ಬೆಂಗಳೂರು: ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಡೆಸುವ ಪಥಸಂಚಲನಕ್ಕೆ (RSS Route March) ಅಡ್ಡಿಪಡಿಸುವ ಉದ್ದೇಶ ನಮಗಿಲ್ಲ. ಆದರೆ, ಪಥಸಂಚಲನಕ್ಕೆ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಔಪಚಾರಿಕ ಅನುಮತಿಗಾಗಿ ಕಾಯಿರಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಪಥಸಂಚಲನ ಸಂಬಂಧ ಆರ್ಎಸ್ಎಸ್ ಕಾರ್ಯಕರ್ತರು ಪೊಲೀಸ್ ಠಾಣೆಗೆ ಮಾಹಿತಿ ನೀಡಿರುವ ಪತ್ರದೊಂದಿಗೆ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ನನ್ನ ಆತ್ಮೀಯ ಅರ್ಎಸ್ಎಸ್ ಸ್ವಯಂಸೇವಕರೇ, ವಿಜಯ ದಶಮಿ ಹಬ್ಬದ ಸಂಭ್ರಮ ಜೋರಾಗಿ ನಡೆಯುತ್ತಿದೆ ಎಂದು ಭಾವಿಸುತ್ತೇನೆ. ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವ ಉದ್ದೇಶವಿಲ್ಲ. ಆದರೆ ಒಂದು ಸಣ್ಣ ಜ್ಞಾಪನೆ, ಕೇವಲ 'ಮಾಹಿತಿ ನೀಡುವುದು' ಅಥವಾ 'ಸಹಕರಿಸಿ' ಅಥವಾ 'ಅಗತ್ಯ ವ್ಯವಸ್ಥೆ ಮಾಡಿ' ಎಂದು ಗೃಹ ಇಲಾಖೆಗೆ ತಿಳಿಸುವುದು ಅನುಮತಿ ಪಡೆದಂತೆ ಆಗುವುದಿಲ್ಲ. ದಯವಿಟ್ಟು ಎಲ್ಲಾ ಸಂಘಟನೆಗಳಿಗೆ ಅನ್ವಯಿಸುವ ನಿಗದಿತ ಕಾರ್ಯವಿಧಾನದ ಪ್ರಕಾರ ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಸಕ್ಷಮ ಪ್ರಾಧಿಕಾರಗಳಿಂದ ಔಪಚಾರಿಕ ಅನುಮೋದನೆಗಾಗಿ ಕಾಯಿರಿ ಎಂದು ತಿಳಿಸಿದ್ದಾರೆ.
ಅಖಿಲ ಭಾರತೀಯ ಪ್ರತಿನಿಧಿ ಸಭಾ ವಾರ್ಷಿಕ ವರದಿ 2025-26ರಲ್ಲಿ RSS ಕರ್ನಾಟಕದಾದ್ಯಂತ 2,21,963 ಸಮವಸ್ತ್ರಧಾರಿ ಸ್ವಯಂಸೇವಕರನ್ನು ಒಳಗೊಂಡ 562 ಪಥಸಂಚಲನಗಳನ್ನು ನಡೆಸಿದೆ ಎಂದು ಹೇಳಿದೆ. ಈಗ ಲಕ್ಷಾಂತರ ಮಂದಿ ಒಂದೇ ದಿನ ಒಂದೇ ಸಮಯದಲ್ಲಿ ಕರ್ನಾಟಕದ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಉದ್ದೇಶಿಸಿದಾಗ, ಪೊಲೀಸ್ ಇಲಾಖೆಯು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಿಬ್ಬಂದಿ ನಿಯೋಜನೆ, ಸಾರಿಗೆ, ಊಟೋಪಚಾರ, ಸಂಚಾರ ನಿರ್ವಹಣೆ, ಭದ್ರತಾ ವ್ಯವಸ್ಥೆಗಳು ಮತ್ತು ಇತರ ಲಾಜಿಸ್ಟಿಕ್ಸ್. ಇವೆಲ್ಲಕ್ಕೂ ಯೋಜನೆ, ಜನಬಲ ಮತ್ತು ಸಾರ್ವಜನಿಕ ಸಂಪನ್ಮೂಲಗಳು ಬೇಕಾಗುತ್ತವೆ. ಆದ್ದರಿಂದ, ದಯವಿಟ್ಟು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಔಪಚಾರಿಕ ಅನುಮತಿಗಾಗಿ ಕಾಯಿರಿ ಹೇಳಿದ್ದಾರೆ.