ಬೆಂಗಳೂರು, ಜು.11: ಕಷ್ಟ ಹೇಳಿಕೊಂಡು ಬರುವ ಜನರಿಗೆ ಮಾನವೀಯತೆಯಿಂದ ಸ್ಪಂದಿಸಿ, ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಪರಿಹಾರ ಹುಡುಕಿ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ತಿಳಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವತಿಯಿಂದ ಅರಮನೆ ಮೈದಾನದಲ್ಲಿ ಶನಿವಾರ ನಡೆದ ನಮ್ಮಭಿಮಾನದ ಅಭಿನಂದನಾ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನರು ದೇವರ ಬಳಿ ತಮಗೆ ಬೇಕಾಗಿರುವುದನ್ನು ಪ್ರಾರ್ಥಿಸಲು ದೇವಾಲಯಗಳಿಗೆ ಹೋಗುತ್ತಾರೆ. ಅದೇ ರೀತಿ ಜನರು ತಮ್ಮ ಕಷ್ಟಗಳಿಗೆ ಪರಿಹಾರ ಪಡೆಯಲು ಸರ್ಕಾರಿ ನೌಕರರು, ಶಾಸಕರು ಹಾಗೂ ಮಂತ್ರಿಗಳ ಬಳಿ ಬರುತ್ತಾರೆ. ನಾವು ಎಷ್ಟು ಶ್ರದ್ಧೆಯಿಂದ ಅವರ ಸೇವೆ ಮಾಡುತ್ತೇವೆ ಎಂಬುದು ಮುಖ್ಯ. ನೀವೆಲ್ಲರೂ ವಿಶ್ವರೂಪ ದರ್ಶನದ ಪ್ರತಿಮೆ ನೀಡಿ ನನಗೆ ಸನ್ಮಾನ ಮಾಡಿದಿರಿ. ಪರಮೇಶ್ವರ್ ಅವರಿಗೆ ಬುದ್ಧನ ಪ್ರತಿಮೆ ನೀಡಿದಿರಿ. ವಿಶ್ವರೂಪ ದರ್ಶನ ಬರುವುದು ಧರ್ಮದ ಪರವಾದ ಯುದ್ಧಕ್ಕೆ ನಿಂತಾಗ. ದುರ್ಯೋಧನ ಯುದ್ಧ ಮಾಡುವ ಮುನ್ನ ತಾಯಿಯ ಆಶೀರ್ವಾದ ಪಡೆಯಲು ಹೋದಾಗ ಆ ತಾಯಿ ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಗೆಲುವು ಇದ್ದೇ ಇರುತ್ತದೆ ಎಂದು ಆಶೀರ್ವಾದ ಮಾಡುತ್ತಾಳೆ. ಅರ್ಜುನ ಯುದ್ಧದ ನಡುವೆ ತನ್ನ ಅಸ್ತ್ರವನ್ನು ಇಳಿಸಿದಾಗ ಶ್ರೀಕೃಷ್ಣ ಪರಮಾತ್ಮ ವಿಶ್ವರೂಪ ದರ್ಶನ ತೋರುತ್ತಾನೆ ಎಂದರು.
ನೊಂದು ಬಂದ ಜನರಿಗೆ ಸರಿಯಾದ ರೀತಿಯಲ್ಲಿ ಸೇವೆ ಮಾಡುವುದು ನಮ್ಮ ನಿಮ್ಮ ಕರ್ತವ್ಯ. ನೀವೆಲ್ಲರೂ ಕರ್ನಾಟಕದ ರಾಯಭಾರಿಗಳು. ನೀವು ಸಾರ್ವಜನಿಕರ ಬದುಕಿನಲ್ಲಿ ಸೇವೆ ಮಾಡುತ್ತಿದ್ದೀರಿ. ಈ ಅಧಿಕಾರ ಕೇವಲ ನನ್ನದಲ್ಲ, ನಿಮ್ಮೆಲ್ಲರದ್ದು. ಹುದ್ದೆಯಿಂದ ಯಾರೂ ದೊಡ್ಡವರಾಗಲು ಸಾಧ್ಯವಿಲ್ಲ. ಆ ಹುದ್ದೆಗೆ ಯಾವ ರೀತಿ ಗೌರವ ಕಾಪಾಡುತ್ತೇವೆ ಎಂಬುದು ಮುಖ್ಯ. ಪದವಿ ಮನುಷ್ಯನ ಹಿಂದೆ ಇರುತ್ತದೆ. ಆದರೆ ಮನುಷ್ಯತ್ವದ ಗುಣ ನಮ್ಮ ಮುಂದೆ ಕಾಣಲು ಅವಕಾಶವಿದೆ ಎಂದು ತಿಳಿಸಿದರು.
