ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Fuel Prices Hike: ಕೇಂದ್ರ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು: ತೈಲ ಬೆಲೆ ಏರಿಕೆಗೆ ಡಿ.ಕೆ. ಶಿವಕುಮಾರ್ ಕಿಡಿ

DK Shivakumar: ಬೆಲೆ ಏರಿಕೆ ವಿರುದ್ಧ ಜನರ ಗಮನ ಸೆಳೆಯುವುದು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರೇ ಈ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು, ಮೇ 25: ಬಿಜೆಪಿಯ ಕೇಂದ್ರ ಸರ್ಕಾರ ಬೆಲೆ ಏರಿಕೆ ಮೂಲಕ ಜನರ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಆರ್ಥಿಕ ಹೊರೆ ಇಳಿಸುತ್ತಿದೆ. ಕಾಂಗ್ರೆಸ್ ಗ್ಯಾರಂಟಿ ಇಲ್ಲವಾಗಿದ್ದರೆ ಪರಿಸ್ಥಿತಿ ಯಾವ ರೀತಿ ಇರುತ್ತಿತ್ತು ಎಂದು ಆಲೋಚನೆ ಮಾಡಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿದರು.

ನಮ್ಮ ಗ್ಯಾರಂಟಿ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶವೇ ಮೆಚ್ಚಿದೆ. ವಿಶ್ವಸಂಸ್ಥೆಯೇ ಪ್ರಶಂಸೆ ನೀಡಿದೆ. ಬೆಲೆ ಏರಿಕೆ ಗಗನಕ್ಕೆ, ಆದಾಯ ಪಾತಾಳಕ್ಕೆ ಕುಸಿಯುತ್ತಿದೆ. ಅನೇಕ ಹೊಟೇಲ್‌ಗಳು ಸಿಲಿಂಡರ್ ದರ ಏರಿಕೆ ಹಾಗೂ ಅಭಾವದಿಂದ ಅರ್ಧ ಬಂದ್ ಮಾಡಿದ್ದಾರೆ. ಈ ವರ್ಷ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಮಾರ್ಚ್ 1ರಂದು ₹28, ಮಾರ್ಚ್ 7ರಂದು ₹114.50, ಮಾರ್ಚ್ 23ರಂದು ₹49, ಏಪ್ರಿಲ್ 1ರಂದು ₹195 ರಿಂದ ₹218 ರವರೆಗೆ, ಮೇ 1ರಂದು ₹993 ನಷ್ಟು ಏರಿಕೆ ಮಾಡಿದ್ದಾರೆ ಎಂದು ವಿವರಿಸಿದರು.

