ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗ್ಯಾರಂಟಿ ಫಲಾನುಭವಿಗಳ ದಾಖಲೆ ಮರುಪರಿಶೀಲನೆಗೆ ಪಂಚಾಯ್ತಿ, ವಾರ್ಡ್ ಮಟ್ಟದ ಸಮಿತಿ ರಚನೆ: ಸಿಎಂ ಡಿ.ಕೆ. ಶಿವಕುಮಾರ್

Guarantee schemes: ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಸಿಎಂ ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಐದು ಗ್ಯಾರಂಟಿ ಜತೆಗೆ ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಜನರ ಆಸ್ತಿ ದಾಖಲೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಕಂದಾಯ ಗ್ರಾಮಗಳನ್ನು ಸ್ಥಾಪಿಸಿ ಉಚಿತವಾಗಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಮತ್ತು ಸಿಎಂ ಡಿ.ಕೆ.ಶಿವಕುಮಾರ್‌.

ಬೆಂಗಳೂರು, ಜೂ.21: “ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಐದು ಸದಸ್ಯರ ಗ್ಯಾರಂಟಿ ಸಮಿತಿಯನ್ನು ರಚಿಸಲಾಗುವುದು. ಈ ಸಮಿತಿ ಸದಸ್ಯರು ಗ್ಯಾರಂಟಿ (Guarantee schemes) ಫಲಾನುಭವಿಗಳ ದಾಖಲೆ ಮರುಪರಿಶೀಲನೆ ಮಾಡಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರು ಕರೆ ನೀಡಿದರು. ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಂಕಲ್ಪ ಸಮಾವೇಶದಲ್ಲಿ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಿ.ಕೆ. ಹರಿಪ್ರಸಾದ್ ಅವರಿಗೆ ಹಸ್ತಾಂತರಿಸಿ ಮಾತನಾಡಿದರು.

“ಕಳೆದ ಆರು ವರ್ಷಗಳಲ್ಲಿ ನನ್ನ ಜೊತೆ ಪಕ್ಷದ ಅನೇಕ ಪದಾಧಿಕಾರಿಗಳು ಶ್ರಮಿಸಿದ್ದು, ಎಲ್ಲಾ ಶಾಸಕರು ಹಾಗೂ ಮುಖಂಡರು ತನು, ಮನ, ಧನ ಅರ್ಪಿಸಿ ನನಗೆ ಶಕ್ತಿ ತುಂಬಿದ್ದಾರೆ. ಎಷ್ಟೋ ಜನಕ್ಕೆ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ನಾವು ಗ್ಯಾರಂಟಿ ಯೋಜನೆಗಳ ಸಮಿತಿ ಮಾಡಿ, ಸಾವಿರಾರು ಕಾರ್ಯಕರ್ತರಿಗೆ ಅಧಿಕಾರ ನೀಡಿದ್ದೇವೆ. ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ಸಮಿತಿ ರಚನೆಗೆ ನಾನು ಹಾಗೂ ನಮ್ಮ ವರಿಷ್ಠರು ಚರ್ಚೆ ಮಾಡಿದ್ದೇವೆ. ಎಲ್ಲಾ ವರ್ಗದವರಿಗೂ ಸಮಾನವಾಗಿ ಈ ಸಮಿತಿಯಲ್ಲಿ ನೇಮಕ ಮಾಡಲಾಗುವುದು” ಎಂದು ಘೋಷಿಸಿದರು.

DK Shivakumar

“ಪ್ರತಿ ವಾರ್ಡ್ ಹಾಗೂ ಪಂಚಾಯಿತಿಯಲ್ಲಿ ಐದು ಜನರಂತೆ, 7 ಸಾವಿರ ಪಂಚಾಯಿತಿ, 4 ಸಾವಿರ ವಾರ್ಡ್ ಗಳಲ್ಲಿ ಗ್ಯಾರಂಟಿ ಸಮಿತಿ ರಚಿಸಲಾಗುವುದು. ಆಮೂಲಕ ನಾವು ಎಷ್ಟು ನಾಯಕರನ್ನು ತಯಾರು ಮಾಡುತ್ತಿದ್ದೇವೆ ಎಂದು ನೀವೇ ಆಲೋಚಿಸಿ. ನಾಯಕನಾದವನು ನಾಯಕರನ್ನು ಬೆಳೆಸಬೇಕೇ ಹೊರತು, ಹಿಂಬಾಲಕರನ್ನಲ್ಲ ಎಂಬುದಕ್ಕೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ” ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದರೂ ಕಾರ್ಯಕರ್ತನಂತೆ ಕೆಲಸ ಮಾಡುವೆ

