ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬರ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದನೆ; ಮೋಜಿಣಿ ಶುಲ್ಕ ಹೆಚ್ಚಳಕ್ಕೆ ತಡೆ

Mojini charges: ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರ್ಕಾರದ ಮೊದಲ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು. ಅದಕ್ಕಾಗಿ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಡಿಸಿಎಂ ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 5: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿಯನ್ನು ಪರಿಗಣಿಸಿ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಮೋಜಿಣಿ ವ್ಯವಸ್ಥೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗುವ ವಿವಿಧ ಅಳತೆ ಅರ್ಜಿಗಳ ಪರಿಷ್ಕೃತ ಶುಲ್ಕವನ್ನು (Mojini charges) ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿಎಂ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರು ಸೂಚಿಸಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ ಕಂಇ 170 ಎಸ್‌ಎಸ್‌ಸಿ 2026, ಬೆಂಗಳೂರು, ದಿನಾಂಕ 19-09-2026ರ ಅನ್ವಯ, ಮೋಜಿಣಿ ವ್ಯವಸ್ಥೆಯಡಿ ಸ್ವೀಕರಿಸಲಾಗುವ ವಿವಿಧ ರೀತಿಯ ಅಳತೆ ಅರ್ಜಿಗಳ ಶುಲ್ಕ ಹಾಗೂ ಪರವಾನಗಿ ಪಡೆದ ಭೂಮಾಪಕರ ಸೇವಾ ಶುಲ್ಕವನ್ನು ಪರಿಷ್ಕರಿಸಿ, 01-10-2026ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು. ಆದರೆ, ಪ್ರಸ್ತುತ ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ರೈತರು ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಭೂಮಾಪನ ಮತ್ತು ಕಂದಾಯ ಸೇವೆಗಳ ಶುಲ್ಕ ಹೆಚ್ಚಳದಿಂದ ರೈತರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಬಾರದು ಎಂಬ ಉದ್ದೇಶದಿಂದ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಆದೇಶ ಹೊರಡಿಸುವವರೆಗೆ ಮೋಜಿಣಿ ಸೇವೆಗಳಿಗೆ ಸಂಬಂಧಿಸಿದಂತೆ 01-10-2026ಕ್ಕೂ ಮೊದಲು ಚಾಲ್ತಿಯಲ್ಲಿದ್ದ ಶುಲ್ಕವೇ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬರದಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ಹಿತಾಸಕ್ತಿಯೇ ಸರ್ಕಾರದ ಮೊದಲ ಆದ್ಯತೆ. ಈಗಾಗಲೇ ಹಲವು ರೀತಿಯ ಆರ್ಥಿಕ ಒತ್ತಡ ಎದುರಿಸುತ್ತಿರುವ ರೈತರ ಮೇಲೆ ಕಂದಾಯ ಇಲಾಖೆಯ ಸೇವೆಗಳ ಮೂಲಕ ಹೆಚ್ಚುವರಿ ಹೊರೆ ಬೀಳಬಾರದು. ಅದಕ್ಕಾಗಿ ಪರಿಷ್ಕೃತ ಶುಲ್ಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಡಿಸಿಎಂ ಪರಮೇಶ್ವರ ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅ.12ಕ್ಕೆ ದೆಹಲಿಯಲ್ಲಿ ಸಭೆ; ಸಿಎಂ ಡಿಕೆಶಿಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆಹ್ವಾನ

ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಆರ್ಥಿಕ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ನಿರಂತರವಾಗಿ ಅವಲೋಕಿಸಲಾಗುವುದು. ಪರಿಸ್ಥಿತಿ ಸುಧಾರಿಸಿದ ಬಳಿಕ ಸೂಕ್ತ ಸಮಯದಲ್ಲಿ ಶುಲ್ಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮರು ಆದೇಶ ಹೊರಡಿಸಲಾಗುವುದು. ರೈತರ ಹಿತಾಸಕ್ತಿ ಮತ್ತು ಸಾರ್ವಜನಿಕ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡೇ ಕಂದಾಯ ಇಲಾಖೆಯ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.