DK Shivakumar: ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಆಕ್ಷೇಪಣೆ ಸಲ್ಲಿಸಿ ಕೋರ್ಟ್ ತಡೆಯಾಜ್ಞೆ ತರಲಾಗುತ್ತಿದೆ: ಡಿಕೆಶಿ ಬೇಸರ
Bengaluru News: ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಬೆಳ್ಳಿ ಮಹೋತ್ಸವ-2025 ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ದೊಡ್ಡವರೆಲ್ಲಾ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಾ ಕೂತಿದ್ದಾರೆ. ಟೀಕೆ ಮಾಡುತ್ತಿರುವವರು ಯಾರೂ ಪರಿಹಾರ ಏನು ಎಂದು ಹೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
-
ಬೆಂಗಳೂರು, ಅ.25: ಬೆಂಗಳೂರಿನ ಸಂಚಾರ ದಟ್ಟಣೆ ಬಗ್ಗೆ ದೊಡ್ಡವರೆಲ್ಲರೂ ಟ್ವೀಟ್ ಮಾಡಿ ಟೀಕೆ ಮಾಡುತ್ತಿದ್ದಾರೆ. ಆದರೆ ಈ ಸಮಸ್ಯೆಗೆ ಪರಿಹಾರವೇನು ಎಂದು ಯಾರೊಬ್ಬರೂ ಹೇಳುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿನ ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ಬೆಳ್ಳಿ ಮಹೋತ್ಸವ-2025 ಕಾರ್ಯಕ್ರಮದಲ್ಲಿ ಅವರು ಶನಿವಾರ ಮಾತನಾಡಿದರು.
ನೀವು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ನಾವು ಸರ್ಕಾರದಲ್ಲಿ ಕೆಲಸ ಮಾಡುವಾಗ ಬರೀ ಪಿಐಎಲ್, ಬ್ಲ್ಯಾಕ್‌ಮೇಲ್ ನಡೆಯುತ್ತಿರುತ್ತದೆ. ಬೆಂಗಳೂರಿನಲ್ಲಿ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ರಸ್ತೆಗಳು ಮಾತ್ರ ಅದೇ ಗಾತ್ರದಲ್ಲಿವೆ. ನಾವು ಎಷ್ಟೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನೀಡಿದರೂ ಜನ ತಮ್ಮ ಕುಟುಂಬದ ಜತೆ ತಮ್ಮದೇ ವಾಹನಗಳಲ್ಲಿ ಓಡಾಡಲು ಇಚ್ಛಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಗರದ ಸಂಚಾರ ದಟ್ಟಣೆ ನಿವಾರಿಸುವುದಾದರೂ ಹೇಗೆ? ಮುಂಬೈ, ದೆಹಲಿಯಲ್ಲಿ ಇಷ್ಟೇ ಸಂಚಾರ ದಟ್ಟಣೆ ಇದ್ದರೂ ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ದೊಡ್ಡವರೆಲ್ಲಾ ಟ್ವೀಟ್ ಮಾಡಿಕೊಂಡು ಟೀಕೆ ಮಾಡುತ್ತಾ ಕೂತಿದ್ದಾರೆ. ಟೀಕೆ ಮಾಡುತ್ತಿರುವವರು ಯಾರೂ ಪರಿಹಾರ ಏನು ಎಂದು ಹೇಳುತ್ತಿಲ್ಲ ಎಂದು ಹೇಳಿದರು.
ಸಂಚಾರ ದಟ್ಟಣೆ ನಿವಾರಣೆಗೆ ನಾನು ಟನಲ್ ರಸ್ತೆ ಮಾಡಲು ಮುಂದಾಗಿದ್ದೇನೆ. 117 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೇವೆ. 2007ರಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು ಆಗ ಮಾಡಿದ್ದರೆ 2-3 ಸಾವಿರ ಕೋಟಿಯಲ್ಲಿ ಮುಕ್ತಾಯವಾಗುತ್ತಿತ್ತು. ಆದರೆ ಈಗ 27 ಸಾವಿರ ಕೋಟಿ ಬೇಕಾಗಿದೆ. ಇನ್ನು ಕೆ.ಜೆ. ಜಾರ್ಜ್ ಅವರ ಕಾಲದಲ್ಲಿ ಸ್ಟೀಲ್ ಬ್ರಿಡ್ಜ್ ಮಾಡಲು ಮುಂದಾದಾಗ ಗಲಾಟೆ ಮಾಡಿ ನಿಲ್ಲಿಸಿದರು. 120 ಕಿ.ಮೀ ಉದ್ದದಷ್ಟು ಎಲಿವೇಟೆಡ್ ಕಾರಿಡಾರ್, 44 ಕಿ.ಮೀ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆ ರೂಪಿಸಿದ್ದೆ. ಆ ಮೂಲಕ ಬೆಂಗಳೂರಿನ ಅಭಿವೃದ್ಧಿಗೆ 1.40 ಲಕ್ಷ ಕೋಟಿ ಮೊತ್ತದ ಯೋಜನೆಗೆ ಮುಂದಾಗಿದ್ದೇವೆ. ಕೆಲವರು ಇದನ್ನು ಹಣ ಬಾಚಲು ಈ ಯೋಜನೆ ಮಾಡುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ ಎಂದರು.
