ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿಎಂ ಬಳಿಕ ಇದೀಗ ಡಿಸಿಎಂಗೂ ಸುತ್ತಿಕೊಂಡ ವಾಚ್‌ ವಿವಾದ; 43 ಲಕ್ಷ ರೂಪಾಯಿಯ ವಾಚ್‌ ಎಂದ ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ

DK Shivakumar: ಡಿ. 8ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಸರ್ವಪಕ್ಷ ಸಭೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡುವ ಸಾಧ್ಯತೆಗಳಿವೆ. ನಾವು ಈ ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿ, ವಿರೋಧ ಪಕ್ಷದವರಿಗೆ ಅವರಿಗೆ ಸರಿಹೋಗುವ ದಿನಾಂಕ ನಿಗದಿ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಡಿ. 3: ರಾಜ್ಯದಲ್ಲಿ ಸಿಎಂ ಪಟ್ಟದ ಕುರಿತಾದ ಸಮಾಲೋಚನೆ ಜೋರಾಗಿಯೇ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡಬೇಕು ಎಂದು ಒಂದು ಬಣ ವಾದಿಸುತ್ತಿದೆ. ಈ ಮಧ್ಯೆ ಡಿಕೆಶಿ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಧರಿಸಿದ ವಾಚ್‌ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಜತೆ ಡಿಕೆಶಿ ಕೂಡ ದುಬಾರಿ ವಾಚ್‌ ಧರಿಸಿರುವುದನ್ನು ಬಿಜೆಪಿ ಟೀಕಿಸಿದೆ. 43 ಲಕ್ಷ ರೂ.ಯ ವಾಚ್‌ ಇದು ಎಂದು ಹೇಳಿದೆ. ಈ ಆರೋಪಕ್ಕೆ ಉತ್ತರಿಸಿದ ಡಿಕೆಶಿ, ತಮ್ಮಿಷ್ಟದ ವಾಚ್‌ ಧರಿಸುವ ಹಕ್ಕು ಇದೆ ಎಂದಿದ್ದಾರೆ.

ನೀವು ಮತ್ತು ಸಿದ್ದರಾಮಯ್ಯ ದುಬಾರಿ ವಾಚ್ ಧರಿಸಿದ್ದರ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಮಾಧ್ಯಮದವರು ಕೇಳಿದಾಗ ಉತ್ತರಿಸಿದ ಅವರು, ʼʼಈ ನನ್ನ ವಾಚ್ ಅನ್ನು 7 ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಖರೀದಿಸಿದ್ದೆ. ನಾನು ಇದನ್ನು ನನ್ನ ಕ್ರೆಡಿಡ್ ಕಾರ್ಡ್ ಮೂಲಕ 24 ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದೇನೆ. ಬೇಕಿದ್ದರೆ ನನ್ನ ಕ್ರೆಡಿಟ್ ಕಾರ್ಡ್ ಪರಿಶೀಲಿಸಿ. ಇದನ್ನು ನನ್ನ ಚುನಾವಣಾ ಅಫಿಡವಿಟ್‌ನಲ್ಲೂ ಘೋಷಿಸಿಕೊಂಡಿದ್ದೇನೆ. ಸಿದ್ದರಾಮಯ್ಯ ಅವರ ಬಗ್ಗೆ ಟೀಕೆ ನನಗೆ ಗೊತ್ತಿಲ್ಲ. ನನಗಾಗಲಿ, ಸಿದ್ದರಾಮಯ್ಯ ಅವರಿಗಾಗಲಿ ಇಷ್ಟವಾದ ವಾಚ್ ಧರಿಸುವ ಹಕ್ಕು ಇದೆ. ಅವರಿಗೆ ಅವರ ಮಗ ವಾಚ್ ಕೊಡಿಸಿರಬಹುದು ಅಥವಾ ಅವರೇ ಅದನ್ನು ಖರೀದಿಸಿರಬಹುದು. ನಮ್ಮ ತಂದೆಗೆ ವಾಚ್‌ಗಳೆಂದರೆ ಬಹಳ ಇಷ್ಟ. ಅವರ ಬಳಿ 7 ವಾಚ್‌ಗಳಿದ್ದವು. ಅವರು ಮೃತಪಟ್ಟ ನಂತರ ಅದನ್ನು ಯಾರು ಧರಿಸಬೇಕು? ನಾನು ಧರಿಸಬೇಕು, ಇಲ್ಲವೇ ನನ್ನ ತಮ್ಮ ಧರಿಸಬೇಕುʼʼ ಎಂದು ತಿರುಗೇಟು ನೀಡಿದರು.

