ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Open safari vehicles: ವನ್ಯಜೀವಿ ಸಫಾರಿಗಳಲ್ಲಿ ಇನ್ನುಮುಂದೆ ತೆರೆದ ವಾಹನ ಬಳಸುವಂತಿಲ್ಲ: ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ

ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಸೇರಿ ರಾಜ್ಯದ ವಿವಿಧ ವನ್ಯಜೀವಿ ಅಭಯಾರಣ್ಯಗಳಲ್ಲಿ ಸಫಾರಿ ನಡೆಯುತ್ತಿದ್ದು, ಸಾವಿರಾರು ಪ್ರವಾಸಿಗಳು ಆಗಮಿಸುತ್ತಾರೆ. ಸಫಾರಿ ವೇಳೆ ವನ್ಯಪ್ರಾಣಿಗಳ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತೆರದ ವಾಹನಗಳನ್ನು ಬಳಸದಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ದುಬಾರೆ ಆನೆ ಶಿಬಿರದಲ್ಲಿ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಆಘಾತಕಾರಿ ಘಟನೆ ಹಿನ್ನೆಲೆಯಲ್ಲಿ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೂ ಹೆಚ್ಚಿನ ಗಮನ ಹರಿಸುವಂತೆ ಅರಣ್ಯ ಸಚಿವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ನಿರ್ದೇಶನ ನೀಡಿದ್ದಾರೆ.

ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಸೇರಿ ರಾಜ್ಯದ ವಿವಿಧ ವನ್ಯಜೀವಿಧಾಮ ಮತ್ತು ಕಾನನಗಳಲ್ಲಿ ಸಫಾರಿ ನಡೆಯುತ್ತಿದ್ದು, ರಾಜ್ಯದ ಮೂಲೆಮೂಲೆಗಳಿಂದ ಅಷ್ಟೇ ಅಲ್ಲದೆ ದೇಶ ವಿದೇಶಗಳಿಂದಲೂ ಪ್ರವಾಸಿಗರು, ವನ್ಯಜೀವಿ ಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. ಅದೃಷ್ಟವಶಾತ್ ಈವರೆಗೆ ಸಫಾರಿ ಪ್ರದೇಶಗಳಲ್ಲಿ ಆನೆಗಳು, ಹುಲಿಗಳು ಸೇರಿ ಯಾವುದೇ ವನ್ಯಮೃಗಗಳು ಸಫಾರಿ ವಾಹನಗಳ ಮೇಲೆ ದಾಳಿ ಮಾಡಿ ಜೀವಹಾನಿ ಮಾಡಿದ ಘಟನೆಗಳು ಸಂಭವಿಸಿಲ್ಲ. ಆದಾಗ್ಯೂ ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಸೂಚನೆಯಲ್ಲಿ ತಿಳಿಸಿದ್ದಾರೆ.

ಆಂಬ್ಯುಲೆನ್ಸ್ ವ್ಯವಸ್ಥೆಗೆ ಸೂಚನೆ

ಸಫಾರಿಗೆ ಬರುವ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಇನ್ಮುಂದೆ ತೆರೆದ ಕ್ಯಾಂಪರ್ ವಾಹನಗಳ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಸಫಾರಿಗೆ ಹೆಚ್ಚಿನ ಆದ್ಯತೆ ನೀಡಿ. ಹಾಲಿ ಬಳಕೆಯಲ್ಲಿರುವ ಕ್ಯಾಂಪರ್‌ಗಳಿಗೆ ಕಬ್ಬಿಣದ ಸರಳುಗಳಿಂದ ಕೂಡಿದ ಜಾಲರಿಗಳನ್ನು ಅಥವಾ ಒಡೆಯಲಾಗದ ಗಾಜು ಅಳವಡಿಸಿ ಬಳಸುವ ಬಗ್ಗೆ ಕ್ರಮವಹಿಸಿ. ಯಾವುದೇ ಪ್ರವಾಸಿಗರು ಅರಣ್ಯದೊಳಗೆ ಇಳಿಯಲು ಅವಕಾಶ ನೀಡದಂತೆ ಮತ್ತು ಪ್ರತಿ ಸಫಾರಿ ವಾಹನದಲ್ಲಿ ಪ್ರಥಮ ಚಿಕಿತ್ಸೆಯ ಕಿಟ್ ಹಾಗೂ ಸಫಾರಿ ಕೇಂದ್ರಗಳಿಗೆ ಸಮೀಪದಲ್ಲಿ ಆಂಬ್ಯುಲೆನ್ಸ್ ವಾಹನ ಇರುವುದನ್ನು ಖಾತ್ರಿಪಡಿಸಿಕೊಳ್ಳುವಂತೆಯೂ ಸೂಚಿಸಿದ್ದಾರೆ.

