ಬೆಂಗಳೂರು, ಫೆ.27: ನನ್ನ ಪರವಾಗಿ ಯಾರೂ ದೆಹಲಿಗೆ ಹೋಗುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಖಾಸಗಿ ಹೋಟೆಲ್ ಹಾಗೂ ಅರಮನೆ ಮೈದಾನದ ಗಾಯತ್ರಿ ವಿಹಾರ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು. ಗುರುವಾರದಂದು ಸಭೆ ಸೇರಿದ್ದ ಸಚಿವರು, ಶಾಸಕರು ದೆಹಲಿಗೆ ಹೋಗಿ ನಿಮ್ಮ ಪರವಾಗಿ ಮನವಿ ಮಾಡುತ್ತಾರಂತೆ ಎಂದು ಕೇಳಿದಾಗ, ‘ದಯವಿಟ್ಟು ಬೇಡ ಎಂದು ಮನವಿ ಮಾಡುತ್ತೇನೆ. ನಿಮ್ಮ ಸಮಸ್ಯೆಗಳು ಇದ್ದರೆ, ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರೆ, ಅಧಿಕಾರ, ಹುದ್ದೆ ಬೇಕು ಎಂದರೆ ಹೋಗಿ ಮನವಿ ಮಾಡಿಕೊಳ್ಳಿ. ನನ್ನ ವಿಚಾರಕ್ಕೆ ಹೋಗುವುದು ಬೇಡ’ ಎಂದು ಹೇಳಿದರು.
ಯಾವ ಶಕ್ತಿ ಪ್ರದರ್ಶನ ಇಲ್ಲ
ಬಾಲಕೃಷ್ಣ ಅವರ ಜನ್ಮದಿನದ ಹೆಸರಿನಲ್ಲಿ 40ಕ್ಕೂ ಹೆಚ್ಚು ಶಾಸಕರು ಸೇರಿದ್ದು, ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆ ಎಂದು ಕೇಳಿದಾಗ, ʼಯಾವ ಶಕ್ತಿ ಪ್ರದರ್ಶನವೂ ಇಲ್ಲ. ಕೆಲವರು ವಿಶ್ರಾಂತಿ, ಅಧ್ಯಯನಕ್ಕೆ ವಿದೇಶಕ್ಕೆ ಹೋಗುತ್ತಾರೆ. ಕೆಲವರು ದೆಹಲಿಗೆ ಹೋದರೆ, ಮತ್ತೆ ಕೆಲವರು ಭೋಜನ ಕೂಟ ಸೇರುತ್ತಾರೆ. ಅವರ ವೈಯಕ್ತಿಕ ವಿಚಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲʼ ಎಂದು ತಿಳಿಸಿದರು.
2028ರ ವೇಳೆಗೆ ಸುಮಾರು 50 ಸಾವಿರ ವಿದ್ಯಾರ್ಥಿಗಳಿಗೆ ಎವಿಜಿಸಿ- ಎಕ್ಸ್‌ಆರ್ ತರಬೇತಿ ಗುರಿ: ಡಿ.ಕೆ. ಶಿವಕುಮಾರ್
ನಾವು ಹಳಬರಾಗಿದ್ದೇವೆ, ಹೊಸಬರು ಮಂತ್ರಿಯಾಗುವ ಆಸೆ ಹೊಂದಿದ್ದಾರೆ
ನೀವು ಸಿಎಂ ಆಗಬೇಕು ಎಂದು ಕೆಲಸ ಶಾಸಕರು ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, ʼಈ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಜತೆ ಅವರು ಯಾರು ಮಾತನಾಡಿಲ್ಲ. ಕೆಲವರು ಆಸೆ ಇಟ್ಟುಕೊಂಡಿದ್ದಾರೆ. ಹೊಸಬರಿಗೆ ಮಂತ್ರಿ ಆಗುವ ಆಸೆ ಇರುತ್ತದೆ. ನಾನು, ಪರಮೇಶ್ವರ್, ಎಚ್.ಕೆ. ಪಾಟೀಲ್, ಮಹದೇವಪ್ಪ, ಸಿದ್ದರಾಮಯ್ಯ ಸೇರಿದಂತೆ ನಾವು ಈಗ ಹಳಬರಾದೆವು. ಚಿಕ್ಕ ವಯಸ್ಸಿನಲ್ಲೇ ಮಂತ್ರಿಯಾದವರು. ಈಗ ಹೊಸಬರು ಮಂತ್ರಿ ಆಗಬೇಕು ಎಂಬ ಆಸೆ ವ್ಯಕ್ತಪಡಿಸುತ್ತಿದ್ದಾರೆ. ನೋಡೋಣ, ನಾನು ಈ ವಿಚಾರವನ್ನು ದೆಹಲಿ ಅವರ ಗಮನಕ್ಕೆ ತರುತ್ತೇನೆʼ ಎಂದು ತಿಳಿಸಿದರು.