ಎಲ್ಲದಕ್ಕೂ ಪಿಐಎಲ್, ಆಕ್ಷೇಪಣೆ, ತಡೆಯಾಜ್ಞೆ
ಜನ ಟೀಕೆ ಮಾಡುತ್ತಿರುವವರಿಗೂ ಅಧಿಕಾರ ಕೊಟ್ಟಿದ್ದರು. ಆಗ ಯಾಕೆ ಯಾವುದೇ ಯೋಜನೆ ಮಾಡಲಿಲ್ಲ? ಮುಂಬೈ ಹಾಗೂ ದೆಹಲಿಯಲ್ಲಿಯೂ ಸುರಂಗ ರಸ್ತೆ ಮಾಡುತ್ತಿದ್ದಾರೆ. ಅಲ್ಲಿ ಇಲ್ಲದ ವಿರೋಧ ಇಲ್ಲಿ ಯಾಕೆ? ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಮಾಡಲು ಆಗುವುದಿಲ್ಲ. ಕಾರಣ ಯಾವುದೇ ಆಸ್ತಿಯನ್ನು ಮುಟ್ಟಲು ಸಾಧ್ಯವಿಲ್ಲ. ಎಲ್ಲಾ ಆಸ್ತಿಗಳ ಬೆಲೆ ಗಗನಕ್ಕೇರಿದೆ. ಪ್ರತಿ ಚದರಡಿ ಬೆಲೆ 2 ಸಾವಿರ ಆಗಿದೆ. ನೂತನ ಪರಿಹಾರ ನಿಯಮದ ಪ್ರಕಾರ ಡಬಲ್ ಪರಿಹಾರ ನೀಡಬೇಕು. ಒಂದು ಅಡಿಗೆ 40 ಸಾವಿರ ರೂ. ಪರಿಹಾರ ಕೊಟ್ಟು ರಸ್ತೆ ಅಗಲೀಕರಣ ಮಾಡಲು ಸಾಧ್ಯವೇ? ಹೀಗಾಗಿ ಟನಲ್ ರಸ್ತೆಯೊಂದೇ ಆಯ್ಕೆ ಎಂದು ಮೊದಲ ಹಂತದಲ್ಲಿ 45 ಕಿ.ಮೀ ಉದ್ದದ ರಸ್ತೆಗೆ ಟೆಂಡರ್ ಕರೆಯಲಾಗಿದೆ. ಇದರ ವಿರುದ್ಧ ಟೀಕೆ ಮಾಡಿ, ಪಿಐಎಲ್ ಹಾಕುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ 7 ವರ್ಷಗಳಿಂದ ಕಸ ಎತ್ತಲು ಅವಕಾಶ ನೀಡುತ್ತಿಲ್ಲ. ಕೋರ್ಟ್‌ನಲ್ಲಿ ಕೇಸ್ ಹಾಕಿ ತಡೆಹಿಡಿದಿದ್ದಾರೆ. ಎಂಟು ವರ್ಷದಿಂದ ಜಾಹೀರಾತು ಪ್ರಕಟಿಸಲು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಹೇಗೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಬಿಡಿಎನಲ್ಲಿ ಬಡಾವಾಣೆಯೊಂದರ ನಿವೇಶನ ಹಂಚಿಕೆಗೆ ಅರ್ಜಿ ಕರೆಯಲು ತಡೆಯಾಜ್ಞೆ ತಂದಿದ್ದಾರೆ. ಇದರಿಂದ ವರ್ಷಕ್ಕೆ 2 ಸಾವಿರ ಕೋಟಿ ನಷ್ಟವಾಗುತ್ತಿದೆ. ಲಿಟಿಗೇಷನ್ ಹಾಕುವಂತಹ ಕಕ್ಷಿದಾರರಿಗೆ ನೀವು ಮಾರ್ಗದರ್ಶನ ನೀಡಬೇಕು. ನಾವು ತಪ್ಪಿದ್ದರೆ ನೀವು ತಿದ್ದಿ. ನಾವು ತಿದ್ದುಕೊಳ್ಳುತ್ತೇವೆ. ಆದರೆ ಅಭಿವೃದ್ಧಿ ವಿಚಾರ ಬಂದಾಗ ನಾವು ಸರಿಯಾದ ರೀತಿಯಲ್ಲಿ ಚಿಂತನೆ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ನಾನು ಉದ್ಘಾಟಿಸಿದ ಸಹಕಾರಿ ಬ್ಯಾಂಕಿಗೆ ಈಗ ಬೆಳ್ಳಿ ಮಹೋತ್ಸವ
ನಾನು ಎಸ್.ಎಂ ಕೃಷ್ಣ ಅವರ ಜತೆಗೆ ಸಹಕಾರ ಸಚಿವನಾಗಿ ಇಲ್ಲಿಗೆ ಬಂದು ನ್ಯಾಯ ಮಿತ್ರ ಸಹಕಾರಿ ಬ್ಯಾಂಕ್ ಉದ್ಘಾಟನೆ ಮಾಡಿದ್ದೆ. ನಾನು ಉದ್ಘಾಟನೆ ಮಾಡಿದ ಬ್ಯಾಂಕಿನ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. 25 ವರ್ಷಗಳ ಕಾಲ ಯಶಸ್ವಿಯಾಗಿ, ಲಾಭದಾಯಕವಾಗಿ ಜನರ ಸೇವೆ ಮಾಡುವುದು ಅಷ್ಟು ಸುಲಭವಲ್ಲ ಎಂದರು.
ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ನಾನು ವಿದ್ಯಾರ್ಥಿ ನಾಯಕನಾಗಿದ್ದೆ. ಆಗ ಟಿಎಪಿಸಿಎಂಎಸ್‌ನಲ್ಲಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಿದ್ದೆ. ನಂತರ ನಾನು ಸಹಕಾರ ಮಂತ್ರಿಯಾದೆ. ಸಹಕಾರ ತತ್ವದಲ್ಲಿ ಕೆಲಸ ಮಾಡಿದ ಅನುಭವ ನನಗಿದೆ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದೇ ರೀತಿ, ನೀವು ಜತೆಗೂಡಿ ಕೆಲಸ ಮಾಡಿರುವುದಕ್ಕೆ ಈ ಸಂಸ್ಥೆ ಇಷ್ಟು ದೊಟ್ಟ ಮಟ್ಟಕ್ಕೆ ಬೆಳೆದಿದೆ. ಮುಂದೆ ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿದೆ ಎಂಬ ವಿಶ್ವಾಸವಿದೆ. ನೀವು ಸಮಾಜಕ್ಕೆ ನ್ಯಾಯ ನೀಡುವವರು. ನೀವು ಪರಿಶುದ್ಧ ಆಡಳಿತ ನಡೆಸುತ್ತೀರಿ ಎಂಬುದನ್ನು ಕಾಣಬಹುದಾಗಿದೆ ಎಂದರು.
ನಿಮಗೆ ಎಲ್ಲಾ ರೀತಿಯ ಸಹಾಯ ಮಾಡುವೆ, ನಮ್ಮ ಜತೆ ನಿಲ್ಲಿ
ವಕೀಲರ ಸಂಘಕ್ಕೆ 5 ಕೋಟಿ ಅನುದಾನ ಬೇಕು ಎಂದಿದ್ದರು. ಈ ವಿಚಾರವಾಗಿ ಆದೇಶ ಹೊರಡಿಸಲಾಗಿದೆ. ಇನ್ನು ನಿವೇಶನ ಬೇಕು ಎಂದು ಕೇಳುತ್ತಿದ್ದಾರೆ. ಆ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಅರ್ಜಿ ಹಾಕಲಿ, ಸಿಎ ನಿವೇಶನ ನೀಡಲು ಸಿದ್ಧವಿದ್ದೇವೆ. ಉಳಿದಂತೆ ವಿಮೆ ವಿಚಾರವಾಗಿ ಇರುವ ಬೇಡಿಕೆ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿ ತೀರ್ಮಾನ ಮಾಡೋಣ. ಅಧಿಕಾರದಿಂದ ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಬಹುದು, ಹೆಚ್ಚು ಶತ್ರುಗಳನ್ನು ಮಾಡಿಕೊಳ್ಳಬಹುದು. ಹೆಚ್ಚು ಜನರಿಗೆ ನೆರವಾಗಬಹುದು, ಹೆಚ್ಚು ಜನರನ್ನು ನಾಶ ಮಾಡಬಹುದು. ನಾವು ಅಧಿಕಾರಕ್ಕೆ ಬಂದಿರುವುದು ಹೆಚ್ಚು ಜನರಿಗೆ ಸಹಾಯ ಮಾಡಲು. ನಿಮಗೆ ಅಗತ್ಯ ನೆರವು ನೀಡಲು ಸಿದ್ಧ. ನೀವು ಕೂಡ ನಮ್ಮ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಈಗ ನನ್ನಿಂದ ನೆರವು ಪಡೆದು ಚುನಾವಣೆ ಸಮಯದಲ್ಲಿ ಬೇರೆಡೆ ತಿರುಗ ಬಾರದು. ಉಪಕಾರ ಸ್ಮರಣೆ ಇರಲಿ ಎಂದು ತಿಳಿಸಿದರು.
