ಬೆಂಗಳೂರು, ಆ.29: ಭಾರತದ ಪರೀಕ್ಷಾ ಸೌಲಭ್ಯ, ಮಾನದಂಡ ಮತ್ತು ಗುಣಮಟ್ಟವನ್ನು ಇಂದು ವಿಶ್ವವೇ ಸ್ವೀಕರಿಸಿದೆ. ನಮ್ಮ NTH ಜಾಗತಿಕ ಮಟ್ಟದಲ್ಲಿ ವಿಶ್ವಾಸ ಗಳಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಪಾದಿಸಿದರು. ಬೆಂಗಳೂರಿನಲ್ಲಿ ಶನಿವಾರ NTH ಸಂಸ್ಥೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, NTHನ ವಿಶ್ವಾಸಾರ್ಹತೆ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿದೆ. ಅನೇಕ ದೇಶಗಳು ಪರೀಕ್ಷೆಗೆ ಭಾರತದ ಪ್ರಯೋಗಾಲಯಗಳನ್ನು ಸ್ವೀಕರಿಸುತ್ತಿವೆ ಎಂದು ಹೇಳಿದರು.
ಶ್ರೀಲಂಕಾ, ದುಬೈ ಮತ್ತು ಭೂತಾನ್ ಸೇರಿದಂತೆ ವಿವಿಧ ದೇಶಗಳಿಂದ ಪರೀಕ್ಷಾ ಮಾದರಿಗಳು NTHಗೆ ಬರುತ್ತಿದ್ದು, ಇದೊಂದು ಪ್ರಮುಖ ಜಾಗತಿಕ ಪರೀಕ್ಷಾ ಸಂಸ್ಥೆಯಾಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದೆ ಎಂದು ಬಣ್ಣಿಸಿದರು.
ಜಾಗತಿಕ ಮಟ್ಟದಲ್ಲಿ ನಮ್ಮ ಪರೀಕ್ಷಾ ವ್ಯವಸ್ಥೆ ವಿಶ್ವಾಸಾರ್ಹತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿಸ್ತಾರಗೊಳುತ್ತಿರುವ ಭಾರತದ ಉತ್ಪಾದನೆ ಮತ್ತು ರಫ್ತು ವಲಯದ ಆಕಾಂಕ್ಷೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬೆಂಬಲಿಸಲು NTH ಸಜ್ಜಾಗಬೇಕೆಂದು ಸಲಹೆ ನೀಡಿದರು.
ಜಾಗತಿಕ ನಾಯಕತ್ವದತ್ತ ಭಾರತ ಮಹತ್ವದ ಮೈಲುಗಲ್ಲು
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದ 13ನೇ ರಾಷ್ಟ್ರವಾಗಿ ಹೊರಹೊಮ್ಮಿದ್ದು, ನಮ್ಮ ಮಾಪನ ಮಾನದಂಡಗಳು ಜಾಗತಿಕವಾಗಿ ಮಾನ್ಯತೆ ಪಡೆದಿವೆ. ಮತ್ತು ವಿಶ್ವಾದ್ಯಂತ ಹೆಚ್ಚು ಹೆಚ್ಚು ಸ್ವೀಕರಿಸಲ್ಪಡುತ್ತಿವೆ. ಇದು ಮಾಪನಶಾಸ್ತ್ರ (metrology) ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ, ವಿಶ್ವಾಸಾರ್ಹತೆ ಮತ್ತು ಜಾಗತಿಕ ನಾಯಕತ್ವವನ್ನು ಪ್ರತಿಬಿಂಬಿಸುವ ಮಹತ್ವದ ಮೈಲುಗಲ್ಲಾಗಿದೆ ಎಂದು ಜೋಶಿ ಹೇಳಿದರು.
ಚೆನ್ನೈನಲ್ಲಿ ಸೌರ ವಾಟರ್-ಹೀಟರ್ ಪರೀಕ್ಷೆಯಿಂದ ಹಿಡಿದು ರಕ್ಷಣಾ ರಫ್ತು ಮತ್ತು ಖಾಸಗಿ ಬಾಹ್ಯಾಕಾಶ ಉಡಾವಣೆಗಳಲ್ಲಿ ಭಾರತದ ಬೆಳವಣಿಗೆ, ಉತ್ಪಾದನಾ ವ್ಯವಸ್ಥೆಯನ್ನು ವೇಗವಾಗಿ ಬಲಪಡಿಸುತ್ತಿದೆ ಎಂದರು.
'ವಿಕಸಿತ ಭಾರತ' ಹಾಗೂ ಜಾಗತಿಕವಾಗಿ ಸ್ಪರ್ಧಾತ್ಮಕ, ಗುಣಮಟ್ಟ-ಆಧಾರಿತವಾಗಿ ಆತ್ಮನಿರ್ಭರ ಭಾರತದತ್ತ ಸಾಗುವ NTH ನ ಪಯಣ ಅನನ್ಯ. ಹೊಸ NTH ಕೇಂದ್ರಗಳು ಹಾಗೂ ವಿಶೇಷ ಪರೀಕ್ಷಾ ಸೌಲಭ್ಯಗಳ ಮೂಲಕ ಗ್ರಾಹಕರು, MSMEಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕೆಗಳಿಗೆ ವಿಶ್ವದರ್ಜೆ ಮೂಲಸೌಕರ್ಯವನ್ನು ಹತ್ತಿರಕ್ಕೆ ತರಲಾಗುತ್ತಿದೆ ಎಂದರು.
'Zero Defect, Zero Effect' ಪರಿಕಲ್ಪನೆಯೊಂದಿಗೆ ವಿಕಸಿತ ಭಾರತ ನಿರ್ಮಾಣದ ಹಾದಿಯಲ್ಲಿ ಭಾರತೀಯ ಉತ್ಪನ್ನಗಳ ಗುಣಮಟ್ಟ ಹಾಗೂ ನಂಬಿಕೆಯನ್ನು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ಎಂದು ಸಚಿವ ಪ್ರಲ್ಹಾದ್ ಜೋಶಿ ಪುನರುಚ್ಚರಿಸಿದರು.
ಉತ್ಪಾದನೆ, ಉದ್ಯಮ, ರಫ್ತು ವಲಯದಲ್ಲಿ ಅಪಾರ ಅವಕಾಶಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ, ವಿನ್ಯಾಸ, ಉತ್ಪಾದನೆ ಮತ್ತು ಪರೀಕ್ಷಾ ಪ್ರಕ್ರಿಯೆಗಳು ಭಾರತದಲ್ಲೇ ನಡೆಯುವುದನ್ನು ಖಚಿತಪಡಿಸಿಕೊಳ್ಳುವ ಮಹತ್ವವನ್ನು ಸಚಿವರು ಪ್ರತಿಪಾದಿಸಿದರು.
ಇದೇ ವೇಳೆ ದೇಶಾದ್ಯಂತ ಹಲವು ಸುಧಾರಿತ ಪರೀಕ್ಷಾ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಭಾರತದ ಗುಣಮಟ್ಟ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಿದ NTH ವಿಜ್ಞಾನಿಗಳು, ಎಂಜಿನಿಯರ್‌ಗಳು ಹಾಗೂ ವೃತ್ತಿಪರರಿಗೆ 'NTH ವಾರ್ಷಿಕ ಶ್ರೇಷ್ಠತಾ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಕೇಂದ್ರ ರಾಜ್ಯ ಸಚಿವರಾದ ಬಿ.ಎಲ್. ವರ್ಮಾ, ಶೋಭಾ ಕರಂದ್ಲಾಜೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.