ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nikhil Kumaraswamy: ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ: ನಿಖಿಲ್ ಕುಮಾರಸ್ವಾಮಿ

Nikhil Kumaraswamy: ರೈತರ ಮೇಲೆ ಸರ್ಕಾರ ಮಾಡುತ್ತಿರುವ ದಬ್ಬಾಳಿಕೆ ಖಂಡಿಸಿ ಹಾಗೂ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯನ್ನು ಕೈ ಬಿಡುವಂತೆ ಸರ್ಕಾರವನ್ನು ಒತ್ತಾಯಿಸಿ ಸೆ.28ರಂದು ಭಾನುವಾರ ರಾಮನಗರ ಜಿಲ್ಲೆಯ ಬೈರಮಂಗಲ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ರೈತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಜಿಬಿಐಟಿ ಯೋಜನೆ ಕೈ ಬಿಡುವಂತೆ ಆಗ್ರಹ; ನಾಳೆ ಬೃಹತ್ ಪ್ರತಿಭಟನೆ: ನಿಖಿಲ್

-

Profile Siddalinga Swamy Sep 27, 2025 5:28 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡದಿಯಲ್ಲಿ ಮಾಡುತ್ತಿರುವ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ ಶಿಪ್ ಯೋಜನೆಯನ್ನು ಕೈ ಬಿಡುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆಗ್ರಹಿಸಿದರು. ಬೆಂಗಳೂರಿನ ಜೆ.ಪಿ. ಭವನದ ಜೆಡಿಎಸ್ ಪಕ್ಷದ ರಾಜ್ಯ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ನಾಳೆಯಿಂದ ಬೃಹತ್ ಹೋರಾಟ ಮಾಡುತ್ತೇವೆ. ಈ ಯೋಜನೆ ಕೈಬಿಡುವವರೆಗೂ, ರೈತರ ಬೆನ್ನೆಲುಬು ಆಗಿ ನಿಲ್ಲುತ್ತೇವೆ. ಇದು ಯಾವ ಹಂತಕ್ಕೆ ಹೋಗಲಿ. ನಾವು ಇರುತ್ತೇವೆ ಎಂದು ಹೇಳಿದರು.

ಯಾವ ಕಾರಣಕ್ಕೂ ಜೆಡಿಎಸ್ ಪಕ್ಷ ರೈತರ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ. ಈ ವಿಚಾರದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಈ ಯೋಜನೆಯನ್ನು ಕೈ ಬಿಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಕೊನೆಯ ಹಂತದವರೆಗೂ ರೈತರ ಧ್ವನಿಯಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.

ಕಳೆದ ಹಲವಾರು ತಿಂಗಳಿಂದ ಬಿಡದಿ ಭಾಗದ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ರಾಜ್ಯ ಸರ್ಕಾರ ರೈತರಿಗೆ ವಿಶ್ವಾಸಕ್ಕೆ ತಕ್ಕಂತೆ ವರ್ತಿಸುತ್ತಿಲ್ಲ ಅವರಲ್ಲಿ ಆಕ್ರೋಶ ಹೆಚ್ಚು ಮಾಡೋ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಜಿಬಿಡಿಎ (GBDA) ಅಧಿಕಾರಿಗಳು, ಪೊಲೀಸರು ರೈತರ ಬಳಿ ಹೋಗುತ್ತಿದಾರೆ. ಈ ವಿಚಾರದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಕಿಡಿಕಾರಿದರು.

ಬಹಳ ದಿನಗಳಿಂದ ರೈತರ ಜಮೀನು ಕಸಿದುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇದನ್ನು ಖಂಡಿಸಿ ರೈತರು ಹೋರಾಟ ಮಾಡ್ತಿದ್ದಾರೆ. ನಾಳೆ ಜೆಡಿಎಸ್ ಪಕ್ಷ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ನಡೆಸುತ್ತದೆ ಎಂದು ಹೇಳಿದರು.

