ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶಿವಮೊಗ್ಗದಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪಿಸಿ: ಸಿಎಂಗೆ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ನಿಯೋಗ ಮನವಿ

BY Raghavendra: ವಿಧಾನಸೌಧದಲ್ಲಿ ಬುಧವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ಶಿವಮೊಗ್ಗ ಜನಪ್ರತಿನಿಧಿಗಳು ಹಾಗೂ ವಕೀಲರ ನಿಯೋಗವು, ಶಿವಮೊಗ್ಗದಲ್ಲಿ ಉಚ್ಚ ನ್ಯಾಯಾಲಯದ ಸರ್ಕ್ಯೂಟ್ (ಸಂಚಾರಿ) ಪೀಠ ಸ್ಥಾಪಿಸುವ ಕುರಿತು ಮನವಿ ಸಲ್ಲಿಸಲಾಯಿತು.

ಸಿಎಂ ಡಿ.ಕೆ. ಶಿವಕುಮಾರ್‌ಗೆ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ನಿಯೋಗದಿಂದ ಮನವಿ.

ಬೆಂಗಳೂರು, ಜೂ. 24: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM DK Shivakumar) ಅವರನ್ನು ಸಂಸದ ಬಿ.ವೈ. ರಾಘವೇಂದ್ರ (BY Raghavendra) ನೇತೃತ್ವದ ಶಿವಮೊಗ್ಗ ಜನಪ್ರತಿನಿಧಿಗಳು ಹಾಗೂ ವಕೀಲರ ನಿಯೋಗವು ಬುಧವಾರ ಭೇಟಿ ಮಾಡಿ, ಅಭಿನಂದನೆ ಸಲ್ಲಿಸಿದೆ. ಶಿವಮೊಗ್ಗದಲ್ಲಿ ಉಚ್ಚ ನ್ಯಾಯಾಲಯದ ಸರ್ಕ್ಯೂಟ್ (ಸಂಚಾರಿ) ಪೀಠ ಸ್ಥಾಪಿಸಲು ಕೋರಿ ಮನವಿ ಸಲ್ಲಿಸಿದರು.

ಮನವಿಯಲ್ಲಿ ಏನಿದೆ?

ಶಿವಮೊಗ್ಗ ಜಿಲ್ಲೆಯು ಭೌಗೋಳಿಕವಾಗಿ ಮಧ್ಯ ಕರ್ನಾಟಕ ಮತ್ತು ಮಲೆನಾಡು ಭಾಗಗಳನ್ನು ಒಳಗೊಂಡಿರುವ ಪ್ರಮುಖ ಶೈಕ್ಷಣಿಕ, ವಾಣಿಜ್ಯ ಮತ್ತು ಸಾರಿಗೆ ಸಂಪರ್ಕ ಹೊಂದಿರುವ ಕೇಂದ್ರ ಸ್ಥಾನವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ನೆರೆಹೊರೆಯ ಜಿಲ್ಲೆಗಳು ಅಧಿಕ ಜನಸಂಖ್ಯೆಯನ್ನು ಹೊಂದಿರುವುದರ ಜತೆಗೆ ಇಂದಿಗೂ ಆ ಭಾಗದ ಜನರು ತಮ್ಮ ನ್ಯಾಯ ಪ್ರಾಪ್ತಿಯ ಮೇಲ್ಮನವಿಗಳಿಗಾಗಿ ಗಣನೀಯ ದೂರವನ್ನು ಕ್ರಮಿಸಿ, ನ್ಯಾಯಾಂಗ ಕೇಂದ್ರಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.