ಜನಸಾಮಾನ್ಯರ ನೋವು ಬಗೆಹರಿಸಲು ಪ್ರಜಾಸೇವೆ ಇಲಾಖೆ
ನಾನು ಅಧಿಕಾರ ಸ್ವೀಕಾರ ಮಾಡಿದ ಬಳಿಕ ಹೊಸ ಇಲಾಖೆ ರಚನೆ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಅನೇಕ ಹೋರಾಟಗಳು ನಡೆಯುತ್ತವೆ. ನೀವು ನಿಮ್ಮ ಬೇಡಿಕೆ ನಮ್ಮ ಮುಂದೆ ಇಟ್ಟಾಗ, ಇದನ್ನು ಕಾನೂನು ಚೌಕಟ್ಟಿನಲ್ಲಿ ಹೇಗೆ ಬಗೆಹರಿಸಬಹುದು, ಆರ್ಥಿಕ ಪರಿಸ್ಥಿತಿ ಏನು ಎಂದು ಪರಿಶೀಲನೆ ಮಾಡಲಾಗುವುದು. ಹೀಗೆ ಜನಸಾಮಾನ್ಯರ ನೋವು ಬಗೆಹರಿಸಲು ಪ್ರಜಾಸೇವೆ ಎಂಬ ಪ್ರತ್ಯೇಕ ಸಚಿವಾಲಯ ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ. ಎಲ್ಲಾ ಮಂತ್ರಿಗಳು ಮೊದಲನೇ ಹಾಗೂ ಮೂರನೇ ಶನಿವಾರ ಒಂದೊಂದು ತಾಲೂಕು ಕಚೇರಿಗೆ ಹೋಗಿ ಅಲ್ಲಿನ ಜನರ ಸಮಸ್ಯೆ ಆಲಿಸಬೇಕು. ಜನರ ಮನೆ ಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯಲು ಈ ತೀರ್ಮಾನ ಮಾಡಲಾಗಿದೆ. ನೀವುಗಳು ಯಾವಾಗ ಜನರ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸುತ್ತೀರಾ ಆಗ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ದೀಪದ ಬೆಳಕು ನಮ್ಮೆಲ್ಲರಿಗೂ ಕಾಣುತ್ತದೆ. ಆದರೆ ದೀಪದ ಹಿಂದೆ ಇರುವ ಬತ್ತಿ ಹಾಗೂ ಎಣ್ಣೆ ಯಾರಿಗೂ ಕಾಣುವುದಿಲ್ಲ. ನಾವು ನಿಸ್ವಾರ್ಥ ಸೇವೆ ಮಾಡಿದಾಗ, ನಮ್ಮ ಕರ್ತವ್ಯಕ್ಕೆ ಗೌರವವಿರುತ್ತದೆ. ಅವಕಾಶ ಸಿಕ್ಕಾಗ ಪುಣ್ಯ ಕಾರ್ಯ ಮಾಡಬೇಕು. ಮಗ ತಂದೆಗೆ ಸೇವೆ ಮಾಡುವುದು, ತಂದೆ ಕುಟುಂಬ ಕಾಪಾಡುವುದು ಕರ್ತವ್ಯ. ರಾಜ, ಮಂತ್ರಿ, ನೌಕರರು ಜನಸೇವೆಯನ್ನು ದೇಶಸೇವೆ ಎಂದು ಭಾವಿಸಿ ಮಾಡಿದಾಗ ಮಾತ್ರ ಗೌರವ ಸಿಕ್ಕಂತಾಗುತ್ತದೆ. ಜನರ ಸಮಸ್ಯೆ ಬಗೆಹರಿಸಲು ಮಾರ್ಗ ಹುಡುಕಬೇಕೇ ಹೊರತು, ಕೊಂಕು ಹುಡುಕಿ ಅವರನ್ನು ತಿರುಗಿಸಬಾರದು. ಕಾನೂನು ಚೌಕಟ್ಟಿನಲ್ಲಿ ಬಡ ಜನರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ಗಮನದಲ್ಲಿಟ್ಟುಕೊಂಡು