ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cabinet Meeting: ಸಚಿವ ಸಂಪುಟ ಸಭೆ; ​ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಸೇರಿ ಹಲವು ನಿರ್ಣಯ

ರಾಜ್ಯದ ವಿವಿಧ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕರ್ನಾಟಕ ಕ್ಯಾಬಿನೆಟ್‌ ಸಭೆಯಲ್ಲಿ ಕೈಗೊಳ್ಳಲಾಗಿದೆ. ಹಾಲಿನ ದರ ಹೆಚ್ಚಳ, ಪ್ರಾಜೆಕ್ಟ್ ಕೆ-ಮಾನಿಟರ್' ಯೋಜನೆ, ಸರ್ಕಾರಿ ಆಸ್ಪತ್ರೆಗಳಿಗೆ ಲ್ಯಾಬ್ ಉಪಕರಣ ಖರೀದಿ ಸೇರಿ ಪ್ರಮುಖ ನಿರ್ಣಯಗಳನ್ನು ಸರ್ಕಾರ ತೆಗೆದುಕೊಂಡಿದೆ.

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ಸಚಿವ ಸಂಪುಟ ಸಭೆ (Cabinet Meeting) ನಡೆದಿದ್ದು, ರಾಜ್ಯದ ವಿವಿಧ ಅಭಿವೃದ್ಧಿ ಹಾಗೂ ಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ​ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ, ​ಹಿಂದುಳಿದ ವರ್ಗಗಳ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ಹಾಲಿನ ದರ ಹೆಚ್ಚಳ ಸೇರಿ ಹಲವು ಪ್ರಮುಖ ನಿರ್ಣಯಗಳನ್ನು ಸಂಪುಟ ಕೈಗೊಂಡಿದೆ.