ಮಾರ್ತಾಂಡನನ್ನು ಕೊಂದ ಕಂಜನ್ ಆನೆಗೆ ದಸರಾದಿಂದ ನಿಷೇಧ

ಕೊಡಗು: ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಆನೆ ಸಾವಿಗೆ ಕಾರಣವಾದ ಕಂಜನ್ ಆನೆಯನ್ನು (Kanjan Elephant) ವಿಶ್ವವಿಖ್ಯಾತ ಮೈಸೂರು ದಸರಾ (Mysore Dussehra) ಮಹೋತ್ಸವದಿಂದ ಶಾಶ್ವತವಾಗಿ ನಿಷೇಧಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಕಂಜನ್ ಆನೆಯ ಆಕ್ರಮಣಕಾರಿ ನಡವಳಿಕೆಯಿಂದಾಗಿ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಂಬರುವ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳಿಂದ ಕಂಜನ್ ಆನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಉನ್ನತ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಕಂಜನ್ ಆನೆಯ ಮೊಂಡಾಟ ಇದೇ ಮೊದಲೇನಲ್ಲ. 2024ರ ಮೈಸೂರು ದಸರಾ ಮಹೋತ್ಸವದ ತಾಲೀಮಿನ ಅವಧಿಯಲ್ಲೂ ಸಹ ಕಂಜನ್ ಭಾರಿ ಗದ್ದಲ ಸೃಷ್ಟಿಸಿತ್ತು. ಮೈಸೂರು ಅರಮನೆಯ ಆವರಣದಲ್ಲೇ ಮತ್ತೊಂದು ದಸರಾ ಆನೆಯನ್ನು ಕಂಜನ್ ಅತ್ಯಂತ ಆಕ್ರೋಶದಿಂದ ಅಟ್ಟಿಸಿಕೊಂಡು ಹೋಗಿ ಪ್ರವಾಸಿಗರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಿಸಿತ್ತು.

ಸೋಮವಾರ ದುಬಾರೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಭೀಕರ ಕಾಳಗ ನಡೆದಿತ್ತು. ಈ ವೇಳೆ ಅತ್ಯಂತ ಆಕ್ರಮಣಕಾರಿಯಾಗಿ ಮುನ್ನುಗ್ಗಿದ್ದ ಕಂಜನ್ ಆನೆ, ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ದೇಹದ ಇತರೆ ಸೂಕ್ಷ್ಮ ಭಾಗಗಳಿಗೆ ತನ್ನ ಬಲವಾದ ದಂತಗಳಿಂದ ತೀವ್ರವಾಗಿ ತಿವಿದು ಗಂಭೀರ ಗಾಯಗೊಳಿಸಿತ್ತು. ಇದೇ ದುರಂತದಲ್ಲಿ ಮಹಿಳೆಯೊಬ್ಬರೂ ಕೂಡ ಧಾರುಣ ಸಾವನ್ನಪ್ಪಿದ್ದರು.

Elephant Marthanda Dies: ದುಬಾರೆಯಲ್ಲಿ ಸಾಕಾನೆಗಳ ಕಾಳಗ; ಗಾಯಗೊಂಡಿದ್ದ ʼಮಾರ್ತಾಂಡʼ ಆನೆ ಚಿಕಿತ್ಸೆ ಫಲಿಸದೆ ಸಾವು

ಇನ್ನು ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಮೃತಪಟ್ಟಿತ್ತು.