ಬೆಂಗಳೂರು: ರಾಜ್ಯದಲ್ಲಿ ಕೆಲವು ನಿರ್ದಿಷ್ಟ ಸಮುದಾಯದ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ (Karnataka SIR)ಉದ್ದೇಶಪೂರ್ವಕವಾಗಿ ಫಾರ್ಮ್-7 (Form 7) ಮೂಲಕ ತೆಗೆಸಲಾಗಿದೆ ಎಂದು ಕಾಂಗ್ರೆಸ್ ಮಾಡಿದ್ದ ಗಂಭೀರ ಆರೋಪಕ್ಕೆ ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರು (Karnataka CEO V Anbukumar), ಎಸ್‌ಐಆರ್‌ನಲ್ಲಿ ಸಲ್ಲಿಕೆಯಾದ ಫಾರ್ಮ್-7 ಸಂಖ್ಯೆ, ಮತದಾರರಿಗೆ ನೀಡಿರುವ ನೋಟಿಸ್ ಸೇರಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿ ಈವರೆಗೂ ಒಟ್ಟು 91,278 ಫಾರ್ಮ್-7 (ಹೆಸರು ತೆಗೆದುಹಾಕುವಿಕೆ) ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ. ಇದೇ ವೇಳೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗಾಗಿ 9,10,732 ಫಾರ್ಮ್-6 ಸಲ್ಲಿಕೆಯಾಗಿದ್ದರೆ, ಅನಿವಾಸಿ ಭಾರತೀಯ ಮತದಾರರ ನೋಂದಣಿಗೆ ಸಂಬಂಧಿಸಿದ 4,677 ಫಾರ್ಮ್-6ಎ ಹಾಗೂ ತಿದ್ದುಪಡಿ ಅಥವಾ ವರ್ಗಾವಣೆಗೆ ಸಂಬಂಧಿಸಿದಂತೆ ಒಟ್ಟು 11,98,484 ಫಾರ್ಮ್-8 ಅರ್ಜಿಗಳು ಸಲ್ಲಿಕೆಯಾಗಿವೆ.
43,82,313 ನೋಟಿಸ್ ಜಾರಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ 2026ರ ಅಂಗವಾಗಿ ರಾಜ್ಯಾದ್ಯಂತ ಒಟ್ಟು 43,82,313 ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು. ಈ ಪೈಕಿ 43,55,818 ನೋಟಿಸ್‌ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಇನ್ನೂ ಕೇವಲ 26,498 ನೋಟಿಸ್‌ಗಳ ವಿತರಣೆ ಮಾತ್ರ ಬಾಕಿ ಉಳಿದಿದೆ. ವಿತರಿಸಲಾದ ನೋಟಿಸ್‌ಗಳ ಪೈಕಿ ಈಗಾಗಲೇ 36,89,063 ಪ್ರಕರಣಗಳಲ್ಲಿ ಸಮಗ್ರ ವಿಚಾರಣೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗಾಗಿ ಒಟ್ಟು 1,10,594 ಫಾರ್ಮ್-6 ಅರ್ಜಿಗಳು ಬಂದಿವೆ. ಲೋಕಸಭಾ ಕ್ಷೇತ್ರವಾರು ನೋಡುವುದಾದರೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 57,111, ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 40,050 ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ 42,083 ಫಾರ್ಮ್-6 ಅರ್ಜಿಗಳು ಹೊಸ ಸೇರ್ಪಡೆಗಾಗಿ ಸಲ್ಲಿಕೆಯಾಗಿವೆ.
ನೋಟಿಸ್ ನೀಡದೆ ಯಾರ ಹೆಸರನ್ನೂ ಕೈಬಿಡಲು ಸಾಧ್ಯವಿಲ್ಲ
ಫಾರ್ಮ್-7 ದುರ್ಬಳಕೆ ಕುರಿತ ಗೊಂದಲಗಳಿಗೆ ತೆರೆ ಎಳೆದ ಮುಖ್ಯ ಚುನಾವಣಾಧಿಕಾರಿಗಳು, ನಿಯಮಾನುಸಾರ ನೋಟಿಸ್ ನೀಡದೆ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಬೇಕೆಂದರೆ ಮೊದಲಿಗೆ ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ನಡೆಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಯಾವುದೇ ಬಿಎಲ್‌ಒ (BLO) ಕೂಡ ನೇರವಾಗಿ ಯಾರ ಹೆಸರನ್ನೂ ಕೈಬಿಟ್ಟಿಲ್ಲ ಎಂದು ಅವರು ವಿವರಿಸಿದ್ದಾರೆ.
ಮತದಾರರ ಪಟ್ಟಿ ಮರು ಪರಿಶೀಲನೆಗೆ ಚುನಾವಣಾ ಆಯೋಗ ಸೂಚನೆ; ಇದು ದೇಶದ ಮತದಾರರ ಹಕ್ಕಿಗೆ ಸಂದ ಜಯ ಎಂದ ಸಿಎಂ
ಅರ್ಹ ಮತದಾರರ ಹೆಸರು ಮರು ಸೇರ್ಪಡೆಗೆ ಗಡುವು
ಆಕ್ಷೇಪಣೆಗಳ ವಿಲೇವಾರಿಗೆ ಅಕ್ಟೋಬರ್ 22 ಕೊನೆಯ ದಿನಾಂಕವಾಗಿದ್ದು, ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ತಿಳಿಸಿದ ಅನ್ಬುಕುಮಾರ್, ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹಕ್ಕು ಕಸಿದುಕೊಳ್ಳುವುದಿಲ್ಲ, ತಾಂತ್ರಿಕ ಕಾರಣಗಳಿಂದ ಬಿಟ್ಟುಹೋದ ಅರ್ಹ ಮತದಾರರನ್ನು ಮತ್ತೊಮ್ಮೆ ಪರಿಶೀಲಿಸಿ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.