ಸಚಿವ ಸಂಪುಟ ಪ್ರಮುಖ ನಿರ್ಣಯಗಳು

  1. ​ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ ಸ್ಥಾಪನೆ: ಅರಣ್ಯ ಮತ್ತು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿರುವ ಇರುಳ, ಸೋಲಿಗ, ಜೇನುಕುರುಬ, ಕಾಡುಕುರುಬ, ಕುಡಿಯ, ಸಿದ್ದಿ ಮತ್ತು ಇತರೆ ನಿರ್ದಿಷ್ಟ ದುರ್ಬಲ ಬುಡಕಟ್ಟು ಗುಂಪುಗಳ (PVTGs) ಏಳಿಗೆಗಾಗಿ 33.36 ಕೋಟಿ ರೂ. ವೆಚ್ಚದಲ್ಲಿ 'ಕರ್ನಾಟಕ ಆದಿವಾಸಿ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಲು ಅನುಮೋದನೆ
  2. ​ಹಿಂದುಳಿದ ವರ್ಗಗಳ ಮಹಿಳೆಯರಿಗೆ ಹೊಲಿಗೆ ಯಂತ್ರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 16.04 ಕೋಟಿ ರೂ. ವೆಚ್ಚದಲ್ಲಿ 9,243 ಅರ್ಹ ಮಹಿಳಾ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಖರೀದಿಸಿ ವಿತರಿಸಲು ಸಂಪುಟ ಅನುಮೋದನೆ ನೀಡಿದೆ.
  3. ಹಾಲಿನ ದರ ಹೆಚ್ಚಳ: ಕೆಎಂಎಫ್‌ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
  4. ಸಂಗೊಳ್ಳಿಯಲ್ಲಿ ಸೈನಿಕ ಶಾಲೆ ನಿರ್ಮಾಣ: ಸಂಗೊಳ್ಳಿಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆಯ ನಿರ್ಮಾಣ ಕಾಮಗಾರಿಯ 228.95 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ ನೀಡಲಾಗಿದೆ.
  5. ಗಣಿಗಾರಿಕೆ ಅಕ್ರಮ ತನಿಖೆ ಮುಂದುವರಿಕೆ: ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆಗಾಗಿ ಕರ್ನಾಟಕ ಲೋಕಾಯುಕ್ತದಲ್ಲಿ ದಿನಾಂಕ 24.01.2014 ರಂದು ರಚಿಸಲಾದ ವಿಶೇಷ ತನಿಖಾ ತಂಡದ (SIT) ಅವಧಿಯನ್ನು 01.07.2026 ರಿಂದ ಮುಂದಿನ ಒಂದು ವರ್ಷದವರೆಗೆ ವಿಸ್ತರಿಸಲು ಅನುಮೋದನೆ
  6. 21.11 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಲ್ಯಾಬ್ ಉಪಕರಣ ಖರೀದಿ: ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ರಾಷ್ಟ್ರೀಯ ಉಚಿತ ಔಷಧ ಮತ್ತು ರೋಗನಿರ್ಣಯ ಸೇವೆಗಳ (NFDS) ಕಾರ್ಯಕ್ರಮದಡಿ ಅರೆ-ಸ್ವಯಂಚಾಲಿತ ಮತ್ತು ಪೂರ್ಣ-ಸ್ವಯಂಚಾಲಿತ ಬಯೋಕೆಮಿಸ್ಟ್ರಿ ಹಾಗೂ ಹೆಮಟಾಲಜಿ ವಿಶ್ಲೇಷಕಗಳಿಗೆ ಅಗತ್ಯವಿರುವ ಕಾರಕಗಳು (Reagents) ಮತ್ತು ಉಪಭೋಗ್ಯ (Consumables) ವಸ್ತುಗಳನ್ನು ಅಂದಾಜು ರೂ. 21.11 ಕೋಟಿ ವೆಚ್ಚದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
  7. ತ್ಯಾಜ್ಯ ನಿರ್ವಹಣೆ ಪರಿಷ್ಕೃತ ಅಂದಾಜು ಅನುಮೋದನೆ: ಜಿಬಿಎ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ನೈರ್ಮಲ್ಯ ತ್ಯಾಜ್ಯ ಮತ್ತು ರಸ್ತೆ ಗುಡಿಸುವಿಕೆ, ತ್ಯಾಜ್ಯ ಸಂಗ್ರಹಣೆ, ಪ್ರಾಥಮಿಕ ಸಾಗಾಣಿಕೆ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಸೇವೆಯನ್ನು ಸಮರ್ಪಕವಾಗಿ ಜಿಬಿಎ ಮತ್ತು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮುಂದಿನ ಏಳು ವರ್ಷಗಳಿಗೆ ಕೈಗೊಳ್ಳಲು 1494.70 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟ ಅನುಮೋದನೆ.
  8. ಹುಬ್ಬಳ್ಳಿ ಕ್ರೀಡಾಂಗಣ ನಿರ್ವಹಣೆಗೆ ಪಿಪಿಪಿ ಮಾದರಿ: ಹುಬ್ಬಳ್ಳಿ ನಗರದಲ್ಲಿ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಸಮಗ್ರ ಕ್ರೀಡಾಂಗಣ ಸಂಕೀರ್ಣದ 20 ವರ್ಷಗಳ ವೃತ್ತಿಪರ ನಿರ್ವಹಣೆಗಾಗಿ ಪಿಪಿಪಿ ಮಾದರಿಯಲ್ಲಿ ಟೆಂಡರ್ ಪ್ರಕ್ರಿಯೆಯ ಮೂಲಕ ಖಾಸಗಿ ನಿರ್ವಾಹಕರನ್ನು ಆಯ್ಕೆ ಮಾಡಲು ಆಡಳಿತಾತ್ಮಕ ಅನುಮೋದನೆ.
  9. ಕಾವಲ್ ಭೈರಸಂದ್ರ, ಬನಶಂಕರಿಯಲ್ಲಿ ಜಲಸಂಗ್ರಹಾಗಾರ ನಿರ್ಮಾಣ: ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾವಲ್ ಭೈರಸಂದ್ರ ಗ್ರಾಮದಲ್ಲಿ ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ಅಂದಾಜು ರೂ. 22.50 ಕೋಟಿ ವೆಚ್ಚದಲ್ಲಿ 5.0 ಎಂ.ಎಲ್ (ML) ಸಾಮರ್ಥ್ಯದ ಆರ್‌ಸಿ (RCC) ಜಲಸಂಗ್ರಹಾಗಾರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ. ಹಾಗೂ ಬನಶಂಕರಿ ಸೇವಾ ಠಾಣೆಯಲ್ಲಿರುವ ಹಳೆಯ (Size Stone Masonry) ನೆಲಮಟ್ಟದ ಜಲಸಂಗ್ರಹಾಗಾರವನ್ನು ಕೆಡವಿ, ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ಅಂದಾಜು ರೂ. 39.00 ಕೋಟಿ ವೆಚ್ಚದಲ್ಲಿ ಹೊಸ 22 ಎಂ.ಎಲ್ (ML) ಸಾಮರ್ಥ್ಯದ ಆರ್‌ಸಿಸಿ ಜಲಸಂಗ್ರಹಾಗಾರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.
  10. ಗ್ರೇಟ‌ರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶದ ಜಿಐಎಸ್‌ ಆಧಾರಿತ ಮಾಸ್ಟರ್ ಪ್ಲಾನ್‌ ಗೆ ಅನುಮೋದನೆ: ಗ್ರೇಟರ್ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ 16.60 ಕೋಟಿ ರೂ. ವೆಚ್ಚದಲ್ಲಿ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ತಯಾರಿಸುವ ಕುರಿತು ಸಚಿವ ಸಂಪುಟ ಅನುಮೋದನೆ
  11. ಕಾಚರಕನಹಳ್ಳಿಯಲ್ಲಿ 51.37 ಕೋಟಿ ರೂ. ವೆಚ್ಚದ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ: ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಾಚರಕನಹಳ್ಳಿಯಲ್ಲಿ ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ಅಂದಾಜು ರೂ. 51.37 ಕೋಟಿ ವೆಚ್ಚದಲ್ಲಿ 10 ಎಂಎಲ್‌ಡಿ (MLD) ಸಾಮರ್ಥ್ಯದ ತ್ಯಾಜ್ಯನೀರು ಸಂಸ್ಕರಣಾ ಘಟಕದ (STP) ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.
  12. 14 ಕೋಟಿ ರೂ. ವೆಚ್ಚದಲ್ಲಿ 'ಪ್ರಾಜೆಕ್ಟ್ ಕೆ-ಮಾನಿಟರ್' ಯೋಜನೆ ಜಾರಿಗೆ ಅನುಮೋದನೆ: ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಸರ್ಕಾರಿ ಯೋಜನೆಗಳ ಮೌಲ್ಯಮಾಪನ ಮಾಡಲು ಮತ್ತು ಸಮೀಕ್ಷೆಗಳ ಮೂಲಕ ಸಾರ್ವಜನಿಕರ ಪ್ರತಿಕ್ರಿಯೆ/ಅಭಿಪ್ರಾಯ ಸಂಗ್ರಹಿಸಲು ಅಂದಾಜು ರೂ. 14.00 ಕೋಟಿ ವೆಚ್ಚದಲ್ಲಿ 'ಪ್ರಾಜೆಕ್ಟ್ ಕೆ-ಮಾನಿಟರ್' (Project K-Monitor) ಯೋಜನೆಯ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ.



