ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಿತ್ರದುರ್ಗದಲ್ಲಿ ಅಭಿಮಾನೋತ್ಸವ; ಮೇ 8ರಂದು ಮಿನಿ ದಸರಾ ಮಾದರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಪುರಪ್ರವೇಶ

BY Vijayendra: ಬಿಎಸ್‍ವೈ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟಬೇಡಿ. ಚುನಾವಣೆ ಆರು ತಿಂಗಳು ಇರುವಾಗ ಈ ಕಾರ್ಯಕ್ರಮ ಆಯೋಜಿಸಿದರೆ ಬಿಜೆಪಿಗೆ ಲಾಭವಾಗಲಿದೆ, ವಿಜಯೇಂದ್ರ ಅವರಿಗೆ ಲಾಭವಾಗಲಿದೆ ಎಂದು ಹೇಳಬಹುದಿತ್ತು. ಆದರೆ ಅಂತಹ ಯಾವುದೇ ಲಾಭ ಪಡೆಯುವ ಉದ್ದೇಶ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಮನವಿ ಮಾಡಿದ್ದಾರೆ.

ಬಿಎಸ್‌ವೈ ಅಭಿಮಾನೋತ್ಸವಕ್ಕೆ ಮೈಸೂರಿನಲ್ಲಿ ಸುತ್ತೂರು ಶ್ರೀಗಳನ್ನು ಆಹ್ವಾನಿಸಿದ ಬಿ.ವೈ. ವಿಜಯೇಂದ್ರ.

ಮೈಸೂರು, ಮೇ 2: ಚಿತ್ರದುರ್ಗದಲ್ಲಿ ಇದೇ ಮೇ 9ರಂದು ಹಮ್ಮಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ರಾಜಕೀಯ ಪಯಣದ ಐವತ್ತು ವರ್ಷಗಳ ಸಂಭ್ರಮಾಚರಣೆ ಅಭಿಮಾನೋತ್ಸವದ (BSY Abhimanotsava) ಅಂಗವಾಗಿ ಬಿಎಸ್‍ವೈ ಅವರು ಇದೇ 8 ರಂದು ಸಂಜೆ 5 ಕ್ಕೆ ಚಿತ್ರದುರ್ಗ ನಗರಕ್ಕೆ ಪುರಪ್ರವೇಶ ಮಾಡಲಿದ್ದಾರೆ. ಅದ್ದೂರಿಯಾಗಿ ಮಿನಿ ದಸರಾ ರೀತಿ ಮೆರವಣಿಗೆ ನಡೆಸಲಾಗುವುದು. 25ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರಿಗೆ ಆಹ್ವಾನ ನೀಡಿದ್ದೇವೆ. ಚಿತ್ರದುರ್ಗದ ಕಾರ್ಯಕ್ರಮಕ್ಕೆ ಬರಲು ಅವರು ಒಪ್ಪಿದ್ದಾರೆ. ನಾಡು ಕಂಡ ಅಪ್ರತಿಮ ಹೋರಾಟಗಾರ, ರೈತನಾಯಕ, ಬಡವರ ಬಂಧು, ಮಾಜಿ ಮುಖ್ಯಮಂತ್ರಿ ಅವರ ಅಭಿಮಾನೋತ್ಸವ ಅದ್ದೂರಿಯಾಗಿ, ಐತಿಹಾಸಿಕವಾಗಿ ನೆರವೇರಲಿದೆ. ಬಿಎಸ್‍ವೈ ಅವರನ್ನು ಸ್ವಾಗತಿಸಲು ನಾಡಿನ ರೈತರು, ತಾಯಂದಿರು ಆಗಮಿಸಲಿದ್ದಾರೆ ಎಂದು ಹೇಳಿದರು.

ಮೇ 9ರಂದು ಬೆಳಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. 12 ಗಂಟೆ ಒಳಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವೇದಿಕೆಗೆ ಆಗಮಿಸಲಿದ್ದಾರೆ. ಸಾವಿರಕ್ಕೂ ಹೆಚ್ಚು ಗುರುಗಳು, ಮಠಾಧೀಶರು, ಸಾಮೀಜಿಗಳು ಉಪಸ್ಥಿತರಿರಲಿದ್ದಾರೆ. ರಾಜ್ಯದ ಬೀದರ್‌ನಿಂದ ಚಾಮರಾಜನಗರದವರೆಗಿನ ಮೂಲೆಮೂಲೆಗಳಿಂದ ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಈ ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮ ಆಯೋಜಿಸಲು ರಾಜ್ಯದ ಎಲ್ಲ ಜನರು ಬಹಳ ಉತ್ಸಾಹ ತೋರಿಸಿದ್ದಾರೆ. ಇದು ಯಶಸ್ವಿಯಾಗಲಿ ಎಂದು ಅವರು ಬಯಸಿದ್ದಾರೆ ಎಂದರು.