ಬೆಲೆ ಏರಿಕೆ ಜನರ ಬದುಕಿಗೆ ಶಾಪ

ಈ ಬೆಲೆ ಏರಿಕೆ ಎಲ್ಲರ ಬದುಕಿಗೆ ಶಾಪವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕಡಿಮೆ ಇದ್ದರೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ. ಇಂಧನ ಮೇಲಿನ ತೆರಿಗೆ ಮೂಲಕ ಕೇಂದ್ರ ಸರ್ಕಾರ ನಿತ್ಯ 1 ಸಾವಿರ ಕೋಟಿ ಸಂಗ್ರಹಿಸುತ್ತಿದೆ. ಈ ತೆರಿಗೆ ಬಿಟ್ಟು ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡಬಹುದಾಗಿತ್ತು. ಬೇರೆ ಯಾವುದೇ ದೇಶದಲ್ಲಿ ಈ ರೀತಿ ಬೆಲೆ ಏರಿಕೆಯಾಗಿಲ್ಲ. ಕಳೆದ 11 ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು 7.52 ರುಪಾಯಿ ಹೆಚ್ಚಳ ಮಾಡಲಾಗಿದೆ. ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಸುಲಿಗೆ ಎಂದು ಟೀಕೆ ಮಾಡಿದೆವು, 100 ನಾಟೌಟ್ ಎಂದು ಪ್ರತಿಭಟನೆ ಮಾಡಿದೆವು. ನಿಘಂಟಿನಲ್ಲಿರುವ ಎಲ್ಲಾ ಪದ ಪ್ರಯೋಗ ಮಾಡಿ ಟೀಕೆ ಮಾಡಿದರೂ ಮಾನ ಮರ್ಯಾದೆ ಇಲ್ಲದೆ, ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಹೇಳುತ್ತಿದ್ದಾರೆ. ಮೊದಲು ನೀವು ಕೇಂದ್ರ ಸರ್ಕಾರದ ಸುಲಿಗೆ ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ಈ ಮಧ್ಯೆ ಪ್ರಧಾನಮಂತ್ರಿಗಳು ಅಡುಗೆ ಎಣ್ಣೆ ಕಡಿಮೆ ಮಾಡಿ ಎಂದು ಸಲಹೆ ನೀಡುತ್ತಾರೆ. ಕೇಂದ್ರ ಸರ್ಕಾರ 12 ವರ್ಷಗಳಲ್ಲಿ ಇಂಧನ ತೈಲಗಳ ಮೇಲಿನ ತೆರಿಗೆ ಮೂಲಕ 43 ಲಕ್ಷ ಕೋಟಿ ಸಂಗ್ರಹಿಸಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 71 ರೂಪಾಯಿ. ಇದ್ದ ಪೆಟ್ರೋಲ್ ಹಾಗೂ 56 ರೂಪಾಯಿ ಇದ್ದ ಡೀಸೆಲ್ ಬೆಲೆ ಇಂದು ಕ್ರಮವಾಗಿ 110 ಹಾಗೂ 99 ರೂ. ತಲುಪಿದೆ. ಇದೇ ತಿಂಗಳು 30ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ನಮ್ಮ ಪಕ್ಷ ಇಂದಿನ ಸಭೆಯ ಬಳಿಕ ಮುಂದಿನ ಹೋರಾಟದ ರೂಪುರೇಷೆ ಪ್ರಕಟಿಸುತ್ತೇವೆ. ನಂತರ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ಮಾಡುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು

ಬೆಲೆ ಏರಿಕೆ ವಿರುದ್ಧ ಜನರ ಗಮನ ಸೆಳೆಯುವುದು, ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಜನರೇ ಈ ಜನವಿರೋಧಿ ಕೇಂದ್ರ ಸರ್ಕಾರವನ್ನು ಕಿತ್ತೊಗೆಯುವ ಕೆಲಸ ಆಗಬೇಕು. ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸಾಧನೆ ಬಗ್ಗೆ ಮಾತನಾಡುತ್ತಾರೆ. ಮೋದಿ ಅವರು ಮದುವೆಗೆ ಚಿನ್ನ ಖರೀದಿ ಮಾಡಬೇಡಿ, ಸರಿಯಾಗಿ ಊಟ ಮಾಡಬೇಡಿ ಎಂದು ಹೇಳಿ ಜನರನ್ನು ನಿಯಂತ್ರಿಸಲು ಹೇಗೆ ಸಾಧ್ಯ? ಒಂದು ದಿನ ಮೆಟ್ರೋದಲ್ಲಿ ಸಂಚರಿಸಿದ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಅಧಿಕಾರಿಗಳು ಈಗ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದಾರಾ? ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಒಂದು ದಿನ ಫೋಟೋ ಶೂಟ್ ಮಾಡಿಕೊಂಡಿದ್ದಾರೆ. ಇದು ವಾಸ್ತವವಾಗಿ ಜಾರಿ ಮಾಡಲು ಆಗದ ಕೆಲಸ. ಜನರಿಗೆ ತೊಂದರೆ ಆಗಲಿ ಎಂಬ ಉದ್ದೇಶದಿಂದ ಇಂತಹ ಕಾರ್ಯಕ್ರಮ ರೂಪಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಫಲಾನುಭವಿಗಳಿಗೆ ಗ್ಯಾರಂಟಿ ತಲುಪುವಂತೆ ಪರಿಶೀಲನೆ

