ಬೆಂಗಳೂರು: ರಾಜ್ಯದಲ್ಲಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ 20,000 ಕೋಟಿ ಯೋಜನೆ, ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ 14 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ಅನುಮೋದನೆ ಸೇರಿ ಹಲವು ಪ್ರಮುಖ ನಿರ್ಣಯಗಳನ್ನು ಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ 20,000 ಕೋಟಿ ಯೋಜನೆ:
ಲೋಕೋಪಯೋಗಿ ಇಲಾಖೆಯಯಿಂದ ವಿವಿಧ ಯೋಜನೆಗಳಡಿಯಲ್ಲಿ ಒಟ್ಟು 20,000 ಕೋಟಿ ವೆಚ್ಚದಲ್ಲಿ ರಾಜ್ಯ ಹೆದ್ದಾರಿಗಳು, ಪ್ರಮುಖ ಜಿಲ್ಲಾ ರಸ್ತೆಗಳು ಮತ್ತು ಸೇತುವೆಗಳನ್ನು ನಿರ್ಮಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಪೈಕಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಹಂತ 5, ಘಟ್ಟ 2 ರಡಿಯಲ್ಲಿ 1,897 ಕಿ.ಮೀ. ರಸ್ತೆ ಕಾಮಗಾರಿಗಳು, ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6,000 ಕೋಟಿ ವೆಚ್ಚದ ಕಾಮಗಾರಿಗಳು ಹಾಗೂ 3,000 ಕೋಟಿ ವೆಚ್ಚದ ಹೆಚ್ಚುವರಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಇದರೊಂದಿಗೆ ಜಿಲ್ಲಾ ಕೇಂದ್ರಗಳನ್ನು ತಾಲೂಕು ಕೇಂದ್ರಗಳಿಗೆ ಮತ್ತು ಪರಸ್ಪರ ತಾಲೂಕು ಕೇಂದ್ರಗಳನ್ನು ಬೆಸೆಯುವ ಸುಮಾರು 3,986 ಕಿ.ಮೀ. ಉದ್ದದ ರಸ್ತೆ ಜಾಲವನ್ನು 6,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಹೊಸ ಯೋಜನೆಗೂ ಒಪ್ಪಿಗೆ ಸೂಚಿಸಲಾಗಿದೆ. ಹಾಗೆಯೇ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಸುತ್ತಮುತ್ತಲಿನ 142.27 ಕಿ.ಮೀ. ರಸ್ತೆಗಳ ಅಭಿವೃದ್ಧಿಗೆ 3,409.02 ಕೋಟಿ ಪರಿಷ್ಕೃತ ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಕಿದ್ವಾಯಿ, ಕಿಮ್ಸ್ ಆಸ್ಪತ್ರೆಗಳಿಗೆ 40 ಕೋಟಿ ವೆಚ್ಚದ ರೋಬೊಟಿಕ್ ಸರ್ಜರಿ ಉಪಕರಣ
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (ಕಿಮ್ಸ್) ಒಟ್ಟು 40 ಕೋಟಿ ವೆಚ್ಚದಲ್ಲಿ ರೋಬೊಟಿಕ್ ಸರ್ಜರಿ ಉಪಕರಣ ಖರೀದಿಸಲು ತೀರ್ಮಾನ. ಪ್ರತಿ ಸಂಸ್ಥೆಗೆ ತಲಾ 20 ಕೋಟಿ ನಿಗದಿಪಡಿಸಲಾಗಿದ್ದು, ಇದರಲ್ಲಿ 15 ಕೋಟಿ ಸರ್ಕಾರಿ ಅನುದಾನ ಹಾಗೂ 5 ಕೋಟಿ ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲಾಗುತ್ತದೆ. ಕ್ಯಾನ್ಸರ್ ರೋಗಿಗಳಿಗೆ ಮತ್ತು ಉತ್ತರ ಕರ್ನಾಟಕದ ರೋಗಿಗಳಿಗೆ ವರದಾನವಾಗಲಿರುವ ಈ ಯೋಜನೆಯನ್ನು ಮುಂದಿನ ಆರು ತಿಂಗಳೊಳಗೆ ಜಾರಿಗೆ ತರುವ ಗುರಿ ಹೊಂದಲಾಗಿದೆ. ಇದೇ ವೇಳೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳ ಪ್ರಚಾರಕ್ಕಾಗಿ 28.01 ಕೋಟಿ ವೆಚ್ಚದ ಐಇಸಿ ಕ್ರಿಯಾ ಯೋಜನೆಗೂ ಒಪ್ಪಿಗೆ ಸಿಕ್ಕಿದೆ.
ಮಲ್ಪೆ ಬಂದರಿನಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ
ಪ್ರತಿದಿನ ಸಾವಿರಾರು ಪ್ರವಾಸಿಗರು ಮತ್ತು ಸಾವಿರಾರು ಮೀನುಗಾರಿಕಾ ದೋಣಿಗಳು ಕಾರ್ಯನಿರ್ವಹಿಸುವ ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. 1,800 ಚದರ ಮೀಟರ್ ವಿಸ್ತೀರ್ಣದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP - DBFOT) ಮಾದರಿಯಲ್ಲಿ ₹8.43 ಕೋಟಿ ಹೂಡಿಕೆಯೊಂದಿಗೆ ಸುಸಜ್ಜಿತ ಬಹುಮಹಡಿ ವಾಹನ ನಿಲುಗಡೆ ಸಂಕೀರ್ಣವನ್ನು 31 ವರ್ಷಗಳ ರಿಯಾಯಿತಿ ಅವಧಿಗೆ ನಿರ್ಮಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ ಮೀನು ಸಾಗಣೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಅನುಮೋದನೆ
ಐತಿಹಾಸಿಕ ಹಾಗೂ ಪುರಾತತ್ವ ಮಹತ್ವವುಳ್ಳ ಪ್ರಾಚೀನ ಬೌದ್ಧ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿಯ ಸಮಗ್ರ ಅಭಿವೃದ್ಧಿಗೆ ಹೊಸ ಆಡಳಿತ ವ್ಯವಸ್ಥೆ ರೂಪಿಸಲಾಗುತ್ತಿದೆ. ಅಶೋಕನ ಶಾಸನಗಳು ಮತ್ತು ಬೌದ್ಧ ಕಾಲದ ಅಪರೂಪದ ಅವಶೇಷಗಳನ್ನು ಹೊಂದಿರುವ ಈ ಪವಿತ್ರ ಸ್ಥಳಕ್ಕೆ ದೇಶ-ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ‘ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2026’ಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನ.
ಮುದ್ದೇಬಿಹಾಳ,ಕಂಪ್ಲಿಯಲ್ಲಿ ನೂತನ ಕೈಗಾರಿಕಾ ವಸಾಹತು
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಉತ್ತೇಜನ ನೀಡಲು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಹರಳಹಳ್ಳಿಯಲ್ಲಿ ಒಟ್ಟು 26.10 ಕೋಟಿ ವೆಚ್ಚದಲ್ಲಿ ನೂತನ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ರೈಲ್ವೆ ಬ್ಯಾರಿಕೇಡ್
ಚಾಮರಾಜನಗರ ವೃತ್ತದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಪಿ.ಜಿ. ಪಾಳ್ಯದಿಂದ ಕುಡುವಲೆ ಕ್ರಾಸ್ವರೆಗೆ 10.60 ಕಿ.ಮೀ. ಉದ್ದದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 16.83 ಕೋಟಿ ಮಂಜೂರು. ಮಲೆ ಮಹದೇಶ್ವರ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷವನ್ನು ಶಾಶ್ವತವಾಗಿ ತಡೆಯುವ ಉದ್ದೇಶದಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಿಂದ ಅರಣ್ಯ ಅಂಚಿನ ಸುಮಾರು 2,942 ರೈತ ಕುಟುಂಬಗಳಿಗೆ ಕಾಡುಪ್ರಾಣಿಗಳ ಉಪಟಳದಿಂದ ಸುರಕ್ಷತೆ ದೊರೆಯಲಿದೆ.