ಸೇವೆ ಮಾಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವುಗಳು ಆಧಾರಸ್ತಂಭ. ನೀವು ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಮರಕ್ಕೆ ಬೇರು ಮುಖ್ಯ ಅದರಂತೆ ನಂಬಿಕೆ ಮನುಷ್ಯನಿಗೆ ಮುಖ್ಯ. ನಿಮ್ಮ ನಮ್ಮ ಸಂಬಂಧ ನಂಬಿಕೆಯ ಮೇಲೆ ನಡೆಯಬೇಕು. ನಮ್ಮ ಮೇಲೆ ನಂಬಿಕೆಯನ್ನಿಡಿ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಕೊಟ್ಟ ಅವಕಾಶದಲ್ಲಿ ನಾವು ಯಾವ ರೀತಿ ಸೇವೆ ಮಾಡುತ್ತೇವೆ ಎಂಬುದು ಮುಖ್ಯ. ನಮಗೆ ಸಿಕ್ಕಿರುವ ಅವಕಾಶದಲ್ಲಿ ನಿಮ್ಮ ಹೃದಯ ಗೆಲ್ಲುವ ಕೆಲಸ ಮಾಡಲಾಗುವುದು. ನಿಮ್ಮ ಪ್ರೀತಿ, ವಿಶ್ವಾಸ ನಮ್ಮ ಮೇಲೆ ಹೀಗೆ ಇರಲಿ. ನಾವು ನೀವು ಜೀವನದಲ್ಲಿ ಹೋರಾಟ ಮಾಡಿಕೊಂಡೆ ಬಂದವರು. ನೀವು ನಿಮ್ಮದೇ ಆದ ಹೋರಾಟ ಮಾಡುತ್ತಿದ್ದೀರಿ. ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೇ ಬದುಕಿದರೆ ಬದುಕಿಗೆ ಅವಮಾನ. ಸಾಧನೆ ಹಾಗೂ ಆದರ್ಶ ಎರಡೂ ಇರಬೇಕು ಎಂದು ತಿಳಿಸಿದರು.
ನಿಮ್ಮ ಬೇಡಿಕೆಗಳ ಬಗ್ಗೆ ಆಲೋಚನೆ ಮಾಡುತ್ತೇವೆ, ನಮ್ಮ ಜತೆ ನೀವಿರಿ, ನಿಮ್ಮ ಜತೆ ನಾವಿರುತ್ತೇವೆ
ನನ್ನ ಹಾಗೂ ಪರಮೇಶ್ವರ್ ಅವರ ಮುಂದೆ ಬೇಡಿಕೆಗಳನ್ನು ಇಟ್ಟಿದ್ದೀರಿ. ಅದರ ಬಗ್ಗೆ ನಾವು ಆಲೋಚನೆ ಮಾಡುತ್ತೇವೆ. ಸಮಿತಿಯ ವರದಿ ಬಂದ ಮೇಲೆ ಕ್ಯಾಬಿನೆಟ್ ಅಲ್ಲಿ ಚರ್ಚೆ ನಡೆಸಿ ನಂತರ ನಿಮ್ಮ ಜತೆಯೂ ಚರ್ಚೆ ನಡೆಸಲಾಗುವುದು. ನಮ್ಮ ಕೈಯಲ್ಲಿ ಏನು ಸಹಾಯ ಆಗುವುದೋ ಅದನ್ನು ಮಾಡುತ್ತೇವೆ. ಎಲ್ಲದಕ್ಕೂ ಶುಭ ಕಾಲ ಶುಭ ಗಳಿಗೆ ಬರಬೇಕು ಎಂದು ಹೇಳಿದ್ದೇನೆ. ನೀವು ತಾಳ್ಮೆಯಿಂದ ಇರಿ. ಬಸವಣ್ಣನ ನಾಡಿನಲ್ಲಿ ಹುಟ್ಟಿರುವವರು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವವರು. ನುಡಿದಂತೆ ನಡೆವ ಸರ್ಕಾರ ಕಾಂಗ್ರೆಸ್ ಸರ್ಕಾರ ಮಾತ್ರ. ಇದು ನಿಮ್ಮ ಸರ್ಕಾರ ಎಂದರು.
