯ ಇಲಾಖೆಯ ಆಯುಕ್ತರಾದ ಮೀನಾ ನಾಗರಾಜ್, ಭೂಮಾಪನ ಮತ್ತು ಭೂ ದಾಖಲೆಗಳ ಆಯುಕ್ತರಾದ ವೆಂಕಟರಾಜಾ, ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಹೊನ್ನಾಂಬ, ಕಂದಾಯ ಇಲಾಖೆಯ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ., ಪಶುಸಂಗೋಪನಾ ಇಲಾಖೆಯ ಆಯುಕ್ತರಾದ ಶಿಲ್ಪಾ ನಾಗರಾಜ್ ಅವರು ಹಾಗೂ ಬೆಳಗಾವಿ ವಿಭಾಗದ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.