ಬೆಂಗಳೂರು: ರಾಜ್ಯಾದ್ಯಂತ ಸಂಭ್ರಮದಿಂದ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ, ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ವೇಳೆ ಪ್ರಮುಖ ಘೋಷಣೆಯೊಂದನ್ನು ಮಾಡಿದ ಸಿಎಂ, ಇನ್ನುಮುಂದೆ ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸುವ ಹೊಸ ನಿಯಮವನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸಿಎಂ ಅವರು ಮಾತನಾಡಿದ್ದಾರೆ.
ಕನ್ನಡ ಭಾಷೆಗೆ ಯಾವುದೇ ಗಡಿಯಿಲ್ಲ ಎಂಬುದನ್ನು ಸ್ಮರಿಸಿದ ಅವರು, ಬ್ರಿಟಿಷರ ಕಾಲದ ಇತಿಹಾಸವನ್ನು ಉಲ್ಲೇಖಿಸಿ ನಮ್ಮ ಮಾತೃಭಾಷೆಯ ಮಹತ್ವವನ್ನು ಸಾರಿದರು. ಕನ್ನಡ ಭಾಷೆ, ನಾಡಿನ ಸಂಸ್ಕೃತಿ ಮತ್ತು ಕನ್ನಡ ಧ್ವಜದ ಗೌರವವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ನಾಡ ಧ್ವಜದಲ್ಲಿ ಹೊಸ ಬಣ್ಣ, ರಾಜ್ಯ ಲಾಂಛನ:
ಭಾರತ ಜನನಿಯ ತನುಜಾತೆಯಾದ ಕನ್ನಡಮ್ಮನಿಗೆ ನಾಡಗೀತೆ ಇರುವಂತೆ, ಕನ್ನಡಿಗರ ಸ್ವಾಭಿಮಾನವನ್ನು ಪ್ರತಿನಿಧಿಸುವ ಅಧಿಕೃತ ನಾಡಧ್ವಜವೂ ಇರಬೇಕೆಂಬುದು ನಮ್ಮ ಆಶಯ. ಈಗಾಗಲೇ ಕನ್ನಡಿಗರ ಭಾವನೆಗಳ ಹೆಗ್ಗುರುತಾಗಿ ಕೆಂಪು-ಹಳದಿ ಬಣ್ಣದ ಬಾವುಟವಿದೆ. ಕನ್ನಡದ ಜ್ಞಾನ ಪರಂಪರೆ, ಸಂಸ್ಕೃತಿ, ಸರ್ವಧರ್ಮ ಸಮಾನತೆ ಹಾಗೂ ಶಾಂತಿಯ ಸಂದೇಶ ಸಾರುವ ಈ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ ನಾಡಧ್ವಜವನ್ನಾಗಿ ಮಾಡುವ ಕುರಿತು ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ.
ಕನ್ನಡ ಧ್ವಜದಲ್ಲಿ ನಾಡಿನ ಸಾಂಪ್ರದಾಯಿಕ ಹಳದಿ ಮತ್ತು ಕೆಂಪು ಬಣ್ಣದ ಜತೆಗೆ ಮತ್ತೊಂದು ಬಣ್ಣವನ್ನು ಹಾಗೂ ಮಧ್ಯ ಭಾಗದಲ್ಲಿ ಕರ್ನಾಟಕದ ರಾಜ್ಯ ಲಾಂಛನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಧ್ವಜ 71-72 ರ ಚೌಕಟ್ಟಿನಲ್ಲಿ ವಿವಿಧ ರೀತಿಯಲ್ಲಿ ಸಂಭ್ರಮಿಸಲು ಮತ್ತು ಆಚರಿಸಲು ಸೂಕ್ತ ಮಾರ್ಗದರ್ಶನಗಳೊಂದಿಗೆ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. 