ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾನು ಸ್ಟ್ರೀಟ್ ಫೈಟರ್, ಹೋರಾಟ ಮಾಡೋದೇಗೆ ಗೊತ್ತಿದೆ; ಕೆಪಿಸಿಸಿ ಅಧ್ಯಕ್ಷ ಸ್ಥಾನ ನನಗೆ 6 ವರ್ಷ ಸಾಕು ಎಂದ ಡಿಕೆಶಿ

DK Shivakumar: ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಪರಮೇಶ್ವರ್ ಅವರ ದಾಖಲೆ ಮುರಿಯುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌, ʼಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನಾವೆಲ್ಲಾ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾದವರು. ನಾನು ಪರಮೇಶ್ವರ್ ಅವರು, ಎಚ್.ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಎಲ್ಲರೂ ಮಂತ್ರಿಯಾದವರೇ. ನಾವೀಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿʼ ಎಂದು ಹೇಳಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಮಾ.3: ನಾನು ಸ್ಟ್ರೀಟ್ ಫೈಟರ್, ಹೇಗೆ ಹೋರಾಟ ಮಾಡಬೇಕು ಎಂದು ನನಗೆ ಗೊತ್ತಿದೆ. ನನ್ನ ಹೋರಾಟ ಅಧಿಕಾರಕ್ಕಾಗಿ ಅಲ್ಲ. ಪಕ್ಷದ ಒಳಗಲ್ಲ, ನನ್ನ ಹೋರಾಟ ಪಕ್ಷದ ಹೊರಗೆ. ನಾನು ಸುಮ್ಮನಾಗಿದ್ದೇನೆ ಎಂದು ಭಾವಿಸಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಕಾರ್ಮಿಕರಿಂದ ಮೂರು ಪಟ್ಟು ಟಿಕೆಟ್ ಹಣ ಸುಲಿಗೆ ಮಾಡುತ್ತಿದೆ ಎಂದು ಗೊತ್ತಾದ ತಕ್ಷಣ ಪಕ್ಷದ ವತಿಯಿಂದ 1 ಕೋಟಿ ಚೆಕ್ ವಿತರಣೆ ನೀಡಲು ಮುಂದಾದವನು. ನಾನೇ ಖುದ್ದಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂತು ಸಂಜೆ ವೇಳೆಗೆ ಇಡೀ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದ್ದೆ. ಉಚಿತ ಬಸ್ ವ್ಯವಸ್ಥೆ ಜತೆಗೆ ರೈಲ್ವೇ ದರ ಕಡಿಮೆ ಮಾಡಿಸಿದವನು. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಜಿಲ್ಲಾ ಸಚಿವರು ಹೆದರಿ ಬಂದು ಕೇವಲ ಇಬ್ಬರು ಮಾತ್ರ ಮೃತಪಟ್ಟಿದ್ದಾರೆ ಎಂದಾಗ, ನಾನು ಆ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದೆ. ಅವರಿಗೆಲ್ಲಾ ಈಗ ಕೆಲಸವನ್ನು ಕೊಡಿಸುತ್ತಿದ್ದೇನೆ. ಈ ವಿಚಾರವಾಗಿ ವಿಧಾನಸಭೆಯಲ್ಲಿ ಏನು ಮಾತನಾಡಿದ್ದೇನೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಹೀಗೆ ಹೋರಾಟ ಮಾಡಿಕೊಂಡು ಬಂದವನುʼ ಎಂದರು.

ಬಜೆಟ್ ನಂತರ ಕ್ರಾಂತಿ ಮಾಡುತ್ತೀರಾ ಎಂದಾಗ, ‘ನಾನು ಯಾಕೆ ಕ್ರಾಂತಿ ಮಾಡಲಿ. ನನಗೆ ನನ್ನ ಮೇಲೆ ನಂಬಿಕೆ ಇದೆ. ನಾನು ಭರವಸೆ ಮೇಲೆ ಬದುಕುತ್ತೇನೆ’ ಎಂದರು.

DK Shivakumar: ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ: ಡಿ.ಕೆ. ಶಿವಕುಮಾರ್

ನಾನು ಯಾವುದೇ ಪ್ರಯತ್ನ ಮಾಡಬೇಕಿಲ್ಲ

ಪ್ರಯತ್ನ, ಪ್ರಾರ್ಥನೆ ಎರಡೂ ಫಲ ನೀಡುವುದೇ ಎಂದು ಕೇಳಿದಾಗ, ‘ನಾನು ಪ್ರಯತ್ನ ಮಾಡುವ ಅಗತ್ಯವಿಲ್ಲ. ನನಗೆ ಯಾವಾಗ ಯಾವುದು ಬರಬೇಕೋ ಅದು ಬರುತ್ತದೆ. ಆ ಆತ್ಮವಿಶ್ವಾಸ ನನಗಿದೆ. ಸಧ್ಯದಲ್ಲೇ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ’ ಎಂದು ತಿಳಿಸಿದರು.

