ಬೆಂಗಳೂರು: ಬಿಜೆಪಿಯವರು ಕೆಟ್ಟ ಬುದ್ಧಿ ಬಿಡಬೇಕು. ಹಿಜಾಬ್‌ಗೆ (Hijab) ಅವಕಾಶ ನೀಡಿರುವುದು ನಮಗೆ ಸಮಾನತೆಯ ಸಂಕೇತ. ಈ ವಿಚಾರದಲ್ಲಿ ನಮಗೆ ಸ್ಪಷ್ಟತೆ ಇದೆ. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ ಎಂಬುವುದನ್ನು ನಮ್ಮ ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವೆ. ರಾಜ್ಯದ ಜನರು ಮತ ಕೊಟ್ಟಿದ್ದಾರೆ, ಅದಕ್ಕಾಗಿ ಅವರ ಋಣ ತೀರಿಸಿದ್ದೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದರು.
ಮೈಸೂರಿನಲ್ಲಿ ಸಾಹಿತಿ ದೇವನೂರು ಮಹಾದೇವ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಮಾತನಾಡಿದ್ದಾರೆ. ಕೆಲವರು ಕೇಸರಿ ಶಾಲು (saffron Shawl) ಹಾಕಿಕೊಂಡು ಶಾಲೆಗೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ, ಅದಕ್ಕೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಕೇಸರಿ ಶಾಲು ಹಾಕಿಕೊಂಡು ಬರುವ ರೂಲ್ಸ್ ಇಲ್ಲ, ನಿಯಮ ಮೀರಿದರೆ ಕಾನೂನು ಇದೆ ಎಚ್ಚರಿಕೆ ನೀಡಿದರು.
ಕೇಂದ್ರೀಯ ವಿದ್ಯಾಲಯದಲ್ಲಿ ಯಾವ ರೂಲ್ಸ್ ಇದೆ ಎಂಬುದನ್ನು ಬಿಜೆಪಿ ಅವರು ಮೊದಲು ನೋಡಿಕೊಂಡು ಬರಲಿ. ಅಲ್ಲಿನ ವಿದ್ಯಾರ್ಥಿಗಳಿಗೆ ಮೊದಲು ಕೇಸರಿ ಶಾಲು ಹಾಕಿಸಿ ಕಳುಹಿಸಲಿ ರಾಜ್ಯ ಸರ್ಕಾರದ ಶಾಲೆಗಳಲ್ಲಿ ಕೇಸರಿ ಶಾಲಿಗೆ ಅವಕಾಶ ಇಲ್ಲ ಎಂದು ತಿಳಿಸಿದರು.
ಇನ್ನು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಕೇಂದ್ರ ಸರ್ಕಾರ ವಿರುದ್ಧ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರಕ್ಕೆ ಒಂದು ಪರೀಕ್ಷೆ ಮಾಡುವ ಯೋಗ್ಯತೆ ಇಲ್ಲ. ನನ್ನ ಇಲಾಖೆಯಲ್ಲಿ ಒಂದೇ ಒಂದು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ಕಳೆದ ಮೂರು ವರ್ಷದಿಂದ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಉತ್ತರ ಕೊಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಒಂದು ವಾರ ಓಡಿ ಹೋಗಿದ್ದರು ಎಂದು ಕಿಡಿಕಾರಿರು.
ಧರ್ಮೇಂದ್ರ ಪ್ರಧಾನ್ ತಮ್ಮ ಬಳಿ ಬರಲಿ, ಸೋರಿಕೆ ಇಲ್ಲದೆ ಪರೀಕ್ಷೆ ಹೇಗೆ ಮಾಡೋದು ಅಂತ ಹೇಳಿ ಕೊಡುತ್ತೇನೆ. ಒಂದೇ ವಾರದಲ್ಲಿ ಧರ್ಮೇಂದ್ರ ಪ್ರಧಾನಿಗೆ ತಿಳಿವಳಿಕೆ ಕೊಡುತ್ತೇನೆ. ನೀಟ್ ಪರೀಕ್ಷೆಯಲ್ಲಿ ಶೇ.96 ಹಿಂದುಳಿದ ವರ್ಗಗಳ ಮಕ್ಕಳಿದ್ದಾರೆ, ಅವರ ಕಾಲಿನ ಕೆಳಗೆ ಬಿಜೆಪಿಯವರು ನುಗ್ಗಲಿ, ಆಗಲಾದರೂ ಬುದ್ಧಿ ಬರುತ್ತೆ ಎಂದು ಟೀಕಿಸಿದರು.
ದೇವನೂರು ಮಹದೇವ ಅವರ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಶಿಕ್ಷಣ ಇಲಾಖೆಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದೇವೆ. ಒಬ್ಬ ಶಿಕ್ಷಣ ಸಚಿವನಾಗಿ ಹಿರಿಯರ ಸಲಹೆ ಪಡೆಯಲು, ದೇವನೂರು ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ನನ್ನ ಮೇಲೆ ಹಲವು ಟೀಕೆಗಳು ಬಂದಿದ್ದವು. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಇದಕ್ಕೆ ಕಾರಣ ನಾವು ತಂದಿರುವ ಬದಲಾವಣೆಗಳು ಎಂದು ಹೇಳಿದರು.
ಹಿಂದೆ ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು, ವೆಬ್‌ಕಾಸ್ಟ್ ಸಮಸ್ಯೆಗಳೂ ಇದ್ದವು. ಅವನ್ನು ಸರಿಪಡಿಸಿ ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ ಎಂದು ತಿಳಿಸಿದರು.