ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸರ್ಕಾರವೇ ಸ್ಟಾರ್ಟ್‌ಅಪ್‌ಗಳಿಗೆ ಮೊದಲ ಗ್ರಾಹಕ: ‘ಗೌರ್ನಮೆಂಟ್ ಫಸ್ಟ್ʼ ಉಪಕ್ರಮ ಜಾರಿ, ಪ್ರಿಯಾಂಕ್ ಖರ್ಗೆ

Priyank Kharge: ಸರ್ಕಾರಿ ಸೇವೆಗಳ ಗುಣಮಟ್ಟ ಮತ್ತು ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ, ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಮಾರುಕಟ್ಟೆ, ನೈಜ ಪರಿಸರದಲ್ಲಿ ಪರಿಹಾರಗಳನ್ನು ಪರೀಕ್ಷಿಸುವ ಅವಕಾಶ ಹಾಗೂ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಮಾರ್ಗವನ್ನು ಒದಗಿಸುವುದು ‘ಗವರ್ನಮೆಂಟ್ ಫಸ್ಟ್’ ಉಪಕ್ರಮದ ಉದ್ದೇಶವಾಗಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗೃಹ ಸಚಿವ ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ)

ಬೆಂಗಳೂರು, ಸೆ.30: ಕರ್ನಾಟಕದ ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರಿ ಇಲಾಖೆಗಳ ಅಗತ್ಯಗಳಿಗೆ ಪರಿಹಾರ ಒದಗಿಸುವ ಅವಕಾಶದ ಜತೆಗೆ, ತಮ್ಮ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ನೈಜ ಸರ್ಕಾರಿ ಪರಿಸರದಲ್ಲಿ ಪರೀಕ್ಷಿಸಿ, ಮೌಲ್ಯಮಾಪನಗೊಳಿಸಿ, ಯಶಸ್ವಿಯಾದ ಪರಿಹಾರಗಳನ್ನು ಸರ್ಕಾರಿ ಖರೀದಿಗೆ ಒಳಪಡಿಸುವ ಉದ್ದೇಶದಿಂದ ‘ಗವರ್ನಮೆಂಟ್ ಫಸ್ಟ್ʼ ಉಪಕ್ರಮ ಜಾರಿಗೆ ತರಲಾಗುತ್ತಿದೆ ಎಂದು ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಸ್ಟಾರ್ಟ್‌ಅಪ್ ನೀತಿ 2025–30ರ ಅಡಿಯಲ್ಲಿ ‘ಎಲಿವೇಟ್ʼ ಕಾರ್ಯಕ್ರಮದ ಭಾಗವಾಗಿ ಜಾರಿಗೊಳ್ಳಲಿರುವ ಈ ಉಪಕ್ರಮಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು ₹25 ಕೋಟಿ ವೆಚ್ಚದಲ್ಲಿ ಗರಿಷ್ಠ 100 ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಇನ್ನೋವೇಶನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್) ಮೂಲಕ ಜಾರಿಗೊಳಿಸಲಾಗುತ್ತದೆ.

ಸರ್ಕಾರವೇ ಮೊದಲ ಗ್ರಾಹಕ

ಹೊಸ ತಂತ್ರಜ್ಞಾನ ಹಾಗೂ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಹಂತದಲ್ಲೇ ಮಾರುಕಟ್ಟೆ ಅವಕಾಶ ಕಲ್ಪಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿದೆ. ಸರ್ಕಾರವು ಕೇವಲ ಖರೀದಿದಾರನಾಗಿ ಕಾರ್ಯನಿರ್ವಹಿಸುವ ಬದಲು, ನವೀನ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೊದಲ ಗ್ರಾಹಕ ಹಾಗೂ ನಾವೀನ್ಯತೆಗೆ ಸಹಭಾಗಿಯಾಗುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಸ್ಟಾರ್ಟ್‌ಅಪ್‌ಗಳು ಸರ್ಕಾರಿ ಇಲಾಖೆಗಳು ಗುರುತಿಸುವ ಸಮಸ್ಯೆಗಳಿಗೆ ಪರಿಹಾರಗಳನ್ನು ಸಲ್ಲಿಸಬಹುದಾಗಿದೆ. ಅದೇ ರೀತಿ, ಸರ್ಕಾರದ ಅಗತ್ಯಗಳನ್ನು ಗುರುತಿಸಿ ಸ್ಟಾರ್ಟ್‌ಅಪ್‌ಗಳೇ ತಮ್ಮ ನವೀನ ಪರಿಹಾರಗಳನ್ನು ಸರ್ಕಾರಕ್ಕೆ ಪ್ರಸ್ತಾಪಿಸಬಹುದಾಗಿದೆ.

