ತುಮಕೂರು, ನ.13: ಪಾಪ.. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನನಗೆ ಕೆಡುಕನ್ನೇ ಮಾಡುವುದಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಆದರೆ, ನನ್ನ ಮುಂದೆ ಪೋಸ್ಟರ್ಗಳನ್ನು ಅಂಟಿಸುವಂತೆ ತಮ್ಮ ಪಕ್ಷದ ಕಾರ್ಯಕರ್ತರಿಗೆ ಪ್ರಚೋದನೆ ನೀಡುತ್ತಾರೆ. ಒಳ್ಳೆಯದು ಮಾಡುವುದು ಎಂದರೆ ಹೀಗೇನಾ? ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಖಾರವಾಗಿ ಪ್ರಶ್ನಿಸಿದರು. ಗುಬ್ಬಿ ತಾಲೂಕು, ತುರುವೇಕೆರೆ ವಿಧಾನಸಭೆ ಕ್ಷೇತ್ರದ ಸಿ.ಎಸ್.ಪುರ (ಚಂದ್ರಶೇಖರಪುರ) ದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಸಮುದಾಯ ಭವನ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಿ ಅವರು ಮಾತನಾಡಿದರು.
ಮಧ್ಯರಾತ್ರಿ ಮನೆಯ ಮುಂದೆ ಪೋಸ್ಟರ್ ಅಂಟಿಸುವ ಕೀಳುಮಟ್ಟದ ರಾಜಕಾರಣ ಅವರದೇ ಕೊಡುಗೆ ಎಂದು ಹೆಸರು ಹೇಳದೆಯೇ ಡಿಕೆಶಿ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವರು; ದೊಡ್ಡ ಆಲಹಳ್ಳಿಯಲ್ಲಿ ಟೆಂಟ್ ನಡೆಸುತ್ತಿದ್ದ ಕಾಲದಿಂದಲೂ ಪೋಸ್ಟರ್ ಅಂಟಿಸುವ ಚಾಳಿ ಹೊಂದಿರುವ ಅವರು, ಮುಖ್ಯಮಂತ್ರಿಯಾದ ಮೇಲೆಯೂ ಅದನ್ನು ಬಿಟ್ಟಿಲ್ಲ ಎಂದು ಆರೋಪಿಸಿದರು.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆ ಮುಂದೆ ಕೂಡ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ಗಳನ್ನು ಅಂಟಿಸಿದ್ದರು. ನಿನ್ನೆ ರಾತ್ರಿ ಬೆಂಗಳೂರಿನ ನನ್ನ ಮನೆಯ ಬಳಿ ಕೂಡ ಪೋಸ್ಟರ್ ಅಂಟಿಸುವ ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ಪೋಸ್ಟರ್ ಅಂಟಿಸುವುದು, ಸಿಡಿ ಮಾಡಿಸುವುದು ಮುಖ್ಯಮಂತ್ರಿ ಒಬ್ಬರು ಮಾಡುವ ಕೆಲಸವೇ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಸಿಎಂ ಮೇಲೆ ಖಂಡಿತಾ ನನಗೆ ಅಸೂಯೆ ಇಲ್ಲ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಗ್ಗೆ ನನಗೆ ಖಂಡಿತಾ ಅಸೂಯೆ, ಈರ್ಷೆ ಇಲ್ಲ ಎಂದು ಹೇಳಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರು ಒಳ್ಳೆಯದು ಮಾಡುವುದು ಬೇಡ, ಕೆಟ್ಟದು ಮಾಡದಿದ್ದರೆ ಅಷ್ಟು ಸಾಕು. ಲೂಟಿ ಕೆಲಸ ಮಾಡುತ್ತಿರುವ ಇಂತಹ ವ್ಯಕ್ತಿಗಳಿಗೆ ನಾನು ಸಹಕಾರ ನೀಡಿ ಎಂದರೆ ಹೇಗೆ ಆಗುತ್ತದೆ? ನಿಮ್ಮ ಸಮುದಾಯದ ವ್ಯಕ್ತಿ, ಸಿಎಂ ಆಗಿದ್ದಾರೆ. ಅವರಿಗೆ ಕೆಲಸ ಮಾಡಲು ಬಿಡಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಇವರು ಲೂಟಿ ಮಾಡುವುದನ್ನೇ ಕೆಲಸ ಎಂದು ಭಾವಿಸಿದ್ದಾರೆ ಎಂದು ದೂರಿದರು.
