ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಂದ ಪೌಷ್ಟಿಕಾಂಶ ತಿಂಡಿಗಳ ಅಭಿವೃದ್ಧಿ ಮಾಡಿದ ರಾಜ್ಯ ಸರ್ಕಾರ; 6 ವಿಧದ ಎನರ್ಜಿ ಬಾರ್‌ ತಯಾರಿಕೆ

Priyank Kharge: ನಾವೀನ್ಯತೆಯು ಕಲ್ಯಾಣ ಕರ್ನಾಟಕದಲ್ಲಿ ಬೆಳೆಯುವ ಬೇಳೆಕಾಳು ಮೌಲ್ಯವರ್ಧನೆಗೆ ಹೇಗೆ ನೆರವಾಗಬಹುದು ಎಂಬುದಕ್ಕೆ ಈ ಉಪಕ್ರಮ ಉತ್ತಮ ನಿದರ್ಶನವಾಗಿದೆ ಎಂದು ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರು, ಸೆ.7: ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್‌ನಡಿ ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರವು (ಬಿಬಿಸಿ), ಕಲ್ಯಾಣ ಕರ್ನಾಟಕ ಭಾಗದಲ್ಲಿ ಬೆಳೆಯುವ ಬೇಳೆಕಾಳುಗಳನ್ನು ಬಳಸಿ ಪೌಷ್ಟಿಕಾಂಶದ ತಿನಿಸುಗಳನ್ನು (ಎನರ್ಜಿ ಬಾರ್‌) ಅಭಿವೃದ್ಧಿಪಡಿಸಿದೆ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಕಲಬುರಗಿ ಬೇಳೆಕಾಳುಗಳ ಉಪಕ್ರಮದ ಅಡಿಯಲ್ಲಿ ಈ ಹೊಸ ತಿನಿಸುಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಪ್ರಯತ್ನದ ಭಾಗವಾಗಿ, ರಾಜ್ಯ ಸರ್ಕಾರದ ವಿದ್ಯುನ್ಮಾನ, ಐಟಿ ಮತ್ತು ಬಿಟಿ ಇಲಾಖೆಯು 2014ರಲ್ಲಿ ಸ್ಥಾಪಿಸಿರುವ ‘ಬಿಬಿಸಿʼ- ಜೀವ ವಿಜ್ಞಾನದ ಪೋಷಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ ಮತ್ತು ಕಡಲೆಬೇಳೆ ಆಧಾರಿತ ಆರು ವಿಧದ ಶಕ್ತಿವರ್ಧಕ ಪೌಷ್ಟಿಕಾಂಶದ ತಿಂಡಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ತಿನಿಸುಗಳಲ್ಲಿ ವಿವಿಧ ಬೇಳೆಕಾಳುಗಳನ್ನು ಒಳಗೊಂಡ ಒಂದು ವಿಧ ಹಾಗೂ ಹೆಚ್ಚಿನ ಪ್ರೋಟೀನ್‌ ಹೊಂದಿರುವ ಮತ್ತೊಂದು ವಿಶೇಷ ಉತ್ಪನ್ನವೂ ಸೇರಿದೆ.

Priyank Kharge

ಕಲ್ಯಾಣ ಕರ್ನಾಟಕದ ಕೃಷಿ ಉತ್ಪನ್ನಗಳ ಮೌಲ್ಯವೃದ್ಧಿ

ಕಲ್ಯಾಣ ಕರ್ನಾಟಕದ ಕೃಷಿ ಸಾಮರ್ಥ್ಯ ಆಧರಿಸಿ ಈ ಭೂಪ್ರದೇಶಕ್ಕೆ ಸೂಕ್ತವಾದ ಜೈವಿಕ ಆರ್ಥಿಕತೆಯ ಮಾರ್ಗಸೂಚಿ ರೂಪಿಸುವುದು ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್‌ನ ಮುಖ್ಯ ಉದ್ದೇಶವಾಗಿದೆ. ತೊಗರಿ, ವಿಶೇಷ ತಳಿಯ ಕೆಂಬಾಳೆ (ಕೆಂಪು ಬಾಳೆಹಣ್ಣು) ಮತ್ತು ಕಬ್ಬಿನಂತಹ ಪ್ರಮುಖ ಕೃಷಿ ಉತ್ಪನ್ನಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.