ಕೊನೆಗೂ ಸಿಕ್ಕ ನ್ಯಾಯ
ವಿನಯ್ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕಿರುವ ವಿಚಾರವಾಗಿ ಕೇಳಿದಾಗ, ʼಯಾವುದೇ ವ್ಯಕ್ತಿಗೆ ಕಿರುಕುಳ ನೀಡಬೇಕು ಎಂದರೆ ಅದಕ್ಕೆ ಒಂದು ಮಿತಿ ಇದೆ. ರಾಜಕೀಯ ಉದ್ದೇಶದಿಂದ ಮುಕ್ತಾಯಗೊಂಡಿದ್ದ ಪ್ರಕಾರಣವನ್ನು ಯಡಿಯೂರಪ್ಪ ಅವರ ಸರ್ಕಾರ ಸಿಬಿಐಗೆ ಹಸ್ತಾಂತರ ಮಾಡಿ, ತೊಂದರೆ ನೀಡಲಾಗುತ್ತಿತ್ತು. ಅವರಿಗೆ ಅವರ ಕ್ಷೇತ್ರಕ್ಕೆ ಕಾಲಿಡದಂತೆ ನಿರ್ಬಂಧ ಹೇರಲಾಗಿತ್ತು. ಚುನಾವಣೆಯಲ್ಲಿ ಅವರು ಮತ ಕೇಳುವಂತಿಲ್ಲ ಎಂಬ ಆದೇಶವನ್ನು ಮೊದಲ ಬಾರಿಗೆ ನೀಡಲಾಗಿತ್ತು. ನಾವು ನ್ಯಾಯಾಲಯಕ್ಕೆ ತಲೆಬಾಗಿ ಗೌರವ ನೀಡಿದೆವು. ಇದೆಲ್ಲವನ್ನು ಗಮನಿಸಿದ ನ್ಯಾಯಾಲಯ ಜಾಮೀನು ನೀಡಿದೆ. ನಾನು ಪ್ರಕರಣದ ವಿಚಾರಣೆ ಗಮನಿಸುತ್ತಾ ಬಂದಿದ್ದೇನೆ. ಈಗ ಅವರಿಗೆ ನ್ಯಾಯ ಸಿಕ್ಕಿದೆ, ಅವರು, ಅವರ ಕುಟುಂಬ, ಕ್ಷೇತ್ರದ ಜನ ಹಾಗೂ ಅವರು ಅನುಭವಿಸಿದ ವೇದನೆ ಯಾರೂ ಮರೆಯಲು ಸಾಧ್ಯವಿಲ್ಲ. ಇದನ್ನು ನಾನೂ ಅನುಭವಿಸಿದ್ದೇನೆ. ದೇವರು ವಿನಯ್ ಕುಲಕರ್ಣಿ ಅವರಿಗೆ ಇನ್ನಷ್ಟು ಹೆಚ್ಚಿನ ಶಕ್ತಿ ನೀಡಲಿ, ನ್ಯಾಯ ಒದಗಿಸಿರುವ ನ್ಯಾಯಾಲಯಕ್ಕೆ ಗೌರವದಿಂದ ಅಭಿನಂದನೆ ಅರ್ಪಿಸುತ್ತೇವೆʼ ಎಂದು ತಿಳಿಸಿದರು.