ರೈತರ ವಿಚಾರದಲ್ಲಿ ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ಸಹ ಇದೇ ರೀತಿ ಇತ್ತು. ಅಲ್ಲಿ ರೈತರು ಒಂದು ಸಾವಿರ ದಿನಗಳ ಕಾಲ ಹೋರಾಟ ಮಾಡಿದ್ದಾರೆ. ಅದೇ ರೀತಿ ಜೆಡಿಎಸ್, ಸರ್ಕಾರ ವಿರುದ್ಧ ಹೋರಾಟ ನಡೆಸಲಿದೆ. ಇದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಜೆಡಿಎಸ್ ಹೋಗುತ್ತದೆ ಎಂದು ಇದೇ ವೇಳೆ ತಿಳಿಸಿದರು. ಇನ್ನು ಪ್ರತಿಭಟನೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ. ನಮ್ಮ ಜತೆ ರೈತ ಹೋರಾಟಗಾರು ಇರುತ್ತಾರೆ. ಸಾಕಷ್ಟು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಮೂಡಿದೆ. ಅದನ್ನ ನಿಮ್ಮ ಮುಂದೆ ಇಡುತ್ತೇವೆ ಎಂದರು.

ರೈತರಿಗೆ ಪರಿಹಾರದ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಇಲ್ಲಿಯವರೆಗೂ ಸಭೆ ಮಾಡಿಲ್ಲ. ನಾನು ಡಿಸಿಎಂ ಅವರನ್ನು ಪ್ರಶ್ನೆ ಮಾಡ್ತೀನಿ. ರೈತರ ಜತೆ ಸೌಜನ್ಯಕ್ಕಾದರು ಒಂದು ಸಭೆ ಮಾಡಿಲ್ಲ. ರೈತರ ಮುಂದೆ ತೊಡೆ ತಟ್ಟಿರೋದು ನೋಡಿದ್ದೀವಿ. ನನ್ನ ತಡೆಯಿರಿ ಎಂದು ಸವಾಲು ಹಾಕಿದ್ದೀರಾ ಎಂದು ಡಿಸಿಎಂ ಶಿವಕುಮಾರ್‌ ಅವರಿಗೆ ನಿಖಿಲ್ ಕುಮಾರಸ್ವಾಮಿ ಪ್ರಶ್ನಿಸಿದರು. ಸೌಜನ್ಯಕ್ಕಾದರು ಸ್ಥಳೀಯ ರೈತರ ಜತೆ ಸಭೆ ಮಾಡದೇ, ತರಾತುರಿಯಲ್ಲಿ ಟೌನ್ ಶಿಪ್ ಯೋಜನೆ ಜಾರಿ ಮಾಡುತ್ತಿರುವ ಹಿಂದಿನ ಉದ್ದೇಶವೇನು? ರೈತರಿಗೆ ಇದರಿಂದಾಗುತ್ತಿರುವ ನಷ್ಟ ಹಾಗೂ ರೈತರ ಮುಂದಿನ ಬದುಕಿನ ಬಗ್ಗೆ ಸರ್ಕಾರಕ್ಕೆ ಅವರು ಪ್ರಶ್ನೆ ಮಾಡಿದರು.

ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ

ಶೇ. 80 ರಷ್ಟು ರೈತರು ಈ ಭೂಸ್ವಾಧೀನ ಪ್ರಕ್ರಿಯೆಗೆ ಪ್ರಬಲವಾದ ವಿರೋಧ ಮಾಡಿದ್ದಾರೆ. ಆದ್ದರಿಂದ ಈ ಕೂಡಲೇ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸಬೇಕು. ಜಿಬಿಡಿಎ ಮತ್ತು ಪೊಲೀಸ್‌ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಈ ಕೂಡಲೇ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ನವರು ಮಾಡಿರುವ ಯೋಜನಾ ವರದಿಯನ್ನು ಸಾರ್ವಜನಿಕಗೊಳಿಸಬೇಕು.