ಅಂಗಾಂಶ ಕೃಷಿ ಮತ್ತು ರೋಗಮುಕ್ತ ಸಸಿಗಳನ್ನು ಅಭಿವೃದ್ಧಿಪಡಿಸುವುದು, ಸ್ಥಳೀಯವಾಗಿ ತಯಾರಿಸಿದ ಜೈವಿಕ ಗೊಬ್ಬರ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸಲು ಬಳಸುವ ಜೈವಿಕ ಮೂಲದ ಪದಾರ್ಥಗಳು, ಉತ್ತಮ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಕೃಷಿಯ ಉಪ ಉತ್ಪನ್ನಗಳನ್ನು ಉತ್ಪಾದನೆಗೆ ಬಳಸುವುದು ಹಾಗೂ ಮಾರುಕಟ್ಟೆ ಸಂಪರ್ಕ ಬಲಪಡಿಸುವ ಮೂಲಕ ಉತ್ಪಾದಕತೆ ಮತ್ತು ಮೌಲ್ಯ ಹೆಚ್ಚಿಸಲು ಈ ಮಾರ್ಗಸೂಚಿ ಗಮನಹರಿಸುತ್ತದೆ.

Energy Bar

ಬೇಳೆಕಾಳುಗಳಿಗೆ ಸ್ಥಳೀಯವಾಗಿಯೇ ಹೆಚ್ಚಿನ ಮೌಲ್ಯ ಸೃಷ್ಟಿಸುವ ಗುರಿ

ಕಲಬುರಗಿಯಂತಹ ಸಮೃದ್ಧವಾಗಿ ಬೇಳೆಕಾಳು ಬೆಳೆಯುವ ಪ್ರದೇಶಗಳು ಎದುರಿಸುತ್ತಿರುವ ಪ್ರಮುಖ ಸವಾಲನ್ನು ಈ ಉಪಕ್ರಮ ಪರಿಹರಿಸಲು ಪ್ರಯತ್ನಿಸುತ್ತದೆ. ಸದ್ಯಕ್ಕೆ ಹೆಚ್ಚಿನ ಪ್ರಮಾಣದ ಬೇಳೆಕಾಳುಗಳು ಕಚ್ಚಾ ಧಾನ್ಯದ ರೂಪದಲ್ಲೇ ಈ ಭಾಗದಿಂದ ಹೊರಗೆ ಹೋಗುತ್ತವೆ. ಅವುಗಳ ಸಂಸ್ಕರಣೆ ಮತ್ತು ಮೌಲ್ಯವೃದ್ಧಿಯಿಂದ ದೊರೆಯುವ ಲಾಭವು ಬೇರೆಯವರ ಪಾಲಾಗುತ್ತಿದೆ.

ಸ್ಥಳೀಯವಾಗಿ ಬೆಳೆಯುವ ಬೇಳೆಕಾಳುಗಳನ್ನು ಹೆಚ್ಚಿನ ಮೌಲ್ಯದ, ದೀರ್ಘಕಾಲ ಸಂಗ್ರಹಿಸಬಹುದಾದ ಸಸ್ಯ ಆಧಾರಿತ ಪ್ರೋಟೀನ್‌ ಉತ್ಪನ್ನಗಳಾಗಿ ಪರಿವರ್ತಿಸಿ, ಹೆಚ್ಚಿನ ಮೌಲ್ಯ ಸೃಷ್ಟಿಸುವ ಆಹಾರ ಸರಪಳಿಯ ಭಾಗವಾಗಿಸುವ ಸಾಧ್ಯತೆಗಳನ್ನು ‘ಬಿಬಿಸಿʼ ಪರಿಶೀಲಿಸುತ್ತಿದೆ.

