ಬೀದರ್, ಏ.11: ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ (40th State Journalists' Conference) ಉದ್ಘಾಟಿಸಿ, ಅವರು ಮಾತನಾಡಿದರು.
ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು. ಕ್ಷುಲ್ಲಕ ವಿಚಾರವನ್ನು ದಿನವಿಡೀ ತೋರಿಸುವವರು ಅದರ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಗಂಡ- ಹೆಂಡತಿ ಜಗಳವನ್ನು ಇಡೀ ದಿನ ತೋರಿಸಿದರೆ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರಿಯುತ್ತದೆ. ಅದು ಮುಂದುವರಿಯಲಿ ಎನ್ನುವುದು ಪಟ್ಟಭದ್ರರ ಹಿತಾಸಕ್ತಿಯಾಗಿದೆ ಎಂದರು.
ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013 ರಲ್ಲೂ ಮಾಡಿತ್ತು. ಈಗಲೂ ಮುಂದುವರಿಸಿದೆ. ನಾವು ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನು ಪಾಲಿಸುತ್ತಿದ್ದೇವೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕೆಲವು ಒಳ್ಳೆ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರುಗಳು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿ ಬಿಡುತ್ತಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ ಎಂದರು. ಜನಸಾಮಾನ್ಯರು ಇನ್ನೂ ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನೂ ನಂಬಿಕೆ ಇಟ್ಟಿದ್ದೇನೆ ಎಂದು ಹೇಳಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸವಲತ್ತನ್ನು ಜಾರಿ ಮಾಡಿದ್ದೇ ನಾನು. ಇದರಲ್ಲಿನ ನಿಯಮಗಳಲ್ಲಿ ತೊಂದರೆ ಇದ್ದರೆ, ಆ ಬಗ್ಗೆ ಚರ್ಚಿಸಿ ನಿವಾರಣೆಗೊಳಿಸಲಾಗುವುದು ಎಂದು ಹೇಳಿದರು.
ಹಾರಕುಡ ಹಿರೇಮಠ ಸಂಸ್ಥಾನದ ಡಾ.ಚನ್ನವೀರ ಶಿವಾಚಾರ್ಯರು, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಸಚಿವರುಗಳಾದ ರಹೀಂ ಖಾನ್, ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಆನಂದ್ ದೇವಪ್ಪ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಸಂಸದರಾದ ಸಾಗರ್ ಖಂಡ್ರೆ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಸೇರಿ ಪತ್ರಕರ್ತರ ಸಂಘದ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.