“ಇಡೀ ಸರ್ಕಾರ ಹಾಗೂ ಪಕ್ಷ ಹರಿಪ್ರಸಾದ್ ಅವರ ಜೊತೆಗೆ ಇರಲಿದೆ. ನಾನು ಮುಖ್ಯಮಂತ್ರಿಯಾಗಿದ್ದರೂ ಕಾರ್ಯಕರ್ತನಾಗಿ ನಿಮ್ಮ ಜತೆಗೆ ಕೆಲಸ ಮಾಡುತ್ತೇನೆ. 2028ರಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತಂದು 2029ರಲ್ಲಿ ರಾಹುಲ್ ಗಾಂಧಿ ಅವರನ್ನು ದೇಶದ ಪ್ರಧಾನಿಯಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡಿದ್ದೇವೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಸಿಕ್ಕ ಅವಕಾಶ ನಮಗೆ ಸಿಕ್ಕಿಲ್ಲ ಎಂದು ಬಿಜೆಪಿಯವರು ಕೈ ಹಿಸುಕಿಕೊಳ್ಳುತ್ತಿದ್ದಾರೆ. ನೀವು ಚಿಂತೆ ಮಾಡುವ ಅಗತ್ಯವಿಲ್ಲ. 2028ರಲ್ಲಿ ಹಾಗೂ 2029ರಲ್ಲೂ ನಿಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ” ಎಂದು ಸಂದೇಶ ನೀಡಿದರು.

DK Shivakumar -

ಇದೇ ವರ್ಷದಿಂದ ವಿದ್ಯಾರ್ಥಿ ಚುನಾವಣೆ

“ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ವಿದ್ಯಾರ್ಥಿ ನಾಯಕರ ಚುನಾವಣೆಯನ್ನು ಕಾಲೇಜುಗಳಲ್ಲಿ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗುವುದು. ಆಮೂಲಕ ಪಂಚಾಯಿತಿಗಳಿಂದ ಪಾರ್ಲಿಮೆಂಟ್‌ವರೆಗೂ ನಾಯಕರನ್ನು ತಯಾರು ಮಾಡಲಾಗುವುದು. ಇದೇ ವರ್ಷದಿಂದ ವಿದ್ಯಾರ್ಥಿ ಚುನಾವಣೆ ನಡೆಸಲಾಗುವುದು. ಇನ್ನು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ತಪ್ಪಿಸಲಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿ ಘಟಕ, ಮಹಿಳಾ ಘಟಕ ಹೆಚ್ಚಿನ ಸಂಘಟನೆ ಮಾಡಬೇಕು” ಎಂದು ಕರೆ ನೀಡಿದರು.

ನನ್ನ ಶಕ್ತಿ ಮೀರಿ ಕಾರ್ಯಕರ್ತರ ಸೇವೆ, ಪಕ್ಷ ಸಂಘಟನೆ

“ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಮಾರ್ಚ್ 10, 2020ರಂದು ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದರು. ನನಗೆ ಈ ರೀತಿ ದೊಡ್ಡ ಕಾರ್ಯಕ್ರಮ ಮಾಡಲು ಬಿಜೆಪಿ ಸರ್ಕಾರ ಅವಕಾಶ ನೀಡಿರಲಿಲ್ಲ. ಪ್ರತಿ ಪಂಚಾಯಿತಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿ ಜೂಮ್ ಮೂಲಕ 11 ಸಾವಿರ ಕಡೆಗಳಿಂದ ಡಿಜಿಟಲ್ ವೇದಿಕೆ ಮೂಲಕ ಸಂವಿಧಾನದ ಪೀಠಿಕೆ ಪಠಿಸಿ, ನಾನು ದಿನೇಶ್ ಗುಂಡೂರಾವ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದ್ದೆ” ಎಂದು ತಿಳಿಸಿದರು.

