ತುಮಕೂರು, ಆಗಸ್ಟ್ 30: ಗೃಹ ಸಚಿವ ಪ್ರಿಯಾಂಕ ಖರ್ಗೆ (Priyank Kharge) ವಿರುದ್ಧ ವಾಗ್ದಾಳಿ ಮುಂದುವರೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು, ನಾನು ಕೇಳುತ್ತಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಕೊಡದೆ ಕೇವಲ ಎಕ್ಸ್ ವೇದಿಕೆಯಲ್ಲಿ ಮಾತನಾಡಿ ಜಾರಿಕೊಳ್ಳುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು. ಗೃಹ ಸಚಿವರು ಕ್ಯಾಮೆರಾ ಮುಂದೆ ಮಾತನಾಡದೆ ಎಕ್ಸ್ ವೇದಿಕೆಯಲ್ಲಿ ಮಾತನಾಡಿದ್ದಾರೆ. ಬೆಟ್ಟ ಅಗೆದು ಇಲಿ ಹಿಡಿದಂತೆ ಏನೋ ಬಿಟ್ಟಿದ್ದಾರೆ. ನೀವು ಮಾಡುತ್ತಿರುವುದೇ ಚಿತ್ರಾನ್ನ, ಯಾರಿಗೆ ಮೃಷ್ಟಾನ್ನ ಕೊಟ್ಟಿದ್ದೀರಿ? ಪ್ರಿಯಾಂಕ್ ಖರ್ಗೆ ನನ್ನನ್ನು ಆರ್‌ಎಸ್‌ಎಸ್, ಬಿಜೆಪಿಯವರನ್ನು ಆಟ ಆಡಿಸಿದಂತೆ ಅಲ್ಲ. ನನ್ನ ಹತ್ತಿರ ಆಟ ಆಡೋಕೆ ಆಗಲ್ಲ. ಮಿಸ್ಟರ್ ಪ್ರಿಯಾಂಕ್ ಖರ್ಗೆ ನಾನು ಕದ್ದು ಹೋಗುವವನಲ್ಲ, ಪಲಾಯನ ಮಾಡಲ್ಲ ಎಂದು ಗುಡುಗಿದರು.
ಇದೇ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ವಿರುದ್ದ ಗಂಭೀರ ಆರೋಪ ಮಾಡಿದ ಕುಮಾರಸ್ವಾಮಿ ಅವರು; ರೆಸಾರ್ಟ್‌ನಲ್ಲಿ ಕೂತು ಓಎಂಆರ್ ಶೀಟ್ ತಿದ್ದಿಸಿದ ಆ ಅಧಿಕಾರಿಯನ್ನು ಯಾಕೆ ದೆಹಲಿಯಿಂದ ದೇವನಹಳ್ಳಿ ರೆಸಾರ್ಟ್‌ಗೆ ಕರೆದುಕೊಂಡು ಬಂದು ಕೂರಿಸಿಕೊಂಡಿದ್ದಿರಿ. ಆಮೇಲೆ ಸಿಐಡಿ ಅಧಿಕಾರಿಗಳ ಮುಂದೆ ಹಾಜರುಪಡಿಸಿದ್ದೀರಿ. 24 ಮಂದಿಗೆ ಕೆಲಸ ಕೊಟ್ಟಿದ್ದೀರಲ್ಲ, ಯಾರು ಯಾರ ಸಂಬಂಧಿಕರು ಎಂಬುದನ್ನು ಹೇಳಿ. ಸಂಬಂಧಿಕರಿಗೆ ಕೆಲಸ ಕೊಡಿಸಿದ್ದೀವಿ ಎಂದು ಹೇಳಿದ್ದೀರಿ, ಅದರ ಬಗ್ಗೆ ಇವರ ಹೇಳಬೇಕಲ್ಲವೇ? ನನ್ನ ಬಗ್ಗೆ ಮಾತನಾಡಬೇಕಾದರೆ ಸರಿಯಾಗಿ ಮಾಹಿತಿ ಪಡೆದು ಮಾತನಾಡಿ. ನೀವು ಗೃಹ ಸಚಿವರು ಇದ್ದೀರಿ. ನಿರುದ್ಯೋಗಿ ಯುವಕರ ಜೊತೆ ಚೆಲ್ಲಾಟ ಆಡಬೇಡಿ. ಅವರ ಹಿತವನ್ನು ಬಯಸಿ ಅಷ್ಟೇ ನಾನು ಮಾತಾಡಿದ್ದೇನೆ. ನಿಮ್ಮ ಬಗ್ಗೆ ನನಗೆ ಯಾವ ರೀತಿಯ ಅಸೂಯೆಯು ಇಲ್ಲ ಎಂದು ಸಚಿವರು ಕೆಂಡ ಕಾರಿದರು.
