ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Karnataka SIR) ಪ್ರಕ್ರಿಯೆಯ ಮೊದಲ ಕರಡು ಮತದಾರರ ಪಟ್ಟಿಯನ್ನು (draft voter roll) ಬಿಡುಗಡೆ ಮಾಡಲಾಗಿದ್ದು, ಒಟ್ಟು 1,07,96,399 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೈರಾದವರು ಹಾಗೂ ಸ್ಥಳಾಂತರಗೊಂಡವರ ವಿವರ, ಮನೆ-ಮನೆ ಸಮೀಕ್ಷೆ ಹಾಗೂ ಪರಿಶೀಲನೆ ವೇಳೆ ಪತ್ತೆಯಾದ ಅಂಶಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಒಟ್ಟು 65,45,679 ಮತದಾರರು ಶಾಶ್ವತವಾಗಿ ಬೇರೆಡೆ ಸ್ಥಳಾಂತರಗೊಂಡಿರುವುದು ಕಂಡುಬಂದಿದೆ. ಪರಿಶೀಲನೆ ವೇಳೆ ಸ್ಥಳದಲ್ಲಿ ಲಭ್ಯವಿಲ್ಲದ ಮತ್ತು ಗೈರಾದ ಮತದಾರರ ಸಂಖ್ಯೆ 15,17,042 ಆಗಿದೆ. ಗೈರುಹಾಜರಿ, ಶಾಶ್ವತ ಸ್ಥಳಾಂತರ, ಮೃತರು ಹಾಗೂ ನಕಲಿ ಹೆಸರುಗಳು ಸೇರಿದಂತೆ ಒಟ್ಟು 1,07,96,399 ಮತದಾರರ ಹೆಸರುಗಳನ್ನು ಮೊದಲ ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತದಾರರು ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಲು CEO Karnataka ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ತಿದ್ದುಪಡಿ ಅಥವಾ ಆಕ್ಷೇಪಣೆಗಳಿದ್ದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 17ರವರೆಗೆ ನಡೆದ 49 ದಿನಗಳ ಮನೆ-ಮನೆ ಸಮೀಕ್ಷೆಯ (SIR) ನಂತರ, ಗೈರುಹಾಜರಿ, ಸ್ಥಳ ಬದಲಾವಣೆ, ನಕಲಿ, ಮೃತ ಹಾಗೂ ಇತರ (ASDDO) ವರ್ಗಗಳಲ್ಲಿ ಗುರುತಿಸಲಾದ ಸುಮಾರು 1.08 ಕೋಟಿ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳು ಅಧಿಕೃತ ಜಾಲತಾಣವಾದ https://www.ceo.karnataka.gov.in ನಲ್ಲಿ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಕ್ಕು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಲು, ಕೈಬಿಡಲಾದ ಹೆಸರುಗಳನ್ನು ಸರಿಪಡಿಸಲು ಹಾಗೂ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಆಕ್ಷೇಪಣೆ ಸಲ್ಲಿಕೆಗೆ ಅವಧಿ: ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ
ನೋಟಿಸ್ ಮತ್ತು ವಿಚಾರಣೆ ಪ್ರಕ್ರಿಯೆ: ಆಗಸ್ಟ್ 24 ರಿಂದ ಅಕ್ಟೋಬರ್ 22 ರವರೆಗೆ.
ಕರಡು ಪಟ್ಟಿಯಲ್ಲಿ ಮತದಾರರ ಹೆಸರು ಹುಡುಕುವುದು ಹೇಗೆ?
ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ಗೆ https://voters.eci.gov.in/download-eroll?stateCode=S10 ಭೇಟಿ ನೀಡಿ. ಅಲ್ಲಿ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿಕೊಂಡರೆ ಕರಡು ಮತದಾರರ ಪಟ್ಟಿ ಸಿಗುತ್ತದೆ. ಬೂತ್ ವಾರು ಮತದಾರರ ಪಟ್ಟಿ ಪಿಡಿಎಫ್ ಅನ್ನು ಸರ್ಚ್ ಮಾಡಿ, ಡೌನ್‌ಲೋಡ್ ಮಾಡಿಕೊಳ್ಳಬಹುದು.