ಬೆಂಗಳೂರು, ಮಾ.5: ಎಸ್‍ಸಿಪಿ/ಟಿಎಸ್‍ಪಿ ಹಣವನ್ನು ದಲಿತರಿಗೆ ಬಳಸದೆ ಗ್ಯಾರಂಟಿಗಳಿಗೆ ವಿನಿಯೋಗಿಸಿ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಮೋಸ ಮಾಡಿದೆ. ಈ ಸರ್ಕಾರ ಹಗಲು ದರೋಡೆ ಮಾಡುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್ (Aravind Bellad) ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
ದಲಿತರು ಮತ್ತು ಹಿಂದುಳಿದವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಸರ್ಕಾರ ದಲಿತರಿಗೆ ಏನು ಮಾಡದೇ ಹಗಲು ದರೋಡೆ ಮಾಡುತ್ತಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳಿಂದ ಎಸ್‍ಸಿಪಿ/ಟಿಎಸ್‍ಪಿಯಿಂದ ರೂ. 38,859ಕೋಟಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿದೆ. 2023-24ರಲ್ಲಿ ರೂ. 11144 ಕೋಟಿ, 24-25 ರಲ್ಲಿ 14282 ಕೋಟಿ ಹಾಗೂ 25-26 ರಲ್ಲಿ ರೂ. 13433 ಕೋಟಿಯನ್ನು ಗ್ಯಾರಂಟಿಗೆ ಬಳಸಿದ್ದಾರೆ ಎಂದು ದೂರಿದರು.
ಈ ಬಾರಿಯ ಬಜೆಟ್‍ನಲ್ಲಿ ದಲಿತರ ಹಣ ಬಳಸಿರುವುದನ್ನು ವಾಪಸ್ ಕೊಡಬೇಕು. ಇದರೊಂದಿಗೆ ದಲಿತರಿಗೆ ಹೊಸದಾಗಿಯೂ ಹಣ ಕೊಡಬೇಕು. ಎಸ್‍ಸಿ/ಎಸ್‍ಟಿ ನಿಗಮಗಳಿಗೆ ಬಜೆಟ್‍ನಲ್ಲಿ ಕನಿಷ್ಠ ಒಂದು ಸಾವಿರ ಕೋಟಿ ನೀಡಬೇಕು. 7ಸಿ ಮೂಲಕ ದುರ್ಬಳಕೆಯಾಗುವುದನ್ನು ತಡೆಯಲು ಅದನ್ನು ತೆಗೆಯಬೇಕು. ದಲಿತರ ಹಣವನ್ನು ಗ್ಯಾರಂಟಿಗಳಿಗೆ ಬಳಸುವುದಿಲ್ಲ ಎಂಬ ವಾಗ್ದಾನ ಮಾಡಲಿ ಎಂದು ಅವರು ಆಗ್ರಹಿಸಿದರು.
ದಲಿತರ ಜನಸಂಖ್ಯೆ ಪ್ರಕಾರ ಇಲಾಖೆಯಿಂದ ವೆಚ್ಚ ಮಾಡಬೇಕು ಎಂಬ ನಿಯಮ ಇದೆ. ದಲಿತರ, ಆದಿವಾಸಿಗಳ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂಬ ನಿಯಮ ಇದೆ. ಅವರಿಗಾಗಿ ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಯೋಜನೆಗಳಿಗೆ ಉಪಯೋಗ ಮಾಡಬೇಕು. ಆದರೆ ಇವರು ಗ್ಯಾರಂಟಿಗೆ ಹಣ ಬಳಿಸಿದ್ದಾರೆ. ದಲಿತರಿಗೆ ಮಾತ್ರ ಬಳಕೆಯಾಗಬೇಕಾದ ಹಣ ಸವರ್ಣೀಯರಿಗೆ, ಅಲ್ಪಸಂಖ್ಯಾತರಿಗೆ ಬಳಕೆಯಾಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸರ್ಕಾರದಲ್ಲಿ ದಲಿತರಿಗೆ ಸಂಬಂಧಿಸಿದ ಹಲವು ನಿಗಮಗಳಿವೆ. ಅಂಬೇಡ್ಕರ್ ನಿಗಮ, ಆದಿ ಜಾಂಬವ ನಿಗಮ. ವಾಲ್ಮೀಕಿ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಲಿಡ್ಕರ್, ಸಪಾಯಿ, ಅರೆ ಅಲೆಮಾರಿ ಹೀಗೆ ಬಹಳಷ್ಟು ಇವೆ. ಇವಕ್ಕೆಲ್ಲ ಎಷ್ಟು ಹಣ ಕೊಟ್ಟಿದ್ದೀರಿ ಎಂಬುದನ್ನು ಹೇಳಿ. ಕೊಡದೇ ಇದ್ದರೂ ದಲಿತ ಶಾಸಕರು ಏಕೆ ಸುಮ್ಮನೆ ಇದ್ದಾರೆ ಎಂದರು.
ಸರ್ಕಾರಿ ಉದ್ಯೋಗಕ್ಕಾಗಿ ಧಾರವಾಡದಲ್ಲಿ ಯುವಕರು ಬೃಹತ್ ಪ್ರತಿಭಟನೆ ಮಾಡಿದರು. ಮೂರು ವರ್ಷದಿಂದ ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ಯುವಕರ ಪ್ರತಿಭಟನೆಗೆ ಹೆದರಿ 56 ಸಾವಿರ ನೇಮಕಾತಿ ಮಾಡ್ತೇವೆ ಅಂದ್ರು. ಇದರಲ್ಲಿ ನೇಮಕಾತಿ ಹೇಗೆ ಆಗುತ್ತೆ ಎಂಬ ಸ್ಪಷ್ಟತೆ ಇಲ್ಲ. ಬಿಜೆಪಿ ಸರ್ಕಾರ, ಎಸ್‍ಸಿಪಿ/ಟಿಎಸ್‍ಪಿ ಮೀಸಲನ್ನು ಹೆಚ್ಚು ಮಾಡಿತ್ತು. ಆವಾಗ ಸಿದ್ದರಾಮಯ್ಯ ದಲಿತರನ್ನು ಬಿಜೆಪಿಯವರು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಭಾಷಣ ಮಾಡಿದ್ದರು. ಇದನ್ನು ನಂತರ ಪ್ರಶ್ನಿಸಿದಾಗ ನಾನು ಹೇಳೇ ಇಲ್ಲ ಎಂದಿದ್ದರು. ದಾಖಲೆ ಕೊಟ್ಟಾಗ ಸುಮ್ಮನಾದರು ಎಂದು ಆರೋಪಿಸಿದರು.
ಮೀಸಲಾತಿ ಜಾರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆಯೇ ಇಲ್ಲ: ಛಲವಾದಿ ನಾರಾಯಣಸ್ವಾಮಿ
ಮೀಸಲಾತಿ ಬಗ್ಗೆ ಸ್ಪಷ್ಟತೆಯೇ ಇಲ್ಲದೆ ನೇಮಕಾತಿಗೆ ಮುಂದಾಗಿದ್ದಾರೆ. ದಲಿತರ ಬಗ್ಗೆ ನಿಜವಾದ ಕಾಳಜಿ ಇಲ್ಲದೇ ಇದ್ದರೆ ಹೀಗೆ ನಾಟಕವಾಡುವುದನ್ನು ಹಾಗೂ ಡೋಂಗಿತನವನ್ನು ಬಿಡಬೇಕು ಎಂದರು. ಈ ಸಂದರ್ಭದಲ್ಲಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಉಪಸ್ಥಿತರಿದ್ದರು.