ಪರೀಕ್ಷಿಸಿ, ಮೌಲ್ಯಮಾಪನ ಮಾಡಿ, ಖರೀದಿಸುವ ವ್ಯವಸ್ಥೆ

ಗವರ್ನಮೆಂಟ್ ಫಸ್ಟ್ʼ ಉಪಕ್ರಮದಲ್ಲಿ ಪರೀಕ್ಷೆ–ಮೌಲ್ಯಮಾಪನ–ಖರೀದಿ ಎಂಬ ವ್ಯವಸ್ಥಿತ ವಿಧಾನ ಅನುಸರಿಸಲಾಗುತ್ತದೆ. ಆಯ್ಕೆಯಾದ ಸ್ಟಾರ್ಟ್‌ಅಪ್‌ಗಳ ಪರಿಹಾರಗಳನ್ನು ಸರ್ಕಾರಿ ಇಲಾಖೆಗಳ ನೈಜ ಪರಿಸರದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿ, ಅವುಗಳ ಕಾರ್ಯಕ್ಷಮತೆ, ಪರಿಣಾಮ, ಬಳಕೆದಾರರ ಸ್ವೀಕಾರ, ವೆಚ್ಚದ ಪರಿಣಾಮಕಾರಿತ್ವ ಹಾಗೂ ವಿಸ್ತರಣಾ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ.‌ ಪರೀಕ್ಷಾ ಹಂತದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ನೀಡುವ ಪರಿಹಾರಗಳನ್ನು ಮುಂದಿನ ಹಂತದಲ್ಲಿ ಸರ್ಕಾರಿ ಖರೀದಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಅಳವಡಿಕೆಗೆ ಪರಿಗಣಿಸಲಾಗುತ್ತದೆ.

ಪ್ರತಿ ಸ್ಟಾರ್ಟ್‌ಅಪ್‌ಗೆ ₹25 ಲಕ್ಷದವರೆಗೆ

ಅರ್ಹ ಸ್ಟಾರ್ಟ್‌ಅಪ್‌ಗಳಿಗೆ ಪ್ರಾಯೋಗಿಕ ಅಳವಡಿಕೆ ಮತ್ತು ಮೌಲ್ಯಮಾಪನಕ್ಕಾಗಿ ಪ್ರತಿ ಸ್ಟಾರ್ಟ್‌ಅಪ್‌ಗೆ ಗರಿಷ್ಠ ₹25 ಲಕ್ಷದವರೆಗೆ ನೆರವು ದೊರೆಯಲಿದೆ. ಒಟ್ಟು ₹25 ಕೋಟಿ ಅನುದಾನದಲ್ಲಿ ಶೇ.95ರಷ್ಟು, ಅಂದರೆ ₹23.75 ಕೋಟಿಯನ್ನು ಸ್ಟಾರ್ಟ್‌ಅಪ್‌ಗಳ ನೆರವಿಗೆ ಹಾಗೂ ಶೇ.5ರಷ್ಟು, ಅಂದರೆ ₹1.25 ಕೋಟಿಯನ್ನು ಆಡಳಿತಾತ್ಮಕ ವೆಚ್ಚಗಳಿಗೆ ಮೀಸಲಿಡಲಾಗಿದೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಕರ್ನಾಟಕದಲ್ಲಿ ನೋಂದಾಯಿತವಾಗಿರುವ, ಸ್ಥಾಪನೆಯಾಗಿ 10 ವರ್ಷಕ್ಕಿಂತ ಕಡಿಮೆ ಅವಧಿಯ ಹಾಗೂ ಯಾವುದೇ ಹಣಕಾಸು ವರ್ಷದಲ್ಲಿ ₹200 ಕೋಟಿಗಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರದ ಸ್ಟಾರ್ಟ್‌ಅಪ್‌ಗಳು ಅರ್ಹತೆ ಪಡೆಯಬಹುದಾಗಿದೆ. ಪರಿಹಾರಗಳು ನವೀನತೆ, ವಿಸ್ತರಣಾ ಸಾಮರ್ಥ್ಯ ಹಾಗೂ ನೈಜ ಪರಿಸರದಲ್ಲಿ ಪರೀಕ್ಷೆಗೆ ಸಿದ್ಧವಾಗಿರುವ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿರಬೇಕು.

ಸರ್ಕಾರಿ ಸಮಸ್ಯೆಗಳಿಗೆ ಸ್ಟಾರ್ಟ್‌ಅಪ್‌ಗಳ ಪರಿಹಾರ

ಮಾಹಿತಿ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ದತ್ತಾಂಶ ವಿಶ್ಲೇಷಣೆ, ಸಲಹಾ ಸೇವೆಗಳು, ವಿನ್ಯಾಸ, ಸಾಗಣೆ ವ್ಯವಸ್ಥೆ ಸೇರಿದಂತೆ ವಿವಿಧ ಸೇವೆಗಳು ಹಾಗೂ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಈ ಉಪಕ್ರಮದ ವ್ಯಾಪ್ತಿಗೆ ತರಲಾಗಿದೆ. ಸರ್ಕಾರಿ ಇಲಾಖೆಗಳು ತಮ್ಮ ಸಮಸ್ಯೆ ಅಥವಾ ಅಗತ್ಯವನ್ನು ಗುರುತಿಸಿ ‘ಸಮಸ್ಯೆ ಆಧಾರಿತ’ ಪ್ರಸ್ತಾವನೆಗಳನ್ನು ಆಹ್ವಾನಿಸಬಹುದು. ಇದಕ್ಕೆ ಪ್ರತಿಯಾಗಿ, ಸ್ಟಾರ್ಟ್‌ಅಪ್‌ಗಳು ತಮ್ಮದೇ ಆದ ನವೀನ ಪರಿಹಾರಗಳನ್ನು ಸರ್ಕಾರಕ್ಕೆ ಸಲ್ಲಿಸುವ ಅವಕಾಶವೂ ಇರಲಿದೆ.

