ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ST Internal Reservation: ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿಗೊಳಿಸಿ: ಸದನದಲ್ಲಿ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಆಗ್ರಹ

Karnataka Assembly Session 2026: ಸದನದ ಶೂನ್ಯವೇಳೆಯಲ್ಲಿ ಮಾತನಾಡಿರುವ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಅವರು, ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿ ಮಾಡಲು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ನೀಡಿದಂತೆ ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ (ST Internal Reservation) ಜಾರಿ ಮಾಡಬೇಕು ಎಂಬ ಕೂಗು ಸದನದಲ್ಲಿ ಬುಧವಾರ ಕೇಳಿಬಂದಿದೆ. ಈ ಬಗ್ಗೆ ವಿಧಾನ ಪರಿಷತ್ ಬಜೆಟ್ ಅಧಿವೇಶನದಲ್ಲಿ ಶಾಂತಾರಾಮ್‌ ಬುಡ್ನ ಸಿದ್ದಿ (MLC Shantaram Siddi) ಅವರು ಪ್ರಸ್ತಾಪಿಸಿದ್ದಾರೆ. ಸದನದ ಶೂನ್ಯವೇಳೆಯಲ್ಲಿ ಮಾತನಾಡಿರುವ ಅವರು, ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿ ಮಾಡಲು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

"ಪರಿಶಿಷ್ಟ ಪಂಗಡದಲ್ಲಿಯೂ ಜಾರಿಯಾಗಬೇಕು ಒಳ ಮೀಸಲಾತಿ" ಎಂಬ ಶೀರ್ಷಿಕೆಯಡಿ ದಿನ ಪತ್ರಿಕೆಗಳಲ್ಲಿ ವರದಿಯಾಗಿರುವ ಕೆಲವು ಅಂಶಗಳನ್ನು ಸದನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಮಾತ್ರ ಒಳ ಮೀಸಲಾತಿ ಜಾರಿ ಮಾಡಿದೆ, ಆದರೆ ಪರಿಶಿಷ್ಟ ಪಂಗಡಗಳಿಗೂ ಒಳ ಮೀಸಲಾತಿ ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನಲ್ಲಿ ನಡೆದ ವಿವಿಧ ಬುಡಕಟ್ಟು ಸಮುದಾಯಗಳ ನಾಯಕರ ಸಭೆಯಲ್ಲಿ ಆಗ್ರಹಿಸಲಾಗಿದೆ. ಈ ಸಂಬಂಧ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಕೂಡ ಸಲ್ಲಿಸಲಾಗಿದೆ ಎಂದು ಪತ್ರಿಕೆಗಳಲ್ಲಿ ಉಲ್ಲೇಖಿಸಲಾಗಿದೆ.



2024ರ ಆ.1ರಂದು ಪ್ರಕಟವಾದ ಒಳ ಮೀಸಲಾತಿ ಕುರಿತ ಐತಿಹಾಸಿಕ ತೀರ್ಪಿನಲ್ಲಿ, ಪರಿಶಿಷ್ಟ ಜಾತಿ ಜತೆಗೆ ಪರಿಶಿಷ್ಟ ಪಂಗಡದಲ್ಲೂ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ರಾಜ್ಯ ಸರ್ಕಾರ ಅದನ್ನು ಪಾಲಿಸಿಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಶಾಂತಾರಾಮ್ ಸಿದ್ದಿ ತಿಳಿಸಿದರು.

Reservation Policy: ಒಳ ಮೀಸಲಾತಿ ಕುರಿತು ಚರ್ಚೆ: ರಾಜ್ಯ ಎಸ್ಸಿ-ಎಸ್ಟಿ ಆಯೋಗದ ಮಹತ್ವದ ಸಭೆ

ಪರಿಶಿಷ್ಟ ಪಂಗಡಗಳಲ್ಲಿ ಸಣ್ಣ ಬುಡಕಟ್ಟು, ಸೂಕ್ಷ್ಮ, ದುರ್ಬಲ, ಪ್ರಬಲ ಸಮುದಾಯಗಳು ಒಂದೇ ಗುಂಪಿನಲ್ಲಿ ಮೀಸಲಾತಿ ಹಂಚಿಕೊಳ್ಳುವಂತಾಗಿದೆ ಎಂದು ಅನೇಕ ಪತ್ರಿಕೆಗಳು ವರದಿ ಮಾಡಿವೆ. ಈ ಕುರಿತು ಸರ್ಕಾರ ಮುತುವರ್ಜಿ ವಹಿಸಿ, ನಿವೃತ್ತ ನ್ಯಾಯಮೂರ್ತಿಗಳ ಆಯೋಗ ರಚಿಸಬೇಕು ಎಂದು ಬುಡಕಟ್ಟು ಸಮುದಾಯಗಳ ಮುಖಂಡರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಈ ವಿಷಯವನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಿ ಎಸ್‌ಟಿ ಒಳ ಮೀಸಲಾತಿ ಜಾರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಎಂಎಲ್‌ಸಿ ಕೋರಿದ್ದಾರೆ.