ಬಿಜೆಪಿಯ ಎಕ್ಸ್‌ ಪೋಸ್ಟ್‌:



ಡಿ. 14ರ ಪ್ರತಿಭಟನೆಗೆ ತಯಾರಿ

ಖಾಸಗಿ ಕಾರ್ಯಕ್ರಮ ಹಾಗೂ ಮತಕಳ್ಳತನ ವಿರುದ್ಧದ ಡಿ. 14ರ ಪ್ರತಿಭಟನೆಗೆ ತಯಾರಿ ಹಿನ್ನೆಲೆಯಲ್ಲಿ ದೆಹಲಿಗೆ ತೆರಳುತ್ತಿದ್ದು, ಇದರ ಹೊರತಾಗಿ ಈ ಪ್ರವಾಸಕ್ಕೆ ರಾಜಕೀಯ ಮಹತ್ವವೇನೂ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆಬುಧವಾರ ಅವರು ಪ್ರತಿಕ್ರಿಯೆ ನೀಡಿದರು.

ದೆಹಲಿ ಪ್ರವಾಸದ ಉದ್ದೇಶವೇನು ಎಂದು ಕೇಳಿದಾಗ, ʼʼನನ್ನ ಆಪ್ತ ಸ್ನೇಹಿತರ ಮಗನ ಮದುವೆ ಇರುವ ಕಾರಣ ತೆರಳುತ್ತಿದ್ದೇನೆ. ಡಿ. 14ರಂದು ಮತ ಕಳ್ಳತನ ವಿರುದ್ಧ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಮಾವೇಶವಿದೆ. ಅದಕ್ಕೆ ನಮ್ಮ ರಾಜ್ಯದ ಪ್ರತಿ ಜಿಲ್ಲೆಯಿಂದ 300 ಜನರನ್ನು ಕರೆದುಕೊಂಡು ಹೋಗಬೇಕು. ಈ ಬಗ್ಗೆ ಸಚಿವರಿಗೆ ಹಾಗೂ ಶಾಸಕರಿಗೆ ಸೂಚನೆ ನೀಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ವಾಸ್ತವ್ಯ ಕಲ್ಪಿಸಲು ಕೆಲವರಿಗೆ ಜವಾಬ್ದಾರಿ ವಹಿಸಬೇಕಾಗಿದೆ. ಈ ದೃಷ್ಟಿಯಿಂದ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸಚಿವ ಸಂಪುಟ ಸಭೆಗೆ ಮರಳಲಿದ್ದೇನೆʼʼ ಎಂದು ತಿಳಿಸಿದರು.

ʼʼನಮ್ಮ ರಾಜ್ಯದಿಂದಲೇ ಮತಕಳ್ಳತನ ವಿರುದ್ಧ ಹೋರಾಟ ಆರಂಭವಾಗಿದ್ದು, ನಾವು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಹೀಗಾಗಿ ಪ್ರತಿ ತಾಲೂಕಿನಿಂದ ಕನಿಷ್ಠ 30 ಜನರನ್ನು, ಬೆಂಗಳೂರಿನಿಂದ ಹೆಚ್ಚು ಜನರನ್ನು ಕರೆದೊಯ್ಯಬೇಕು. ಇದಕ್ಕಾಗಿ ರೈಲ್ವೇ ಸಚಿವರ ಜತೆ ಚರ್ಚೆ ಮಾಡಿ ಮನವಿ ಮಾಡಿದ್ದೇನೆ. ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್, ಶಾಸಕರು ಇದರ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಈ ಬಗ್ಗೆ ನಾನು ಹಾಗೂ ಸಿಎಂ ಇಬ್ಬರೂ ಎಲ್ಲರಿಗೂ ಸಂದೇಶ ರವಾನಿಸಿದ್ದೇವೆʼʼ ಎಂದರು.

