ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ (Dr. Sudha Yadav) ಅವರನ್ನು ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಹಾಲಿ ರಾಜ್ಯಪಾಲರಾಗಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿಯು ಮುಕ್ತಾಯವಾಗಿದ್ದು, ರಾಜ್ಯದ ಲೋಕಭವನಕ್ಕೆ ಹೊಸ ಸಾಂವಿಧಾನಿಕ ಮುಖ್ಯಸ್ಥರ ಆಗಮನವಾಗಲಿದೆ. ಕರ್ನಾಟಕ ಸೇರಿ ಒಟ್ಟು ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ.
ಕಳೆದ ಕೆಲ ವರ್ಷಗಳಿಂದ ರಾಜ್ಯದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಥಾವರ್‌ಚಂದ್ ಗೆಹ್ಲೋಟ್ ಅವರ ಜಾಗಕ್ಕೆ ಇದೀಗ ಸುಧಾ ಯಾದವ್ ಅವರನ್ನು ನಿಯೋಜಿಸಲಾಗಿದೆ. ಆದರೆ, ಹುದ್ದೆಯಿಂದ ನಿರ್ಗಮಿಸುತ್ತಿರುವ ಗೆಹ್ಲೋಟ್ ಅವರಿಗೆ ಕೇಂದ್ರ ಸರ್ಕಾರವಾಗಲಿ ಅಥವಾ ರಾಷ್ಟ್ರಪತಿ ಭವನವಾಗಲಿ ಮುಂದಿನ ಯಾವುದೇ ಹೊಣೆಗಾರಿಕೆಯನ್ನು ಸದ್ಯಕ್ಕೆ ನಿಗದಿಪಡಿಸಿಲ್ಲ. ಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾದ ನೂತನ ರಾಜ್ಯಪಾಲೆ ಸುಧಾ ಯಾದವ್ ಅವರು ಶೀಘ್ರದಲ್ಲೇ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇನ್ನು ಸಿಕ್ಕಿಂನ ರಾಜ್ಯಪಾಲರಾದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ.
ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಡಾ. ಧಲ್ ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ಹಾಗೂ ದುಷ್ಯಂತ್ ಗೌತಮ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಡಾ. ಸುಧಾ ಯಾದವ್ ಯಾರು?
ಕರ್ನಾಟಕದ ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರುಬಿಜೆಪಿಯ ಹಿರಿಯ ನಾಯಕಿ ಮತ್ತು ಸಂಸದೀಯ ಮಂಡಳಿಯ ಸದಸ್ಯೆಯಾಗಿದ್ದಾರೆ. 1965ರ ಅಕ್ಟೋಬರ್ 16ರಂದು ಹರಿಯಾಣದ ರೇವಾರಿ ಜಿಲ್ಲೆಯ ಮೋತ್ಲಾ ಕಲಾನ್ ಗ್ರಾಮದಲ್ಲಿ ಜನಿಸಿದ ಇವರು, ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ರೂರ್ಕಿ ವಿಶ್ವವಿದ್ಯಾಲಯದಿಂದ (ಪ್ರಸ್ತುತ ಐಐಟಿ ರೂರ್ಕಿ) ಪಿಎಚ್.ಡಿ ಪದವಿ ಪಡೆದಿದ್ದಾರೆ.
ಇವರು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಗಡಿ ಭದ್ರತಾ ಪಡೆಯ (BSF) ಡೆಪ್ಯುಟಿ ಕಮಾಂಡೆಂಟ್ ಸುಖಬೀರ್ ಸಿಂಗ್ ಯಾದವ್ ಅವರ ಪತ್ನಿಯಾಗಿದ್ದಾರೆ.
ರಾಜಕೀಯ ಪ್ರವೇಶ: ಪತಿಯ ಹುತಾತ್ಮರಾದ ನಂತರ, ಅಂದಿನ ಬಿಜೆಪಿ ಹರಿಯಾಣ ರಾಜ್ಯ ಉಸ್ತುವಾರಿಯಾಗಿದ್ದ ನರೇಂದ್ರ ಮೋದಿ ಅವರ ವಿಶೇಷ ವಿನಂತಿಯ ಮೇರೆಗೆ ಇವರು 1999 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು.
13ನೇ ಲೋಕಸಭೆ ಚುನಾವಣೆಯಲ್ಲಿ ಹರಿಯಾಣದ ಮಹೇಂದ್ರಗಢ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ರಾವ್ ಇಂದರ್ಜಿತ್ ಸಿಂಗ್ ಅವರನ್ನು ಸೋಲಿಸುವ ಮೂಲಕ ಸಂಸತ್ (1999–2004) ಪ್ರವೇಶಿಸಿದರು.
ಪ್ರಮುಖ ಜವಾಬ್ದಾರಿಗಳು:
- ಇವರು 2019 ರಿಂದ 2022 ರವರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
- ಆಗಸ್ಟ್ 2022 ರಲ್ಲಿ ಇವರನ್ನು ಬಿಜೆಪಿಯ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಬಿಜೆಪಿ ಸಂಸದೀಯ ಮಂಡಳಿಯ (BJP Parliamentary Board) ಸದಸ್ಯರನ್ನಾಗಿ ನೇಮಿಸಲಾಯಿತು.