ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Public places Bill: ರಾಜ್ಯದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ಬ್ರೇಕ್?; ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ

ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ಸಂಘಗಳು ಮತ್ತು ಸೊಸೈಟಿಗಳಿಂದ ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಆಸ್ತಿಯ ಬಳಕೆಯನ್ನು ನಿರ್ಬಂಧಿಸುವ ಮಹತ್ವದ ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೇ ಮಳೆಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

ಗೃಹ ಸಚಿವ ಪ್ರಿಯಾಂಕ್‌ ಖರ್ಗೆ.

ಬೆಂಗಳೂರು: ರಾಜ್ಯ ಸರ್ಕಾರ ಕಾನೂನು ಚೌಕಟ್ಟಿನೊಳಗೆ ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ಮತ್ತೊಂದು ಪ್ರಯತ್ನಕ್ಕೆ ರಾಜ್ಯ ಸರಕಾರ ಕೈಹಾಕಿದೆ. ಈ ಸಂಬಂಧ 'ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ -2026ಕ್ಕೆ (The Karnataka State Public Places and Access Regulation Bill, 2026) ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಸರಕಾರಿ ಆವರಣಗಳು ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆಯನ್ನು ನಿಯಂತ್ರಿಸುವ ಹಾಗೂ 'ನೋಂದಾಯಿತವಲ್ಲದ ಸಂಘಟನೆಗಳು' ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿರ್ಬಂಧಿಸುವ ಉದ್ದೇಶದಿಂದ ಹೊಸ ವಿಧೇಯಕವನ್ನು ರೂಪಿಸಲಾಗಿದೆ.

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಆಯೋಜನೆಗೆ ಅನುಮತಿ ನಿರಾಕರಿಸಿದ ವಿಚಾರ ಈ ಹಿಂದೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಅನುಮತಿ ನಿರಾಕರಣೆಯನ್ನು ಪ್ರಶ್ನಿಸಿ ಆರ್‌ಎಸ್‌ಎಸ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ನಂತರ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ಪಥಸಂಚಲನಕ್ಕೆ ಅವಕಾಶ ನೀಡಿತ್ತು. ಇದೀಗ ಸಾರ್ವಜನಿಕ ಪ್ರದೇಶಗಳಲ್ಲಿ ನಡೆಸುವ ಪಥಸಂಚಲನ, ಸಭೆ, ಕಾರ್ಯಕ್ರಮ ಹಾಗೂ ಇತರೆ ಚಟುವಟಿಕೆಗಳಿಗೆ ನಿಯಂತ್ರಣ ಹೇರುವ ಉದ್ದೇಶದಿಂದ ಹೊಸ ವಿಧೇಯಕ ರೂಪಿಸಲಾಗಿದೆ.

ಇದೇ ಅಧಿವೇಶನದಲ್ಲಿ ವಿಧೇಯಕ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.



ಸಂಪುಟದ ನಿರ್ಧಾರದ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

ಸಂಘ ಪರಿವಾರನ್ನು ಗುರಿಯಾಗಿಟ್ಟುಕೊಂಡ ವಿಧೇಯಕವನ್ನು ಸರಕಾರ ಮಂಡಿಸಿದೆ ಎಂಬ ಆರೋಪ ಕೇಳಿಬಂದಿರುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ವಿಧೇಯಕ, 2026ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಖಾಸಗಿ ವ್ಯಕ್ತಿಗಳು, ಸಂಘಟನೆಗಳು, ಸಂಘಗಳು ಮತ್ತು ಸೊಸೈಟಿಗಳಿಂದ ಸರ್ಕಾರಿ ಆವರಣ ಹಾಗೂ ಸಾರ್ವಜನಿಕ ಆಸ್ತಿಯ ಬಳಕೆಯನ್ನು ನಿಯಂತ್ರಿಸುವುದು ಮತ್ತು ನಿರ್ವಹಿಸುವುದು ಈ ವಿಧೇಯಕದ ಉದ್ದೇಶ. ಸರ್ಕಾರಿ ಜಮೀನುಗಳು, ಕಟ್ಟಡಗಳು, ಆಟದ ಮೈದಾನಗಳು, ಉದ್ಯಾನವನಗಳು, ರಸ್ತೆಗಳು ಮತ್ತು ಇತರ ಸಾರ್ವಜನಿಕ ಆಸ್ತಿಗಳನ್ನು ಸಂರಕ್ಷಿಸಲು, ಕಾಪಾಡಲು ಮತ್ತು ಜವಾಬ್ದಾರಿಯುತ ಬಳಕೆಯನ್ನು ಖಾತರಿಪಡಿಸಲು ಇದು ಕಾನೂನು ಚೌಕಟ್ಟನ್ನು ಒದಗಿಸುತ್ತದೆ — ದುರ್ಬಳಕೆಯನ್ನು ತಡೆದು, ಸಾರ್ವಜನಿಕ ಹಿತ ಮತ್ತು ಒಳಿತಿಗಾಗಿ ಅವುಗಳನ್ನು ರಕ್ಷಿಸುತ್ತದೆ.

ಇದು ಯಾವುದೋ ಒಂದು ನಿರ್ದಿಷ್ಟ ಸಂಸ್ಥೆ, ಸಂಘ, ಸಂಘಟನೆ, ಸೊಸೈಟಿ, ಕ್ಲಬ್, ಒಕ್ಕೂಟ, ಸಿಂಡಿಕೇಟ್ ಅಥವಾ ಎನ್‌ಜಿಒವನ್ನು ನಿರ್ಬಂಧಿಸಲು ಅಥವಾ ಮಟ್ಟಹಾಕಲು ಎಂದು ಎಲ್ಲರೂ ಯಾಕೆ ಭಾವಿಸುತ್ತಿದ್ದಾರೋ? ಇದು ಯಕ್ಷ ಪ್ರಶ್ನೆ! ಎಂದು ಅವರು ತಿಳಿಸಿದ್ದಾರೆ.