ಓಪಿಎಸ್, ಎನ್‌ಪಿಎಸ್ ಬಗ್ಗೆ ನಮಗೆ ಗಮನವಿದೆ. ನೀವು ಆಡಳಿತ ಯಂತ್ರದ ರಥ. ನೀವು ಚೆನ್ನಾಗಿದ್ದರೆ ಇಡೀ ಆಡಳಿತ ಯಂತ್ರ ಚೆನ್ನಾಗಿ ನಡೆಯುತ್ತದೆ. ಕುಟುಂಬದ ರೀತಿಯಲ್ಲಿ ನಾವುಗಳು ಕೆಲಸ ಮಾಡಬೇಕು. ಮಾತು ಕೊಡುವುದೂ ಮುಖ್ಯವಲ್ಲ. ಮಾತು ಉಳಿಸಿಕೊಳ್ಳುವುದು ಮುಖ್ಯ. ನೀವು ನಮ್ಮ ಜತೆಯಲ್ಲಿ ಇರುತ್ತೇವೆ ಎಂದು ಹೇಳಿದ್ದೀರಿ ಎಂದರು.
ನಮ್ಮ - ನಿಮ್ಮ ಒಪ್ಪಂದಕ್ಕೆ ಇಬ್ಬರು ಸ್ವಾಮೀಜಿಗಳೇ ಸಾಕ್ಷಿ
ನಾನು ಹಾಗೂ ಪರಮೇಶ್ವರ್ ಅವರು ನಿಮ್ಮ ಜತೆ ಇರುತ್ತೇವೆ ಎಂದು ಮಾತು ಕೊಡುತ್ತೇನೆ. ನಮ್ಮ ನಡುವಿನ ಈ ಒಪ್ಪಂದಕ್ಕೆ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿದ್ದಲಿಂಗ ಸ್ವಾಮಿಜಿಗಳಿಬ್ಬರು ಸಾಕ್ಷಿ. ಪರಮೇಶ್ವರ್ ಅವರ ಬಳಿ ಬಾಂಡ್ ಪೇಪರ್ ಇದೆ. ಎಲ್ಲರೂ ಸೇರಿ ಇದಕ್ಕೆ ಸಹಿ ಹಾಕಬೇಕು. ಅದರಲ್ಲಿ ಮುಂದಿನ ಬಾರಿಗೆ ನಿಮ್ಮ- ನಮ್ಮ ಸರ್ಕಾರ ಒಟ್ಟಿಗೆ ಕೆಲಸ ಮಾಡಬೇಕು. ಯಾವುದೇ ಹೆಚ್ಚು ಕಡಿಮೆ ಆಗುವುದಿಲ್ಲ ತಾನೇ? ಎಂದು ಹೇಳಿದರು.
ಉಳಿ ಪೆಟ್ಟು ಬೀಳದೆ ಯಾವುದೇ ಶಿಲೆ ಪ್ರತಿಮೆಯಾಗುವುದಿಲ್ಲ. ಉಳುಮೆ ಮಾಡದೇ ಯಾವ ಭೂಮಿಯೂ ಮಟ್ಟ ಆಗುವುದಿಲ್ಲ. ನಿಮ್ಮ ಬದುಕಿನ ಬಗ್ಗೆ ನಮಗೆ ಅರಿವಿದೆ. ಈ ನಿಟ್ಟಿನಲ್ಲಿ ನಾವು ನಿಮ್ಮ ಜತೆ ನಿಲ್ಲುತ್ತೇವೆ. ಪರಮೇಶ್ವರ್ ಅವರ ಬಾಂಡ್ ಪೇಪರ್ ಅನ್ನು ಭದ್ರವಾಗಿ ಇಟ್ಟುಕೊಳ್ಳಿ. ಈ ವರ್ಷ ನಮ್ಮ ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆ ಬರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.