ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

DK Shivakumar: ಸಾಷ್ಟಾಂಗ ನಮಸ್ಕಾರ ಮಾಡಿ ಶಕ್ತಿಸೌಧಕ್ಕೆ ಡಿಕೆಶಿ ಎಂಟ್ರಿ; ನೂತನ ಸಿಎಂ ಆಗಿ ಅಧಿಕಾರ ಸ್ವೀಕಾರ

DK Shivakumar Oath Ceremony: ಲೋಕಭವನದಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಡಿ.ಕೆ.ಶಿವಕುಮಾರ್ ತೆರಳಿದರು. ಶಕ್ತಿಸೌಧದ ಆವರಣದಲ್ಲಿ ಗಾಂಧಿಜಿ, ಅಂಬೇಡ್ಕರ್‌, ನೆಹರು, ಬಸವಣ್ಣ ಮೂರ್ತಿಗಳಿಗೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ಸಿಎಂ ಕಚೇರಿಗೆ ತೆರಳಿದರು.

ವಿಧಾನಸೌಧದಲ್ಲಿ ಅಧಿಕಾರ ಸ್ವೀಕರಿಸಿದ‌ ನೂತನ ಸಿಎಂ ಡಿ.ಕೆ.ಶಿವಕುಮಾರ್.

ಬೆಂಗಳೂರು: ಲೋಕಭವನದಲ್ಲಿ ಪ್ರಮಾಣ ವಚನದ ಬಳಿಕ ನೂತನ ಸಿಎಂ ಡಿ.ಕೆ.ಶಿವಕುಮಾರ್‌ ಅವರು ನೇರವಾಗಿ ವಿಧಾನಸೌಧಕ್ಕೆ ಬುಧವಾರ ಸಂಜೆ ತೆರಳಿ ಅಧಿಕಾರ ಸ್ವೀಕರಿಸಿದರು. ಶಕ್ತಿ ಸೌಧಕ್ಕೆ ಪ್ರವೇಶಿಸುವ ಮುನ್ನಾ ಮೆಟ್ಟಿಲ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡಿ ಒಳಗೆ ತೆರಳಿದರು. ನಂತರ ಶುಭ ಮುಹೂರ್ತದಲ್ಲಿ ಅಧಿಕಾರ ಸ್ವೀಕರಿಸಿ, ದಾಖಲೆ ಪತ್ರಗಳಿಗೆ ಸಹಿ ಹಾಕಿದರು.

ಇದಕ್ಕೂ ಮೊದಲು ಸಚಿವರೊಂದಿಗೆ ವಿಧಾನಸೌಧವನ್ನು ಪ್ರದಕ್ಷಿಣೆ ಮಾಡಿದ ಡಿ.ಕೆ.ಶಿವಕುಮಾರ್‌ ಅವರು ಅಂಬೇಡ್ಕರ್‌, ಬಸವಣ್ಣ, ಗಾಂಧೀಜಿ, ನೆಹರು ಸೇರಿ ಗಣ್ಯರು ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡಿದರು. ನಂತರ ವಿಧಾನಸೌಧದ ಆವರಣದಲ್ಲಿರುವ ಮುನೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ನಂತರ ವಿಧಾನಸೌಧ ಮೆಟ್ಟಿಲುಗಳ ಮೇಲೆ ದೀರ್ಘದಂಡ ನಮಸ್ಕಾರ ಮಾಡಿದ ಅವರು, ಅಲ್ಲಿಂದ ಮೂರನೇ ಮಹಡಿಯ ಸಿಎಂ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಿದರು.

ಸುಂದರ, ಸಮೃದ್ಧ, ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ: ಡಿಕೆಶಿ

ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿ, ನನ್ನ ಬದುಕಿನ ಪ್ರತಿಯೊಂದು ಏಳುಬೀಳುಗಳಲ್ಲೂ ಧೈರ್ಯ ತುಂಬಿ, ನನ್ನನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸಿದ ನನ್ನ ಪ್ರೀತಿಯ ಕರ್ನಾಟಕದ ಕೋಟ್ಯಂತರ ಜನತೆ ಹಾಗೂ ಕಾರ್ಯಕರ್ತ ಬಂಧುಗಳ ಆಶೀರ್ವಾದದಿಂದ ಲೋಕಭವನದಲ್ಲಿ ಇಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಈ ಕ್ಷಣದಲ್ಲಿ ನಾನು ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸಕ್ಕೆ ತಲೆಬಾಗುತ್ತೇನೆ ಎಂದು ತಿಳಿಸಿದ್ದಾರೆ.

ಇಂದು ನನ್ನ ಹೆಗಲ ಮೇಲಿರುವುದು ಕೇವಲ ಮುಖ್ಯಮಂತ್ರಿಯ ಜವಾಬ್ದಾರಿಯಲ್ಲ, ಬದಲಿಗೆ ಕೋಟ್ಯಂತರ ಕನ್ನಡಿಗರ ಕನಸುಗಳನ್ನು ನನಸು ಮಾಡುವ ಪವಿತ್ರ ಕರ್ತವ್ಯ. ಈ ಅವಕಾಶವನ್ನು ನನಗೆ ಕರುಣಿಸಿದ ಹಿರಿಯರಿಗೆ, ಮಾರ್ಗದರ್ಶಕರಿಗೆ ಹಾಗೂ ನನ್ನ ಶಕ್ತಿಯಾಗಿ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು.

ವೇಗವಾಗಿ ಬದಲಾಗುತ್ತಿರುವ ಇಂದಿನ ತಂತ್ರಜ್ಞಾನದ ಯುಗದಲ್ಲಿ, ಹೊಸ ಆಲೋಚನೆಗಳೊಂದಿಗೆ ನಮ್ಮ ಹೆಮ್ಮೆಯ ಕರ್ನಾಟಕವನ್ನು ಅಭಿವೃದ್ಧಿಯ ಅತ್ಯುನ್ನತ ಶಿಖರಕ್ಕೆ ಕೊಂಡೊಯ್ಯಬೇಕಿದೆ. ಈ ಸರ್ವತೋಮುಖ ಪ್ರಗತಿಯ ದಾರಿಯಲ್ಲಿ ರೈತರು, ಶ್ರಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ನಮಗೆ ಮುಖ್ಯ.

CM Oath ceremony: ನೂತನ ಸಿಎಂ ಡಿ.ಕೆ.ಶಿವಕುಮಾರ್‌ಗೆ ಪ್ರಧಾನಿ ಮೋದಿ, ಕೇಂದ್ರ ಸಚಿವ ಎಚ್‌ಡಿಕೆ ಸೇರಿ ಹಲವು ಗಣ್ಯರಿಂದ ಅಭಿನಂದನೆ

ಯಾವುದೇ ಒಬ್ಬ ವ್ಯಕ್ತಿಯಿಂದ ಬದಲಾವಣೆ ಸಾಧ್ಯವಿಲ್ಲ, ಆದರೆ ನಾವೆಲ್ಲರೂ ಕೈಜೋಡಿಸಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಬನ್ನಿ, ನಮ್ಮ ಭವಿಷ್ಯದ ಪೀಳಿಗೆ ಹೆಮ್ಮೆ ಪಡುವಂತಹ ಸುಂದರ, ಸಮೃದ್ಧ ಮತ್ತು ಪ್ರಗತಿಪರ ಕರ್ನಾಟಕವನ್ನು ಕಟ್ಟೋಣ ಎಂದು ಕರೆ ನೀಡಿದ್ದಾರೆ.