ವಿಶೇಷವಾಗಿ ಆರ್ಥಿಕವಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸುವುದರಿಂದ ಸಾರ್ವಜನಿಕರಿಗೆ ನ್ಯಾಯ ಪ್ರಾಪ್ತಿಯ ಪ್ರಕ್ರಿಯೆ ಸುಲಭವಾಗುವುದಲ್ಲದೆ, ದುರ್ಬಲರಾಗಿರುವವರ ಪ್ರಯಾಣದ ವೆಚ್ಚ ಹಾಗೂ ಒಟ್ಟು ಸಮಯದಲ್ಲಿ ಕೂಡ ಅಪಾರವಾಗಿ ಉಳಿತಾಯವಾಗುತ್ತದೆ. ಇದು "ಜನರ ಬಳಿಗೆ ನ್ಯಾಯ" ಎಂಬ ಸಂವಿಧಾನದ ಆಶಯಕ್ಕೆ ಪೂರಕವಾದ ಹೆಜ್ಜೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬೆಂಗಳೂರು ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಶಿವಮೊಗ್ಗ ಇರಲಿ:

ಶಿವಮೊಗ್ಗ ಜಿಲ್ಲೆಯನ್ನು ಪ್ರಸ್ತಾಪಿತ ಮಂಗಳೂರಿನ ಪೀಠದ ವ್ಯಾಪ್ತಿಗೆ ಸೇರಿಸುವ ಆಲೋಚನೆ ಇದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದು ನಮ್ಮ ಶಿವಮೊಗ್ಗ ಭಾಗದ ವಕೀಲರ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.

ಐತಿಹಾಸಿಕವಾಗಿ ಮತ್ತು ಪ್ರಾಯೋಗಿಕವಾಗಿ ಶಿವಮೊಗ್ಗ ಜಿಲ್ಲೆಯು ಬೆಂಗಳೂರಿನೊಂದಿಗೆ ಉತ್ತಮ ಹಾಗೂ ಸುಲಭ ಸಾರಿಗೆಯ ಜತೆಗೆ ಸುಗಮ ಸಂಪರ್ಕವನ್ನು ಹೊಂದಿದೆ. ಬೆಂಗಳೂರಿಗೆ ಪ್ರಯಾಣಿಸುವುದು ಜನರಿಗೆ, ಕಕ್ಷಿದಾರರಿಗೆ ಮತ್ತು ವಕೀಲರಿಗೆ ಅತ್ಯಂತ ಸುಲಭ ಹಾಗೂ ಅನುಕೂಲಕರವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಶಿವಮೊಗ್ಗದಿಂದ ಕರಾವಳಿ ಭಾಗಕ್ಕೆ ಪ್ರಯಾಣಿಸಬೇಕಾದರೆ ಪಶ್ಚಿಮ ಘಟ್ಟಗಳ ಕಠಿಣ ಘಾಟಿ ರಸ್ತೆಗಳನ್ನು ದಾಟಬೇಕಾಗುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಪ್ರಕೃತಿ ವಿಕೋಪಗಳಿಂದಾಗಿ ಈ ಮಾರ್ಗಗಳು ಪದೇ ಪದೇ ಸ್ಥಗಿತಗೊಳ್ಳುವುದರಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ, ಶಿವಮೊಗ್ಗದಲ್ಲೇ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಯಾಗಬೇಕು ಮತ್ತು ಅದು ಆಗುವವರೆಗೆ, ಪ್ರಸ್ತುತ ಇರುವಂತೆ ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಲ್ಲೇ ಶಿವಮೊಗ್ಗ ಜಿಲ್ಲೆಯನ್ನು ಮುಂದುವರಿಯಬೇಕು ಎಂದು ಮನವಿ ಮಾಡಲಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಅಗತ್ಯ ಕ್ರಮಗಳನ್ನು ಆದಷ್ಟು ಶೀಘ್ರದಲ್ಲಿ ಕೈಗೊಳ್ಳಬೇಕು. ಅಲ್ಲಿಯವರೆಗೆ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಪ್ರಧಾನ ಪೀಠದ ವ್ಯಾಪ್ತಿಯಿಂದ ಬೇರ್ಪಡಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.

ಅಡ್ಡ ಮತದಾನದ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ: ಬಿ.ವೈ.ವಿಜಯೇಂದ್ರ

ಈ ಸಂದರ್ಭದಲ್ಲಿ ಶಾಸಕರಾದ ಚನ್ನಬಸಪ್ಪ, ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯರಾದ ಧನರಾಜ್ ಸರ್ಜಿ, ಅರುಣ್ ಶಂಕರ್ ಮೂರ್ತಿ, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಬಸಪ್ಪ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.