ರಾಜಕೀಯ ಶಾಶ್ವತವಲ್ಲ ಎಂಬ ಸಿಎಂ ಹೇಳಿಕೆಗೆ ಡಿ.ಕೆ. ಸುರೇಶ್ ಅಚ್ಚರಿಯ ಪ್ರತಿಕ್ರಿಯೆ; ಮಾಜಿ ಸಂಸದ ಹೇಳಿದ್ದೇನು?

ಡಿ. 8ರ ಸರ್ವಪಕ್ಷ ಸಭೆ ಮುಂದಕ್ಕೆ ಹೋಗುವ ಸಾಧ್ಯತೆ

ʼʼಡಿ. 8ರಂದು ದೆಹಲಿಯಲ್ಲಿ ನಡೆಸಲು ಉದ್ದೇಶಿಸಿದ್ದ ಸರ್ವಪಕ್ಷ ಸಭೆಯನ್ನು ಕೆಲವು ತಾಂತ್ರಿಕ ಕಾರಣಗಳಿಂದಾಗಿ ಮುಂದೂಡುವ ಸಾಧ್ಯತೆಗಳಿವೆ. ನಾವು ಈ ಸಭೆಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೆವು. ಆದರೆ ಅವರು ರಾಗ ಎಳೆಯುತ್ತಿದ್ದಾರೆ. ಹೀಗಾಗಿ ನಾನು ಹಾಗೂ ಸಿಎಂ ಚರ್ಚೆ ಮಾಡಿ, ವಿರೋಧ ಪಕ್ಷದವರಿಗೆ ಅವರಿಗೆ ಸರಿಹೋಗುವ ದಿನಾಂಕ ನಿಗದಿ ಮಾಡುತ್ತೇವೆʼʼ ಎಂದು ಸ್ಪಷ್ಟಪಡಿಸಿದರು.

ಕೆ.ಸಿ. ವೇಣುಗೋಪಾಲ್ ಸಿಎಂ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕೇಳಿದಾಗ, ʼʼಬಹಳ ಸಂತೋಷ. ಸಿಎಂ ವೇಣುಗೋಪಾಲ್, ರಾಹುಲ್ ಗಾಂಧಿ, ಖರ್ಗೆ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ಪಕ್ಷದ ವಿಚಾರವಾಗಿ ಅವರು ಮಾತನಾಡುತ್ತಾರೆʼʼ ಎಂದು ತಿಳಿಸಿದರು.

ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ ಸಹಜ

ಮಂಗಳೂರಿನಲ್ಲಿ ನಿಮ್ಮ ಅಭಿಮಾನಿಗಳು ಡಿ.ಕೆ., ಡಿ.ಕೆ...ಎಂದು ಕೂಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಪೂರ್ಣಾವಧಿ ಸಿಎಂ ಎಂದು ಕೂಗಿದ್ದಾರೆ ಎಂದು ಕೇಳಿದಾಗ, ʼʼಅಭಿಮಾನಿಗಳು ಈ ರೀತಿ ಕೂಗುವುದು ಸಹಜ. ಜನ ಕಳೆದ ಹತ್ತು ವರ್ಷಗಳಿಂದ ಡಿಕೆ, ಡಿಕೆ... ಎಂದು ಕೂಗುತ್ತಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ. ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ...ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್..., ರಾಹುಲ್... ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು, ಸಿದ್ದು... ಎಂದು ಕೂಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಅಭಿಮಾನದ ಮಾತುಗಳು ಸಹಜʼʼ ಎಂದು ಹೇಳಿದರು.

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಗುಪ್ತಚರ ಇಲಾಖೆ ಹೈಅಲರ್ಟ್‌

30 ತಿಂಗಳ ನಂತರ ಬೇಕಾದರೂ ಸಿಎಂ ಬದಲಾಗಬಹುದು ಎಂಬ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಕೇಳಿದಾಗ, ʼʼನಾನು ಪಕ್ಷ ಹಾಗೂ ನನಗೆ ಮಾತ್ರ ವಕ್ತಾರ. ಬೇರೆ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.

2016ರಲ್ಲಿ ಸಿದ್ದರಾಮಯ್ಯ ಸುತ್ತ ಹ್ಯೂಬ್ಲೋಟ್ ವಾಚ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಡಿಕೆಶಿ ಅವರ ಕಾರ್ಟಿಯರ್ ವಾಚ್ ಬಗ್ಗೆ ಚರ್ಚೆ ಆರಂಭವಾಗಿದೆ.