ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DK Shivakumar: ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ಎಚ್‌ಡಿಕೆ ತಕರಾರು: ಡಿ.ಕೆ. ಶಿವಕುಮಾರ್

DK Shivakumar: ರಾಮನಗರ ಜಿಲ್ಲೆ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ ಮಾಡಿದರೂ ಇದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್

ಕನಕಪುರ: ಈ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ ಮಾಡಿದರೂ ಇದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಶನಿವಾರ ಮಾತನಾಡಿದರು.

ಪಾಪ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಇಲ್ಲಿರುವ ಕೆಲವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದೆವು. ಇದು ಕನಕಪುರ ಲೋಕಸಭಾ ಕ್ಷೇತ್ರ ಇತ್ತು. ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಮಾಡಿದೆವು. ಈಗ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಮುಂದಾಗಿದ್ದು, ಇದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ ಎಂದು ಆರೋಪಿಸಿದ ಡಿ.ಕೆ. ಶಿವಕುಮಾರ್‌, ಅವರು ಏನಾದರೂ ಮಾಡಲಿ, ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಯೇ ಮಾಡುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ ಎಂದು ತಿಳಿಸಿದರು.

ಯಾರು ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ

ನಿಮಗೆ ನೀಡಿರುವ ಸ್ಥಾನಮಾನ ಕಡಿಮೆ ಎಂದು ಭಾವಿಸಬೇಡಿ. ಇಲ್ಲಿ ಆಶ್ರಯ ಸಮಿತಿ ಹಾಗೂ ಬಗರ್ ಹುಕ್ಕುಂ ಸಮಿತಿ ಜವಾಬ್ದಾರಿಯನ್ನು ಸುರೇಶ್ ಅವರಿಗೆ ವಹಿಸಿದ್ದೇವೆ. ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ನ್ಯಾಯಬದ್ಧವಾಗಿ ಬಡವರಿಗೆ ಸಿಗಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ನಿಮಗೆ ನೀಡಿರುವ ಜವಾಬ್ದಾರಿಯನ್ನು ಗೌರವಯುತವಾಗಿ ನಿಭಾಯಿಸಿ. ನೀವೆಲ್ಲರೂ ಸೇರಿ ಯೋಗೇಶ್ವರ್ ಅವರ ಪರವಾಗಿ ಚುನಾವಣೆ ಮಾಡಿದ್ದೀರಿ. ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಇದು ರಾಜಕಾರಣ. ನಾವು ಒಗ್ಗಟ್ಟಿನಿಂದ ಜನರ ಆಶೋತ್ತರಗಳಿಗೆ ಕೆಲಸ ಮಾಡಬೇಕು ಎಂದರು.

ಜಿಲ್ಲೆಯ ಜನ ಸ್ಮರಿಸುವಂತೆ ನಾವು ಕೆಲಸ ಮಾಡಬೇಕು

ಇಲ್ಲಿ ಬಾಲಕೃಷ್ಣ, ಯೋಗೇಶ್ವರ್, ಇಕ್ಬಾಲ್ ಹುಸೇನ್ ಇದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಈ ಮೂವರು ಶಾಸಕರಿಗೆ ಹೇಳುತ್ತೇನೆ. ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಖರೀದಿ ಮಾಡಿ ಆ ಕೆಲಸ ಮಾಡಲೇಬೇಕು. ನಮ್ಮ ಕಾಲದಲ್ಲಿ ಇಂತಹ ಕೆಲಸ ಆಯಿತು ಎಂದು ನಾವು ಕುಮಾರಸ್ವಾಮಿ ಅವರಿಗೆ ಹೇಳಬೇಕು.

ನಮ್ಮ ಜನ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಇಂದು ಬೆಳಗ್ಗೆ ಎರಡು ಕಡೆಗಳಲ್ಲಿ ಪ್ರೆಸ್ಟೀಜ್ ಹಾಗೂ ಟೊಯೋಟಾ ಸಂಸ್ಥೆಗಳಿಂದ ಶಾಲಾ ಕಟ್ಟಡ ನಿರ್ಮಿಸುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಈ ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿ ಈ ರೀತಿ 2 ಸಾವಿರ ಶಾಲೆ ನಿರ್ಮಿಸುವ ಘೋಷಣೆ ಮಾಡಿದ್ದು, ಅದಕ್ಕೆ ಹೊಸ ರೂಪ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯ ಯೋಜನೆಗಳ ಬಗ್ಗೆ ಶೀಘ್ರದಲ್ಲಿ ಸಭೆ

ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ, ರಾಮನಗರಕ್ಕೆ ಯಾವ ನೀರಾವರಿ ಯೋಜನೆ ಮಾಡಬೇಕು ಎಂದು ಗೊತ್ತಿದೆ. ಎಷ್ಟೇ ಕಷ್ಟ ಆದರೂ ನಮ್ಮ ಅವಧಿಯಲ್ಲಿ ಜಿಲ್ಲೆಯ ಕೆರೆಗಳನ್ನು ತುಂಬಿಸಿ ನಮ್ಮ ಜನ ಇಲ್ಲೇ ಬದುಕು ಕಟ್ಟಿಕೊಳ್ಳಲು ಕಾರ್ಯಕ್ರಮ ರೂಪಿಸಿದ್ದೇವೆ. ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ನೀವು ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳಬಹುದು. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಕನಕಪುರದಲ್ಲಿ ಮಾಡಿರುವ ಹಾಲಿನ ಡೈರಿ ಅಮೂಲ್ ಡೈರಿ ಮಾದರಿಯಲ್ಲಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಿ ನಾವು ವಿರೋಧ ಪಕ್ಷದವರಿಗೆ ತೋರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ತೃಪ್ತಿಪಡಿಸುವಂತೆ ಮಾಡಬೇಕು. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ ವರ್ಷಕ್ಕೆ 250 ಕೋಟಿ ಹಣ ಹೋಗುತ್ತಿದೆ.

ಈ ಜಿಲ್ಲೆಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಚರ್ಚೆ ಮಾಡಲು ಬಜೆಟ್ ಮಂಡನೆಯಾಗುವುದರೊಳಗೆ ಅಧಿಕಾರಿಗಳು ಹಾಗೂ ರಾಮಲಿಂಗಾ ರೆಡ್ಡಿ ಅವರು ಚರ್ಚೆ ಮಾಡುತ್ತೇನೆ. ಮುಂದಿನ ಚುನಾವಣೆ ವೇಳೆಗೆ ನಮ್ಮ ಜನ ನಮ್ಮ ಕೆಲಸಗಳನ್ನು ಗುರುತಿಸಬೇಕು. ಈ ಭಾಗದ ಲೋಕಸಭಾ ಕ್ಷೇತ್ರದಲ್ಲಿ ಆರ್ ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದ್ದು, ಅಲ್ಲಿ ಸಂಘಟನೆಗೆ ಏನು ಮಾಡಬೇಕೋ ಮಾಡುತ್ತಿದ್ದೇವೆ. ನಮಗೆ ಯಾರ ಮೇಲೂ ದ್ವೇಷ ಸಾಧಿಸುವ ಅಗತ್ಯವಿಲ್ಲ. ಕೆಲಸ ಮಾಡಿ ಜನರ ಹೃದಯ ಗೆಲ್ಲಬೇಕು ಎಂದರು.

ಈ ಸುದ್ದಿಯನ್ನೂ ಓದಿ | Karnataka Weather: ಚಳಿಗಾಲದಲ್ಲೂ ಬಿಸಿಲಿನ ಅಬ್ಬರ; ಮುಂದಿನ 6 ದಿನ ರಾಜ್ಯಾದ್ಯಂತ ಒಣ ಹವೆ

ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಾಗ ನೀನೇನು ಮಾಡಿದ್ದೆ ಹೇಳಪ್ಪಾ

ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸತ್ತು ಹೋಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಕುಮಾರಸ್ವಾಮಿ ನಿನಗೆ ಅಧಿಕಾರ ಇದ್ದಾಗ ನೀನು ಏನು ಮಾಡಿದೆ ಹೇಳಪ್ಪಾ? ಮಂಡ್ಯದಲ್ಲಿ ಗೆದ್ದು ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದೀಯಲ್ಲಾ ಈಗ ನೀನು ಏನು ಮಾಡುತ್ತೀಯಾ ಎಂದು ಮೊದಲ ಹೇಳು. ನೀವು ಏನು ಮಾಡುತ್ತೀರೋ ಮಾಡಿ, ಅದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ. ನೀವು ಬರೀ ದ್ವೇಷ ರಾಜಕಾರಣ ಮಾಡುತ್ತಿದ್ದೀರಿ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬಾರದು ಎಂದು ಆಕ್ಷೇಪ ಮಾಡಿದ್ದೀರಿ. ನಿಮ್ಮಂತೆ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರಾಜ್ಯಕ್ಕೆ ಬಂದು ಏನು ಹೇಳಿದ್ದಾರೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳಿ ಎಂದು ತಿರುಗೇಟು ನೀಡಿದರು.