ರಾಜಕೀಯ ಬಣ್ಣ ಕಟ್ಟಬೇಡಿ

ಬಿಎಸ್‍ವೈ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಯಾವುದೇ ರಾಜಕೀಯ ಬಣ್ಣ ಕಟ್ಟಬೇಡಿ. ಚುನಾವಣೆ ಆರು ತಿಂಗಳು ಇರುವಾಗ ಈ ಕಾರ್ಯಕ್ರಮ ಆಯೋಜಿಸಿದರೆ ಬಿಜೆಪಿಗೆ ಲಾಭವಾಗಲಿದೆ, ವಿಜಯೇಂದ್ರ ಅವರಿಗೆ ಲಾಭವಾಗಲಿದೆ ಎಂದು ಹೇಳಬಹುದಿತ್ತು. ಆದರೆ ಅಂತಹ ಯಾವುದೇ ಲಾಭ ಪಡೆಯುವ ಉದ್ದೇಶ ಇಲ್ಲ. ಇದಕ್ಕೆ ರಾಜಕೀಯ ಬಣ್ಣ ಕಟ್ಟಬೇಡಿ ಎಂದು ಅವರು ಮನವಿ ಮಾಡಿದರು.

ರಾಜ್ಯದಲ್ಲಿ ಈ ಹಿಂದೆ ಅನೇಕ ಮುಖಂಡರು ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ ಅದೃಷ್ಟದ ಮುಖ್ಯಮಂತ್ರಿಗಳಿದ್ದರು. ಆದರೆ ಯಡಿಯೂರಪ್ಪ ಅವರು ಅದೃಷ್ಟದ ಮುಖ್ಯಮಂತ್ರಿಗಳಲ್ಲ. ತಮ್ಮ ರಾಜಕೀಯ ಜೀವನದ 50 ವರ್ಷಗಳಲ್ಲಿ 45 ವರ್ಷ ವಿರೋಧ ಪಕ್ಷದಲ್ಲೇ ಅವರು ಇದ್ದು ಹೋರಾಟ ಮಾಡಿದವರು. ಬಡವರ, ರೈತರ, ಶೋಷಿತ ಪೀಡಿತರ ಪರವಾಗಿ ಧ್ವನಿ ಎತ್ತಿದವರು. ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದರು ಎಂದು ಪ್ರಶ್ನೆಗೆ ಉತ್ತರಿಸಿದರು. ‌

ಅಭಿಮಾನೋತ್ಸವದ ಮೂಲಕ ಯಾವುದಾದರೂ ಸಂದೇಶ ನೀಡುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂದೇಶ ಕಾರ್ಯಕ್ರಮ ಆದ ನಂತರ ತಿಳಿಯುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು. ಚಿತ್ರದುರ್ಗದಲ್ಲೇ ಅಭಿಮಾನೋತ್ಸವ ಮಾಡಬೇಕು ಎಂದು ಸಂಸದರಾದ ಗೋವಿಂದ ಕಾರಜೋಳ ಅವರ ಅಪೇಕ್ಷೆ ಆಗಿತ್ತು. ಅಲ್ಲದೆ ಮಧ್ಯ ಕರ್ನಾಟಕವಾದ್ದರಿಂದ ಜನರು ಬರಲು ಅನುಕೂಲ ಆಗುತ್ತದೆ ಎಂದರು.

ಮುಖ್ಯಮಂತ್ರಿಗಳಿಗೆ ಜ್ಞಾನೋದಯವಾಗಲಿದೆ

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ ಎಂದು ಅನೇಕ ಕಾಂಗ್ರೆಸ್ ಮುಖಂಡರು ನನ್ನ ಬಳಿ ಹೇಳಿದ್ದಾರೆ. ಗೆಲುವಿನ ವಿಶ್ವಾಸವೇ ಅವರಿಗೆ ಇಲ್ಲ. ಇದು ವಾಸ್ತವ ಸತ್ಯ. ಉಪ ಚುನಾವಣೆ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿಗಳಿಗೆ ಮತ್ತು ಸರ್ಕಾರಕ್ಕೆ ಜ್ಞಾನೋದಯವಾಗಲಿದೆ ಎಂದರು.

ರಾಜ್ಯದಲ್ಲಿ ಎಲ್ಲೂ ಅಭಿವೃದ್ಧಿ ಇಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ ಶೋಭಾ ಕರಂದ್ಲಾಜೆ ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಮೈಸೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಆಗಿತ್ತು. ಸಾವಿರಾರು ಕೋಟಿ ಅನುದಾನ ನೀಡಿದ್ದರು. ಮೈಸೂರು ಹೋಗಲಿ ರಾಜ್ಯದ ಯಾವುದೇ ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಆರೋಪಿಸಿದರು.

ಶ್ರಮಿಕರ ಕಲ್ಯಾಣಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರದಿಂದ ಹಲವು ಯೋಜನೆ ಅನುಷ್ಠಾನ: ವಿಜಯೇಂದ್ರ

ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಹಪಾಹಪಿಸುತ್ತಿದ್ದಾರೆ. ಅಧಿಕಾರಕ್ಕಾಗಿ ದೆಹಲಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು ದಂಡು ದಂಡಾಗಿ ಕೂರ್ತಾ ಇದ್ದಾರೆ ಎಂದು ದೂರಿದರು. ಸಿಎಂ ಬದಲಾವಣೆ ಬಗ್ಗೆ ಖರ್ಗೆ ಅವರೇ ಹೇಳಿದ್ದಾರೆ. ತೀರ್ಮಾನ ಮಾಡಿಲ್ಲ ಅಂದಿದ್ದಾರೆ. ಅಂದರೆ ತೀರ್ಮಾನ ಮಾಡುವ ಹಂತಕ್ಕೆ ಬಂದಿದ್ದಾರೆ ಅಂತ ಅರ್ಥ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಟವೆಲ್ ಹಾಕಿ ಕೂತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.