ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀವಿಲ್ಲದಿದ್ರೂ ಆರೋಗ್ಯ ಇಲಾಖೆ ನಡೆಯುತ್ತದೆ, ಖಾದರ್ ಅವರೇ ರಾಜೀನಾಮೆ ಕೊಟ್ಟುಬಿಡಿ: ಆರ್‌.ಅಶೋಕ್‌ ಕಿಡಿ

ASHA workers protest: ಹತ್ತು-ಹದಿನೈದು ದಿನ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಏನೂ ನಷ್ಟವಾಗಿಲ್ಲ, ಅವರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎನ್ನುವ ಮೂಲಕ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆಶಾ ಕಾರ್ಯಕರ್ತೆಯರ ಸ್ವಾಭಿಮಾನಕ್ಕೆ ಮತ್ತೊಮ್ಮೆ ಘಾಸಿ ಉಂಟು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಆಶಾ ಕಾರ್ಯಕರ್ತೆಯರ ಶ್ರಮ, ತ್ಯಾಗ ಮತ್ತು ಹೋರಾಟವನ್ನು ಹಗುರವಾಗಿ ಕಾಣುವ ಈ ಉದ್ಧಟತನದ ಮಾತುಗಳು ನಾಚಿಕೆಗೇಡು. "ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ ಕಂಠಿಹಾರ ಕೊಡಲು ಆಗುವುದಿಲ್ಲ" ಎಂಬ ಉದ್ಧಟತನದ ಮಾತಾಡಿ ಆಶಾ ಕಾರ್ಯಕರ್ತೆಯರಿಗೆ ಅವಮಾನ ಮಾಡಿದ್ದ ಸಚಿವ ನರೇಂದ್ರಸ್ವಾಮಿ ಅವರ ಸಾಲಿಗೆ ಈಗ ಮತ್ತೊಬ್ಬ ಸಚಿವರು ಸೇರಿಕೊಂಡಿದ್ದಾರೆ. ಆರೋಗ್ಯ ಸಚಿವ ಯು.ಟಿ.ಖಾದರ್‌ (UT Khader) ಅವರೇ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಸ್ವಾಮಿ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹತ್ತು-ಹದಿನೈದು ದಿನ ಆಶಾ ಕಾರ್ಯಕರ್ತೆಯರು ಕೆಲಸ ಮಾಡದಿದ್ದರೂ ಏನೂ ನಷ್ಟವಾಗಿಲ್ಲ, ಅವರು ಇಲ್ಲದಿದ್ದರೂ ಆರೋಗ್ಯ ಸೇವೆ ನಡೆಯುತ್ತದೆ ಎನ್ನುವ ಮೂಲಕ ಆರೋಗ್ಯ ಸಚಿವ ಯುಟಿ ಖಾದರ್ ಅವರು ಹಳ್ಳಿಹಳ್ಳಿಗೂ, ಮನೆಮನೆಗೂ ಓಡಾಡಿ ಗರ್ಭಿಣಿಯರು, ಶಿಶುಗಳು, ವೃದ್ಧರು ಮತ್ತು ರೋಗಿಗಳ ಜೀವ ಉಳಿಸುವ ಲಕ್ಷಾಂತರ ಆಶಾ ಕಾರ್ಯಕರ್ತೆಯರ ಸ್ವಾಭಿಮಾನಕ್ಕೆ ಮತ್ತೊಮ್ಮೆ ಘಾಸಿ ಉಂಟು ಮಾಡಿದ್ದಾರೆ.

ಕೋವಿಡ್ ಸಮಯದಲ್ಲಿ ಮನೆಯಲ್ಲಿ ಬೆಚ್ಚಗೆ ಅಡಗಿ ಕೂತಿದ್ದ ಕಾಂಗ್ರೆಸ್ ನಾಯಕರಿಗೆ ಪ್ರಾಣದ ಹಂಗು ತೊರೆದು ದುಡಿದ ಈ ತಾಯಂದಿರು, ಸಹೋದರಿಯರ ಶ್ರಮದ ಬೆಲೆ ಹೇಗೆ ತಾನೇ ಗೊತ್ತಾಗಬೇಕು?, ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡುವವರನ್ನು ಕಡೆಗಣಿಸಿ, "ನೀವು ಇಲ್ಲದಿದ್ದರೂ ನಡೆಯುತ್ತದೆ" ಎಂಬ ಅಹಂಕಾರದ ಭಾಷೆ ಬಳಸುವುದು ನಿಮ್ಮ ಸರ್ಕಾರದ ಅಧಿಕಾರದ ಮದ ಯಾವ ಪರಾಕಾಷ್ಠೆಗೆ ತಲುಪಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಟೀಕಿಸಿದರು.

ಆರೋಗ್ಯ ಸಚಿವ ಯು.ಟಿ.ಖಾದರ್ ಅವರೇ, ನೀವಿಲ್ಲದಿದ್ದರೂ ಆರೋಗ್ಯ ಇಲಾಖೆ ನಡೆಯುತ್ತೆ ಸ್ವಾಮಿ. ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (PHC), ವೈದ್ಯರು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯ ನಿಭಾಯಿಸುತ್ತಾರೆ. ಆಶಾ ಕಾರ್ಯಕರ್ತೆಯರ ಶ್ರಮವೇ ಬೇಡ ಎನ್ನುವುದಾದರೆ, ಹಾಗಾದರೆ ತಾವೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಆಶಾ ಕಾರ್ಯಕರ್ತೆಯರ ಕಣ್ಣೀರು ಮತ್ತು ಹೋರಾಟಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಸರ್ಕಾರ ತಕ್ಷಣ ತಮ್ಮ ಉದ್ಧಟತನದ ಮಾತನ್ನು ಹಿಂಪಡೆದು, ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.