ಬೆಂಗಳೂರು, ಜೂ.27: ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ಅನೈತಿಕ ಮಾರ್ಗದಿಂದ ಅಡ್ಡ ಮತದಾನ ಮಾಡಿಸಿದ್ದಾರೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ (CT Ravi) ಆರೋಪಿಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ಆಂತರಿಕ ತನಿಖಾ ವರದಿಯನ್ನು ಶನಿವಾರ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸಲ್ಲಿಸಿದ ನಂತರ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಅಡ್ಡ ಮತದಾನ ಆಗಿರುವುದು ಕಾಂಗ್ರೆಸ್ ಮೇಲಿನ ಅಭಿಮಾನಕ್ಕೆ ಅಂತ ಕಾಂಗ್ರೆಸ್ ನಾಯಕರು ಭಾವಿಸಬಾರದು. ಬೇರೆ ರಾಜ್ಯಗಳಲ್ಲಿ ಅಡ್ಡಮತದಾನ ಆದಾಗ ಕಾಂಗ್ರೆಸ್‍ನವರು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಅಂತ ಉಪದೇಶ ಮಾಡ್ತಾರೆ. ಆದರೆ ಈಗ ಅಡ್ಡಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಅಪಮೌಲ್ಯಗೊಳಿಸಿದ್ದಾರೆ. ಆದ್ದರಿಂದ ಇನ್ನು ಮುಂದೆ ಅವರಿಗೆ ಅಡ್ಡ ಮತದಾನ ಆದರೆ ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದರು.
ಚುನಾವಣೆಯಲ್ಲಿ ಯಾವ ಎಚ್ಚರಿಕೆ ವಹಿಸಬೇಕಿತ್ತು ಯಾವ ಎಚ್ಚರಿಕೆ ವಹಿಸಿಲ್ಲ ಎಂಬುದು ವರದಿಯಲ್ಲಿ ಇದೆ. ಇದು ಆಂತರಿಕ ತನಿಖೆ ಆಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾದ ರಾಜ್ಯ ಚುನಾವಣಾ ಆಯೋಗ: ಛಲವಾದಿ ನಾರಾಯಣಸ್ವಾಮಿ ಆರೋಪ
ಅಡ್ಡ ಮತದಾನದ ಕುರಿತು ಆಂತರಿಕ ತನಿಖೆ ಮಾಡಲು ನನ್ನೊಂದಿಗೆ ಮಾಜಿ ಸಚಿವ ಎನ್. ಮಹೇಶ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಹಾಗೂ ಹಾಗೂ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಸೇರಿದ ಮೂರು ಜನರ ಸಮಿತಿ ಮಾಡಿದ್ದರು. ಆದಷ್ಟು ಬೇಗ ಆಂತರಿಕವಾಗಿ ತನಿಖೆ ನಡೆಸಿ ವರದಿ ನೀಡಿ ಎಂದು ರಾಜ್ಯಾಧ್ಯಕ್ಷರು ನಿರ್ದೇಶನ ನೀಡಿದ್ದರು. ಮೂವರು ಚರ್ಚೆ ಮಾಡಿ ಮೂವರಿಗೆ ಸಮ್ಮತವಾದ ಅಂಶಗಳನ್ನು ಮಾತ್ರ ವರದಿಯಲ್ಲಿ ಉಲ್ಲೇಖ ಮಾಡಿ ವರದಿ ಸಿದ್ಧಪಡಿಸಿದ್ದೇವೆ. ಅಡ್ಡಮತದಾನ ಮಾಡಿದವರ ಬಗ್ಗೆ ಮಾಧ್ಯಮ ಮತ್ತು ಸಾರ್ವಜನಿಕ ವಲಯದಲ್ಲಿ ಅನುಮಾನ ಕಂಡು ಬಂದವರ ಪಟ್ಟಿ ಮಾಡಿ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಅಭ್ಯರ್ಥಿಗಳ ಜತೆ ಮಾತುಕತೆ ನಡೆಸಿ ಸಭಿಪ್ರಾಯ ಸಂಗ್ರಹಿಸಿದ್ದೇವೆ. ಜೆಡಿಎಸ್ ಮುಖಂಡರು, ವಿರೋಧ ಪಕ್ಷದ ಮುಖಂಡರು, ಮುಖ್ಯ ಸಚೇತಕರು, ಮಾಧ್ಯಮದವರೊಂದಿಗೆ ಸಮಾಲೋಚನೆ ಮಾಡಿದ್ದೇವೆ. ಸ್ಥಳೀಯ ಮಾಹಿತಿ ಸಂಗ್ರಹಿಸಿದ್ದೇವೆ, ಸಾಂದರ್ಭಿಕವಾಗಿ ಮಾಹಿತಿ ಪಡೆದಿದ್ದೇವೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಆಂತರಿಕ ತನಿಖಾ ವರದಿಯಲ್ಲೇನಿದೆ?
ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳ ಸೋಲಿಗೆ ಕಾರಣವಾದ ಅಡ್ಡ ಮತದಾನದ ಬಗ್ಗೆ ಸತ್ಯಶೋಧನೆ ನಡೆಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದರು. ಸಿ.ಟಿ.ರವಿ, ಮಹೇಶ್ ಟೆಂಗಿನಕಾಯಿ ಮತ್ತು ಎನ್. ಮಹೇಶ್ ಅವರಿದ್ದ ಈ ಸಮಿತಿಯು ಕಳೆದ ನಾಲ್ಕು ದಿನಗಳಲ್ಲಿ ಅಭ್ಯರ್ಥಿಗಳು, ಜೆಡಿಎಸ್ ಮುಖಂಡರು ಮತ್ತು ಬಿಜೆಪಿ ನಾಯಕರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸ್ಥಳೀಯ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಮೂರು ಪುಟಗಳ ವರದಿಯನ್ನು ಸೀಲ್ಡ್ ಕವರ್‌ನಲ್ಲಿ ಸಲ್ಲಿಸಿದೆ.
ಮೈತ್ರಿ ಪಕ್ಷಗಳಿಂದ ಒಟ್ಟು 12 ಮತಗಳು ಅಡ್ಡವಾಗಿ ಚಲಾವಣೆಯಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬಿಜೆಪಿಯಿಂದ 3 ಮತಗಳು ಅಡ್ಡವಾಗಿ ಚಲಾವಣೆಯಾಗಿದ್ದು, 1 ಮತ ಅಸಿಂಧುವಾಗಿದೆ. ಉಳಿದ ಅಡ್ಡ ಮತಗಳು ಜೆಡಿಎಸ್‌ನಿಂದ ಚಲಾವಣೆಯಾಗಿವೆ.
ವರದಿಯಲ್ಲಿ ಅಡ್ಡ ಮತ ಚಲಾಯಿಸಿದ ಶಾಸಕರ ಹೆಸರುಗಳನ್ನು ನೇರವಾಗಿ ಉಲ್ಲೇಖಿಸಿಲ್ಲವಾದರೂ, ಅನುಮಾನಾಸ್ಪದವಾಗಿ ಕಂಡುಬಂದ ಶಾಸಕರ ಪಟ್ಟಿಯನ್ನು ಸಮಿತಿ ಸಿದ್ಧಪಡಿಸಿದೆ. ಸದ್ಯಕ್ಕೆ ಅನುಮಾನದ ಪಟ್ಟಿಯಲ್ಲಿರುವ ಶಾಸಕರ ಮೇಲೆ ಪಕ್ಷವು ತೀವ್ರ ನಿಗಾ ಇಡುವಂತೆ ಸಮಿತಿ ಶಿಫಾರಸು ಮಾಡಿದೆ.