ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕದ ಅಡಕೆ ವಾಹನಗಳಿಗಿಲ್ಲ ಮಹಾರಾಷ್ಟ್ರದಲ್ಲಿ ತಡೆ;‌ ಮಹಾ ಸಿಎಂ ಜತೆ ಪ್ರಲ್ಹಾದ್‌ ಜೋಶಿ ಯಶಸ್ವಿ ಮಾತುಕತೆ

Pralhad Joshi: ಮಹಾರಾಷ್ಟ್ರದಲ್ಲಿ ರಾಜ್ಯದ ಅಡಕೆ ಸರಕುಳ್ಳ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ಅಲ್ಲಿನ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಚರ್ಚಿಸಿ, ಬಿಡುಗಡೆಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಮನವೊಲಿಸಿದ್ದಾರೆ. ಈ ಮೂಲಕ ಕರ್ನಾಟಕದ ರೈತರ ಮತ್ತು ಅಡಕೆ ವರ್ತಕರ, ಪ್ರಮುಖ ಅಡಕೆ ಸಹಕಾರಿ ಸಂಸ್ಥೆಗಳ ಸಮಸ್ಯೆ ಪರಿಹರಿಸಿದ್ದಾರೆ.

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಜತೆ ಮಾತುಕತೆ ನಡೆಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ನವದೆಹಲಿ, ಜು.7: ಕರ್ನಾಟಕದ ಅಡಕೆ ಬೆಳೆಗಾರರ ಬೆನ್ನಿಗೆ ನಿಂತಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi), ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಅಡಕೆ ಸರಕುಳ್ಳ ವಾಹನಗಳ ಬಿಡುಗಡೆಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಜತೆ ಯಶಸ್ವಿ ಮಾತುಕತೆ ನಡೆಸಿದ್ದಾರೆ.

ರಾಜ್ಯ ಅಡಕೆ ಬೆಳೆಗಾರರ ಹಿತರಕ್ಷಣೆಗೆ ಧಾವಿಸಿದ ಜೋಶಿ, ಮಹಾರಾಷ್ಟ್ರದಲ್ಲಿ ರಾಜ್ಯದ ಅಡಕೆ ಸರಕುಳ್ಳ ಲಾರಿಗಳನ್ನು ತಡೆಹಿಡಿದಿರುವ ಬಗ್ಗೆ ಅಲ್ಲಿನ ಸಿಎಂ ದೇವೇಂದ್ರ ಫಡ್ನವೀಸ್ ಜತೆ ಚರ್ಚಿಸಿ ಬಿಡುಗಡೆಗೆ ಮನವೊಲಿಸಿದರು. ಈ ಮೂಲಕ ಕರ್ನಾಟಕದ ರೈತರ ಮತ್ತು ಅಡಕೆ ವರ್ತಕರ, ಪ್ರಮುಖ ಅಡಕೆ ಸಹಕಾರಿ ಸಂಸ್ಥೆಗಳ ಸಮಸ್ಯೆ ಪರಿಹರಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸಿಎಂ ಫಡ್ನವೀಸ್, ತಮ್ಮ ರಾಜ್ಯದಲ್ಲಿ ತಡೆಹಿಡಿದಿರುವ ಕರ್ನಾಟಕದ ಅಡಕೆ ಸರಕನ್ನು ತಕ್ಷಣವೇ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲದೇ, ಮುಂದಿನ ದಿನಗಳಲ್ಲೂ ಅಡಕೆ ಸಾಗಣೆಗೆ ಯಾವುದೇ ಅಡ್ಡಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವುದಾಗಿ ಸಹ ಹೇಳಿದ್ದಾರೆ.

ಏನಿದು ಸಮಸ್ಯೆ?

ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಗಳಲ್ಲೊಂದಾಗಿದೆ ಅಡಕೆ. ರಾಜ್ಯದಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ಅಡಕೆ ರವಾನೆ ಆಗುತ್ತಿತ್ತು. ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಎಲ್ಲೆಡೆ ಕರ್ನಾಟಕದ ಅಡಕೆ ಸಾಗಣೆ ವಾಹನಗಳನ್ನು ತಪಾಸಣೆಗೆಂದು ದಿನಗಟ್ಟಲೆ ತಡೆಹಿಡಿಯಲಾಗುತ್ತಿತ್ತು. ಹೀಗಾಗಿ ಕರ್ನಾಟಕದ ರೈತರು ಮತ್ತು ವರ್ತಕರು, ಅಡಕೆ ಸಹಕಾರಿ ಸಂಸ್ಥೆಗಳಿಗೆ ತೀವ್ರ ಸಮಸ್ಯೆಯಾಗಿತ್ತು. ಅಲ್ಲದೇ, ಅಡಕೆ ಹಾನಿಗೊಳಗಾಗಿ ಬೆಳೆಗಾರರಿಗೆ ತೀವ್ರ ಆರ್ಥಿಕ ನಷ್ಟವೂ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಪ್ರಮುಖ ಅಡಕೆ ಸಹಕಾರಿ ಸಂಸ್ಥೆಗಳಾದ ಕ್ಯಾಂಪ್ಕೋ (CAMPCO), ಮಾಮ್ಕೋಸ್ (MAMCOS), ತುಮ್ಕೋಸ್ (TUMCOS) ಹಾಗೂ ರಾಜ್ಯ ಅಡಕೆ ಸಹಕಾರಿ ಮಹಾಮಂಡಳದ ನಿಯೋಗವು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ನೇತೃತ್ವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿತ್ತು. ಮಹಾರಾಷ್ಟ್ರದಲ್ಲಿ ತಡೆಹಿಡಿಯಲಾಗಿರುವ ಅಡಕೆ ಸಾಗಣೆ ವಾಹನಗಳ ಬಿಡುಗಡೆಗೆ ಮನವಿ ಮಾಡಿತ್ತು.‌

SIR ತಾತ್ಕಾಲಿಕ ತಡೆಗೆ ಎನ್‌ಡಿಎ ಪಟ್ಟು; ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

ಹೀಗಾಗಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಮಂಗಳವಾರ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ದೆಹಲಿಯಲ್ಲೇ ಭೇಟಿ ಮಾಡಿ, ಚರ್ಚಿಸಿದರಲ್ಲದೆ, ಕರ್ನಾಟಕದ ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯದ ಅಡಕೆ ಸರಕುಳ್ಳ ವಾಹನಗಳನ್ನು ತಡೆಯದಂತೆ ಯಶಸ್ವಿ ಮಾತುಕತೆ ನಡೆಸಿದರು. ಮಹಾರಾಷ್ಟ್ರ ಸಿಎಂ ಸಮ್ಮತಿಸಿದ್ದರಿಂದ ರಾಜ್ಯದ ರೈತರ ಪರವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದ ಸಹ ಅರ್ಪಿಸಿದ್ದಾರೆ.