ನಂದಿನಿ ಹಾಲಿನ ದರ ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ!

ಬೆಂಗಳೂರು: ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕೆಎಂಎಫ್‌ ನಂದಿನಿ ಹಾಲಿನ ದರವನ್ನು (Nandini milk price hike) ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಹಾಲಿನ ದರ ಹೆಚ್ಚಳಕ್ಕೆ ಹಲವು ತಿಂಗಳುಗಳಿಂದ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಒತ್ತಾಯಿಸಿದ್ದವು. ಕೆಎಂಎಫ್‌ ಕೂಡ ಸರ್ಕಾರಕ್ಕೆ ಕಳೆದ ತಿಂಗಳೇ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸರ್ಕಾರ ದರ ಏರಿಕೆಗೆ ಸಮ್ಮತಿ ಸೂಚಿಸಿದೆ.

ದರ ಏರಿಕೆಯ 8 ರೂಪಾಯಿಯಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲು ನಿರ್ಧರಿಸಲಾಗಿದೆ. ರೈತರಿಗೆ ಬಮುಲ್ ವ್ಯಾಪ್ತಿಯಲ್ಲಿ ಸದ್ಯ ಪ್ರತಿ ಲೀಟರ್‌ಗೆ 33 ರೂ. ದಿಂದ 35 ರೂ. ನೀಡಲಾಗುತ್ತಿದ್ದು, ಆ ಮೊತ್ತ 40 ರಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ. ಹೆಚ್ಚುವರಿ 1 ರೂಪಾಯಿಯನ್ನು ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ.

ಹಾಲಿನ ದರ ಏರಿಕೆ ಬಗ್ಗೆ ಸಚಿವ ಕೃಷ್ಣಬೈರೇಗೌಡ ಅವರು ಪ್ರತಿಕ್ರಿಯಿಸಿ, ಹಾಲಿನ ದರ ಹೆಚ್ಚಳ ಮಾಡಲು ಹಾಲು ಉತ್ಪಾದಕರು ಹಾಗೂ ಹಾಲು ಒಕ್ಕೂಟಗಳಿಂದ ಬೇಡಿಕೆ ಬಂದಿತ್ತು. ಈ ಬಗ್ಗೆ ಮೇಲ್ಮನೆಯಲ್ಲೂ ಚರ್ಚೆ ನಡೆದು, ಎಲ್ಲ ಪಕ್ಷಗಳ ಸದಸ್ಯದಿಂದ ಸಹಮತ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.