ವಿವಿಧ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿರುವ ಬಗ್ಗೆ ಕೇಳಿದಾಗ, ʼನಾವು ಹೊಸ ಮೀಸಲಾತಿ ಮಾಡಿದ್ದರೂ 2022ರ ನ್ಯಾಯಾಲಯ ಆದೇಶ ಅನುಸಾರ ಹಳೆ ಮೀಸಲಾತಿ ಮೇಲೆ ಮೊದಲ ಹಂತದಲ್ಲಿ 56 ಸಾವಿರ ನೇಮಕಾತಿ ಮಾಡಲು ತೀರ್ಮಾನ ಮಾಡಲಾಗಿದೆ. ಉದ್ಯೋಗ ನೇಮಕಾತಿ ಮಾಡುವುದಾಗಿ ನಾವು ಯುವಕರಿಗೆ ಮಾತು ನೀಡಿದ್ದು, ನಾವು ಅದರಂತೆ ನೇಮಕಾತಿ ಮಾಡುತ್ತೇವೆ. 1 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಬೇಕು. ಎಲ್ಲವನ್ನು ಏಕ ಕಾಲಕ್ಕೆ ಮಾಡಿದರೆ ಕೆಲವರಿಗೆ ಅವಕಾಶ ಸಿಗುವುದಿಲ್ಲ ಎಂದು ಹಂತ ಹಂತವಾಗಿ ಮಾಡಲಾಗುವುದು. ನ್ಯಾಯಾಲಯಕ್ಕೆ ತಲೆಬಾಗಿ ಕಾನೂನಿನಲ್ಲಿ ಇರುವ ಅವಕಾಶವನ್ನು ಬಳಸಿಕೊಂಡು ನೇಮಕಾತಿ ಮಾಡುತ್ತೇವೆ. 2.84 ಲಕ್ಷ ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ತುಂಬಲಾಗುವುದುʼ ಎಂದು ತಿಳಿಸಿದರು.
ಸಿರಿವಂತರು ಗ್ಯಾರಂಟಿ ಯೋಜನೆ ಬಿಟ್ಟು ಕೊಡುವುದರಲ್ಲಿ ತಪ್ಪೇನಿದೆ? ಡಿ.ಕೆ. ಶಿವಕುಮಾರ್ ಪ್ರಶ್ನೆ
ಕಾವೇರಿ ಆರನೇ ಹಂತಕ್ಕೆ ಒಪ್ಪಿಗೆ
ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುವುದಿಲ್ಲವೇ ಎಂದು ಕೇಳಿದಾಗ, ʼನಿನ್ನೆ ಸಚಿವ ಸಂಪುಟ ಸಭೆಯಲ್ಲಿ ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ ನೀಡಿರುವುದು ಐತಿಹಾಸಿಕ ನಿರ್ಧಾರವಾಗಿದೆ. ಭವಿಷ್ಯದಲ್ಲಿ ಬೆಂಗಳೂರು ಬೆಳೆಯುವುದನ್ನು ಗಮನದಲ್ಲಿಟ್ಟುಕೊಂಡು 7 ಸಾವಿರ ಕೋಟಿ ವೆಚ್ಚದಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಇದಕ್ಕೆ ಜೈಕಾ ಸಂಸ್ಥೆ ನೆರವು ಪಡೆಯಲಾಗುತ್ತಿದೆ. ನಾನು ಸಚಿವನಾದ ಬಳಿಕ ಕಾವೇರಿಯ 6 ಟಿಎಂಸಿ ನೀರನ್ನು ಬೆಂಗಳೂರಿಗೆ ನೀಡಲು ಅನುಮೋದನೆ ನೀಡಿದ್ದೆʼ ಎಂದು ಹೇಳಿದರು. ಜಿಬಿಎ ಚುನಾವಣೆ ಬಗ್ಗೆ ಕೇಳಿದಾಗ, ʼನ್ಯಾಯಾಲಯದ ಆದೇಶದಂತೆ ಪ್ರಕ್ರಿಯೆ ನಡೆಯುತ್ತಿದೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.