ಬೆಂಗಳೂರು: ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದ್ದು ಬಂಡೆ ಹೃದಯ ಅಲ್ಲ, ಹೂವಿನಂತ ಹೃದಯ. ಅವರು ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುತ್ತಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರು ಒಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರಿಗೆ ಕೊಟ್ಟ ಮಾತು ಈಡೇರಿಸುವಲ್ಲಿ ಬಹಳ ಮೇಲೆ ಇದೆ. ಸರ್ಕಾರ ಅತ್ಯಂತ ಸದೃಢವಾಗಿದೆ. ಸಿಎಂ ಡಿಕೆ ಶಿವಕುಮಾರ್ಗೆ ಇರುವ ಅನುಭವದಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆಯಲ್ಲಿ ಸಮರ್ಥರು ಇದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಆಶಾ ಕಾರ್ಯಕರ್ತೆಯರ ಶ್ರಮದ ಬಗ್ಗೆ ನಾವೆಲ್ಲರು ನಾನು ಸೇರಿದಂತೆ ಬಾಯಿ ಮಾತಿನ ಅನುಕಂಪದಲ್ಲೇ ಮಾತಾಡುತ್ತೇವೆ. ಅವರ ನಿತ್ಯದ ಶ್ರಮ ಹೆಚ್ಚಿದೆ. ನಾನು ಅವರನ್ನು ದೆಹಲಿಗೆ ಕರೆಸಿ ಧರ್ಮೇಂದ್ರ ಪ್ರಧಾನ್ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರನ್ನು ಭೇಟಿ ಮಾಡಿಸಿದ್ದೆ. ಅವರ ಬೇಡಿಕೆ ಈಡೇರಿಕೆ ನಮ್ಮೆಲ್ಲರ ಕರ್ತವ್ಯ. ತಿಂಗಳಿಗೆ 7-8 ಸಾವಿರ ಸಿಗುತ್ತೆ, ಆ ಹಣದಿಂದ ಅವರು ಬದುಕಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.
ಈ ಸರ್ಕಾರ ಬಂದಾಗಿನಿಂದ ನುಡಿದಂತೆ ನಡೆದಿದ್ದೇವೆ ಅಂತ ಜಪ ಮಾಡ್ತಾರೆ. ಇವರು ಪ್ರಣಾಳಿಕೆಯಲ್ಲಿ 15 ಸಾವಿರ ಘೋಷಣೆ ಮಾಡಿದ್ದರು. ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಜಾಸ್ತಿ ಮಾಡಿ ಎಂದು ಆಶಾ ಕಾರ್ಯಕರ್ತೆಯರು ಹೇಳುತ್ತಿದ್ದಾರೆ. ಭಾರತ್ ಜೋಡೋ ಸಂಘಕ್ಕೆ 1 ಸಾವಿರ ಕೋಟಿ ಘೋಷಣೆ ಮಾಡಿದ ಸಿಎಂ ಅವರಿಗೆ ಆಶಾ ಕಾರ್ಯಕರ್ತೆಯರ ಬೇಡಿಕೆ ಯಾವ ಲೆಕ್ಕ? ಚಳಿಯಲ್ಲಿ ಮಕ್ಕಳನ್ನು ಇಟ್ಟುಕೊಂಡು ಪ್ರತಿಭಟನೆ ಮಾಡ್ತಾ ಇದ್ದಾರೆ. ಸಿಎಂ ಅವರದ್ದು ಹೂವಿನಂತ ಹೃದಯ. ಬಂಡೆ ಹೃದಯ ಅಲ್ಲ, ಆ ಹೃದಯ ಇಷ್ಟು ಹೊತ್ತಿಗೆ ಕಲಕಬೇಕಿತ್ತು. ಹೃದಯ ಕಲಕಿ ಘೋಷಣೆ ಆಗಬೇಕಿತ್ತು. ಆದರೆ, ಅವರು ಜಪಾನ್ಗೆ ಹೋಗಿದ್ದಾರೆ. ಅದಕ್ಕೆ ಮುಂದೂಡಿಕೆ ಮಾಡಿರಬಹುದು. ಅಲ್ಲಿಂದ ಬಂದ ಕೂಡಲೇ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಮಾಡ್ತಾರೆ ಅನ್ನೋದು ನನ್ನ ಅಭಿಪ್ರಾಯ ಎಂದರು.
ಬರ ಪರಿಹಾರ ವಿಚಾರದಲ್ಲಿ ಕೇಂದ್ರ ನಮಗೆ ಸ್ಪಂದನೆ ನೀಡುತ್ತಿಲ್ಲ ಎಂಬ ಡಿಸಿಎಂ ಪರಮೇಶ್ವರ್ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಅವರು ಸುಪ್ರೀಂ ಕೋರ್ಟ್ಗೆ ಹೋಗ್ತಾರೋ, ಲಂಡನ್ ಕೋರ್ಟ್ಗೆ ಹೋಗ್ತಾರೋ ಗೊತ್ತಿಲ್ಲ. ಹಿಂದೆ ನೈಸ್ ವಿಚಾರದಲ್ಲಿ ಏನೇ ಕೇಸ್ ಆದರೂ ಲಂಡನ್ ಕೋರ್ಟ್ಗೆ ಹೋಗಬೇಕು ಅಂತ ನಿಯಮ ಮಾಡಿದ ಮಹಾನುಭಾವರು ಇವರು. ಕಾಂಗ್ರೆಸ್ ಸರ್ಕಾರ ಇದ್ದಾಗ ಇದನ್ನು ಮಾಡಿದರು. ಬರದ ವಿಚಾರದಲ್ಲಿ ಕೇಂದ್ರ ಕ್ರಮ ತೆಗೆದುಕೊಳ್ಳದೇ ಹೋದರೆ ಲಂಡನ್ ಕೋರ್ಟ್ಗೆ ಹೋಗಬಹುದು ಎಂಬುದು ನನ್ನ ಅಭಿಪ್ರಾಯ ಅಂತ ಲೇವಡಿ ಮಾಡಿದರು.
ಈ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹೇಗೆ ಇದೆ ಗೊತ್ತಿಲ್ಲ. ಪ್ರಧಾನಿಗಳು, ಅಮಿತ್ ಶಾ ಜತೆ ಸಿಎಂ ಅವರು ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಇಷ್ಟು ಆತ್ಮೀಯವಾಗಿ ಇರೋರು ಕೋರ್ಟ್ಗೆ ಯಾಕೆ ಹೋಗಬೇಕು? ನಾನು ಎರಡು ಬಾರಿ ಸಿಎಂ ಆಗಿದ್ದಾಗ ನಾನು ಕೇಂದ್ರದ ಬಳಿ ಹೋಗಿರಲಿಲ್ಲ. ಕೇಂದ್ರದ ಜತೆ ಘರ್ಷಣೆಗೆ ಹೋಗಿಲ್ಲ. ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಿರಲಿಲ್ಲ ಅಂತ ಕಾಂಗ್ರೆಸ್ಗೆ ತಿರುಗೇಟು ಕೊಟ್ಟಿದ್ದಾರೆ.