ಪಾರದರ್ಶಕ ಮೌಲ್ಯಮಾಪನ ವ್ಯವಸ್ಥೆ

ಸ್ಟಾರ್ಟ್‌ಅಪ್‌ಗಳ ಪ್ರಸ್ತಾವನೆಗಳನ್ನು ತಾಂತ್ರಿಕ ಸಾಮರ್ಥ್ಯ, ನವೀನತೆ, ಪರಿಹಾರದ ಸಿದ್ಧತೆ, ವಿಸ್ತರಣಾ ಸಾಮರ್ಥ್ಯ, ಸರ್ಕಾರಿ ವ್ಯವಸ್ಥೆಗಳೊಂದಿಗೆ ಸಂಯೋಜನೆ ಹಾಗೂ ಸಾಮಾಜಿಕ–ಆರ್ಥಿಕ ಪರಿಣಾಮ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ತಜ್ಞರು ಹಾಗೂ ಸಂಬಂಧಿತ ಸರ್ಕಾರಿ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಆಯ್ಕೆ ಸಮಿತಿ ಮತ್ತು ತಾಂತ್ರಿಕ ಸಮಿತಿಗಳ ಮೂಲಕ ಪರಿಹಾರಗಳ ಪರೀಕ್ಷೆ ಹಾಗೂ ಮೌಲ್ಯಮಾಪನ ನಡೆಯಲಿದೆ.

ಯಶಸ್ವಿ ಪರಿಹಾರಗಳನ್ನು ಇತರ ಇಲಾಖೆಗಳಿಗೂ ವಿಸ್ತರಿಸಲು ಅವಕಾಶ

ಒಂದು ಇಲಾಖೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಪರಿಹಾರವನ್ನು ಅಗತ್ಯವಿದ್ದಲ್ಲಿ ಇತರ ಸರ್ಕಾರಿ ಇಲಾಖೆಗಳಲ್ಲಿಯೂ ಅಳವಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಯಶಸ್ವಿ ತಂತ್ರಜ್ಞಾನಗಳ ಇಲಾಖಾಂತರ ಅಳವಡಿಕೆ ಮತ್ತು ಪುನರಾವರ್ತನೆಯನ್ನು ಉತ್ತೇಜಿಸುವ ಮೂಲಕ ಸಾರ್ವಜನಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಒತ್ತು ನೀಡಲಾಗಿದೆ.

ಸರ್ಕಾರಿ ಸೇವೆಗಳ ಗುಣಮಟ್ಟ ಮತ್ತು ದಕ್ಷತೆಯನ್ನು ಹೆಚ್ಚಿಸುವುದರ ಜತೆಗೆ, ರಾಜ್ಯದ ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಮಾರುಕಟ್ಟೆ, ನೈಜ ಪರಿಸರದಲ್ಲಿ ಪರಿಹಾರಗಳನ್ನು ಪರೀಕ್ಷಿಸುವ ಅವಕಾಶ ಹಾಗೂ ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವ ಮಾರ್ಗವನ್ನು ಒದಗಿಸುವುದು ‘ಗವರ್ನಮೆಂಟ್ ಫಸ್ಟ್’ ಉಪಕ್ರಮದ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಇವಿಎಂ ಬಗ್ಗೆ ಆಕ್ಷೇಪ; ಬ್ಯಾಲಟ್‌ ಪೇಪರ್‌ಗೆ ಮರಳಲು ʼಇಂಡಿಯಾʼ ಒಕ್ಕೂಟ ಆಗ್ರಹ

ಈ ಮೂಲಕ ಕರ್ನಾಟಕದಲ್ಲಿ ಸರ್ಕಾರ–ಸ್ಟಾರ್ಟ್‌ಅಪ್ ಸಹಭಾಗಿತ್ವಕ್ಕೆ ನಿರಂತರ ಮತ್ತು ವ್ಯವಸ್ಥಿತ ವೇದಿಕೆ ನಿರ್ಮಾಣವಾಗಲಿದ್ದು, ನವೀನ ತಂತ್ರಜ್ಞಾನಗಳನ್ನು ಸಾರ್ವಜನಿಕ ಸೇವೆಗಳಲ್ಲಿ ಅಳವಡಿಸಿಕೊಳ್ಳುವ ಪ್ರಕ್ರಿಯೆಗೆ ಮತ್ತಷ್ಟು ವೇಗ ದೊರೆಯಲಿದೆ.