ಗ್ಯಾರಂಟಿ ಪರಿಷ್ಕರಣೆ ಮಾಡಲಾಗುವುದೇ ಎಂದು ಕೇಳಿದಾಗ, ʼಕೆಲವು ಗ್ಯಾರಂಟಿ ಫಲಾನುಭವಿಗಳು ಮೃತಪಟ್ಟಿದ್ದು, ಸುಮಾರು 100 ಕೋಟಿಯಷ್ಟು ಹಣ ಬೇರೆಯವರಿಗೆ ಹೋಗಿ ದುರ್ಬಳಕೆಯಾಗಿದೆ. ಇನ್ನು ಬೇರೆಯವರ ದೂರವಾಣಿ ಸಂಖ್ಯೆ ಕೊಟ್ಟಿರುವುದರಿಂದ ಸರಿಯಾದ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿದಯೇ, ಇಲ್ಲವೇ ಎಂದು ತಿಳಿಯಬೇಕಿದೆ. ಹೀಗಾಗಿ ಫಲಾನುಭವಿಗಳ ದಾಖಲೆ ಸಂಗ್ರಹಿಸುವ ಬಗ್ಗೆ ಚರ್ಚೆ ಮಾಡುವ ಬಗ್ಗೆ ಸಲಹೆ ಬಂದಿದೆ. ಪ್ರತಿ ತಾಲೂಕಿನಲ್ಲಿ ಇದನ್ನು ಪರಿಶೀಲನೆ ಮಾಡುತ್ತಿದ್ದೇವೆʼ ಎಂದು ತಿಳಿಸಿದರು.

2 ತಿಂಗಳಿನಿಂದ ಅನ್ನಭಾಗ್ಯ ಅಕ್ಕಿ ಸರಿಯಾಗಿ ತಲುಪುತ್ತಿಲ್ಲ ಎಂದು ಕೇಳಿದಾಗ, ʼಕೇಂದ್ರ ಸರ್ಕಾರ ಅಕ್ಕಿ ಬಿಡುಗಡೆ ಮಾಡುತ್ತಿಲ್ಲ. ಕೇವಲ ಕರ್ನಾಟಕ ಮಾತ್ರವಲ್ಲ, ನಮ್ಮ ಸರ್ಕಾರ ಇರುವ ರಾಜ್ಯಗಳಲ್ಲಿ ಈ ರೀತಿ ಮಾಡುತ್ತಿದ್ದಾರೆʼ ಎಂದು ಕಿಡಿಕಾರಿದರು.

2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ

ಅಮಿತ್ ಶಾ ಅವರು ಬಿಜೆಪಿಗೆ 122 ಸೀಟು ಬರುತ್ತದೆ, ಎಲ್ಲರೂ ಸೂಟುಬೂಟು ಸಿದ್ಧಮಾಡಿಕೊಳ್ಳಿ ಎಂದಿದ್ದರು. ನಾನು ನಮಗೆ 136 ಸೀಟು ಬರಲಿದೆ ಎಂದು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ ಬರೆದುಕೊಳ್ಳಿ, 2028ಕ್ಕೆ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆʼ ಎಂದು ಅವರು ಭವಿಷ್ಯ ನುಡಿದರು.

ನೀವು ದೆಹಲಿ ಪ್ರವಾಸ ಮಾಡುತ್ತೀರಾ ಎಂದು ಕೇಳಿದಾಗ, ʼನಮ್ಮನ್ನು ಕರೆದರೆ ಹೋಗುತ್ತೇವೆ. ಸುರ್ಜೆವಾಲ ಅವರು ನಿಮಗೆ ಏನು ಹೇಳಿದ್ದಾರೋ ಗೊತ್ತಿಲ್ಲ. ಅವರು ದೆಹಲಿಗೆ ಬನ್ನಿ ಎಂದರೆ ನಾನು ಹೋಗುತ್ತೇನೆ. ಇಲ್ಲವಾದರೆ ಇಲ್ಲೇ ಉಳಿಯುತ್ತೇನೆ. ಪಕ್ಷ ಕರೆದಾಗ ನಾವು ಹೋಗಲೇಬೇಕಾಗುತ್ತದೆʼ ಎಂದು ತಿಳಿಸಿದರು.‌

CM Siddaramaiah's Delhi visit: ಇಂದು ಸಂಜೆ ದೆಹಲಿಗೆ ಸಿಎಂ ಸಿದ್ದರಾಮಯ್ಯ ಪ್ರಯಾಣ; ಹೈಕಮಾಂಡ್‌ ಬುಲಾವ್ ಬಗ್ಗೆ ಹೇಳಿದ್ದೇನು?

ಸಿಎಂ ಸ್ಥಾನ ವಿಚಾರವಾಗಿ ಚರ್ಚೆ ನಡೆಯುವುದೇ ಎಂದು ಕೇಳಿದಾಗ, ʼನನಗೆ ಅದರ ಬಗ್ಗೆ ಗೊತ್ತಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.