ನನ್ನಿಂದ ಪಕ್ಷಕ್ಕೆ, ಕಾರ್ಯಕರ್ತರಿಗೆ ತೊಂದರೆ ಆಗಬಾರದು

ನನ್ನ ಮತ್ತು ಶಿವಕುಮಾರ್ ಅವರ ನಡುವೆ ಹಾಲು-ಜೇನು ಸಂಬಂಧವಿದೆ ಎಂಬ ಸಿಎಂ ಪತ್ರಿಕಾ ಪ್ರಕಟಣೆ ಬಗ್ಗೆ ಕೇಳಿದಾಗ, ‘ನಾನು ಇದುವರೆಗೂ ಸಿಎಂ ವಿಚಾರವಾಗಿ ಮಾತನಾಡಿಲ್ಲ. ನನ್ನ ವಿಚಾರದಲ್ಲಿ ನಾನುಂಟು, ಸಿಎಂ ಉಂಟು, ಪಕ್ಷದ ಹೈಕಮಾಂಡ್ ಉಂಟು. ಕೆಲವು ನಿರ್ಧಾರ ಕೈಗೊಂಡಾಗ ನಾನು ಭಾಗಿಯಾಗಿದ್ದೆ ಎಂದು ಹೇಳಿರುವುದು ಬಿಟ್ಟು ಉಳಿದಂತೆ ನಾನು ಯಾವುದೇ ಹೇಳಿಕೆ ನೀಡಿಲ್ಲ. ಸಿಎಂ ಹುದ್ದೆ ಖಾಲಿಯಾಗುತ್ತದೆ. ಸಿಎಂ ಹುದ್ದೆಯಿಂದ ಇಳಿಯುತ್ತಾರೆ. ದಲಿತರಿಗೆ ಸಿಎಂ ಹುದ್ದೆ ಸಿಗಬೇಕು, ಬೇರೆಯವರಿಗೆ ಸಿಗಬೇಕು ಎಂದು ಎಲ್ಲಿಯೂ ಹೇಳಿಲ್ಲ. ಸಿಎಂ ಹುದ್ದೆ ಖಾಲಿ ಮಾಡಿಸಲು ಹೊರಟಿರುವವರು ಬೇರೆಯವರು. ಅವರು ಮಾತಾಡಿದ್ದಾರೆ. ಸಿಎಂ ಸ್ಥಾನ ಖಾಲಿ ಆದರೆ ಅಲ್ಲವೇ ಬೇರೆಯವರಿಗೆ ನೀಡುವುದು. ನಾನು ಪಕ್ಷದ ಅಧ್ಯಕ್ಷನಾಗಿ ನನಗೆ ನನ್ನ ಜವಾಬ್ದಾರಿಗಳು ತಿಳಿದಿದೆ. ಈ ಪಕ್ಷಕ್ಕೆ ನನ್ನಿಂದ ಯಾವುದೇ ಕಾರಣಕ್ಕೂ ಧಕ್ಕೆಯಾಗಬಾರದು, ನನ್ನಿಂದ ಶಿಸ್ತು ಉಲ್ಲಂಘನೆ ಆಗಬಾರದು. ಅಧ್ಯಕ್ಷ ಸ್ಥಾನದಲ್ಲಿ ಕೂತು, ಆ ಸ್ಥಾನಕ್ಕೆ ಅನ್ಯಾಯ ಮಾಡಬಾರದು. ನನ್ನಿಂದ ತಪ್ಪಾಗಿದೆ ಎಂದು ಬೇರೆಯವರು ನನ್ನ ಕಡೆ ಬೆರಳು ತೋರಬಾರದು. ನಾನು ಬಹಳ ತಾಳ್ಮೆಯಿಂದ ಇದ್ದೇನೆ. ಏನೆಲ್ಲಾ ಆಗುತ್ತಿದೆ ಎಂದು ನನಗೆ ಅರಿವಿದೆ. ನಾವು ಕಟ್ಟಿ ಬೆಳೆಸಿರುವ ಪಕ್ಷ ಇದು. ನನ್ನಂತೆ ಸುಮಾರು ಲಕ್ಷಾಂತರ ಜನ ಕಾರ್ಯಕರ್ತರಿಗೆ ತೊಂದರೆಯಾಗಬಾರದು. ಅವರೆಲ್ಲಾ ಸೇರಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಸ್ವಾರ್ಥಕ್ಕಾಗಿ ನಾನು ಬ್ಲಾಕ್ ಮೇಲೆ ಮಾಡುವುದಿಲ್ಲ. ಪಕ್ಷಕ್ಕೆ ತೊಂದರೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ನಿಮ್ಮಿಬ್ಬರ ನಡುವಿನ ಸಂಬಂಧ ಹಾಲು ಜೇನಿನ ಸಂಬಂಧವೇ ಎಂದಾಗ, ‘ಖಂಡಿತಾ, 2023ರ ಚುನಾವಣೆ ಮಾತ್ರವಲ್ಲ, 2028ರ ಚುನಾವಣೆಯಲ್ಲೂ ಇದು ಹಾಗೇ ಇರುತ್ತದೆ’ ಎಂದರು.