“ನಾನು ನನ್ನ ಶಕ್ತಿ ಮೀರಿ, ಕಾರ್ಯಕರ್ತರ ಸೇವೆ ಮಾಡಿ, ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ನನ್ನಿಂದ ಅನೇಕ ತಪ್ಪುಗಳಾಗಿರಬಹುದು. ರೈತರು, ಕಾರ್ಮಿಕರು, ಯುವ ಪೀಳಿಗೆಯವರ ಮಧ್ಯೆ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಇಂದು ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ನಾನು ಅಧಿಕಾರ ಹಸ್ತಾಂತರ ಮಾಡಿದ್ದೇನೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಎಲ್ಲಾ ವರ್ಗದವರು ಅಧಿಕಾರಕ್ಕೆ ಬಂದಂತೆ. ನಾವು ವಿರೋಧ ಪಕ್ಷದಲ್ಲಿದ್ದಾಗ, ನಾನು ಹಾಗೂ ಸಿದ್ದರಾಮಯ್ಯನವರು ಸೇರಿ ನಿಮ್ಮೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಿ, ದೇಶದ ಐಕ್ಯತೆ, ಸಮಗ್ರತೆ, ಶಾಂತಿ ಕಾಪಾಡಲು ಶ್ರಮಿಸಿದ್ದೇವೆ” ಎಂದು ತಿಳಿಸಿದರು.

ಆರು ವರ್ಷಗಳ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಯಣದ ಮೆಲುಕು:

“ನಾನು ಈ ಜವಾಬ್ದಾರಿ ವಹಿಸಿಕೊಂಡಾಗ ಕೋವಿಡ್ ಬಿಕ್ಕಟ್ಟು ಎದುರಾಗಿತ್ತು. ನಾನು, ನಮ್ಮ ಕಾರ್ಯಾಧ್ಯಕ್ಷರು, ಶಾಸಕರು, ಪಕ್ಷದ ಎಲ್ಲಾ ಘಟಕಗಳ ಅಧ್ಯಕ್ಷರು ಒಟ್ಟಾಗಿ ಸೇರಿ ಪರಿಸ್ಥಿತಿ ಎದುರಿಸಿದೆವು. ಸಂಕಷ್ಟದಲ್ಲಿದ್ದ ಜನರಿಗೆ ಲಕ್ಷಾಂತರ ಆಹಾರ ಕಿಟ್ ವಿತರಣೆ ಮಾಡಿದೆವು. ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅವರ ಬೆಳೆ ಖರೀದಿ ಮಾಡಿ, ಬಡವರಿಗೆ ಉಚಿತವಾಗಿ ಹಂಚಿದೆವು. ಆಮೂಲಕ ಜನರಿಗೆ ಆತ್ಮಧೈರ್ಯ ತುಂಬಿದೆವು. ಬಿಜೆಪಿ ಸರ್ಕಾರ, ವಲಸೆ ಕಾರ್ಮಿಕರಿಂದ ಬಸ್ ದರ ಮೂರು ಪಟ್ಟು ಹೆಚ್ಚಿಸಿ ಸುಲಿಗೆ ಮಾಡಲು ಮುಂದಾದಾಗ ಸರ್ಕಾರಕ್ಕೆ 1 ಕೋಟಿ ಹಣ ನೀಡಲು ಮುಂದಾಗಿ, ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದೆವು. ನಮ್ಮ ಆಗ್ರಹ ದೇಶಕ್ಕೆ ಮಾದರಿಯಾಯಿತು. ನಂತರ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ನಮ್ಮ ಜನ ಪ್ರಾಣಬಿಟ್ಟರು. ನಾನು ಹಾಗೂ ಸಿದ್ದರಾಮಯ್ಯ ಅವರು ಹೋಗಿ ಪರಿಸ್ಥಿತಿ ಪರಿಶೀಲಿಸಿದಾಗ ಅಲ್ಲಿನ ವಾಸ್ತವ ಅರಿತೆವು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡಿದೆವು. ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡುವ ವಾಗ್ದಾನ ನೀಡಿದೆವು. ನಾವು ಅದರಂತೆ ಆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಿ, ಕೊಟ್ಟ ಮಾತು ಈಡೇರಿಸಿದ್ದೇವೆ” ಎಂದು ಸ್ಮರಿಸಿದರು.