ಒಎಂಆರ್ ಶೀಟ್‌ಗಳನ್ನ ಕಾರ್ಬನ್ ಬಳಸಿ ತಿಂದಿರುವ ಬಗ್ಗೆ ಬೀದಿ ಬೀದಿಯಲ್ಲಿ ಚರ್ಚೆಯಾಗುತ್ತಿದೆ. ತನಿಖೆಯಲ್ಲೂ ಕೂಡ ಅದು ಸಾಬೀತಾಗಿದೆ. ಫೋರೆನ್ಸಿಕ್ ಲ್ಯಾಬ್ ವರದಿಯಲ್ಲಿ ಕೂಡ ಅದು ರುಜುವಾತಾಗಿದೆ. ಸತ್ಯ ಹೀಗಿರಬೇಕಾದರೆ ನೀವು ಸಮರ್ಥಿಸಿಕೊಳ್ಳುವುದರಲ್ಲಿ ಅರ್ಥವಿನಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾಗಿ ಪ್ರಶ್ನಿಸಿದರು.
ಬನ್ನಿ, ನಿಮ್ಮೊಂದಿಗೆ ಎಲ್ಲಿ ಬೇಕಾದರೂ ಚರ್ಚೆಗೆ ಬರುತ್ತೇನೆ. ಪಲಾಯನ ಮಾಡುವ ವ್ಯಕ್ತಿ ನಾನಲ್ಲ. ಫಲಾಯನದ ಪ್ರಶ್ನೆಯೇ ಬರುವುದಿಲ್ಲ ಎಂದು ಕೇಂದ್ರ ಸಚಿವರು ಪ್ರಿಯಾಂಕ ಖರ್ಗೆಗೆ ಸವಾಲು ಹಾಕಿದರು.
ಇದನ್ನು ಇಲ್ಲಿಗೆ ನಿಲ್ಲಿಸುವ ಪ್ರಶ್ನೆಯೂ ಇಲ್ಲ. ನಾಳೆ ದೆಹಲಿಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ. ನಿರುದ್ಯೋಗಿ ಯುವಕರ ಹಿತವನ್ನು ಬಲಿ ಕೊಡುವುದಕ್ಕೆ ನಿಮ್ಮನ್ನು ಬಿಡುವುದಿಲ್ಲ ಎಂದು ಸಚಿವರು ಗುಡುಗಿದರು.
ರಾಜ ರಾಜಕಾರಣಕ್ಕೆ ವಾಪಸ್ ಬರುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವ ಕುಮಾರಸ್ವಾಮಿ ಅವರು; ನಾನು ರಾಜ್ಯ ರಾಜಕಾರಣಕ್ಕೆ ಬರುತ್ತೇನೆ, ಅದು ಈಗಲ್ಲ, 2028ರ ಸಾರ್ವತ್ರಿಕರ ಚುನಾವಣೆಗೆ ಬರುತ್ತೇನೆ. ಏನೋ ನಾನೇ ಮುಂದಿನ ಏಳೂವರೆ ವರ್ಷ ಗೂಟ ಹೊಡೆದುಕೊಂಡು ಇರುತ್ತೇನೆ ಅಂತಾರಲ್ಲ... ಆಗ ನೋಡೋಣ ಯಾರ ಗೂಟ ಇರುತ್ತೆ ಎಂದು, ಜನ ಗೂಟ ಕಿತ್ತಾಕುತ್ತಾರೆ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಯ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.