ಬೇರೆಯವರಿಗೆ ಏನಾದ್ರೂ ನಮ್ಮ ಮಧ್ಯೆ ಹುಳಿ ಹಿಂಡಿ ಶಿವಕುಮಾರ್ ಒಲಿಸಿಕೊಳ್ಳುವ ದುರಾಲೋಚನೆ ಇದ್ದರೆ, ಅದು ಹಗಲುಗನಸು ಎಂಬ ಸಿಎಂ ಹೇಳಿಕೆ ಬಗ್ಗೆ ಕೇಳಿದಾಗ, ‘ಅದು ಅವರ ಅನುಭವದ ಮಾತು. ಅವರು ನನ್ನನ್ನು ನೋಡಿದ್ದಾರೆ. ಅವರು ಬೇರೆ ಪಕ್ಷದಲ್ಲಿದ್ದಾಗಲೂ ನನ್ನನ್ನು ನೋಡಿದ್ದಾರೆ. ನಮ್ಮ ಪಕ್ಷಕ್ಕೆ ಬಂದ ನಂತರವೂ ನನ್ನನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. ನಾನು ಏನು ಎಂಬುದು ಅವರಿಗೆ ಗೊತ್ತಿದೆʼ ಎಂದು ಹೇಳಿದರು.

ಶಾಸಕರ ಹೇಳಿಕೆ ನೋಡಿದರೆ ಇದಕ್ಕೆ ತದ್ವಿರುದ್ಧವಾಗಿದೆ ಎಂದಾಗ, ʼಶಾಸಕರುಗಳಿಗೆ ನನಗೆ ಒಳ್ಳೆಯದಾಗಬೇಕು ಎಂಬ ಆಸೆ ಇದ್ದರೆ ಅವರಿಗೆ, ನೀವೆಲ್ಲರೂ ಸುಮ್ಮನಿದ್ದು ಬಿಡಿ ಎಂದು ಮನವಿ ಮಾಡುತ್ತೇನೆʼ ಎಂದರು.

ದೆಹಲಿಗೆ ಹೋಗಿ ಬಂದ ನಂತರ ನೀವು ಸಿಎಂ ಕುರ್ಚಿ ಬಗ್ಗೆ ಯಾವುದೇ ಮಾತು ಆಡುತ್ತಿಲ್ಲ ಎಂದು ಕೇಳಿದಾಗ, ʼಇದಕ್ಕೆ ಸಮಯವೇ ಉತ್ತರ ನೀಡಲಿದೆ. ಕಾಲ ನಿರ್ಣಯ ಮಾಡುತ್ತದೆʼ ಎಂದರು.

ಸಿಎಂ ಹುದ್ದೆ ವಿಚಾರವಾಗಿ ಇತ್ತೀಚೆಗೆ ಖರ್ಗೆ ಅವರು, ರಾಹುಲ್ ಗಾಂಧಿ ಹಾಗೂ ವೇಣುಗೋಪಾಲ್ ಅವರು ದೆಹಲಿಯಲ್ಲಿ ಚರ್ಚೆ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಕೇಳಿದಾಗ, ʼನನಗೆ ಈ ಬಗ್ಗೆ ಗೊತ್ತಿಲ್ಲ. ನಾನು ಅವರ ಬಳಿ ಮಾತನಾಡಿಲ್ಲ, ಈ ವಿಚಾರವಾಗಿ ಕೇಳಿಲ್ಲʼ ಎಂದು ಅವರು ಹೇಳಿದರು.