ಕೈಗಾರಿಕಾ ಉದ್ದೇಶಕ್ಕೆ ಬೆಂಗಳೂರು ಸುತ್ತಮುತ್ತ ಈಗಾಗಲೇ ಭೂಸ್ವಾಧೀನಗೊಂಡಿರುವ ಭೂಮಿಯ ಬಗ್ಗೆ ಶ್ವೇತಪತ್ರ ಹೊರಡಿಸುವುದು ಹಾಗೂ ಈಗ ಲಭ್ಯವಿರುವ ಭೂಮಿಯಲ್ಲಿ ಈ ಯೋಜನೆಯನ್ನು ಮಾಡುವುದು ಸೇರಿದಂತೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಆಗ್ರಹಿಸಲಾಯಿತು.

ಇದೇ ವೇಳೆ ರೈತರ ಮೇಲೆ ಸರ್ಕಾರ ಮಾಡುತ್ತಿರುವ ದಬ್ಬಾಳಿಕೆ ಖಂಡಿಸಿ ಹಾಗೂ ಈ ಯೋಜನೆಯನ್ನು ಕೈ ಬಿಡುವಂತೆ ಸರ್ಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಸೆ.28ರಂದು ಭಾನುವಾರ ರಾಮನಗರ ಜಿಲ್ಲೆಯ ಬೈರಮಂಗಲ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರ ರೈತರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆ ಕುರಿತು ಮಾತನಾಡಿದ ಅವರು, ಕಳೆದ ಎರಡು ದಿನಗಳಿಂದ ತಾಂತ್ರಿಕ ಕಾರಣದಿಂದ ಸ್ಥಗಿತ ಆಗಿದೆ. ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಎಷ್ಟು ಮನೆಗಳನ್ನು ತಲುಪಿದ್ದಾರೆ. ಇದುವರೆಗೂ 4 ಲಕ್ಷ ಮನೆ ತಲುಪಿದ್ದಾರೆ. ಸಮೀಕ್ಷೆ ಮಾಡೋಕೆ ಹೆಚ್ಚು ಹಣ ಆಗುತ್ತೆ. ಸಮೀಕ್ಷೆ ಮಾಡುವ ಶಿಕ್ಷಕರಿಗೆ ತರಬೇತಿ ಸಹ ನೀಡಿಲ್ಲ. 190 ಕೋಟಿ ಖರ್ಚು ಮಾಡಿರುವ ಕಾಂತರಾಜು ವರದಿಯನ್ನ ಬಿಡುಗಡೆ ಮಾಡಿ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.

ಈ ಸುದ್ದಿಯನ್ನೂ ಓದಿ | SSC Recruitment 2025: ದ್ವಿತೀಯ ಪಿಯುಸಿ ಪಾಸಾದವರಿಗೆ ಗುಡ್‌ನ್ಯೂಸ್‌; 7,565 ಕಾನ್‌ಸ್ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಧರ್ಮಸ್ಥಳ ಕೇಸ್‌ನಲ್ಲಿ ಸರ್ಕಾರ ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿ ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ಮಾಡೋ ಕೆಲಸ ಮಾಡುತ್ತಿದೆ. ಎಸ್‌ಐಟಿಯನ್ನು ತರಾತುರಿಯಲ್ಲಿ ಈ ಸರ್ಕಾರ ಮಾಡಿತು. ತನಿಖೆ ಮಾಡಿದ್ರು. ಇವರಿಗೆ ಏನು ಸಿಕ್ತು? ಏನು ಸಿಕ್ಕಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು. ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಎಂದು ಹೇಳಿದ್ದರು. ಆದರೆ ಷಡ್ಯಂತ್ರ ಮಾಡಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಧಾರ್ಮಿಕ ಕ್ಷೇತ್ರಕ್ಕೆ ಅಪಮಾನ ಮಾಡೋ ಕೆಲಸ ಮಾತ್ರ ಈ ಸರ್ಕಾರ ಮಾಡಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.