ಬೆಂಗಳೂರು, ಜೂ.22: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸ್ಕೌಟ್ ಕಾರ್ಯಕ್ರಮವನ್ನು 3 ವರ್ಷಗಳಿಗೆ ಸೀಮಿತಗೊಳಿಸದೇ, ಇದನ್ನು ಹೆಚ್ಚಿನ ಅವಧಿಗೆ ವಿಸ್ತರಿಸಿ ಎಂದು ಸಿಎಂ ಡಿ.ಕೆ. ಶಿವಕುಮಾರ್ (CM DK Shivakumar) ಸಲಹೆ ನೀಡಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಅತ್ಯುತ್ತಮ ಪ್ರತಿಭಾವಂತ ಪದವಿಪೂರ್ವ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ SCOUT-2.0 ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ, ಅವರು ಮಾತನಾಡಿದರು.
ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಭೇಟಿ ಮಾಡಿರುವುದಕ್ಕೆ ಸಂತೋಷವಾಗಿದೆ. ಕರ್ನಾಟಕ ಎಂದರೆ ಬೆಂಗಳೂರು ಮಾತ್ರವಲ್ಲ. ಚಾಮರಾಜನಗರದಿಂದ ಬೀದರ್‌ವರೆಗೆ ಎಲ್ಲಾ ಗ್ರಾಮೀಣ ಪ್ರದೇಶದವರೆಗೆ ಎಲ್ಲಾ ಭಾಗದ ವಿದ್ಯಾರ್ಥಿಗಳು ಇದ್ದಾರೆ. ಎಲ್ಲಾ ವಿವಿಗಳು ಈ ಜವಾಬ್ದಾರಿ ವಹಿಸಿಕೊಂಡಿರುವುದು ಸಂತೋಷದ ವಿಚಾರ. ಬ್ರಿಟೀಷರು ಇಲ್ಲಿ ಆಳ್ವಿಕೆ ಮಾಡಿದ್ದರೂ ಅವರೊಂದಿಗೆ ಈ ಸಹಯೋಗ ಹಳೆಯದಾಗಿದೆ ಎಂದರು.
ಜ್ಞಾನಗಳು, ಆಲೋಚನೆಗಳ ವಿನಿಮಯ ಮುಂದುವರಿಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕ ಸರ್ಕಾರದ ಜತೆಗೆ ಕೈಜೋಡಿಸಿರುವ ಬ್ರಿಟೀಷ್ ಕೌನ್ಸಿಲ್‌ಗೆ ಧನ್ಯವಾದ ತಿಳಿಸುತ್ತೇನೆ. ನಾನು ಆಯ್ಕೆಯಲ್ಲಿ ಶಿಕ್ಷಣ ತಜ್ಞ. ಶಿಕ್ಷಣ ಎಲ್ಲರಿಗೂ ಅತಿ ಮುಖ್ಯವಾದುದು. ಈ ವಿದ್ಯಾರ್ಥಿಗಳು ನಮ್ಮ ರಾಯಭಾರಿಗಳು. ನಾಯಕರುಗಳನ್ನು ತಯಾರು ಮಾಡುವವನೇ ನಿಜವಾದ ನಾಯಕ. ಇಲ್ಲಿರುವ ವಿದ್ಯಾರ್ಥಿಗಳು ನಾಯಕರುಗಳೇ. ನೀವೆಲ್ಲರೂ ಸರಿಯಾದ ಹಾದಿಯಲ್ಲಿದ್ದೀರಿ. ನೀವು ಕರ್ನಾಟಕದ ಪ್ರತಿನಿಧಿಯಾಗಿದ್ದು, ನಿಮ್ಮ ಭವಿಷ್ಯ ಬದಲಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ ಎಂದರು.
ಕರ್ನಾಟಕ ಹಾಗೂ ಬೆಂಗಳೂರು ಪ್ರತಿಭಾನ್ವಿತರ ಕೇಂದ್ರ
ಕರ್ನಾಟಕ ಹಾಗೂ ಬೆಂಗಳೂರು ಪ್ರತಿಭಾನ್ವಿತರ ಕೇಂದ್ರ. ಇಡೀ ವಿಶ್ವ ನಮ್ಮ ಕಡೆ ನೋಡುತ್ತಿದೆ. ಕರ್ನಾಟಕದ ಮೂಲಕ ಭಾರತವನ್ನು ನೋಡಲಾಗುತ್ತಿದೆ. ನೀವು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಎಂದು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಮ್ಮ ಕಾಲದಲ್ಲಿ ನಾವು ಕಷ್ಟಪಟ್ಟು ಓದಬೇಕಿತ್ತು. ಈಗ ಎಲ್ಲಾ ಮಾಹಿತಿ ನಿಮ್ಮ ಬೆರಳತುದಿಯಲ್ಲಿವೆ. ಈಗ ಶಿಕ್ಷಕರು ವಿದ್ಯಾರ್ಥಿಗಳಿಂದಲೇ ಪಾಠ ಮಾಡಿಸುವ ಮಟ್ಟಿಗೆ ಕಾಲ ಬದಲಾವಣೆಯಾಗಿದೆ. ಪ್ರತಿಯೊಬ್ಬರು ಸಮರ್ಥರು, ನೀವೆಲ್ಲರೂ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಮಾಡುತ್ತಿದ್ದೀರಿ. ಈ ಸ್ಕೌಟ್ ಕಾರ್ಯಕ್ರಮದಲ್ಲಿ ನಿಮ್ಮ ಆಲೋಚನೆ ದೂರದೃಷ್ಟಿಯಾಗಿರಬೇಕು. ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಹಾಗೂ ವಿವಿಗಳು ಈ ಕಾರ್ಯಕ್ರಮ ವಿಸ್ತರಣೆ ಮಾಡಲು ಸಿದ್ಧವಿದೆ. ನಮ್ಮ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು. ಇಲ್ಲಿಂದ ಬ್ರಿಟನ್‌ಗೆ ಹೋಗಿ ಅಲ್ಲೇ ನೆಲೆಸಬೇಡಿ, ಅಲ್ಲಿ ವ್ಯಾಸಂಗ ಮಾಡಿ ಭಾರತಕ್ಕೆ ಮರಳಿ, ಇಲ್ಲಿ ಕೆಲಸ ಮಾಡಿ. ಇಲ್ಲಿಗೆ ಬಂದು ನೀವು ನಿಮ್ಮ ಕ್ಷೇತ್ರದಲ್ಲಿ ಬೆಳೆಯಿರಿ. ವಿವಿಗಳ ಉಪಕುಲಪತಿಗಳು ಇನ್ನಷ್ಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಅವರನ್ನು ಗುರುತಿಸಿ, ಅವರಿಗೆ ಅವಕಾಶ ಕಲ್ಪಿಸಬೇಕು. ಕಳೆದ ವರ್ಷ ಗ್ರಾಮೀಣ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಿದ್ದನ್ನು ನೋಡಿದ್ದೇವೆ ಎಂದು ಹೇಳಿದರು.
ಸದಾಶಿವನಗರ ನಿವಾಸಕ್ಕೆ ಯಾರೂ ಬರಬೇಡಿ; ಗೃಹಕಚೇರಿ ಕೃಷ್ಣಾದಲ್ಲಿ ಭೇಟಿಯಾಗಲು ಸಿಎಂ ಡಿಕೆಶಿ ಮನವಿ
ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗುವುದು ನಿಮ್ಮ ಗುರಿಯಾಗಲಿ
ಇದು ಕೇವಲ ಪದವಿ ಪಡೆಯುವ ಕಾರ್ಯಕ್ರಮವಲ್ಲ. ಯುವ ವಿರ್ದಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರ ಕ್ಷೇತ್ರಗಳಲ್ಲಿ ಅವರನ್ನು ನಾಯಕರನ್ನಾಗಿ ಬೆಳೆಸುವುದಾಗಿದೆ. ಈ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ನೀವು ಕನಸು ಕಾಣಬೇಕು, ಆ ಕನಸು ನನಸಾಗಿಸಿಕೊಳ್ಳಲು ಹಂಬಲಿಸಬೇಕು. ಅದಕ್ಕಾಗಿ ಬದ್ಧರಾಗಿರಬೇಕು, ಶಿಸ್ತಿನ ಪರಿಶ್ರಮ ಹಾಕಬೇಕು. ನೀವು ನಿಮ್ಮ ಜೀವನದಲ್ಲಿ ಯಾವುದೇ ಹಂತಕ್ಕೆ ಹೋದರೂ ನಿಮ್ಮ ಮೂಲವನ್ನು ಮಾತ್ರ ಮರೆಯಬಾರದು. ನೀವು ನಿಮ್ಮ ಮೂಲವನ್ನು ಮರೆತರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಉದ್ಯೋಗಿಗಳಾಗುವುದಕ್ಕಿಂತ ಉದ್ಯೋಗದಾತರಾಗುವುದು ನಿಮ್ಮ ಗುರಿಯಾಗಲಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.