“ಇಡೀ ರಾಜ್ಯದ ಜನತೆ ನಮ್ಮ ಪ್ರತಿ ಹೆಜ್ಜೆಯಲ್ಲೂ ಬೆಂಬಲ ನೀಡಿದರು. ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಕೃಷಿ ಕರಾಳ ಕಾಯ್ದೆ ಜಾರಿಗೆ ತಂದಾಗ ನಾವು ಹೋರಾಟ ಮಾಡಿದೆವು. ಇಂಧನ ದರ ಏರಿಕೆ ವಿರುದ್ಧ 100 ನಾಟೌಟ್, ಎತ್ತಿನಗಾಡಿ ಮೆರವಣಿಗೆ, ಟಾಂಗಾ ಜಾಥ, ಸೈಕಲ್ ಜಾಥ ಮಾಡಿದೆವು. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ ಇಬ್ಬರು ಮಂತ್ರಿಗಳು ರಾಜೀನಾಮೆ ನೀಡುವಂತೆ ಮಾಡಿದೆವು. ರಾಷ್ಟ್ರಧ್ವಜ ಅಪಮಾನಿಸಿದ ಈಶ್ವರಪ್ಪ ವಿರುದ್ಧ, ಪಿಎಸ್ಐ ಸೇರಿದಂತೆ ವಿವಿಧ ಹಗರಣ, ಸೋನಿಯಾ ಗಾಂಧಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಹಾಗೂ ತನಿಖಾ ಸಂಸ್ಥೆಗಳ ಕಿರುಕುಳ ಹಾಗೂ ಪಿತೂರಿ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದೆವು” ಎಂದರು.

“ನೀವೆಲ್ಲರೂ 75 ಲಕ್ಷ ಸದಸ್ಯತ್ವ ಮಾಡಿಸುವ ಮೂಲಕ ಈ ದೇಶದಲ್ಲಿ ಇತಿಹಾಸ ಬರೆದಿದ್ದೀರಿ. ನಾವು ರೈತರಿಗಾಗಿ ಕೃಷ್ಣ, ಮಹದಾಯಿ ಯೋಜನೆಗೆ ಹೋರಾಟ, ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ಮಾಡಿದೆವು. ಮುಂದಿನ ದಿನಗಳಲ್ಲಿ ಈ ಯೋಜನೆ ಯಾವ ಹಂತಕ್ಕೆ ಬಂದಿದೆ ಎಂದು ಚರ್ಚೆ ಮಾಡುತ್ತೇನೆ. ಸರ್ವರಿಗೂ ಸಮಪಾಲು, ಸಮಬಾಳು ನೀಡುವ ಉದ್ದೇಶದಿಂದ ಒಳಮೀಸಲಾತಿ ಆಗ್ರಹಿಸಿ ಚಿತ್ರದುರ್ಗದಲ್ಲಿ ಐಕ್ಯತಾ ಸಮಾವೇಶ ಮಾಡಿದೆವು. ನಿರುದ್ಯೋಗ ವಿರುದ್ಧ ಹೋರಾಟ ಮಾಡಿದ್ದೇವೆ. ಇಂತಹ ನೂರಾರು ಹೋರಾಟ ಮಾಡಿದೆವು. ಪ್ರಜಾಧ್ವನಿ ಯಾತ್ರೆ ಮೂಲಕ ನಮ್ಮ ಚುನಾವಣಾ ಪ್ರಚಾರ ಆರಂಭಿಸಿದೆವು. ಬೆಳಗಾವಿಯ ಗಾಂಧಿ ಬಾವಿಯಲ್ಲಿ ನೀರು ತೆಗೆದು ಕಸ ಗುಡಿಸಿ ನಮ್ಮ ಮೊದಲ ಗ್ಯಾರಂಟಿ ಗೃಹಜ್ಯೋತಿ ಯೋಜನೆ ಘೋಷಿಸಿದೆವು. ನಾ ನಾಯಕಿ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಲಾಯಿತು. ನಾವು ಅಧಿಕಾರಕ್ಕೆ ಬಂದ ನಂತರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆವು. 1.21 ಕೋಟಿ ಬಡ ಕುಟುಂಬಗಳ ಯಜಮಾನಿಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪಿದೆ. ಇದು ರಾಷ್ಟ್ರಕ್ಕೆ ನಮ್ಮ ಕಾರ್ಯಕ್ರಮ ರವಾನಿಸಿರುವ ಸಂದೇಶ” ಎಂದು ಹೇಳಿದರು.