ಈ ಉಪಕ್ರಮದ ಯಶಸ್ಸಿನ ಕುರಿತು ಮಾತನಾಡಿರುವ ಗೃಹ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ, ʼಕರ್ನಾಟಕದಲ್ಲಿ ಕೃಷಿ ಉತ್ಪಾದನೆ ಸಮೃದ್ಧವಾಗಿದ್ದರೂ ನಾವು ಬೆಳೆಯುವ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದು ನಮ್ಮ ಮುಂದೆ ಇರುವ ಅತಿದೊಡ್ಡ ಅವಕಾಶವಾಗಿದೆ. ಕೇವಲ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದಷ್ಟೇ ನಾವೀನ್ಯತೆಯಲ್ಲ. ನಾವು ಏನನ್ನು ಉತ್ಪಾದಿಸುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು, ಮಾರುಕಟ್ಟೆ ಮತ್ತು ಗ್ರಾಹಕರ ಬದಲಾಗುತ್ತಿರುವ ಬೇಡಿಕೆಗಳನ್ನು ಗುರುತಿಸುವುದು ಹಾಗೂ ನಮ್ಮ ಕೃಷಿ ಉತ್ಪನ್ನಗಳನ್ನು ಇನ್ನಷ್ಟು ಗ್ರಾಹಕರಿಗೆ ತಲುಪಿಸುವ ಮತ್ತು ಅವುಗಳ ಬಳಕೆ ಹೆಚ್ಚಿಸುವ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದೂ ನಾವೀನ್ಯತೆಯ ಭಾಗವಾಗಿದೆʼ ಎಂದು ಹೇಳಿದ್ದಾರೆ.

ʼಬೆಂಗಳೂರಿನ ನಾವೀನ್ಯತಾ ವ್ಯವಸ್ಥೆಯು ಕಲ್ಯಾಣ ಕರ್ನಾಟಕದ ಜತೆಗೆ ಕೈಜೋಡಿಸಿ, ಸ್ಥಳೀಯವಾಗಿ ಬೆಳೆಯುವ ಬೇಳೆಕಾಳುಗಳನ್ನು ಹೆಚ್ಚಿನ ಮೌಲ್ಯದ ಉತ್ಪನ್ನಗಳಾಗಿ ಪರಿವರ್ತಿಸಲು ಹೇಗೆ ನೆರವಾಗಬಹುದು ಎಂಬುದಕ್ಕೆ ಈ ಉಪಕ್ರಮ ಉತ್ತಮ ಉದಾಹರಣೆಯಾಗಿದೆ. ಇದರ ಮೂಲಕ ರೈತರು, ರೈತ ಉತ್ಪಾದಕರ ಸಂಘಟನೆಗಳು (ಎಫ್‌ಪಿಒ) ಮತ್ತು ಸ್ಥಳೀಯ ಉದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆʼ ಎಂದಿದ್ದಾರೆ.

ನಾಲ್ಕು ವಿಧದ ಪ್ರತ್ಯೇಕ ಬೇಳೆಕಾಳು ಬಳಸಿ ಪೌಷ್ಟಿಕಾಂಶದ ಗರಿಗರಿಯಾದ ತಿನಿಸುಗಳನ್ನು ತಯಾರಿಸಲಾಗಿದೆ. ಇದರೊಂದಿಗೆ ಹುರಿದ ಕಡಲೆಕಾಯಿ, ಬೆಲ್ಲ, ಓಟ್ಸ್‌ ಮತ್ತು ಕುಂಬಳಕಾಯಿ ಬೀಜಗಳನ್ನು ಸೇರಿಸಲಾಗಿದೆ. ಈ ಉತ್ಪನ್ನಗಳಲ್ಲಿ ಯಾವುದೇ ಕೃತಕ ಬಣ್ಣ, ಕೃತಕ ಸುವಾಸನೆ ಅಥವಾ ರಾಸಾಯನಿಕ ಸಂರಕ್ಷಕಗಳನ್ನು ಬಳಸಲಾಗಿಲ್ಲ.

ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರದ (ಬಿಬಿಸಿ) ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್‌ ಆದಿಲ್‌ ಎಎ ಮಾತನಾಡಿ, ʼಬೇಳೆಕಾಳುಗಳನ್ನು ಕೇವಲ ಕಚ್ಚಾ ಕೃಷಿ ಉತ್ಪನ್ನವಾಗಿ ಪರಿಗಣಿಸುವುದಕ್ಕಿಂತ, ಅದರಿಂದ ಇತರ ಯಾವೆಲ್ಲ ಉತ್ಪನ್ನಗಳನ್ನು ತಯಾರಿಸಬಹುದು ಎಂಬುದನ್ನು ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿತ್ತು. ಸ್ಥಳೀಯವಾಗಿ ಬೆಳೆಯುವ ಬೇಳೆಕಾಳುಗಳನ್ನು ಬಳಸಿ ಸೇವಿಸಬಹುದಾದ ವೈವಿಧ್ಯಮಯ ಪೌಷ್ಟಿಕಾಂಶದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವ ಮೂಲಕ, ಹೆಚ್ಚಿನ ಮೌಲ್ಯವರ್ಧನೆಗೆ ಇರುವ ಸಾಧ್ಯತೆಯನ್ನು ನಾವು ತೋರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ಈ ಭಾಗದ ‘ಎಫ್‌ಪಿಒʼ, ಸ್ವಸಹಾಯ ಸಂಘಗಳು ಮತ್ತು ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಅಳವಡಿಸಿಕೊಳ್ಳಬಹುದು. ವಿಜ್ಞಾನ ಮತ್ತು ಉತ್ಪನ್ನ ಅಭಿವೃದ್ಧಿಯನ್ನು ಕಲ್ಯಾಣ ಕರ್ನಾಟಕಕ್ಕೆ ವಾಸ್ತವಿಕ ಆರ್ಥಿಕ ಅವಕಾಶಗಳ ಜತೆಗೆ ಸಂಪರ್ಕಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆʼ ಎಂದು ಹೇಳಿದ್ದಾರೆ.

ಶಕ್ತಿವರ್ಧಕ ತಿನಿಸುಗಳು

ಪ್ರತ್ಯೇಕ ಬೇಳೆಕಾಳುಗಳಿಂದ ತಯಾರಿಸಲಾದ ಈ ಶಕ್ತಿವರ್ಧಕ ಪೌಷ್ಟಿಕಾಂಶಯುಕ್ತ ತಿನಿಸುಗಳಲ್ಲಿ ಪ್ರತಿ 30 ಗ್ರಾಂ ಬಾರ್‌ಗೆ ಸುಮಾರು 4 ಗ್ರಾಂ ಪ್ರೋಟೀನ್‌ ಇದೆ. ಪ್ರತಿ ಬಾರ್‌ನಲ್ಲಿ ಸುಮಾರು 122 ರಿಂದ 123 ಕ್ಯಾಲೊರಿ ಮತ್ತು 1.8–2 ಗ್ರಾಂ ಆಹಾರದ ನಾರಿನಂಶ ಇದೆ. ಹೆಚ್ಚಿನ ಪ್ರೋಟೀನ್‌ ಹೊಂದಿರುವ ಎಫ್‌ಒಎಸ್‌ ಮಾದರಿಯಲ್ಲಿ ಪ್ರತಿ 30 ಗ್ರಾಂಗೆ ಸುಮಾರು 4.85 ಗ್ರಾಂ ಪ್ರೋಟೀನ್‌ ಇದೆ. ಈ ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಹೇಳಿಕೆಗಳು ಅಂತಿಮ ಮಾನ್ಯತೆ ಪಡೆದ ಪ್ರಯೋಗಾಲಯದ ಪರೀಕ್ಷೆ ಹಾಗೂ ಎಫ್‌ಎಸ್‌ಎಸ್‌ಎಐ ಘೋಷಣೆಗೆ ಒಳಪಟ್ಟಿರುತ್ತವೆ.