ನನಗೆ ದಿನ ನಿತ್ಯ ನ್ಯಾಯಾಲಯದಿಂದ ನೋಟೀಸ್ ಬರುತ್ತಲೇ ಇರುತ್ತದೆ ಅದನ್ನು ನೋಡಿಕೊಳ್ಳಲಾದರೂ ನೀನು ಕಾನೂನು ವ್ಯಾಸಂಗ ಮಾಡು ಎಂದು ನನ್ನ ಮಗನನ್ನು ಕಾನೂನು ಕಾಲೇಜಿಗೆ ಸೇರಿಸಿದ್ದೇನೆ. ಅವನಿಗೆ ರಾಜಕೀಯ ಬೇಡ ಎಂದಿದ್ದೇನೆ. ಅವನು ನಿಮ್ಮ ಜತೆ ಬರುತ್ತಾನೆ ಎಂದು ತಿಳಿಸಿದರು.
ಉತ್ತಮ ಆಡಳಿತಕ್ಕಾಗಿ ಜಿಬಿಎ ರಚನೆ
ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಹೀಗಾಗಿ ಆಡಳಿತ ಸುಲಭವಾಗಲಿ ಎಂದು ಜಿಬಿಎ ಮಾಡಿ ಐದು ಪಾಲಿಕೆ ಮಾಡಿದ್ದೇನೆ. ಆ ಮೂಲಕ ಬೆಂಗಳೂರಿನ ನಿರ್ವಹಣೆಗೆ ಐವರು ಕಮಿಷನರ್ ನೇಮಕ ಮಾಡಲಾಗಿದೆ. ಬೆಂಗಳೂರು ಕಮಿಷನರ್ ವೆಚ್ಚದ ಮಿತಿಯನ್ನು 1 ಕೋಟಿಗೆ ಮಿತಿ ಇತ್ತು. ಈಗ ನಾವು ಅದನ್ನು 3 ಕೋಟಿಗೆ ಏರಿಕೆ ಮಾಡಿದ್ದು, ಒಟ್ಟು ಐದು ಕಮಿಷನರ್ ಗಳಿಂದ 15 ಕೋಟಿಗೆ ವಿಸ್ತರಣೆ ಮಾಡಲಾಗಿದೆ. ಮೇಯರ್ ವೆಚ್ಚದ ಮಿತಿ 5 ಕೋಟಿ ಇತ್ತು. ಇದನ್ನು 10 ಕೋಟಿಗೆ ಹೆಚ್ಚಿಸಿ ಐದು ಪಾಲಿಕೆಗಳಿಂದ 50 ಕೋಟಿಗೆ ವಿಸ್ತರಣೆ ಮಾಡಲಾಗಿದೆ. ಉತ್ತಮ ಆಡಳಿತ ನೀಡಲು ಇಂತಹ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ವಿವರಿಸಿದರು.
ಈ ಸುದ್ದಿಯನ್ನೂ ಓದಿ | DK Shivakumar: ಬಿಜೆಪಿಯವರಿಗೆ ಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚು: ಡಿ.ಕೆ. ಶಿವಕುಮಾರ್
ವಕೀಲರಿಗೆ ನಿಮ್ಮ ಮೌಲ್ಯವೇ ಅಲಂಕಾರ, ಸಂವಿಧಾನವೇ ನಿಮಗೆ ಆಭರಣ. ಮಾತೇ ನಿಮಗೆ ಭೂಷಣ. ಪ್ರತಿ ಹಂತದಲ್ಲಿ ನೀವು ಸಂವಿಧಾನ ಕಾಪಾಡಿಕೊಂಡು ಬಂದಿದ್ದೀರಿ. ನಮ್ಮಂತಹ ಕಕ್ಷಿದಾರರು ನಿಮ್ಮನ್ನು ದೇವರೆಂದು ಭಾವಿಸಿಕೊಂಡು ನಿಮ್ಮ ಮುಂದೆ ಬಂದು ನಿಲ್ಲುತ್ತೇವೆ. ನಮ್ಮ ಕಷ್ಟ ಹೇಳಿಕೊಳ್ಳುತ್ತೇವೆ. ನ್ಯಾಯ ಒದಗಿಸಿ ಎಂದು ಕೇಳಿಕೊಳ್ಳುತ್ತೇವೆ. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣ ಬೇರೊಂದಿಲ್ಲ. ಹೀಗಾಗಿ ನೀವು ನಿಮ್ಮ ಘನತೆ ಕಳೆದುಕೊಳ್ಳಬಾರದು. ನೀವು ಸಮಾಜಕ್ಕೆ ನ್ಯಾಯ ಒದಗಿಸುತ್ತೀರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.