ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಯತೀಂದ್ರ ನಮ್ಮ ಹೈಕಮಾಂಡ್‌ ಎಂದ ಡಿ.ಕೆ. ಶಿವಕುಮಾರ್‌; ಏನಿದರ ಮರ್ಮ?

DK Shivakumar: ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸಲ್ಮಾನರನ್ನು ಕರೆದಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ‘ʼಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲ ಜಾತಿ, ಧರ್ಮದವರು ಬೇಕು. ನಾವು ಜಾತಿ ಹಾಗೂ ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಸಿದ್ಧಾಂತ. ಯಾರೋ ಅಸೂಯೆ ಇರುವವರು ಈ ರೀತಿ ಮಾಡುತ್ತಾರೆʼ’ ಎಂದು ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಮಂಗಳೂರು, ಫೆ. 6: ʼʼಮುಂದಿನ ತಿಂಗಳು ಕಾಂಗ್ರೆಸ್‌ನ ನೂರು ಕಚೇರಿಗಳಿಗೆ ಶಂಕುಸ್ಥಾಪನೆ ಮಾಡಲು ನಿರ್ದೇಶನ ನೀಡುತ್ತಿದ್ದೇನೆ. ಎಐಸಿಸಿ ದಿನಾಂಕ ಕೊಡಲಿ, ಬಿಡಲಿ ನಾನಂತೂ ಎಲ್ಲ ಸಿದ್ಧತೆ ಮಾಡಿಕೊಂಡು ಪ್ರಾರಂಭ ಮಾಡುತ್ತೇನೆʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಮಂಗಳೂರು ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ʼʼಕಾಂಗ್ರೆಸ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಮಾರ್ಚ್ 10ಕ್ಕೆ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುತ್ತಿದ್ದೇನೆʼʼ ಎಂದು ತಿಳಿಸಿದರು.

ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಸಲ್ಮಾನರನ್ನು ಕರೆದಿಲ್ಲ ಎಂಬ ಆರೋಪದ ಬಗ್ಗೆ ಕೇಳಿದಾಗ, ‘ʼಕಾಂಗ್ರೆಸ್ ಜಾತಿ ಮೇಲೆ ಅಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತದೆ. ನಮಗೆ ಎಲ್ಲ ಜಾತಿ, ಧರ್ಮದವರು ಬೇಕು. ನಾವು ಜಾತಿ ಹಾಗೂ ಧರ್ಮದ ಮೇಲೆ ರಾಜಕಾರಣ ಮಾಡುವುದಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಇದು ನಮ್ಮ ಪಕ್ಷದ ಸಿದ್ಧಾಂತ. ಯಾರೋ ಅಸೂಯೆ ಇರುವವರು ಈ ರೀತಿ ಮಾಡುತ್ತಾರೆ’ʼ ಎಂದರು.

ಮುಂದಿನ ಐದು ವರ್ಷಗಳಿಗೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಹೈಕಮಾಂಡ್ ಹಸಿರು ನಿಶಾನೆ ತೋರಿದ್ದು, ಯಾವುದೇ ಊಹಾಪೋಹ ಇಲ್ಲ ಎಂಬ ಯತೀಂದ್ರ ಹೇಳಿಕೆ ಬಗ್ಗೆ ಕೇಳಿದಾಗ, ‘ʼಅವರೇ ನಮ್ಮ ಹೈ ಕಮಾಂಡ್. ಅವರು ಏನು ಹೇಳುತ್ತಾರೋ ಅದನ್ನು ಗೌರವದಿಂದ ಸ್ವೀಕಾರ ಮಾಡುತ್ತೇನೆ. ಅವರೇ ಹೈಕಮಾಂಡ್ ಎಂಬಂತೆ ಹೇಳಿಕೆ ನೀಡಿರುವಾಗ ಅವರನ್ನೇ ಹೈಕಮಾಂಡ್ ಎಂದು ಸ್ವೀಕಾರ ಮಾಡೋಣʼ’ ಎಂದು ತಿಳಿಸಿದರು.‌

ಅನುದಾನ ಲಭ್ಯತೆ ಅನುಸಾರ ಯಗಚಿ ಎಡದಂಡೆ ನಾಲೆಗಳ ಭೂಸ್ವಾಧೀನ: ಡಿ.ಕೆ. ಶಿವಕುಮಾರ್

ಶಾಸಕ ಬಸವರಾಜು ಅಧಿಕಾರ ಒಪ್ಪಂದದ ಬಗ್ಗೆ ಸ್ಪಷ್ಟನೆ ಬೇಕು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಬಸವರಾಜು, ಯತೀಂದ್ರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏನೇ ಪ್ರತಿಕ್ರಿಯೆ ನೀಡುವುದಿದ್ದರೂ ದೆಹಲಿಯವರು ಪ್ರತಿಕ್ರಿಯೆ ನೀಡಬೇಕು’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದರು.