Greater Bengaluru Election: ಗ್ರೇಟರ್ ಬೆಂಗಳೂರು ಚುನಾವಣೆಗೆ ತಯಾರಿ; ಉಸ್ತುವಾರಿ ಸಮಿತಿ ರಚಿಸಿದ ಎಚ್.ಡಿ. ಕುಮಾರಸ್ವಾಮಿ
HD Kumaraswamy: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನೂತನ 5 ಪಾಲಿಕೆಗಳ ಚುನಾವಣೆಗಳ ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಉಸ್ತುವಾರಿ ಸಮಿತಿ ರಚನೆ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
-
ಬೆಂಗಳೂರು, ಅ.25: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bangalore Authority) ವ್ಯಾಪ್ತಿಯಲ್ಲಿ ಬರುವ ನೂತನ 5 ಪಾಲಿಕೆಗಳ ಚುನಾವಣೆಗಳ ವ್ಯಾಪ್ತಿಯಲ್ಲಿ ಪಕ್ಷದ ಬಲವರ್ಧನೆ ಹಾಗೂ ಸಂಘಟನೆ ದೃಷ್ಟಿಯಿಂದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು (HD Kumaraswamy) ಉಸ್ತುವಾರಿ ಸಮಿತಿ ರಚನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಪಕ್ಷದ ಶಾಸಕರ ಮತ್ತು ಕೋರ್ ಕಮಿಟಿ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ.
ಸಮಿತಿಯಲ್ಲಿ ಯಾರು ಯಾರು?
ಬೆಂಗಳೂರು ಕೇಂದ್ರ, ಪಶ್ಚಿಮ, ದಕ್ಷಿಣ, ಪೂರ್ವ ಮತ್ತು ಉತ್ತರ ನಗರ ಪಾಲಿಕೆಗಳ ಉಸ್ತುವಾರಿಗಳನ್ನಾಗಿ ಅರಕಲಗೂಡು ಶಾಸಕ ಎ. ಮಂಜು, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಟಿ.ಎ. ಶರವಣ, ಟಿ.ಎನ್. ಜವರಾಯಿಗೌಡ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಉಪ ಸ್ಪೀಕರ್ ಎಂ. ಕೃಷ್ಣಾರೆಡ್ಡಿ, ಕ್ಷೇತ್ರದ ಮಾಜಿ ಶಾಸಕರಾದ ಸುರೇಶ್ ಗೌಡ, ಎ. ಮಂಜುನಾಥ್, ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ ಅವರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ.
ಉಸ್ತುವಾರಿ ಸಮಿತಿಯ ಜವಾಬ್ದಾರಿಗಳು
ಹೊಸದಾಗಿ ರಚಿತವಾಗಿರುವ ನಗರ ಪಾಲಿಕೆಗಳಲ್ಲಿ ವಾರ್ಡ್‌ವಾರು ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಮುಖಂಡರು, ಮಾಜಿ ನಗರ ಪಾಲಿಕೆ ಸದಸ್ಯರುಗಳು ಮತ್ತು ಹಿಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಒಳಗೊಂಡ ಉಸ್ತುವಾರಿ ಸಮಿತಿಗಳನ್ನು ರಚಿಸಿ, ಈ ಸಮಿತಿಗಳ ಕಾರ್ಯಗಳನ್ನು ಕಾಲಾನುಕಾಲಕ್ಕೆ ವಿಮರ್ಶಿಸುವುದು. ಪಾಲಿಕೆವಾರು ಪಕ್ಷದ ಸದಸ್ಯತ್ವ ನೊಂದಣಿ ಅಭಿಯಾನ ಕಾರ್ಯಕ್ರಮ ರೂಪಿಸಿ, ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಸಭೆಗಳನ್ನು ವಾರ್ಡ್‌ವಾರು ಮತ್ತು ವಿಧಾನಸಭಾ ಕ್ಷೇತ್ರವಾರು ಅಯೋಜಿಸುವುದು.
ಪಾಲಿಕೆಗಳಲ್ಲಿ ವಾರ್ಡ್‌ವಾರು ಕಾರ್ಯಕರ್ತರ ಹಾಗೂ ಪ್ರಮುಖರ ಮುಖಂಡತ್ವವನ್ನು ಹಾಗೂ ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸುವ ಆಕಾಂಕ್ಷಿಗಳ ಸಾಮರ್ಥ್ಯವನ್ನು ಆಧರಿಸಿ, ವಾರ್ಡ್‌ವಾರು ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಪಕ್ಷದ ರಾಜ್ಯ ಕಚೇರಿಗೆ ಸಲ್ಲಿಸುವುದು.
ಈ ಸುದ್ದಿಯನ್ನೂ ಓದಿ | HD Kumaraswamy: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಮಾಡಿಸಬೇಡಿ, ಇದೆಲ್ಲಾ ಬೋಗಸ್ ಎಂದ ಎಚ್‌ಡಿಕೆ
ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟದ ಪಕ್ಷಗಳೊಂದಿಗೆ ಸಮನ್ವಯ ಮತ್ತು ಚುನಾವಣಾ ಹೊಂದಾಣಿಕೆ ಬಗ್ಗೆ ಸಮಿತಿಯು ರೂಪುರೇಷೆಗಳನ್ನು ರೂಪಿಸಿ ಕಾರ್ಯತಂತ್ರ ರೂಪಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉಸ್ತುವಾರಿ ಸಮಿತಿ ಸದಸ್ಯರಿಗೆ ಸೂಚಿಸಿದ್ದಾರೆ.