ಬೆಂಗಳೂರು, ಮಾ.18: ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯದಂತೆ ತಡೆಯಲು ಕಾನೂನುಬದ್ಧ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹಿಂದೂ ಧರ್ಮದ ಪರಂಪರೆಯ ಪ್ರಕಾರ ಹಸುವನ್ನು ಗೋಮಾತೆ ಎಂದು ಪೂಜಿಸಲಾಗುತ್ತದೆ. ಗೋವುಗಳನ್ನು ಧಾರ್ಮಿಕವಾಗಿ ದೇವತೆಯ ಸ್ವರೂಪವೆಂದು ಗೌರವಿಸಲಾಗುತ್ತದೆ. ಭಗವಾನ್ ಶ್ರೀಕೃಷ್ಣನು ಸಹ ಗೋಮಾತೆಯ ರಕ್ಷಣೆಗೆ ಹಾಗೂ ಪಾಲನೆಗೆ ಮಹತ್ವ ನೀಡಿದ್ದಾನೆ. ಇದರ ಜತೆಗೆ ಗೋವುಗಳು ಕೃಷಿ ಹಾಗೂ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರವಾಗಿವೆ. ಆದರೆ, ಕೆಲವು ಸಂದರ್ಭಗಳಲ್ಲಿ, ವಿಶೇಷವಾಗಿ ರಂಜಾನ್ ಹಬ್ಬದ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯದಂತೆ ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ರಾಜ್ಯ ಸರ್ಕಾರ ಈಗಾಗಲೇ ಗೋಹತ್ಯೆಯನ್ನು ತಡೆಯಲು ಕಾನೂನುಗಳನ್ನು ಜಾರಿಗೆ ತಂದಿದೆ. ಆದಾಗ್ಯೂ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಬೇಡಿಕೆಗಳು
- ರಂಜಾನ್ ಹಬ್ಬದ ಸಮಯದಲ್ಲಿ ರಾಜ್ಯದಾದ್ಯಂತ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯದಂತೆ ವಿಶೇಷ ಪೊಲೀಸ್ ನಿಗಾ ವ್ಯವಸ್ಥೆ ರೂಪಿಸಬೇಕು.
- ರಾಜ್ಯದ ಪ್ರಮುಖ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಚೆಕ್ ಪೋಸ್ಟ್‌ಗಳಲ್ಲಿ ಪಶುಸಾಗಾಟದ ವಾಹನಗಳ ಪರಿಶೀಲನೆಯನ್ನು ಕಡ್ಡಾಯವಾಗಿ ಮಾಡಬೇಕು.
- ಅಧಿಕೃತ ಪರವಾನಗಿ ಹೊಂದಿರುವ ಕಸಾಯಿಖಾನೆಗಳ ಹೊರತಾಗಿ ಬೇರೆಡೆ ಪ್ರಾಣಿಗಳ ವಧೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು.
- ಹಬ್ಬದ ನಿಮಿತ್ತವಾಗಿ ತಾತ್ಕಾಲಿಕ ಕಸಾಯಿಖಾನೆಗಳನ್ನು ನಿರ್ಮಿಸಲು ಯಾವುದೇ ಅನುಮತಿ ನೀಡಬಾರದು.
- ಅಕ್ರಮ ಗೋಸಾಗಾಟ ಅಥವಾ ಗೋಹತ್ಯೆ ನಡೆಸುತ್ತಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು.
- ಪೊಲೀಸ್ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಸಮನ್ವಯದಿಂದ ಕಾರ್ಯನಿರ್ವಹಿಸಿ ವಿಶೇಷ ಪರಿಶೀಲನಾ ತಂಡಗಳನ್ನು ರಚಿಸಬೇಕು.
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾನೂನುಬದ್ಧ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚನೆ ನೀಡಬೇಕು ಎಂದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಸಲ್ಲಿಸಿರುವ ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಜಿಬಿಎ ವೆಬ್‍ಸೈಟ್ ಸರಿಪಡಿಸಲು ಮುಖ್ಯ ಆಯುಕ್ತರಿಗೆ ಬಿಜೆಪಿ ಮನವಿ
ಈ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಜ್ಯ ಸಂಯೋಜಕ ಮೋಹನ್ ಗೌಡ, ಶ್ರೀರಾಮ ಸೇನೆಯ ಸುಂದ್ರೇಶ್ ನರ್ಗಲ್, ಹಿಂದೂ ಮುಖಂಡರಾದ ಸಂತೋಷ್ ಕರ್ತಾಳ್, ತ್ಯಾಗರಾಜ್, ಡಾ. ನಾಗೇಂದ್ರಪ್ಪ ಸೇರಿದಂತೆ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.