ನಿಮ್ಮೆಲ್ಲರ ಶಕ್ತಿಯಿಂದ 136 ಸ್ಥಾನಗಳೊಂದಿಗೆ ಅಧಿಕಾರಕ್ಕೆ

“ನನ್ನನ್ನು ಬಂಡೆ ಎಂದು ಕರೆಯುತ್ತಾರೆ. ನನ್ನನ್ನು ವಿಧಾನಸೌಧಕ್ಕೆ ಹೋಗುವ ಮೆಟ್ಟಿಲಾಗಿ ಮಾಡಿಕೊಳ್ಳಿ ಎಂದು ಕರೆ ನೀಡಿದ್ದೆ. ಈ ಹೋರಾಟಗಳು ಕೇವಲ ನನ್ನದು ಅಥವಾ ಸಿದ್ದರಾಮಯ್ಯ ಅವರ ಹೋರಾಟ ಮಾತ್ರವಲ್ಲ. ವೇದಿಕೆ ಮೇಲಿರುವ ಮುಖಂಡರು ಹಾಗೂ ಕಾರ್ಯಕರ್ತರು ನಿಮ್ಮೆಲ್ಲರ ಶಕ್ತಿಯಿಂದ ಇಂದು ಪಕ್ಷ ರಾಜ್ಯದಲ್ಲಿ 136 ಸೀಟುಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ. ನಾನು ಅಧ್ಯಕ್ಷನಾಗಿದ್ದಾಗ ಮೀನುಗಾರರು, ನೇಕಾರರು, ಲಂಬಾಣಿಗಳು, ತಿಗಳರು, ಮಡಿವಾಳರು, ಗಾಣಿಗರು, ಉಪ್ಪಾರ ಸಮುದಾಯಗಳ ಜೊತೆ ಸಂವಾದ ಮಾಡಿ ಅವರ ಸಮಸ್ಯೆ ಕೇಳಿದೆ. ರೈತರು, ಕಾರ್ಮಿಕರು, ಚಾಲಕರು, ಬೀದಿ ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗದ ಜನರ ಸಮಸ್ಯೆ ಆಲಿಸಿದ್ದೆ” ಎಂದು ಸ್ಮರಿಸಿದರು.

“ರಾಹುಲ್ ಗಾಂಧಿ ಅವರು ಭಾರತವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತ ಜೋಡೋ ಯಾತ್ರೆ ಮಾಡಿದರು. ನಮ್ಮ ರಾಜ್ಯದಲ್ಲಿ 23 ದಿನಗಳ ಕಾಲ ಈ ಪಾದಯಾತ್ರೆ ಸಾಗಿತು. ರಾಹುಲ್ ಗಾಂಧಿ ಅವರು ಹೆಜ್ಜೆ ಹಾಕಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಇದೇ ಸಮಯದಲ್ಲಿ ನಮ್ಮ ಪಕ್ಷದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಬ್ಲಾಕ್ ಅಧ್ಯಕ್ಷರಾಗಿದ್ದ ಅವರು ಮಹಾತ್ಮಾ ಗಾಂಧಿ ಅವರು ಅಲಂಕರಿಸಿದ ಸ್ಥಾನದಲ್ಲಿ ಕೂತರು. ಇದೆಲ್ಲವೂ ಇತಿಹಾಸ. ಈ ಎಲ್ಲಾ ಸಂದರ್ಭಗಳಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ನನ್ನ ಅಧಿಕಾರ ಅವಧಿಯಲ್ಲಿ ಈ ಸಾಕ್ಷಿ ಗುಡ್ಡೆ ಬಿಟ್ಟು ಹೋಗುತ್ತಿದ್ದೇನೆ. ಈ ಸಾಧನೆ ಕೇವಲ ನನ್ನದಲ್ಲ. ನಿಮ್ಮೆಲ್ಲರ ಸಹಕಾರ ಪರಿಶ್ರಮದಿಂದ ಇದು ಸಾಧ್ಯವಾಯಿತು” ಎಂದರು.

“ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಮಹಾತ್ಮಾ ಗಾಂಧಿ ಅವರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಅಂಗವಾಗಿ ನಾವು ಗಾಂಧಿ ಭಾರತ ಕಾರ್ಯಕ್ರಮ ಮಾಡಿದೆವು. ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಐತಿಹಾಸಿಕ ಕಾರ್ಯಕ್ರಮ, ದೇಶದ 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಿದೆವು. ಸುಮಾರು 4 ಲಕ್ಷ ಜನ ಈ ಯಾತ್ರೆಯಲ್ಲಿ ಭಾಗವಹಿಸಿದರು. ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮಾಡಿದೆವು. ಸಂವಿಧಾನ ಉಳಿಸುವ ಸಂಕಲ್ಪದ ಭಾಗವಾಗಿ ನಾನು ಸಂವಿಧಾನದ ಪ್ರತಿ ಹಿಡಿದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಬಿ.ಕೆ. ಹರಿಪ್ರಸಾದ್ ಅವರು ಸಂವಿಧಾನದ ಪುಸ್ತಕ ನೀಡಿದ್ದಾರೆ” ಎಂದರು.

ಹಿರಿಯ ನಾಯಕರಿಗೆ ಅಧ್ಯಕ್ಷ ಸ್ಥಾನ ಹಸ್ತಾಂತರ ಸಮಾಧಾನ ತಂದಿದೆ

“ನಾನು ಹಾಗೂ ಹರಿಪ್ರಸಾದ್ ಅವರು ಒಂದೇ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರಾಗಿ ಬೆಳೆದವರು. ನನಗಿಂತ 2-3 ವರ್ಷ ಬೇಗ ಚುನಾವಣೆ ಸ್ಪರ್ಧಿಸಿದರು. ಅವರು 1983ರಲ್ಲಿ ಚುನಾವಣೆ ಸ್ಪರ್ಧಿಸಿದರೆ, ನಾನು 1985ರಲ್ಲಿ ಸ್ಪರ್ಧೆ ಮಾಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ರಾಷ್ಟ್ರದೆಲ್ಲೆಡೆ ಪಕ್ಷ ಸಂಘಟಿಸಿರುವ ಹಿರಿಯ ನಾಯಕರಿಗೆ ಈ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡುತ್ತಿರುವುದು ಅತ್ಯಂತ ಸಮಾಧಾನ ತಂದಿದೆ” ಎಂದರು.

ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ

“ಸೋನಿಯಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಆದ ಚರ್ಚೆಯಂತೆ ಅಧಿಕಾರ ಹಸ್ತಾಂತರ ಮಾಡಲಾಗಿದೆ. ನನಗೆ ಗುಂಪುಗಾರಿಕೆ, ಜಾತಿ, ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದರ ಮೇಲೆ ನಂಬಿಕೆ ಇಲ್ಲ. ನಮ್ಮದು ಕಾಂಗ್ರೆಸ್ ಜಾತಿ, ಕಾಂಗ್ರೆಸ್ ಧ್ವಜವೇ ನನ್ನ ಧರ್ಮ. ಈ ರಾಜ್ಯವನ್ನು ಮುನ್ನಡೆಸಲು ನನಗೆ ನೀವು ಹಾಗೂ ನಮ್ಮ ರಾಷ್ಟ್ರೀಯ ನಾಯಕರೆಲ್ಲರೂ ಸೇರಿ ಜವಾಬ್ದಾರಿ ನೀಡಿದ್ದೀರಿ. ನಾವು ಐದು ಗ್ಯಾರಂಟಿ ನೀಡಿದ್ದು, ಇದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಈ ಐದು ಗ್ಯಾರಂಟಿ ಜೊತೆಗೆ ಆರನೇ ಗ್ಯಾರಂಟಿ ಯಾಗಿ ಭೂಮಿ ಗ್ಯಾರಂಟಿ ನೀಡಿದ್ದೇವೆ. ಜನರ ಆಸ್ತಿ ದಾಖಲೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಕಂದಾಯ ಗ್ರಾಮಗಳನ್ನು ಸ್ಥಾಪಿಸಿ ಉಚಿತವಾಗಿ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ” ಎಂದು ಹೇಳಿದರು.