ನನ್ನನ್ನು ಕಾಂಗ್ರೆಸ್ನವರು ಸಿಎಂ ಆಗಿ ಮಾಡಲಿಲ್ಲ. ನನ್ನನ್ನು ಮುಖ್ಯಮಂತ್ರಿ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಅವರು ಸಿಲುಕಿದರು. ಬಿಜೆಪಿ ಮತ್ತು ಜೆಡಿಎಸ್ ಎಲ್ಲಿ ಒಂದಾಗಿಬಿಡುತ್ತವೋ ಎಂದು ದೇವೇಗೌಡರ ಮನೆಗೆ ಓಡೋಡಿ ಬಂದರು ಎಂದು ಹೇಳಿದರು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ ಅಲ್ಲ
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ನಾವೇ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ವಾಗ್ದಾಳಿ ನಡೆಸಿದರು. 70 ವರ್ಷಗಳ ಸುದೀರ್ಘ ರಾಜಕೀಯ ಜೀವನ ಹೊಂದಿರುವ ದೇವೇಗೌಡರು ಸಚಿವರಾಗಲು 28 ವರ್ಷ ಕಾಯಬೇಕಾಯಿತು. ಆದರೆ ಇಂದಿನ ರಾಜಕಾರಣದಲ್ಲಿ ಗೆದ್ದ ಕೂಡಲೇ ಮಂತ್ರಿ, ಮುಖ್ಯಮಂತ್ರಿಯಾಗಬೇಕು ಎಂಬ ಸಂಸ್ಕೃತಿ ಬೆಳೆದಿದೆ. ಅಂದು ಕೇವಲ 140-142 ಸ್ಥಾನಗಳಿಗೆ ಕುಸಿದಿದ್ದ ಕಾಂಗ್ರೆಸ್ ಪಕ್ಷಕ್ಕೆ ದೆಹಲಿಯಲ್ಲಿ ಬೆಲೆಯೇ ಇರಲಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಹಾಗೂ ಇತರ ಪ್ರಾದೇಶಿಕ ಪಕ್ಷಗಳು ಒತ್ತಾಯಪೂರ್ವಕವಾಗಿ ದೇವೇಗೌಡರನ್ನು ಪ್ರಧಾನಿ ಹುದ್ದೆಗೇರಿಸಿದವೇ ಹೊರತು ಅದು ಕಾಂಗ್ರೆಸ್ ಕೊಟ್ಟ ಭಿಕ್ಷೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ದೇಶದ ಹಿತಕ್ಕಾಗಿ ಹಾಗೂ ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಕೇವಲ 11 ತಿಂಗಳಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ಧೀಮಂತ ನಾಯಕರು ದೇವೇಗೌಡರು. ಅವರನ್ನು ಪ್ರಧಾನಿ ಮಾಡಿದೆವು ಎಂದು ಹೇಳುವ ಕಾಂಗ್ರೆಸ್ಸಿಗರು ಅವರ ಸರ್ಕಾರವನ್ನು ಉರುಳಿಸಿದೆವು ಎಂದು ಹೇಳುವುದಿಲ್ಲ! ಅಷ್ಟರ ಮಟ್ಟಿಗೆ ಕಾಂಗ್ರೆಸ್ ದ್ವಂದ್ವ ನಿಲುವು ಹೊಂದಿದೆ ಎಂದು ಅವರು ಕಟುವಾಗಿ ಟೀಕಿಸಿದರು.