ಕಲ್ಯಾಣ ಕರ್ನಾಟಕದ ರೈತ ಉತ್ಪಾದಕ ಸಂಘಟನೆಗಳು (ಎಪ್‌ಪಿಒ), ಸ್ವಸಹಾಯ ಸಂಘಗಳು ಮತ್ತು ‘ಎಂಎಸ್‌ಎಂಇʼ ಗಳು ಬೇಳೆಕಾಳುಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಲ್ಲಿ ಭಾಗವಹಿಸುವಂತೆ ಮಾಡುವುದೇ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಉತ್ಪನ್ನದಿಂದ ಸೃಷ್ಟಿಯಾಗುವ ಹೆಚ್ಚಿನ ಮೌಲ್ಯವನ್ನು ಸ್ಥಳೀಯವಾಗಿಯೇ ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಜೊತೆಗೆ, ಕಲಬುರಗಿಯ ಬೇಳೆಕಾಳುಗಳನ್ನು ಆಧರಿಸಿ ಜನಪ್ರಿಯ ಪ್ಯಾಕೇಜ್ಡ್‌ ಫುಡ್‌ ಉತ್ಪನ್ನಗಳ ವಿಶಿಷ್ಟ ಬ್ರ್ಯಾಂಡ್‌ ರೂಪಿಸಲು ಸಹ ಇದು ನೆರವಾಗಲಿದೆ.

ರೈತರು ಈಗಾಗಲೇ ಬೆಳೆಯುತ್ತಿರುವ ಕೃಷಿ ಉತ್ಪನ್ನಗಳಿಂದಲೇ ಹೆಚ್ಚಿನ ಆದಾಯ ಗಳಿಸಲು ನೆರವಾಗುವುದು, ‘ಎಫ್‌ಪಿಒ’ಗಳು, ಸ್ವಸಹಾಯ ಸಂಘಗಳು ಮತ್ತು ‘ಎಂಎಸ್‌ಎಂಇʼಗಳಿಗೆ ಹೊಸ ಉದ್ಯಮಗಳನ್ನು ಆರಂಭಿಸಲು ಅವಕಾಶ ಕಲ್ಪಿಸುವುದು ಹಾಗೂ ಕಲ್ಯಾಣ ಕರ್ನಾಟಕಕ್ಕೆ ಬಲಿಷ್ಠ ಜೈವಿಕ ಆರ್ಥಿಕತೆಯ ವಿಶಿಷ್ಟ ಬ್ರ್ಯಾಂಡ್ ರೂಪಿಸುವುದು ಈ ಮಿಷನ್‌ನ ಉದ್ದೇಶವಾಗಿದೆ.

ನವೋದ್ಯಮ ಬಲವರ್ಧನೆ: ಐಎನ್‌ಕ್ಯೂ ಇನ್ನೊವೇಷನ್‌ ಗ್ಲೋಬಲ್‌ ಜತೆ ರಾಜ್ಯ ಸರ್ಕಾರದ ಒಪ್ಪಂದ

ಮುಂದಿನ ಹಂತದಲ್ಲಿ ಉತ್ಪನ್ನಗಳ ಬಾಳಿಕೆ ಅವಧಿ ಮತ್ತು ಸ್ಥಿರತೆ ಪರೀಕ್ಷೆ, ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪೌಷ್ಟಿಕಾಂಶ ಪರೀಕ್ಷೆ, ಗ್ರಾಹಕರ ಸ್ವೀಕಾರಾರ್ಹತೆ ಪರೀಕ್ಷೆ, ಪ್ಯಾಕೇಜಿಂಗ್‌ ಮತ್ತು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಪರವಾನಗಿ ಪ್ರಕ್ರಿಯೆಗಳು ನಡೆಯಲಿವೆ. ಇದಾದ ಬಳಿಕ ಆಸಕ್ತ ‘ಎಫ್‌ಪಿಒʼ ಗಳು ಮತ್ತು ಉದ್ಯಮಿಗಳಿಗೆ ಈ ಉತ್ಪನ್ನ ತಯಾರಿಕೆಯ ತಂತ್ರಜ್ಞಾನ ವರ್ಗಾಯಿಸಲಾಗುವುದು.