ನನಗೆ ಆರು ವರ್ಷ ಸಾಕು

ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಪರಮೇಶ್ವರ್ ಅವರ ದಾಖಲೆ ಮುರಿಯುತ್ತೀರಾ ಎಂದು ಕೇಳಿದಾಗ, ʼಹೊಸ ರಕ್ತ ಬರಬೇಕು. ಹೊಸ ಆಲೋಚನೆ ಬರಬೇಕು. ನಾವೆಲ್ಲಾ ಮೊದಲ ಬಾರಿ ಶಾಸಕರಾದಾಗಲೇ ಮಂತ್ರಿಯಾದವರು. ನಾನು ಪರಮೇಶ್ವರ್ ಅವರು, ಎಚ್.ಕೆ ಪಾಟೀಲ್, ರಾಮಲಿಂಗಾ ರೆಡ್ಡಿ, ಎಲ್ಲರೂ ಮಂತ್ರಿಯಾದವರೇ. ನಾವೀಗ ಹಿರಿಯ ನಾಗರಿಕರಾಗಿದ್ದೇವೆ. ಹೊಸಬರು ಬರಲಿʼ ಎಂದರು.

ಹೊಸ ರಕ್ತಕ್ಕೆ ಅವಕಾಶ ನೀಡಲು ನೀವು ಆ ಸ್ಥಾನ ಬಿಡಬೇಕು. ಆ ಸ್ಥಾನ ಬಿಟ್ಟರೆ ನಿಮಗೆ ಬೇರೆ ಯಾವ ಸ್ಥಾನ ಇದೆ ಎಂದು ಕೇಳಿದಾಗ, ʼನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆʼ ಎಂದರು. ಪಕ್ಷ ಮತ್ತು ಸರ್ಕಾರದಲ್ಲಿ ಹೊಸಬರು ಬರಬೇಕಾ ಎಂದಾಗ, ʼಖಂಡಿತಾ, ನನಗೆ ಆರು ವರ್ಷ ಸಾಕುʼ ಎಂದರು.

ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಭೋಜನ ಕೂಡ ಇಟ್ಟುಕೊಂಡಿದ್ದೀರಾ ಎಂದು ಕೇಳಿದಾಗ, ʼಮಾರ್ಚ್ 10ರಂದು ಭೋಜನ ಕೂಟ ಇಟ್ಟುಕೊಂಡಿದ್ದೇನೆʼ ಎಂದು ತಿಳಿಸಿದರು.

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾಡಿರುವ ದೂರವಾಣಿ ಕದ್ದಾಲಿಕೆ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ʼ145 ಶಾಸಕರು, 30 ವಿಧಾನ ಪರಿಷತ್ ಸದಸ್ಯರು ಸೇರಿದಂತೆ 175 ಶಾಸಕರೂ ಸೇರಿ ಎಲ್ಲರಿಗೂ ಎಲ್ಲಾ ಸ್ಥಾನ ಸಿಗಬೇಕು ಎಂಬ ಆಸೆ ಇರುತ್ತದೆ. ಮೋದಿ ಅವರು ಶಾಸಕರಾಗದೇ ಸಿಎಂ ಆಗಿ ಈಗ ಪ್ರಧಾನಿ ಆಗಿಲ್ಲವೇ. ನೀವು ಬೇಕಾದರೆ ಪ್ರಯತ್ನ ಮಾಡಿʼ ಎಂದು ಚಟಾಕಿ ಹಾರಿಸಿದರು.

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ರಸ್ತೆ ಬದಿ, ವಿಭಜಕಗಳ ಗಿಡಗಳ ಸೂಕ್ತ ನಿರ್ವಹಣೆಗೆ ಆದೇಶ

ಇಂತಹ ಸಂದರ್ಭದಲ್ಲಿ ಈ ವಿಚಾರಗಳನ್ನು ಎತ್ತುತ್ತಿರುವ ಹಿಂದಿನ ಉದ್ದೇಶವೇನು ಎಂದು ಕೇಳಿದಾಗ, ʼನನಗೆ ಯಾವುದೇ ಮಾಹಿತಿ ಇಲ್ಲ. ಸಿಎಂ ಈ ವಿಚಾರವಾಗಿ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಬಂದಿದೆ. ಜತೆಗೆ ಗೃಹ ಸಚಿವರು ಇದ್ದಾರೆ. ನನ್ನ ಜತೆ ಇರುವ ಪೊಲೀಸ್ ಸಿಬ್ಬಂದಿ ಹೊರತಾಗಿ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಲು ಹೋಗುವುದಿಲ್ಲ. ನಾನು ಜೈಲಲ್ಲಿ ಇದ್ದಾಗ, ಸ್ವಾಮೀಜಿಗಳ ದೂರವಾಣಿ ಕದ್ದಾಲಿಕೆ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.