ರಾಜ್ಯದ ಪ್ರಮುಖ ಸೇತುವೆಗಳ ಮರು ನಿರ್ಮಾಣ, ನ್ಯಾಯಾಲಯ ಕಟ್ಟಡ ಕಾಮಗಾರಿ
ಮಳೆಗಾಲದಲ್ಲಿ ಭದ್ರಾ ಜಲಾಶಯದ ನೀರಿನಿಂದ ಮುಳುಗಡೆಯಾಗುತ್ತಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಿದ್ದಾರೂಢ ನಗರ ಸಂಪರ್ಕಿಸುವ ಸೇತುವೆ ಮರುನಿರ್ಮಾಣಕ್ಕೆ ₹42 ಕೋಟಿ ಮೀಸಲಿಡಲಾಗಿದೆ. ಜತೆಗೆ ಶಿವಮೊಗ್ಗ ನಗರದಲ್ಲಿ ಹಳೆಯ ತುಂಗಾ ಸೇತುವೆಯ ಮರುನಿರ್ಮಾಣಕ್ಕೆ ₹40 ಕೋಟಿ, ಕಲಬುರಗಿಯ ಬೆಣ್ಣೆತೊರಾಗೆ ಅಡ್ಡಲಾಗಿ ಕನ್ನೂರು ಬಳಿ ಎತ್ತರಿಸಿದ ಸಂಪರ್ಕ ರಸ್ತೆ ಹಾಗೂ ಸೇತುವೆಗೆ ₹21 ಕೋಟಿ ಮತ್ತು ಚಿತ್ರದುರ್ಗದ ಮೊಳಕಾಲ್ಮುರು ತಾಲೂಕಿನಲ್ಲಿ ಜಿನಗಿಹಳ್ಳ ನದಿಯ ಮೇಲಿನ ಸೇತುವೆಗೆ ₹12 ಕೋಟಿ ವೆಚ್ಚದ ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಇದೇ ವೇಳೆ ಹಾಸನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಅನೆಕ್ಸ್ ಮತ್ತು ಕುಟುಂಬ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕಾಗಿ ₹12.40 ಕೋಟಿ ಪರಿಷ್ಕೃತ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ.
ಹಿರಿಯೂರು ತಾಲೂಕಿನ 14 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ಒಪ್ಪಿಗೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಕಾವೇರಿ 4ನೇ ಹಂತದ 1ನೇ ಘಟ್ಟದ ಟಿ.ಕೆ. ಹಳ್ಳಿಯ ಜಲಶುದ್ಧೀಕರಣ ಘಟಕ ಹಾಗೂ 2ನೇ ಘಟ್ಟದ ಹಾರೋಹಳ್ಳಿ, ತಾತಗುಣಿಯ ಜಲರೇಚಕ ಯಂತ್ರಾಗಾರಗಳ ಮುಂದಿನ 5 ವರ್ಷಗಳ ಸಮಗ್ರ ನಿರ್ವಹಣೆಗೆ ಕ್ರಮವಾಗಿ ₹33.58 ಕೋಟಿ ಹಾಗೂ ₹84.47 ಕೋಟಿಗಳಿಗೆ ಅನುಮತಿ ನೀಡಲಾಗಿದೆ. ಮತ್ತೊಂದೆಡೆ ಬರಪೀಡಿತ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಕೆರೆಯಿಂದ 14 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಗೆ ₹35 ಕೋಟಿ ಹಾಗೂ ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ₹35.04 ಕೋಟಿ ಅನುದಾನವನ್ನು ಸಂಪುಟ ಸಭೆ ಅನುಮೋದಿಸಿದೆ.