ಬೆಂಗಳೂರು: ಕರ್ನಾಟಕ ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಸದೃಢವಾಗಿದೆ. ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಪ್ರತಿಯೊಂದು ಭಾಗವೂ ವೈಶಿಷ್ಟ್ಯ ಪೂರ್ಣವಾಗಿವೆ. ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮದ ಮೇಲೆ ಹೂಡಿಕೆ ಮಾಡಲು ನಮ್ಮ ರಾಜ್ಯ ಪ್ರಶಸ್ತ್ಯವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ನಗರದಲ್ಲಿ ಗುರುವಾರ ನಡೆದ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳ ಒಕ್ಕೂಟದ 55ನೇ ಸಮ್ಮೇಳನ ‘ಫ್ಯೂಚರ್ ಸ್ಕೇಪ್ 2047’ ದಲ್ಲಿ ಅವರು ಮಾತನಾಡಿದರು.
‘350 ಕಿ.ಮೀ ಉದ್ದದ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ರೂಪ ನೀಡಬೇಕಿದೆ. ಉತ್ತರ ಕರ್ನಾಟಕದಲ್ಲಿ ಹಲವಾರು ಪ್ರವಾಸೋದ್ಯಮ ಸ್ಥಳಗಳಿವೆ. ಅವುಗಳ ಬಗ್ಗೆ ನೀವುಗಳೂ ಗಮನ ಹರಿಸಬೇಕಿದೆ. ಗೋವಾ ಮತ್ತು ಕೇರಳ ರಾಜ್ಯಗಳು ಪ್ರವಾಸಿಗರನ್ನು ಸೆಳೆದಂತೆ ಕರ್ನಾಟಕದ ಕರಾವಳಿಗಳು ಸೆಳೆಯಬೇಕಿದೆ. ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರ ಜತೆ ಹಾಗೂ ಇತರೆ ಉದ್ಯಮಿಗಳ ಜತೆ ಶೀಘ್ರದಲ್ಲೇ ಮಂಗಳೂರಿನಲ್ಲಿ ಇದರ ಬಗ್ಗೆ ಸಭೆ ನಡೆಸಲಾಗುವುದು’ ಎಂದರು.
ಕರಾವಳಿ ಭಾಗ ಸಂಪತ್ಭರಿತವಾಗಿತ್ತು, 8-9 ಮೆಡಿಕಲ್ ಕಾಲೇಜುಗಳಿವೆ. ಸುಮಾರು 9 ಬ್ಯಾಂಕ್‌ಗಳು ಜನಿಸಿದ ನೆಲವಿದು. ಮತ್ತೆ ಅದರ ವೈಭವ ಮರುಕಳಿಸಬೇಕಿದೆ. ಉದ್ಯಮಿಗಳಿಗೆ ನಾವು ಬಲ ನೀಡಿದರೆ ಅವರು ಬಲ ನೀಡುತ್ತಾರೆ. ಸರ್ಕಾರ ಹೋಟೆಲ್‌ಗಳನ್ನು ಕಟ್ಟಲು ಆಗುವುದಿಲ್ಲ ಆದರೆ ನಾವು ನೀತಿಗಳನ್ನು ನಿರೂಪಿಸುವವರು. ಹೋಟೆಲ್ ಉದ್ಯಮ ಗ್ರಾಹಕರ ಸಂತೋಷದ ಮೇಲೆ ನಿಂತಿರುತ್ತದೆ ಎಂದರು.
ನಿಮ್ಮ ಒತ್ತಡಕ್ಕೆ ಮಣಿದಿದ್ದೇವೆ
ʼನಗರದಲ್ಲಿ ತಡರಾತ್ರಿ 1 ಗಂಟೆಯವರೆಗೆ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿ ನೀಡಬೇಕು ಎನ್ನುವ ಮನವಿಯನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹೊಸತರಲ್ಲಿ ನನಗೆ ಮನವಿ ಸಲ್ಲಿಸಲಾಗಿತ್ತು. ನಾವುಗಳು ನಿಮ್ಮ ಒತ್ತಡಕ್ಕೆ ಮಣಿದಿದ್ದೇವೆʼ ಎಂದರು.
ಮುಂಬರುವ 19, 20ರಂದು ಟೆಕ್ ಸಮ್ಮೇಳನದ ಮೂಲಕ ತಂತ್ರಜ್ಞಾನದ ಬೆಳವಣಿಗೆಗೆ ಹೊಸ ವೇದಿಕೆ ಸೃಷ್ಟಿಸಲಾಗುತ್ತಿದೆ. ಮೈಸೂರು ಭಾಗವೂ ಸಹ ಉತ್ತಮವಾಗಿ ಬೆಳೆಯುತ್ತಿದೆ. ಮುಂದಿನ ವಾರದಲ್ಲಿ ನಡೆಯುವ ದಸರಾ ಕರ್ನಾಟಕದ ಹೆಗ್ಗರುತಾಗಿದೆ. ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಜನ ದಸರಾ ವೀಕ್ಷಣೆ ಮಾಡಿದ್ದು ಇತಿಹಾಸ ಎಂದರು.
ಏಷ್ಯಾದ ಬೇರೆ ನಗರಗಳಿಗೆ ಹಾಗೂ ಬೆಂಗಳೂರನ್ನು ಹೋಲಿಕೆ ಮಾಡಿ ನೋಡಬಹುದು ಅಷ್ಟು ಅತ್ಯುತ್ತಮ ನಗರವಾಗಿ ಇದು ರೂಪುಗೊಂಡಿದೆ. ಜ್ಞಾನ ನಗರವಾಗುವುದರ ಜೊತೆಗೆ ಅನೇಕ ರಂಗಗಳಲ್ಲಿಯೂ ಗುರುತಿಸಿಕೊಂಡಿದೆ. ಬೆಂಗಳೂರು ವಿಶ್ವದ ಅಗ್ರಮಾನ್ಯ ನಗರವಾಗಿ ರೂಪುಗೊಂಡಿದೆ. ಪ್ರವಾಸೋದ್ಯಮದಲ್ಲಿಯೂ ಇನ್ನಷ್ಟು ಗಟ್ಟಿಗೊಳಿಸಬೇಕಿದೆ ಎಂದರು.
ಈ ಸುದ್ದಿಯನ್ನೂ ಓದಿ | DK Shivakumar: ಮತದಾನದ ಹಕ್ಕು ಕಾಯೋದು ಆಯೋಗದ ಕರ್ತವ್ಯ, ಕಸಿಯುವುದಲ್ಲ ಎಂದ ಡಿ.ಕೆ. ಶಿವಕುಮಾರ್
ದೇಶದಲ್ಲಿಯೇ ಎರಡನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ರಾಜ್ಯ ಕರ್ನಾಟಕ. ಸುಮಾರು 25 ಲಕ್ಷ ಎಂಜಿನಿಯರ್‌ಗಳು ಇಲ್ಲಿ ಉದ್ಯೋಗ ಕಂಡುಕೊಂಡಿದ್ದಾರೆ. 2 ಲಕ್ಷ ವಿದೇಶಿಗರು ಇಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.