'ನಮ್ಮ ಧ್ವಜ ಹೇಗಿರಬೇಕು ಹಾಗೂ ಅದನ್ನು ಎಲ್ಲಿ ಹಾರಿಸಬೇಕು ಎಂಬ ಸ್ಪಷ್ಟ ಮಾರ್ಗದರ್ಶನ ಇರಬೇಕಾಗುತ್ತದೆ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಸಾರ್ವಜನಿಕ ಅಭಿಪ್ರಾಯಗಳನ್ನು ಸಂಗ್ರಹಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ' ಅಧಿವೇಶನದಲ್ಲಿ ಈ ಕುರಿತು ಪ್ರಸ್ತಾವನೆ ಮಂಡಿಸಿ, ಅಂತಿಮ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕನ್ನಡ ಕಲಿತರೆ ಸಾಲದು, ದಿನನಿತ್ಯವೂ ಬಳಸಿ
ವಿಶ್ವಕ್ಕೆ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟ ಪುಣ್ಯಭೂಮಿ ಕನ್ನಡನಾಡು. ಇಂತಹ ಶ್ರೀಮಂತ ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಪ್ರೀತಿ, ಗೌರವ ಬೆಳೆಸಬೇಕು. ನಾವು ಭಾಷೆಯನ್ನು ಪ್ರೀತಿಸಿದರೆ ಆ ಭಾಷೆ ನಮ್ಮನ್ನು ಕಾಪಾಡುತ್ತದೆ. ಭಾಷೆಗಳಿಗೆ ಯಾವ ಗಡಿ ಇಲ್ಲ. ಇದು ಡಿಜಿಟಲ್ ಯುಗ. ವಿಶ್ವದ ಎಲ್ಲ ಭಾಷೆಗಳು ನಮ್ಮ ಮೊಬೈಲ್ಗಳಲ್ಲೇ ಸಿಗುತ್ತವೆ. ಕಲಿಕೆ ವಿಸ್ತಾರವಾಗಿದೆ. ಭಾಷೆಗಳ ಸ್ಪರ್ಧೆಯ ನಡುವೆ ಕನ್ನಡ ಬೆಳಗಬೇಕು. ಅದಕ್ಕಾಗಿ ನಮ್ಮ ಮಕ್ಕಳು ಮೊದಲು ಕನ್ನಡ ಕಲಿಯಬೇಕು. ಕಲಿತರೆ ಮಾತ್ರ ಸಾಲದು, ಕನ್ನಡವನ್ನು ದಿನನಿತ್ಯ ಬಳಸಬೇಕು. ಮಕ್ಕಳಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಮೂಡುವಂತೆ ಹೆತ್ತವರು ಮತ್ತು ಶಿಕ್ಷಕರು ನೋಡಿಕೊಳ್ಳಬೇಕು. ಕನ್ನಡ ಸರ್ಕಾರಿ ಭಾಷೆಯಾಗಬಾರದು, ಹೃದಯದ ಭಾಷೆಯಾಗಬೇಕು. ಭಾಷೆ ಅನ್ನುವುದು ಬದುಕು. ಭಾಷೆ ಇಲ್ಲದ ಬದುಕು 'ಮೂಕಿ ಚಿತ್ರ'ವಾಗಿಬಿಡುತ್ತದೆ.
Byrati Suresh: ಕನ್ನಡ ಭಾಷೆ ನಮ್ಮ ಅಸ್ಮಿತೆ: ಬೈರತಿ ಸುರೇಶ್
ಕನ್ನಡದ ಬೇರುಗಳು ಕರ್ನಾಟಕದಲ್ಲಿವೆ. ಆದರೆ ಅದರ ರೆಂಬೆ, ಕೊಂಬೆಗಳು ಪ್ರಪಂಚದ ತುಂಬ ಹರಡಿಕೊಂಡಿವೆ. ಸಾವಿರಾರು ಕನ್ನಡಿಗರು ವಿಶ್ವದ ನಾನಾ ಕಡೆ ನೆಲೆಸಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಐಟಿ-ಬಿಟಿ ಸೇರಿದಂತೆ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಕನ್ನಡಿಗರ ಸಾಧನೆ ಅನನ್ಯ. ನಮ್ಮ ಸರ್ಕಾರ ಕನ್ನಡ, ನೆಲ, ಜಲ ಮತ್ತು ಸಂಸ್ಕೃತಿಯ ರಕ್ಷಣೆಗೆ ಬದ್ಧವಾಗಿದೆ. ನಮ್ಮ ಮಕ್ಕಳು ಜಾಗತಿಕ ಸ್ಪರ್ಧೆಗೆ ಸಜ್ಜಾಗಬೇಕು. ಅದಕ್ಕೆ ಕನ್ನಡದ ಬೇರುಗಳು ಗಟ್ಟಿಯಾಗಿರಬೇಕು. ಆ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದು ಸಿಎಂ ಕರೆ ನೀಡಿದ್ದಾರೆ.