ಬೆಂಗಳೂರು, ಜೂ.19: ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರು ಇವರು ಎಂದು ಮಾಧ್ಯಮಗಳಲ್ಲಿ ಕೆಲವರ ಹೆಸರು ಹರಿಬಿಡಲಾಗುತ್ತಿದೆ. ಇದನ್ನು ದಯವಿಟ್ಟು ಯಾವುದೇ ಮಾಧ್ಯಮಗಳು ಮಾಡಬಾರದು ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಮನವಿ ಮಾಡಿದ್ದಾರೆ. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ.
ಅಡ್ಡ ಮತದಾನ ಮಾಡಿದವರ ಪತ್ತೆಗಾಗಿ ಸಮಿತಿ ರಚಿಸಲಾಗಿದೆ. ಈ ಸಮಿತಿ ವರದಿ ನೀಡಲಿದೆ. ಆಗ ಅಡ್ಡ ಮತದಾನ ಮಾಡಿದವರು ಪತ್ತೆಯಾದ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಮ್ಮ ಪಕ್ಷದ ವತಿಯಿಂದ ಲಿಂಗರಾಜ ಪಾಟೀಲ್ ಅವರಿಗೆ 30 ಮತಗಳು ಹಾಗೂ ರಘು ಕೌಟಿಲ್ಯ ಅವರಿಗೆ 30 ಮತಗಳನ್ನು ನೀಡಿದ್ದೆವು. ಮತ್ತೆ ಉಳಿದ ಮೂರು ಮತಗಳನ್ನು ಎನ್‍ಡಿಎ ಅಭ್ಯರ್ಥಿಗೆ ಹಾಕಲು ಸೂಚಿಸಲಾಗಿತ್ತು. ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಗೆ ಮತ ಹಾಕುವುದಾಗಿ ಹೇಳಿದರು. ನಾಲ್ವರನ್ನು ಆರ್. ಅಶೋಕ್ ತಮ್ಮೊಂದಿಗೆ ಕರೆದೊಯ್ದು ಮತ ಹಾಕಿಸಿದರು. 30ರಲ್ಲಿ ರಘು ಕೌಟಿಲ್ಯ ಅವರಿಗೆ ಬಂದ ಮತದಲ್ಲಿ ಒಂದು ಅಸಿಂಧುವಾಗಿದೆ. ಲಿಂಗರಾಜು ಪಾಟೀಲ್ ಅವರಿಗೆ ಮೂರು ಮತಗಳು ಬಂದಿಲ್ಲ ಎಂದರು.
ಲಿಂಗರಾಜು ಪಾಟೀಲ್ ಅವರಿಗೆ ಬರಬೇಕಾದ ಮೂವತ್ತು ಮತಗಳಲ್ಲಿ 27 ಬಂದಿದೆ. ನಮ್ಮ ಪಟ್ಟಿಯಲ್ಲಿ ಇದ್ದ ಮೂವರು ಕ್ರಾಸ್ ಓಟ್ ಮಾಡಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಯತ್ನಾಳ್, ಕೃಷ್ಣ ನಾಯಕ್, ಚಂದ್ರು ಲಮಾಣಿ ಹಾಗೂ ದುರ್ಯೋಧನ ಐಹೊಳೆ. ಇವರ ಹೆಸರು ಲಿಂಗರಾಜು ಪಾಟೀಲ್ ಅವರ ಪಟ್ಟಿಯಲ್ಲಿ ಇಲ್ಲ ಎಂದು ವಿವರಿಸಿದರು.
4 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ; ಸಮಯ ನೋಡಿಕೊಂಡು ಕ್ರಮ ಎಂದ ಎಚ್.ಡಿ.ಕುಮಾರಸ್ವಾಮಿ
ಅಡ್ಡ ಮತದಾನ ಸಂಬಂಧ ರಚಿಸಲಾಗಿರುವ ಸಮಿತಿ 25 ರೊಳಗೆ ವರದಿ ನೀಡಲಿದೆ. ನಮ್ಮ ಪಕ್ಷದ ವತಿಯಿಂದ ಯಾರ ಮೇಲೆ ಅನುಮಾನ ಎಂದು ಚರ್ಚೆ ಮಾಡಿಲ್ಲ. ಯಾರೇ ತಪ್ಪಿತಸ್ಥರು ಇದ್ದರೂ ಮುಚ್ಚಿಡುವ ಪ್ರಶ್ನೆ ಇಲ್ಲ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಡಾ. ಚಂದ್ರು ಲಮಾಣಿ ಹಾಗೂ ಕೃಷ್ಣನಾಯಕ್ ಅವರ ಹೆಸರು ಬಂದಿರುವುದರಿಂದ ಅವರು ಹೆದರಿದ್ದು, ರಾಜೀನಾಮೆ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ದರಿಂದ ನಮ್ಮ ವರದಿ ಬರುವವರೆಗೆ ಯಾರ ಹೆಸರನ್ನು ಮಾಧ್ಯಮಗಳಲ್ಲಿ ತೇಲಿಬಿಡಬೇಡಿ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದರು.