ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gutkha, Pan masala Ban: ಗುಟ್ಕಾ ನಿಷೇಧದಿಂದ ರಾಜ್ಯದ ಅಡಿಕೆ ಬೆಳೆಗಾರರಿಗೆ ತೀವ್ರ ಸಂಕಷ್ಟ; ಆದೇಶ ಹಿಂಪಡೆಯಲು ಶಾಸಕ ಆರಗ ಜ್ಞಾನೇಂದ್ರ ಆಗ್ರಹ

ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಜಾರಿಗೊಳಿಸಿರುವುದರಿಂದ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸರ್ಕಾರದ ಈ ನಿರ್ಧಾರದಿಂದ ಅಡಿಕೆಗೆ ಬೇಡಿಕೆ ಕುಸಿಯುವ ಆತಂಕ ಎದುರಾಗಿದ್ದು, ರೈತರ ಆರ್ಥಿಕ ಸ್ಥಿತಿಗೆ ತೀವ್ರ ಹೊಡೆತ ಬೀಳಲಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅಸಮಾಧಾನ ಹೊರಹಾಕಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ.

ಬೆಂಗಳೂರು: ಕರ್ನಾಟಕದಲ್ಲಿ ತಂಬಾಕು ಹೊಂದಿರುವ ಗುಟ್ಕಾ ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ತಯಾರಿಕೆ, ಮಾರಾಟಕ್ಕೆ ನಿಷೇಧ (Gutkha, Pan masala Ban) ಹೇರಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸಾರ್ವಜನಿಕರು ಸೇರಿ ಹಲವು ರಾಜಕಾರಣಿಗಳು ಸ್ವಾಗತಿಸಿದ್ದಾರೆ. ಆದರೆ, ಮತ್ತೊಂದೆಡೆ ಇದಕ್ಕೆ ಅಡಿಕೆ ಬೆಳೆಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ (Araga jnanendra) ಅವರು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಗುಟ್ಕಾ ನಿಷೇಧ ಜಾರಿಗೊಳಿಸಿರುವುದರಿಂದ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ರಾಜ್ಯದ ಸುಮಾರು 12 ಜಿಲ್ಲೆಗಳ ಲಕ್ಷಾಂತರ ರೈತರು ಅಡಿಕೆ ಬೆಳೆಯನ್ನೇ ತಮ್ಮ ಜೀವನೋಪಾಯದ ಆಧಾರವಾಗಿಸಿಕೊಂಡಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅಡಿಕೆಗೆ ಬೇಡಿಕೆ ಕುಸಿಯುವ ಆತಂಕ ಎದುರಾಗಿದ್ದು, ರೈತರ ಆರ್ಥಿಕ ಸ್ಥಿತಿಗೆ ತೀವ್ರ ಹೊಡೆತ ಬೀಳಲಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ನಿಷೇಧದ ಕುರಿತು ಮರುಪರಿಶೀಲನೆ ನಡೆಸಿ, ಅಡಿಕೆ ಬೆಳೆಗಾರರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಈ ವಿಷಯವಾಗಿ ಇಂದು ಜನಪ್ರತಿನಿಧಿಗಳ ನಿಯೋಗದೊಂದಿಗೆ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದೇನೆ ಎಂದು ತಿಳಿಸಿದ್ದಾರೆ.



ಗುಟ್ಕಾ, ಪಾನ್‌ ಮಸಾಲಾ ಬ್ಯಾನ್‌; ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಿಸಿದ ಸಂಸದ ಡಾ.ಕೆ. ಸುಧಾಕರ್‌

ಚಿಕ್ಕಬಳ್ಳಾಪುರ: ಕರ್ನಾಟಕದಲ್ಲಿ ಗುಟ್ಕಾ, ಪಾನ್‌ ಮಸಾಲಾ ಸೇರಿದಂತೆ ತಂಬಾಕು ಮತ್ತು ನಿಕೋಟಿನ್‌ ಒಳಗೊಂಡ ಉತ್ಪನ್ನಗಳ ಮಾರಾಟಕ್ಕೆ ಒಂದು ವರ್ಷದ ನಿಷೇಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರ ಅತ್ಯಂತ ಸ್ವಾಗತಾರ್ಹ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಸಾರ್ವಜನಿಕರ, ಅದರಲ್ಲೂ ವಿಶೇಷವಾಗಿ ನಮ್ಮ ಯುವಜನತೆಯ ಆರೋಗ್ಯವನ್ನು ಕಾಪಾಡುವ ಹಾಗೂ ಮುಂದಿನ ಪೀಳಿಗೆಯನ್ನು ವ್ಯಸನದಿಂದ ದೂರವಿಡುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಸಾರ್ವಜನಿಕ ಆರೋಗ್ಯ ಕ್ರಮವಾಗಿದೆ.

ತಂಬಾಕು ಹಾಗೂ ನಿಕೋಟಿನ್‌ ಉತ್ಪನ್ನಗಳ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ. ಅದರಲ್ಲೂ ಯುವಜನರು ವ್ಯಸನದ ಬಲೆಗೆ ಬೀಳದಂತೆ ತಡೆಯುವುದು ಸರ್ಕಾರ ಮತ್ತು ಸಮಾಜದ ಜವಾಬ್ದಾರಿ.

ಆದರೆ ಒಂದು ವಿಷಯ ಸ್ಪಷ್ಟವಾಗಿರಬೇಕು. ಈ ನಿಷೇಧ ಕೇವಲ ಘೋಷಣೆಯಲ್ಲಿ ಉಳಿಯಬಾರದು. ಈ ಆದೇಶ ಸರ್ಕಾರಿ ಸುತ್ತೋಲೆ ಅಥವಾ ಅಧಿಸೂಚನೆಗೆ ಸೀಮಿತವಾಗದೆ, ಅದು ನೆಲಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಯಾಗಬೇಕು.

ಅಕ್ರಮ ಮಾರಾಟ, ಕಳ್ಳಸಾಗಣೆ, ಅಂಗಡಿಗಳಲ್ಲಿ ಹಾಗೂ ಕಾಳಸಂತೆಯಲ್ಲಿ ಗುಪ್ತವಾಗಿ ನಡೆಯುವ ಮಾರಾಟ ಮತ್ತು ಆನ್‌ಲೈನ್‌ ಮೂಲಕ ಪೂರೈಕೆಯಾಗದಂತೆ ಪರಿಣಾಮಕಾರಿ ಮೇಲ್ವಿಚಾರಣೆ ಹಾಗೂ ಕಠಿಣ ಜಾರಿ ಅಗತ್ಯ. ನಿಯಮ ಉಲ್ಲಂಘಿಸುವವರ ವಿರುದ್ಧ ಯಾವುದೇ ರಾಜಕೀಯ ಅಥವಾ ಆಡಳಿತಾತ್ಮಕ ಒತ್ತಡವಿಲ್ಲದೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು.

ಭಾರತದ ಆರ್ಥಿಕ ಅಭಿವೃದ್ಧಿಗೆ ರಫ್ತು ನಿರ್ಣಾಯಕ: ವೋಲ್ವೊ ಅಧ್ಯಕ್ಷ ಕಮಲ್‌ ಬಾಲಿ

ವಿಶೇಷವಾಗಿ ಶಾಲೆ-ಕಾಲೇಜುಗಳ ಸುತ್ತಮುತ್ತ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಯುವಜನರಿಗೆ ಸುಲಭವಾಗಿ ಲಭ್ಯವಾಗುವ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಬೇಕು. ಕರ್ನಾಟಕವನ್ನು ಆರೋಗ್ಯಕರ, ವ್ಯಸನಮುಕ್ತ ಹಾಗೂ ನಮ್ಮ ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ರಾಜ್ಯವನ್ನಾಗಿ ಮಾಡುವ ಈ ಪ್ರಯತ್ನಕ್ಕೆ ನಾವೆಲ್ಲರೂ ಬೆಂಬಲಿಸಬೇಕು ಮತ್ತು ಕೈಜೋಡಿಸಬೇಕು. ನಾಗರಿಕರ ಆರೋಗ್ಯವೇ ರಾಜ್ಯದ ಮತ್ತು ದೇಶದ ನಿಜವಾದ ಸಾರ್ವಜನಿಕ ಸಂಪತ್ತು. ಅದನ್ನು ರಕ್ಷಿಸುವ ಪ್ರತಿಯೊಂದು ಹೆಜ್ಜೆಯೂ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.