“ನಾನು ಅಧಿಕಾರ ವಹಿಸಿಕೊಂಡ ಮೊದಲ ದಿನ ಆರು ತೀರ್ಮಾನ ಮಾಡಲಾಗಿದೆ. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ಯುವ ಉದ್ಯೋಗ ಸೇತು ಕಾರ್ಯಕ್ರಮ ಮೂಲಕ ಖಾಸಗಿಯಲ್ಲಿ ಉದ್ಯೋಗ ವಿನಿಮಯ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. 10 ಸಾವಿರ ಭಾರತ ಜೋಡೋ ಯುವಕರ ಸಂಘ ಸ್ಥಾಪನೆ, ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಇದಕ್ಕಾಗಿ 1 ಸಾವಿರ ಕೋಟಿ ಮೀಸಲಿಡಲಾಗಿದೆ. ಇದು ದೇಶದ ಐಕ್ಯತೆಯ ಶಕ್ತಿಯಾಗಿದೆ. ಒಸಿ, ಸಿಸಿ ಸಮಸ್ಯೆಗೆ ಪರಿಹಾರ, 31.05.2026 ವರೆಗಿನ ಎಲ್ಲಾ ವಸತಿ ಕಟ್ಟಡಗಳಿಗೆ ವಿನಾಯಿತಿ ನೀಡಿದ್ದೇವೆ. ಭೂ ಗ್ಯಾರಂಟಿ ಮೂಲಕ ಬಿ ಖಾತಾಯಿಂದ ಎ ಖಾತಾ ಪರಿವರ್ತನೆ ರಾಜ್ಯದೆಲ್ಲೆಡೆ ವಿಸ್ತರಣೆ. ಬೆಂಗಳೂರು ವಾರ್ಡ್ ಮಟ್ಟದ ರಸ್ತೆ ಡಾಂಬರಿಕರಣಕ್ಕೆ 2 ಸಾವಿರ ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಿದ್ದೇವೆ. ಸಾರ್ವಜನಿಕರ ಅಹವಾಲು, ಸಮಸ್ಯೆಗಳನ್ನು ಆಲಿಸಲು ಪ್ರಜಾಸೇವೆ ಸಚಿವಾಲಯವನ್ನೇ ಆರಂಭಿಸಲು ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ” ಎಂದರು.

ಎಲ್ಲರ ಮತದಾನದ ಹಕ್ಕು ರಕ್ಷಣೆ ಮಾಡಿ

“ಕೇಂದ್ರ ಸರ್ಕಾರ ಈಗ ನಮಗೆ ಆಘಾತ ನೀಡುತ್ತಿದೆ. ವಿಶೇಷ ಮತಪಟ್ಟಿ ಪರಿಷ್ಕರಣೆ (SIR) ಮೂಲಕ ತಮಿಳುನಾಡಿನಲ್ಲಿ 64 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತಗಳನ್ನು ತೆಗೆದುಹಾಕಿದ್ದಾರೆ. ನಮ್ಮ ರಾಜ್ಯದಲ್ಲಿ ನಡೆಯುವ SIR ನಮಗೆ ಅಪಾಯವೂ ಹೌದು, ಅವಕಾಶವೂ ಹೌದು. ಹೀಗಾಗಿ ನಿಮ್ಮ ಮತದಾನದ ಹಕ್ಕನ್ನು ರಕ್ಷಣೆ ಮಾಡಿಕೊಳ್ಳಬೇಕು. SIR ಎಂದರೆ ಹೊಸದಾಗಿ ಮತಪಟ್ಟಿ ರಚಿಸುವುದಾಗಿದೆ. ಇದು ಮ್ಯಾಪಿಂಗ್ ಪ್ರಕ್ರಿಯೆ ಅಲ್ಲ. ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಹಿಡಿದು ಪ್ರತಿಯೊಬ್ಬ ವ್ಯಕ್ತಿ ಬಿಎಲ್ಓ ನೀಡುವ ಅರ್ಜಿಗಳನ್ನು ತುಂಬಿ ದಾಖಲೆ ಸಮೇತ ಸಲ್ಲಿಕೆ ಮಾಡಿದರೆ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ. ಇಲ್ಲದಿದ್ದರೆ ಮತದಾನದ ಹಕ್ಕು ಉಳಿಯುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

