ಬೆಂಗಳೂರು: ರಾಜ್ಯ ಸರ್ಕಾರಿ ಪಿಂಚಣಿದಾರರಿಗೆ ಸಿಹಿಸುದ್ದಿ ಸಿಕ್ಕಿದೆ. ‘ಸಂಧ್ಯಾ ಕಿರಣ’ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಗೆ (Sandhya Kiran cashless healthcare scheme) ಸಚಿವ ಸಂಪುಟ ಅನುಮೋದನೆ ನೀಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ.
ರಾಜ್ಯ ಸರ್ಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಆರಂಭಿಕ ಹಂತದಲ್ಲಿ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರ್ಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರನ್ನು ಒಳಗೊಂಡಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
ಯೋಜನೆಯಡಿ ಅರ್ಹ ಕುಟುಂಬಗಳಿಗೆ ವರ್ಷಕ್ಕೆ ಗರಿಷ್ಠ 5 ಲಕ್ಷದವರೆಗೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆಯನ್ನು ನಗದು ಪಾವತಿ ಇಲ್ಲದೆ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. AB-ArK ವ್ಯವಸ್ಥೆಯಡಿ ಅನ್ವಯವಾಗುವ ಆರೋಗ್ಯ ಪ್ರಯೋಜನ ಪ್ಯಾಕೇಜ್‌ಗಳು ಮತ್ತು ಪರಿಷ್ಕೃತ ಪ್ಯಾಕೇಜ್ ದರಗಳು ಜಾರಿಯಾಗಲಿವೆ.
ಅನುಮೋದಿತ ಹಾಗೂ ನೋಂದಾಯಿತ ಆಸ್ಪತ್ರೆಗಳ ಜಾಲದ ಮೂಲಕ ನಗದುರಹಿತ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ದುಬಾರಿ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಪಿಂಚಣಿದಾರರು ಮತ್ತು ಅವರ ಕುಟುಂಬಗಳ ಮೇಲಿನ ತಕ್ಷಣದ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ಯೋಜನೆಯಡಿ ನಿಯಮಿತ ಪಿಂಚಣಿದಾರರು ತಮ್ಮ ಮೂಲ ಪಿಂಚಣಿಯ ಶೇ.1.25ರಷ್ಟು, ಕುಟುಂಬ ಪಿಂಚಣಿದಾರರು ಮೂಲ ಕುಟುಂಬ ಪಿಂಚಣಿಯ ಶೇ.0.75ರಷ್ಟು ವಂತಿಕೆ ಪಾವತಿಸಬೇಕಾಗುತ್ತದೆ.
‘ಸಂಧ್ಯಾ ಕಿರಣ’ ಯೋಜನೆಯಡಿ ವಾರ್ಷಿಕವಾಗಿ ಸುಮಾರು ₹81.75 ಕೋಟಿ ಚಿಕಿತ್ಸಾ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. AB-ArK ನೀತಿಯನ್ವಯ ಒಟ್ಟು ಚಿಕಿತ್ಸಾ ವೆಚ್ಚದ ಶೇ.70ರಷ್ಟು ಫಲಾನುಭವಿಗಳ ವಂತಿಕೆ ಹಾಗೂ ಶೇ.30ರಷ್ಟು ರಾಜ್ಯ ಸರ್ಕಾರದ ಪಾಲಿನಿಂದ ಭರಿಸಲಾಗುತ್ತದೆ.
ಅದರಂತೆ ವರ್ಷಕ್ಕೆ ಸುಮಾರು 57.22 ಕೋಟಿ ಫಲಾನುಭವಿಗಳ ಪಾಲು ಹಾಗೂ 24.53 ಕೋಟಿ ರಾಜ್ಯ ಸರ್ಕಾರದ ಪಾಲು ಇರಲಿದೆ. ಯೋಜನೆಯ corpus ಬಳಕೆ ಪ್ರಮಾಣ ಶೇ.85ಕ್ಕಿಂತ ಹೆಚ್ಚಾದ ಸಂದರ್ಭದಲ್ಲಿ ವಂತಿಕೆ ದರವನ್ನು 0.05 ಶೇಕಡಾ ಅಂಕದಷ್ಟು (5 basis points) ಸ್ವಯಂಚಾಲಿತವಾಗಿ ಹೆಚ್ಚಿಸುವ ವ್ಯವಸ್ಥೆಯನ್ನೂ ಅಳವಡಿಸಲು ನಿರ್ಧರಿಸಲಾಗಿದೆ.
ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಫಲಾನುಭವಿಗಳ ನೋಂದಣಿ, ವಂತಿಕೆ ಸಂಗ್ರಹ, ಆಸ್ಪತ್ರೆಗಳ ಜಾಲ ನಿರ್ವಹಣೆ, ನಗದುರಹಿತ ಚಿಕಿತ್ಸೆ, ಕ್ಲೇಮ್‌ಗಳ ನಿರ್ವಹಣೆ ಹಾಗೂ ಯೋಜನೆಯ ಮೇಲ್ವಿಚಾರಣೆಯನ್ನು AB-ArK ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಲಾಗುತ್ತದೆ.