ಬೆಂಗಳೂರು: ರಾಜ್ಯ ಶಿಕ್ಷಣ ನೀತಿ (State Education Policy) ಅನುಷ್ಠಾನಗೊಳಿಸಲು ಹಾಗೂ ಕೇಂದ್ರ ಸರ್ಕಾರದ ಜಿ ರಾಮ್ ಜಿ ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರುವುದು ಸೇರಿ ಹಲವು ಹಲವು ಮಹತ್ವದ ನಿರ್ಧಾರಗಳನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ (cabinet meeting) ಕೈಗೊಳ್ಳಲಾಗಿದೆ.
ಈ ಬಗ್ಗೆ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿದರು. ರಾಜ್ಯ ಶಿಕ್ಷಣ ನೀತಿ ಸಂಬಂಧ ಯುಜಿಸಿ ಮಾಜಿ ಅಧ್ಯಕ್ಷ ಸುಖ್‌ದೇವ್ ಥೋರಟ್ ಅವರ ನೇತೃತ್ವದ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಆರ್ಥಿಕ ಮತ್ತು ಆಡಳಿತಾತ್ಮಕ ದೃಷ್ಟಿಕೋನದಿಂದ ವರದಿಯನ್ನು ಪರಿಶೀಲಿಸಲು ಸಂಪುಟ ಉಪಸಮಿತಿಯನ್ನು ರಚಿಸಲಾಗುತ್ತಿದ್ದು, ಉಪಸಮಿತಿ ರಚನೆಯ ಜವಾಬ್ದಾರಿಯನ್ನು ಸಿಎಂ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿ ರಾಮ್ ಜಿ ವಿರುದ್ಧ ಕಾನೂನು ಹೋರಾಟ
ಕೇಂದ್ರವು ಮನರೇಗಾ ಯೋಜನೆಯನ್ನು ರದ್ದುಗೊಳಿಸಿ ಜಿ ರಾಮ್ ಜಿ ಯೋಜನೆಯನ್ನು ತಂದಿದೆ. ಆದರೆ ಮೇ ತಿಂಗಳು ಬಂದರೂ ಯೋಜನೆಯ ಅಧಿಸೂಚನೆ ಹೊರಡಿಸಿಲ್ಲ. ಹೊಸ ಯೋಜನೆ ಹೇಗೆ ಜಾರಿಯಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ, ಹಳೆಯ ಬಾಕಿ ಹಣವನ್ನೂ ಬಿಡುಗಡೆ ಮಾಡಿಲ್ಲ. ಮಳೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಬಡವರ ಕೂಲಿಯ ಬಗ್ಗೆ ಕೇಂದ್ರ ನಿರ್ಲಕ್ಷ್ಯ ವಹಿಸಿದೆ. ಈ ಸಂಬಂಧ ಸಿಎಂ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದು, ರಾಜ್ಯದ ಹಿತದೃಷ್ಟಿಯಿಂದ ಈಗ ಕಾನೂನು ಹೋರಾಟಕ್ಕೆ ಮುಂದಾಗಲು ನಿರ್ಧರಿಸಲಾಗಿದೆ.
ಸಚಿವ ಸಂಪುಟ ಸಭೆಯ ಇತರ ಪ್ರಮುಖ ನಿರ್ಣಯಗಳು
- ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು 400 ರಿಂದ 600ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಇದಕ್ಕೆ 180 ಕೋಟಿ ರೂ. ಅನುದಾನ ನೀಡಲಾಗಿದೆ.
- ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ (PPP) ಡಿಜಿಟಲ್ ಗೈಡ್ ವ್ಯವಸ್ಥೆ ಜಾರಿಗೆ ಬರಲಿದೆ.
- ಬನ್ನೇರುಘಟ್ಟದಲ್ಲಿ 144 ಕೋಟಿ ರೂ. ವೆಚ್ಚದಲ್ಲಿ ಮತ್ಸ್ಯಾಗಾರ (Aquarium) ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಲಾಗಿದೆ.
- ದಕ್ಷಿಣ ಕನ್ನಡದ ಪ್ರಸಿದ್ಧ ಕುಕ್ಕೆ ಸುಬ್ರಮಣ್ಯ ದೇಗುಲದ ವಿವಿಧ ಕಾಮಗಾರಿಗಳಿಗಾಗಿ 604 ಕೋಟಿ ರೂ. ಬೃಹತ್ ಮೊತ್ತದ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.
- ಘಾಟಿ ಸುಬ್ರಮಣ್ಯ ದೇಗುಲದ ಅಭಿವೃದ್ಧಿಗೆ 23.76 ಕೋಟಿ ರೂ. ಮೀಸಲಿಡಲಾಗಿದೆ.
- ಕಲಬುರಗಿ ಮತ್ತು ಯಾದಗಿರಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಮೂರು ಹೊಸ ಕೈಗಾರಿಕಾ ವಸಾಹತುಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ.
- ಬಂಗಾರಪೇಟೆ ಕ್ಷೇತ್ರದಲ್ಲಿ 20.74 ಕಿ.ಮೀ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 66 ಕೋಟಿ ರೂ. ಮಂಜೂರು ಮಾಡಲಾಗಿದೆ.
- ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ತಾರಾಲಯ ಸ್ಥಾಪನೆಗೆ ಸಂಬಂಧಿಸಿದ 2017ರ ಆದೇಶಕ್ಕೆ ತಿದ್ದುಪಡಿ ತರಲಾಗಿದೆ.
- ಸರ್ಕಾರಿ ಹುದ್ದೆಗಳಲ್ಲಿ ಕ್ರೀಡಾಪಟುಗಳ ಮೀಸಲಾತಿಯನ್ನು ಶೇ. 1 ರಿಂದ ಶೇ. 2ಕ್ಕೆ ಏರಿಸಲು ಕರ್ನಾಟಕ ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
- ಹಟ್ಟಿ ಚಿನ್ನದ ಗಣಿ ಟೌನ್‌ಶಿಪ್‌ಗೆ ಬಸವಸಾಗರ ಅಣೆಕಟ್ಟೆಯಿಂದ ನೀರು ಪೂರೈಸಲು 132 ಕೋಟಿ ರೂ. ವೆಚ್ಚದ ಯೋಜನೆಗೆ ಒಪ್ಪಿಗೆ ಸಿಕ್ಕಿದೆ.
- ಬ್ರಹ್ಮಾವರದ ಚಾಂತಾರು ಬಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ 20 ಸೆಂಟ್ಸ್ ಜಾಗ ನೀಡಲು ಸಂಪುಟ ಒಪ್ಪಿಗೆ ಸೂಚಿಸಿದೆ.
- ಸಾರಿಗೆ ಇಲಾಖೆಯ ಕಾರ್ಮಿಕರ ಭದ್ರತಾ ವಿಧೇಯಕಕ್ಕೂ ಸಂಪುಟ ಸಮ್ಮತಿ ಸೂಚಿಸಿದ್ದು, ಕಾರ್ಮಿಕರ ಕ್ಷೇಮಾಭಿವೃದ್ಧಿಯ ಹೊಣೆಯನ್ನು ಈಗ ನೇರವಾಗಿ ಸಾರಿಗೆ ಮಂಡಳಿಗೆ ನೀಡಲಾಗಿದೆ.