“ಬಡವರನ್ನು ಉಳಿಸಿ, ಮತದಾನದ ಹಕ್ಕು ರಕ್ಷಿಸಬೇಕು. ಜನರಿಗೆ ಅಗತ್ಯವಿರುವ ದಾಖಲೆ ಒದಗಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನಮ್ಮ ಕಾರ್ಯಾಧ್ಯಕ್ಷರಾದ ಜಿ.ಸಿ ಚಂದ್ರಶೇಖರ್ ಅವರು ಈ ಪ್ರಕ್ರಿಯೆ ಕುರಿತು ಸಾಕಷ್ಟು ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಜನರಲ್ಲಿ ಜಾಗೃತಿ ಮೂಡಿಸಬೇಕು. ಯಾರಿಗೆ ಮತ ಇರುವುದಿಲ್ಲ, ಅವರಿಗೆ ಅವಕಾಶ, ಗ್ಯಾರಂಟಿ, ಪಿಂಚಣಿ ಸಿಗುವುದಿಲ್ಲ. ಬಿಜೆಪಿ ಸರ್ಕಾರ ಬೇರೆ ರಾಜ್ಯಗಳಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಈ ಯೋಜನೆ ಸೌಲಭ್ಯ ನಿಲ್ಲಿಸಿದ್ದಾರೆ. ಹೀಗಾಗಿ ನಾವು ಎಲ್ಲರ ಮತದಾನದ ಹಕ್ಕು ಕಾಪಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರ ಆಡಳಿತ, ಮಾರ್ಗದರ್ಶನ, ಶಕ್ತಿ ದೇಶಕ್ಕೆ ಮಾದರಿಯಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದೇವೆ” ಎಂದು ತಿಳಿಸಿದರು.

“ನಿಮ್ಮ ಶಕ್ತಿ ಹಾಗೂ ಆಶೀರ್ವಾದ ನಮ್ಮೆಲ್ಲರಿಗೂ ಅಗತ್ಯವಿದೆ. ನನ್ನೊಬ್ಬನಿಂದ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಎಲ್ಲಾ ಜಿಲ್ಲಾ ಮಂತ್ರಿಗಳು ವಾರಕ್ಕೆ ಒಂದು ದಿನ ನಿಮ್ಮ ಜಿಲ್ಲೆಗಳಲ್ಲಿರುವ ಒಂದು ತಾಲ್ಲೂಕಿನಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿ, ಜನರ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಸೂಚಿಸಿದ್ದೇನೆ. ನೀವು ಶಕ್ತಿಶಾಲಿಯಾದರೆ, ನಾವು ಬಲಿಷ್ಠವಾಗುತ್ತೇವೆ. ಕಾಂಗ್ರೆಸ್ ಕಚೇರಿ ನಮ್ಮ ದೇವಾಲಯ. ನಾನು ಸಿದ್ದರಾಮಯ್ಯ ಅವರು ಹಾಗೂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ರಾಜ್ಯದ ನೂರು ಕಡೆಗಳಲ್ಲಿ ಗಾಂಧಿ ಭಾರತ ಹೆಸರಿನಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಿಸಲು ಅಗತ್ಯವಿರುವ ಜಾಗಗಳನ್ನು ಮಂಜೂರಾತಿ ಮಾಡಿಸಿದ್ದೇವೆ. ಇಲ್ಲಿ ನಾವು ನೀವು ಶಾಶ್ವತವಲ್ಲ. ಕಾಂಗ್ರೆಸ್ ದೇವಾಲಯ ಶಾಶ್ವತವಾಗಿ ಉಳಿಯಲಿದೆ. ನೀವು ನಿಮ್ಮ ಕೈಲಾದ ಸೇವೆ ಮಾಡಿ” ಎಂದು ಕರೆ ನೀಡಿದರು.

KPCC President Oath Ceremony: ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಪದಗ್ರಹಣ; ಅಧಿಕಾರ ಹಸ್ತಾಂತರಿಸಿದ ಡಿಕೆಶಿ

ತಮ್ಮ ಪರ ಘೋಷಣೆ ಕೂಗಿದವರಿಗೆ ತರಾಟೆ:

ಕಾರ್ಯಕ್ರಮದ ವೇಳೆ ತಮ್ಮ ಪರವಾಗಿ ಘೋಷಣೆ ಕೂಗಿದವರಿಗೆ ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡರು. ಪಕ್ಷದಲ್ಲಿ ಶಿಸ್ತು ಮುಖ್ಯ. ವ್ಯಕ್ತಿ ಪೂಜೆ ಬೇಡ. ಪಕ್ಷ ಪೂಜೆ ಮಾಡಿ ಎಂದು ಸೂಚನೆ ನೀಡಿದರು.