ಮಾತೆತ್ತಿದರೆ ಈ ಮುಖ್ಯಮಂತ್ರಿ ಸುಳ್ಳೇ ಕುಮಾರಸ್ವಾಮಿ ಅವರ ಮನೆ ದೇವರು ಎಂದು ಹೇಳುತ್ತಾರೆ. ಅವರ ಮನೆ ದೇವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಈ ವ್ಯಕ್ತಿ ಅಧಿಕಾರಕ್ಕೆ ಬಂದಾಗಿನಿಂದ ಹೇಳಿದ್ದೆಲ್ಲವೂ ಬರಿ ಸುಳ್ಳೇ ಎಂದು ಕಿಡಿಕಾರಿದರು. ರಾಜ್ಯ ಸರ್ಕಾರವು ಕೇವಲ ಭಾಷಣಗಳನ್ನು ಮಾಡುವುದನ್ನು ಬಿಟ್ಟು, ನೈಜ ಕಾಳಜಿ ಇದ್ದರೆ ತಮ್ಮ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅದರ ಜತೆಗೆ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿರುವ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವ ಮೂಲಕ ಬದ್ಧತೆಯನ್ನು ಪ್ರದರ್ಶಿಸಲಿ ಎಂದು ರಾಜ್ಯ ಸರ್ಕಾರಕ್ಕೆ ನೇರ ಸವಾಲು ಹಾಕಿದರು ಕೇಂದ್ರ ಸಚಿವರು.
PM Narendra Modi: ಮೆಟ್ರೋ, ಇಂಧನ ಭದ್ರತೆ ಯೋಜನೆಗಳಿಂದ ಕರ್ನಾಟಕದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ: ಪಿಎಂ ಮೋದಿ
ದೇವೇಗೌಡರ ಪುತ್ತಳಿಯನ್ನು ಕಂಡು ಭಾವುಕರಾದ ಎಚ್ಡಿಕೆ
ಸಿ.ಎಸ್. ಪುರದಲ್ಲಿ ದೇವೇಗೌಡರ ಹೆಸರಿನಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಿರುವ ಕೆಲಸ ಬಹಳ ಒಳ್ಳೆಯದು ಎಂದು ಶ್ಲಾಘಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡರ ಕಂಚಿನ ಪುತ್ತಳಿಯನ್ನು ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ಭಾವುಕರಾದ ಪ್ರಸಂಗ ನಡೆಯಿತು.
ನನಗೆ ಇದೊಂದು ಅಪರೂಪದ ಪ್ರಸಂಗ ಎನ್ನಬೇಕು ಅಥವಾ ಅದೃಷ್ಟ ಎನ್ನಬೇಕು ತಿಳಿಯುತ್ತಿಲ್ಲ. ನನ್ನ ತಂದೆಯವರ ಬಗ್ಗೆ ನೀವೆಲ್ಲರೂ ಇಟ್ಟಿರುವ ಪ್ರೀತಿ ಅಭಿಮಾನವನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ನನ್ನ ಕಣ್ಣುಗಳು ಆನಂದಭಾಷ್ವದಿಂದ ತುಂಬಿವೆ ಎಂದು ಗದ್ಗದಿತರಾದರು. ಸಮಾರಂಭದಲ್ಲಿ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಶಾಸಕ ಮಸಾಲೆ ಜಯರಾಮ್ ಮಾತನಾಡಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ನಿಂಗಪ್ಪ, ಮಾಜಿ ಶಾಸಕ ತಿಮ್ಮರಾಯಪ್ಪ, ಮುಖಂಡರಾದ ನಾಗರಾಜ್, ರವಿ ನಾಗರಾಜಯ್ಯ, ಇತರರು ಉಪಸ್ಥಿತರಿದ್ದರು.